ಪಾದರಾಯನಪುರ ಬಂಧಿತರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದನ್ನು ಸರ್ಮತಿಸಿಕೊಂಡ ಸರ್ಕಾರ

ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿ ರಾಮನಗರ ಜೈಲಿನಲ್ಲಿ ಇರಿಸಲಾಗಿದ್ದ ವ್ಯಕ್ತಿಗಳಲ್ಲಿ ಇಬ್ಬರಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ. ಇದು ವಿಪಕ್ಷಗಳನ್ನು, ಅದರಲ್ಲೂ ಹೆಚ್.ಡಿ. ಕುಮಾರಸ್ವಾಮಿ ಅವರನ್ನ ಕೆರಳಿಸಿದೆ. ಪಾದರಾಯನಪುರದ ಬಂಧಿತರನ್ನು ರಾಮನಗರ ಜೈಲಿಗೆ ಕರೆತಂದು ಸರ್ಕಾರ ಘೋರ ತಪ್ಪು ಎಸಗಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈಗ ಸರ್ಕಾರವು ಪಾದರಾಯನಪುರದ ಬಂಧಿತರನ್ನು ಹಜ್ ಭವನಕ್ಕೆ ಶಿಫ್ಟ್ ಮಾಡುತ್ತಿದೆ. ಇವತ್ತು ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಮನಗರ ಜೈಲಿಗೆ ಹಾಕುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ಧಾರೆ.

ಪಾದರಾಯನಪುರದ ಬಂಧಿತರನ್ನು ರಾಮನಗರಕ್ಕೆ ಶಿಫ್ಟ್ ಮಾಡಿದ್ದರಲ್ಲಿ ತಪ್ಪಾಗಿಲ್ಲ. ಇದರಲ್ಲಿ ಯಾರದ್ದೂ ತಪ್ಪಿಲ್ಲ. ಕೊರೊನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರುತ್ತಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಸಲಹೆ ಕೊಡುತ್ತಾರೆಂಬುದು ಮುಖ್ಯ ಅಲ್ಲ. ಆವತ್ತಿನ ಸಂದರ್ಭದಲ್ಲಿ ಆರೋಪಿಗಳನ್ನ ಜೈಲಲ್ಲಿ ಇಡುವುದು ಉಚಿತವಾಗಿತ್ತು. ಏನೇ ಮಾಡಿದರೂ ಆಪಾದನೆ ಬಂದೇ ಬರುತ್ತದೆ. ಆರೋಪಿಗಳನ್ನ ಜೈಲಿನ ಬದಲು ಆಸ್ಪತ್ರೆಯಲ್ಲಿಟ್ಟಿದ್ದರೂ ಟೀಕೆ ಬರುತ್ತಿತ್ತು. ಹೀಗೇ ಮಾಡಬೇಕು, ಹಾಗೇ ಮಾಡಬೇಕು ಎಂದು ನೋಡುವ ಕಾಲ ಇದು. ಸಮಯ, ಸಂದರ್ಭ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರಾಮನಗರ ಜೈಲಿನಲ್ಲಿ ಆರೋಪಿಗಳಿಗೆ ಸೋಂಕು ಕಂಡು ಬಂದರೆ ಶಿಫ್ಟ್ ಮಾಡುತ್ತೇವೆ ಎಂದು ಮೊದಲೇ ನಾವು ಕುಮಾರಸ್ವಾಮಿಗೂ ಹೇಳಿದ್ವಿ ಎಂದು ಸ್ಪಷ್ಟಪಡಿಸಿದ್ಧಾರೆ.

ಪಾದರಾಯನಪುರದ ಬಂಧಿತರನ್ನು ಬೆಂಗಳೂರಿನ ಹಜ್ ಭವನಕ್ಕೆ ಕರೆ ತರುತ್ತೇವೆ. ಇದಕ್ಕೆ ಎಲ್ಲಾ ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ. ಅವರಿಂದ ಬೇರೆ ಯಾರಿಗೂ ಸೋಂಕು ಹರಡದಂತೆ ಕ್ರಮ ವಹಿಸಲಾಗಿದೆ. ರಾಮನಗರದ ಜೈಲು ಸಿಬ್ಬಂದಿಗೂ ಪರೀಕ್ಷೆ ಮಾಡಿ ಕ್ವಾರಂಟೈನ್​ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಪಾದರಾಯನಪುರ ಠಾಣೆಯ ಪೊಲೀಸರನ್ನೂ ತಪಾಸಣೆ ನಡೆಸಲಾಗುತ್ತಿದೆ. ಅಗತ್ಯಬಿದ್ದರೆ ಅವರನ್ನೂ ಕ್ವಾರಂಟೈನ್​ನಲ್ಲಿಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿವರ ನೀಡಿದ್ಧಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights