ದಿನಪತ್ರಿಕೆಗಳ ಮೇಲೆ ವೈರಾಣು ಉಳಿದುಕೊಳ್ಳುವ ಭಯ: ವಿತರಣೆಯಲ್ಲಿ ವ್ಯತ್ಯಯ

ಕೋವಿದ್-19 ವೈರಾಣು ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದೆ. ಭಾರತದ ಹಲವು ರಾಜ್ಯಗಳು ತುರ್ತು ಕ್ರಮಗಳನ್ನು ಘೋಷಿಸಿ, ಹಲವು ನಿರ್ಬಂಧಗಳನ್ನು ಹೇರಿವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈ ಕ್ರಮಗಳನ್ನು ತೆಗೆದುಕೊಂಡಿದ್ದು, ಕೊರೊನ ವೈರಸ್ ಹರಡುವ ಸರಪಳಿಯನ್ನು ಮುರಿಯುವುದಕ್ಕೆ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಬೆಂಗಳೂರು, ದೆಹಲಿ ಮುಂಬೈ ಮುಂತಾದ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸರ್ಕಾರ ಸೂಚಿಸಿದೆ. ಖಾಸಗಿ ವಲಯದ ಸಂಸ್ಥೆಗಳು ನೌಕರರಿಗೆ ಮನೆಗಳಿಂದ ಕೆಲಸ ಮಾಡುವ ಅವಕಾಶ ನೀಡಲು ಸೂಚಿಸಲಾಗಿದೆ. ಇಷ್ಟೆಲ್ಲಾ ಕ್ರಮಗಳ ನಡುವೆಯೂ ವೈರಸ್ ಹರಡುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇದೆ. ಭಾರತದಲ್ಲಿ ಈಗ ಸುಮಾರು 500 ಜನ ಕೊರೊನ ಸೋಂಕಿಗೆ ಗುರಿಯಾಗಿದ್ದು, ೧೦ ಜನ ಮೃತಪಟ್ಟಿದ್ದಾರೆ.

ಈ ವೈರಸ್ ಹಲವು ವಸ್ತುಗಳ ಮೇಲ್ಮೈನಲ್ಲಿ ಕೆಲವು ಘಂಟೆಗಳ ಕಾಲ ಉಳಿದುಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ, ದಿನಪತ್ರಿಕೆಗಳ ವಿತರಕರನ್ನು ಮತ್ತು ಓದುವ ಗ್ರಾಹಕರನ್ನು ಭಯಭೀತರನ್ನಾಗಿಸಿದೆ. ಮುಂಬೈನಲ್ಲಿ ಮುದ್ರಿತ ಸುದ್ದಿಪತ್ರಿಕೆಗಳನ್ನು ಹಂಚುವುದಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ಸೇರಿ ಹಲವು ಪತ್ರಿಕೆಗಳು ಘೋಷಿಸಿದ್ದಾರೆ. ಅಂತರ್ಜಾಲ ಸುದ್ದಿ ಜಾಲತಾಣಗಳಲ್ಲಿ ಮಾತ್ರ ಸುದ್ದಿ ಬಿತ್ತರಿಸುವುದಾಗಿ ಹೇಳಿವೆ. ಬೆಂಗಳೂರಿನಲ್ಲೂ ಇಂದು ಹಲವು ಪ್ರದೇಶಗಳಲ್ಲಿ ದಿನಪತ್ರಿಕೆ ವಿತರಣೆಯಲ್ಲಿ ವ್ಯತ್ಯಯ ಕಂಡುಬಂದಿದೆ.

ಮತ್ತಿಕೆರೆ, ವಿದ್ಯಾರಣ್ಯಪುರ ಹಲವು ಪ್ರದೇಶಗಳಲ್ಲಿ ದಿನಪತ್ರಿಕೆಯನ್ನು ವಿತರಿಸಲು ಹಲವು ಏಜೆಂಟರ್ ಗಳು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. “ಇವತ್ತು ದಿನಪತ್ರಿಕೆ ಮನೆಗೆ ತಲುಪಲಿಲ್ಲ. ಆದುದರಿಂದ ಹೊರಗೆ ಪತ್ರಿಕೆಯ ಅಂಗಡಿಯಲ್ಲಿ ಬೆಳಗ್ಗೆಯೇ ತಂದೆ. ನಾಳೆಯಿಂದ ಅಲ್ಲಿಯೂ ಮಾರುವುದಿಲ್ಲ ಎಂದು ಪತ್ರಿಕೆ ಅಂಗಡಿಯ ಮಾಲೀಕ ತಿಳಿಸಿದರು” ಎಂದು ವಿದ್ಯಾರಣ್ಯಪುರ ನಿವಾಸಿ ಸೂರ್ಯ ಹೇಳುತ್ತಾರೆ. ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಮುದ್ರಣಾಲಯದಿಂದ ಪತ್ರಿಕೆಗಳು ಹೊರಡುವಾಗ, ತೆಗೆದುಕೊಂಡಿರುವ ಸುರಕ್ಷತೆಯ ಕ್ರಮಗಳ ಬಗ್ಗೆ ವಿಡಿಯೋ ಮಾಡಿ ಪ್ರಕಟ ಮಾಡಿದೆ. ಇಂತಹ ಸನ್ನಿವೇಶದಲ್ಲಿಯೂ, ಪತ್ರಿಕೆಗಳನ್ನು ಕೆಲವು ವಾರಗಳ ಕಾಲ ಮನೆಗೆ ಹಾಕಿಸಬೇಡಿ ಎಂಬ ಸುದ್ದಿಗಳು ವ್ಯಾಪಕವಾಗಿ ಹರಡುತ್ತಿವೆ. ಈ ವೈರಸ್ ಬಿಕ್ಕಟ್ಟಿನ ಕಾಲದಲ್ಲಿ ಅಂತರ್ಜಾಲ ಸುದ್ದಿ ಜಾಲತನಗಳೆ ಸುರಕ್ಷಿತವೆ ಎಂಬ ಪ್ರಶ್ನೆ ಸದ್ಯಕ್ಕೆ ಜನರ ಮುಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights