ಪೌರತ್ವ ತಿದ್ದುಪಡಿ ಮಸೂದೆ 2019 CAB ನ್ನು ತಿರಸ್ಕರಿಸಲು ಎಸ್ಎಫ್ಐ-ಡಿವೈಎಫ್ಐ ಒತ್ತಾಯ…

ಲೋಕಸಭೆ, ರಾಜ್ಯಸಭೆಗಳಲ್ಲಿ ಮಂಜೂರು ಮಾಡಿದ ಪೌರತ್ವ (ತಿದ್ದುಪಡಿ) ಮಸೂದೆ 2019 (Citizens (Amendment) Bill-2019 CAB) ನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಮಸ್ಕಿ ತಾಲೂಕು ಸಮಿತಿಗಳು ಬಲವಾಗಿ ವಿರೋಧಿಸುತ್ತವೆ.

ಈ ಮಸೂದೆ ದೇಶದ ಪೌರತ್ವ (ಅಥವಾ ನಾಗರಿಕತ್ವ) ವನ್ನು ಮತಧರ್ಮದ ಆಧಾರದ ಮೇಲೆ ನಿರ್ಧರಿಸುತ್ತಿರುವುದು ಖಂಡನೀಯ. ಭಾರತ ಸಮಾನವಾಗಿ ಎಲ್ಲಾ ಮತಧರ್ಮಗಳ ಮತ್ತು ಎಲ್ಲಾ ಪ್ರದೇಶಗಳ ಜನರ ದೇಶ. ಆದ್ದರಿಂದ ಭಾರತ ಅವರೆಲ್ಲರನ್ನೂ ಸಮಾನವಾಗಿ ಕಾಣಬೇಕು.

ವಿಪರೀತ ತಾರತಮ್ಯ ತೋರುವ ಈ ಮಸೂದೆಯನ್ನು ಲೋಕಸಭೆ ಭಾರೀ ಬಹುಮತದಿಂದ ಹಾಗೂ ರಾಜ್ಯ ಸಭೆಯಲ್ಲಿಯೂ ಕೂಡ ಮಂಜೂರು ಮಾಡಿವೆ. ಆದರೆ, ಇದರ ವಿರುದ್ಧ ತೀವ್ರ ಅತೃಪ್ತಿ ಹೊಗೆಯಾಡುತ್ತಿದೆ. ಈ ಮಸೂದೆಯನ್ನು ಲೋಕಸಭೆ, ರಾಜ್ಯ ಸಭೆಯಲ್ಲಿ ಮಂಜೂರು ಮಾಡುತ್ತಿರುವಾಗ, ಈಶಾನ್ಯ ಭಾರತದ ವಿದ್ಯಾರ್ಥಿಗಳು 11 ಗಂಟೆಗಳ ಬಂದ್ ಆಚರಿಸುತ್ತಿದ್ದರು. ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಸೂದೆಯು ನೆರೆಯ ಮೂರು ದೇಶಗಳ ಮುಸ್ಲಿಮರನ್ನು ನಮ್ಮ ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದರಿಂದ ಹೊರಗಿಡುತ್ತದೆ ಮಾತ್ರವಲ್ಲ, ಪೌರತ್ವದ ದಾಖಲೆಗಳನ್ನು ಒದಗಿಸಲಾಗದ ಭಾರತೀಯ ಮುಸ್ಲಿಮರ ಪೌರತ್ವವನ್ನು ರದ್ದುಗೊಳಿಸಿ ಕ್ಯಾಂಪ್ ಗಳಿಗೆ ತಳ್ಳುತ್ತದೆ. ಭಾರತದ ಪೌರತ್ವಕ್ಕೆ ಮತಧರ್ಮದ ಪರೀಕ್ಷೆ ಒಡ್ಡಿರುವುದರಿಂದ ಈ ಮಸೂದೆ, ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಷ್ಟಾಪಿಸಲಾಗಿರುವ ಸಮಾನತೆ ಮತ್ತು ಸೆಕ್ಯುಲರಿಸಂ ಗಳ ನೀತಿಗಳನ್ನು ಉಲ್ಲಂಘಿಸುತ್ತದೆ. ಪೌರತ್ವ ದಾಖಲಾತಿಯನ್ನು (NRC) ದೇಶದಾದ್ಯಂತ ನಡೆಸುವುದೆ ರಾಜಕೀಯ ದುರುದ್ದೇಶಕ್ಕಾಗಿ. ಈಗ ಅದಕ್ಕೆ ತಿದ್ದುಪಡಿ ಮಸೂದೆಯ ಮೂಲಕ ಮತ್ತಷ್ಟು ಕೋರೆ ಹಲ್ಲುಗಳನ್ನು ಒದಗಿಸಿದೆ‌. ಇದು ಮುಸಲ್ಮಾನರಲ್ಲಿ ದಾಖಲೆ ಒದಗಿಸಲಾಗದಿದ್ದರೆ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯನ್ನು ಸೃಷ್ಟಿಸಿದರೆ, ಕೇಂದ್ರ ಸರಕಾರ ಕೇಳುವ ದಾಖಲೆ ಒದಗಿಸಲು ನೂರ ಮೂವತ್ತು ಕೋಟಿ ನಾಗರಿಕರೂ ಧರ್ಮ ಭೇದವಿಲ್ಲದೆ ತೀವ್ರ ಸಂಕಷ್ಟಗಳಿಗೆ ಗುರಿಯಾಗ ಬೇಕಾಗುತ್ತದೆ. ದಾಖಲೆಗಳು ಹೊಂದಿಲ್ಲದ ಆದಿವಾಸಿಗಳು, ಅಲೆಮಾರಿಗಳು, ಬಡವರು ಪೌರತ್ವ ಪಡೆಯಲು ಅಪಾರ ವೇದನೆಗೆ ಗುರಿಯಾಗಬೇಕಾಗುತ್ತದೆ‌. ಒಟ್ಟಾರೆ ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯಗಳಿಂದ ಸೃಷ್ಟಿಯಾಗುತ್ತಿರುವ ಜನಾಕ್ರೋಶದ ದಿಕ್ಕನ್ನು ತಪ್ಪಿಸಲು ಈ ಕಾಯ್ದೆಯನ್ನು ಮುಂದಕ್ಕೆ ತಂದಿದೆ. ಇದು ಬಿಜೆಪಿಯ ಒಡೆದಾಳುವ ನೀತಿಯ ಮುಂದುವರಿದ ಭಾಗ.

ಭಾರತವು, ಮ್ಯಾನ್ಮಾರ್ ನಲ್ಲಿ ತೀವ್ರ ಕಿರುಕುಳ ಮತ್ತು ದಮನಕಾರಿ ಹಿಂಸೆಗಳನ್ನು ಎದುರಿಸುತ್ತಿರುವ ರೊಹಿಂಗ್ಯನ್ ಮುಸ್ಲಿಂ ನಿರಾಶ್ರಿತರ ಆಗಮನವನ್ನು ಎದುರಿಸುತ್ತಿದೆ. ಅವರ ಬಳಿ ವಿಶ್ವಸಂಸ್ಥೆಯ ಮಾನ್ಯತೆ ಪಡೆದ ನಿರಾಶ್ರಿತ ಕಾರ್ಡು ಇದ್ದರೂ ಭಾರತ ಸರಕಾರ ಅವರನ್ನು ದೇಶದಿಂದ ಹೊರದಬ್ಬಲು ಪ್ರಯತ್ನಿಸುತ್ತಿದೆ. ಈ ಕ್ರಮವನ್ನು ಈ ಮಸೂದೆ ಕಾನೂನುಬದ್ಧಗೊಳಿಸುತ್ತದೆ.

ಮತ, ಧರ್ಮದ ಮೇಲೆ ದೇಶವನ್ನು ವಿಭಜಿಸುವುದನ್ನು ಎಸ್ಎಫ್ಐ-ಡಿವೈಎಫ್ಐ ಸಂಘಟನೆಗಳು ಒಪ್ಪುವುದಿಲ್ಲ. ಅಲ್ಲದೇ ಪಾರ್ಲಿಮೆಂಟು ಮಂಜೂರು ಮಾಡಿದ ಈ ಭೀಕರ ಮಸೂದೆಯನ್ನು ತಿರಸ್ಕರಿಸಲು ಹಾಗೂ ಅದನ್ನು ವಾಪಸು ಪಡೆಯಬೇಕೆಂದು ಒತ್ತಾಯಿಸುತ್ತವೆ. ಈ ಸಂದರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ರಮೇಶ್ ವೀರಾಪುರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಶಿವಪ್ಪ ಬ್ಯಾಗವಾಟ್, ಎಸ್ಎಫ್ಐ ಜಿಲ್ಲಾ ಸಮಿತಿ ಸದಸ್ಯ ತಿಪ್ಪಣ್ಣ ನಿಲೋಗಲ್, ಬಸವಂತ ಹಿರೆ ಕಡಬೂರ್, ಕೆವೈಎಫ್ ಜಿಲ್ಲಾಧ್ಯಕ್ಷರು, ಕರವೇ ತಾಲೂಕಾಧ್ಯಕ್ಷ ಅಶೋಕ್ ಮುರಾರಿ, ಎಸ್ಎಫ್ಐ ತಾಲೂಕ ಮುಖಂಡರಾದ ಅಮರೇಗೌಡ, ಬಸಲಿಂಗ, ಮುತ್ತುರಾಜ್, ಡಿವೈಎಫ್ಐ ತಾಲೂಕ ಮುಖಂಡರಾದ ಬಸವರಾಜ ಸಿರೋಟಿ, ಕಂಟಪ್ಪ, ಕೆ ಪಿ ಆರ್ ಎಸ್ ಮುಖಂಡರಾದ ಸದ್ದಾಮ್ ಹುಸೇನ್, ಮಹಮ್ಮದ್ ಸಾಬ್, ಕೆವೈಎಫ್ ನ ಗಂಗಪ್ಪ ತೋರಣದಿನ್ನಿ, ಕುಮಾರ್ ಬಡಿಗೇರ, ವಸಂತಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights