ಪ್ರಯಾಣಿಕರ ವಾಹನ ಮಾರಾಟದಲ್ಲಿ ಶೇ.23.7 ರಷ್ಟು ಕುಸಿತ: ನೌಕರರು ಉದ್ಯೋಗದಿಂದ ವಿಮುಖ

ದೇಶದ ಆರ್ಥಿಕತೆ ಕುಸಿತ ಕಂಡಿರುವುದು ಗೊತ್ತಿರುವ ವಿಷಯ. ಅದರಲ್ಲೂ ಆಟೋಮೊಬೈಲ್ ಕ್ಷೇತ್ರ ಸಂಪೂರ್ಣವಾಗಿ ನೆಲಕಚ್ಚಿದೆ. ಅದೆಷ್ಟೋ ಮಂದಿ ನೌಕರರು ಉದ್ಯೋಗ ಕಳೆದುಕೊಂಡು ದಿಕ್ಕು ಕಾಣದೇ ಕುಳಿತಿದ್ದಾರೆ. ಹೀಗಿರುವಾಗ ಆಟೋಮೊಬೈಲ್ ಕ್ಷೇತ್ರದಲ್ಲಿ ಮತ್ತೊಂದು ಕುಸಿತ ಕಂಡು ಬಂದಿದೆ. ದೇಶದಲ್ಲಿ ಪ್ರಯಾಣಿಕರ ವಾಹನ ಮಾರಾಟ ಸೆಪ್ಟಂಬರ್ ವೇಳೆಗೆ ಶೇ. 23.7ರಷ್ಟು ಕುಸಿತ ಕಂಡಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ಸ್ ಬಿಡುಗಡೆ ಮಾಡಿದ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಆಟೋಮೊಬೈಲ್ ಕ್ಷೇತ್ರದಲ್ಲಿ ಕಾಣುತ್ತಿರುವ ಭಾರೀ ಕುಸಿತ ನೌಕರರಿಗೆ ಹಾನಿಯುಂಟು ಮಾಡಿದೆ. ಉದ್ಯೋಗವಿಲ್ಲದೇ ನೌಕರರು ಚಿಂತಾಕ್ರಾಂತರಾಗಿದ್ದಾರೆ. ದೇಶೀಯ ಆಟೋಮೊಬೈಲ್ ಉತ್ಪಾದನಾ ಕ್ಷೇತ್ರ ಮಂದಗತಿಯಲ್ಲಿ ಸಾಗುತ್ತಿದೆ. ಸುಮಾರು 2,23,317 ಯುನಿಟ್ ನಷ್ಟು ಪ್ರಯಾಣಿಕರ ವಾಹನ ಮಾರಾಟ ಕಡಿಮೆಯಾಗಿದೆ. ಅದರಲ್ಲೂ ಕಾರು ಮಾರಾಟ ಶೇ. 33.4 ರಷ್ಟು ಅಂದರೆ 131, 281 ಯುನಿಟ್ ನಷ್ಟು ಕಡಿಮೆಯಾಗಿದೆ ಎಂದು ಸಿಐಎಎಂ ಹೇಳಿದೆ.

ಸಿಐಎಎಂ ಅಧ್ಯಕ್ಷ ರಂಜನ್ ವಡೇರಾ ಮಾತನಾಡಿ, ನಾವು ಎರಡು ರೀತಿಯ ವಿಭಾಗಗಳನ್ನು ಮಾಡಿದ್ದೇವೆ. ಒಂದು ಉತ್ತಮ ಹಂತ ಮತ್ತೊಂದು ಅತ್ಯಂತ ಕೆಟ್ಟ ಹಂತ. ಕೆಟ್ಟ ಹಂತದಲ್ಲಿ ಉತ್ಪಾದಕತೆ ಮತ್ತು ಮಾರಾಟ ಹೆಚ್ಚು ಕೆಳಮಟ್ಟದಲ್ಲಿದೆ. ನೌಕರರು ಉದ್ಯೋಗ ರಹಿತರಾಗಿದ್ದಾರೆ ಎಂದು ಹೇಳಿದರು. ಕಾರು ಮತ್ತು ಆಟೋ ತಯಾರಕರು ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕಿದ್ದಾರೆ. ಆರ್ಥಿಕತೆ ಕುಸಿತ ಮತ್ತು ಕಂಪನಿ ಚಟುವಟಿಕೆಗಳಲ್ಲಿ ಎದುರಾಗುತ್ತಿರುವ ಸವಾಲುಗಳು ಕಾರಣವಾಗಿವೆ. ಅದಾಗ್ಯೂ ಕೇಂದ್ರ ಸರ್ಕಾರ ಕಳೆದ ತಿಂಗಳು ಕಾರ್ಪೋರೇಟ್ ಟ್ಯಾಕ್ಸ್ ಕಡಿಮೆ ಮಾಡಿ, ಉತ್ಪಾದನೆಗೆ ಬೂಸ್ಟ್ ನೀಡುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಸದ್ಯದ ಹಬ್ಬದ ದಿನಗಳಾಗಿದ್ದರಿಂದ ಸ್ವಲ್ಪ ಮಟ್ಟಿನ ಚೇತರಿಕೆ ಕಾಣುತ್ತಿದೆ ಎಂದು ರಂಜನ್ ವಡೇರಾ ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights