ಭಾರತದಲ್ಲಿ ಹಸಿವಿನ ಪ್ರಮಾಣ ಗಂಭೀರ : ಜಾಗತಿಕ ಹಸಿವು ಸೂಚ್ಯಂಕ ವರದಿ…

ಇಂದು ವಿಶ್ವ ಆಹಾರ ದಿನ. ಭಾರತದಲ್ಲಿ ಹಸಿವು ಮತ್ತು ಅಪೌಷ್ಠಿಕತೆಯ ಪ್ರಮಾಣ ಹೆಚ್ಚಿದೆ. ಭಾರತದಲ್ಲಿ ಮಕ್ಕಳ ಮರಣ ಪ್ರಮಾಣದ ಬೆಳವಣಿಗೆ ಅತ್ಯಂತ ಕೆಟ್ಟದಾಗಿದೆ ಎಂದು ಜಾಗತಿಕ ಹಸಿವು ಸೂಚ್ಯಂಕ ( ಜಿ.ಎಚ್.ಐ) ವರದಿ ನೀಡಿದೆ. ಪ್ರತಿ ವರ್ಷ ಜಿ.ಎಚ್.ಐ ವಿವಿಧ ರಾಷ್ಟ್ರಗಳಲ್ಲಿ ಹಸಿವಿನಿಂದ ಬಳಲುವವರು, ಮಕ್ಕಳಲ್ಲಿ ಅಪೌಷ್ಠಿಕತೆಯ ಬಗ್ಗೆ ಅಂಕಿ ಅಂಶ ಕಲೆ ಹಾಕಿ ಪ್ರಕಟಿಸುತ್ತದೆ. ಜಾಗತಿಕ ಮಟ್ಟದಲ್ಲಿ ಜೀರೋ ಅಂಕ ಹೊಂದಿರುವ ರಾಷ್ಟ್ರಗಳಲ್ಲಿ ಹಸಿವು ಮತ್ತು ಅಪೌಷ್ಠಿಕತೆ ಇಲ್ಲವೆಂದು ತೀರ್ಮಾನಿಸಲಾಗುತ್ತದೆ. ಅದೇ ರೀತಿ 100 ಗಡಿ ದಾಟಿದ ದೇಶಗಳಲ್ಲಿ ಹಸಿವಿನಿಂದ ಬಳಲುವವರು ಮತ್ತು ಅಪೌಷ್ಠಿಕತೆ, ಮಕ್ಕಳಲ್ಲಿ ಅನಾರೋಗ್ಯ ಪ್ರಮಾಣ ಹೆಚ್ಚಿದೆ ಎಂದರ್ಥ. ಅಂತಹ ದೇಶಗಳಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಿದೆ ಎಂದು ವರದಿ ಹೇಳುತ್ತದೆ.

ಜಿ.ಎಚ್.ಐ ವಾರ್ಷಿಕ ವರದಿಯಾಗಿದ್ದು, ಇದನ್ನು ಐರ್ಲೆಂಡ್‌ನ ಕನ್ಸರ್ನ್ ವರ್ಲ್ಡ್‌ ವೈಡ್ ಮತ್ತು ಜರ್ಮನಿಯ ವೆಲ್ತುಂಗರ್‌ ಹಿಲ್ಫ್ ಜಂಟಿಯಾಗಿ ಪ್ರಕಟಿಸಿವೆ. ಈಗ ಸುಮಾರು 117 ರಾಷ್ಟ್ರಗಳಲ್ಲಿನ ಅಂಕಿ-ಅಂಶಗಳನ್ನು ಜಿ.ಎಚ್.ಐ ಪ್ರಕಟಿಸಿದೆ. ಇದರಲ್ಲಿ ಭಾರತದ ಸಂಖ್ಯೆ 102. ಇದು ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚಿದೆ ಮತ್ತು ಅಪೌಷ್ಠಿಕತೆ ತೀವ್ರ ಪ್ರಮಾಣದಲ್ಲಿದೆ ಎಂಬುದನ್ನು ತೋರಿಸುತ್ತದೆ. ಭಾರತದಲ್ಲಿ ಹಸಿವಿನ ಮಟ್ಟ ಶೇ. 30.3 ರಷ್ಟಿದ್ದು, ಪರಿಸ್ಥಿತಿ ಗಂಭೀರವಾಗಿದ್ದು, ಹಸಿವಿನಿಂದ ಹೆಚ್ಚು ಜನತೆ ಬಳಲುತ್ತಿದ್ದಾರೆ ಎಂಬುದಾಗಿ ಹೇಳಿದೆ. ಪ್ರತಿ ವರ್ಷ ಜಿ.ಎಚ್.ಐ ಹಸಿವು ಸೂಚ್ಯಂಕ ವರದಿಯನ್ನು ಬಿಡುಗಡೆ ಮಾಡುತ್ತದೆ.

ಅಂದಹಾಗೇ ಭಾರತ ಅಕ್ಕ-ಪಕ್ಕದ ದೇಶಗಳಿಗಿಂತಲೂ ಕಳಪೆ ಮಟ್ಟದಲ್ಲಿರುವುದು, ಆತಂಕಕಾರಿ ಬೆಳವಣಿಗೆಯಾಗಿದೆ. ಪಕ್ಕದ ರಾಷ್ಟ್ರಗಳಾದ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಗಳಿಗಿಂತ ಹೆಚ್ಚು ಗಂಭೀರ ಹಸಿವಿನ ದುಸ್ಥಿತಿಯನ್ನು ಭಾರತ ಅನುಭವಿಸುತ್ತಿದೆ. ಪಾಕಿಸ್ತಾನ 94 ನೇ ಸ್ಥಾನ, ಬಾಂಗ್ಲಾದೇಶ 88, ನೇಪಾಳ 73 ನೇ ಸ್ಥಾನದಲ್ಲಿದೆ. ಅಂದರೆ ಆ ದೇಶಗಳಿಗಿಂತ ಭಾರತದಲ್ಲಿ ಹಸಿವಿನ ಆಹಾಕಾರ ಹೆಚ್ಚಿದೆ ಎಂಬುದು ಇದರಿಂದ ಖಾತ್ರಿಯಾಗುತ್ತಿರುವುದು ದುರಂತ.

2014 ರ ವೇಳೆ ಭಾರತ 55ನೇ ಸ್ಥಾನದಲ್ಲಿದ್ದರೆ, 2017ರಲ್ಲಿ ಭಾರತ 100ನೇ ಸ್ಥಾನಕ್ಕೆ ಕುಸಿದಿತ್ತು. 2018ರಲ್ಲಿ 103ನೇ ಸ್ಥಾನಕ್ಕೆ ಇಳಿದಿದ್ದ ಭಾರತ ಈ ಬಾರಿ ಒಂದು ರ್ಯಾಂಕ್ ಮೇಲೇರಿದೆಯಾದರು (102ನೇ ಸ್ಥಾನ) ನಾವು ಬಡರಾಷ್ಟ್ರಗಳೆಂದು ಕರೆಯುವ ನೆರೆಯ ಪಾಕಿಸ್ತಾನ, ಬಾಂಗ್ಲಾ, ನೇಪಾಳಗಳಿಗಿಂತಲೂ ತೀರಾ ಹಿಂದೆ ಬಿದ್ದಿರೋದು ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳಬೇಕಿರುವ ಅಗತ್ಯತೆಯನ್ನು ಒತ್ತಿ ಹೇಳುತ್ತಿದೆ

ಭಾರತ ಬೃಹತ್ ರಾಷ್ಟ್ರ. ಇಲ್ಲಿ ಜನಸಂಖ್ಯೆ ಕೂಡ ಹಸಿವಿನ ಸೂಚ್ಯಂಕದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಸಿವಿನಿಂದ ಮಕ್ಕಳು ಬಳಲುವುದು, ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅನಾರೋಗ್ಯ, ಪೋಲಿಯೋ, ವಯಸ್ಸಿಗಿಂತ ಕಡಿಮೆ ತೂಕ, ಕಡಿಮೆ ಎತ್ತರ, ಪೌಷ್ಠಿಕಾಂಶವುಳ್ಳ ಆಹಾರದ ಕೊರತೆ, ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ, ಮಕ್ಕಳನ್ನು ಕೆಲಸಗಳಿಗೆ ಬಳಕೆ ಮಾಡುವುದು, ಯಾವ ಪ್ರದೇಶಗಳಲ್ಲಿ ಹೆಚ್ಚು ಅಪೌಷ್ಠಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ ಎಂಬ ಅಂಶಗಳ ಆಧಾರದ ಮೇಲೆ ಹಸಿವಿನ ಸೂಚ್ಯಂಕವನ್ನು ತಾಳೆ ಹಾಕಲಾಗುತ್ತದೆ. ಕ್ಯಾಲೋರಿ ಕೊರತೆ, ಕಳಪೆ ಆಹಾರ, ಮಕ್ಕಳಿಗೆ ನಿರ್ದಿಷ್ಟ ಪ್ರಮಾಣದ ಆಹಾರ ಒದಗಿಸುವಲ್ಲಿನ ವೈಫಲ್ಯ ಸಹ ಹಸಿವು ಸೂಚ್ಯಂಕದಡಿಯಲ್ಲಿ ದಾಖಲಾಗುತ್ತದೆ. ಪ್ರತಿ ರಾಷ್ಟ್ರದ ಹಸಿವಿನ ಪ್ರಮಾಣ ಮತ್ತು ಅಂಕಿ ಅಂಶಗಳನ್ನು ಜಾಗತಿಕ ಹಸಿವು ಸೂಚ್ಯಂಕ ನೀಡುತ್ತದೆ.

ಇನ್ನು ಪ್ರಧಾನಿ ಮೋದಿ ಸರ್ಕಾರದಲ್ಲಿ ಹಸಿವಿನ ಪ್ರಮಾಣ ಹೆಚ್ಚಿರುವುದಕ್ಕೆ ಹಾಗೂ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ 102ಕ್ಕೆ ಏರಿಕೆಯಾಗಿದ್ದರ ಕುರಿತು ವಿಪಕ್ಷ ನಾಯಕರು ವ್ಯಂಗ್ಯವಾಡಿದ್ದಾರೆ. ಮೋದಿ ಆಡಳಿತದಲ್ಲಿ ಮಕ್ಕಳ ಸಾವು ಮತ್ತು ಹಸಿವು,. ಅಪೌಷ್ಠಿಕತೆಯ ಮಟ್ಟ ಹೆಚ್ಚಿದ್ದು, ಪ್ರಪಂಚದ ಬಹುಪಾಲು ಮಂದಿ ಈಗ ಭಾರತದಲ್ಲಿ ನೆಲೆಸಿದ್ದಾರೆ ಎಂದು ಕೇರಳದ ವಿತ್ತ ಸಚಿವ ಥಾಮಸ್ ಐಸಾಕ್ ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights