ಮಧ್ಯಾಹ್ನ 2ಕ್ಕೆ ಮಧ್ಯಪ್ರದೇಶ ವಿಶ್ವಾಸಮತ:  12 ಗಂಟೆಗೆ ಕಮಲ್‌ನಾಥ್ ರಾಜೀನಾಮೆ ಸಾಧ್ಯತೆ

ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2ಕ್ಕೆ ಮಧ್ಯಪ್ರದೇಶ ವಿಶ್ವಾಸಮತ ಯಾಚನೆ ನಡೆಯಲಿದೆ ಎಂದು ಕಮಲ್‌ನಾಥ್‌ ಸರ್ಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.

ಈ ನಡುವೆ ರಾಜೀನಾಮೆ ಸಲ್ಲಿಸಿದ್ದ ಒಟ್ಟು 22 ಜನರಲ್ಲಿ 6 ಸಚಿವರ ರಾಜೀನಾಮೆಯನ್ನು ಮಾತ್ರ ಸ್ಪೀಕರ್‌ ಈ ಹಿಂದೆ ಅಂಗೀಕರಿಸಿದ್ದರು. ಇಂದು ಉಳಿದ 16 ಶಾಸಕರ ರಾಜೀನಾಮೆಯನ್ನು ಸಹ ಸ್ಪೀಕರ್‌ ಅಂಗೀಕರಿಸಿರುವುದರಿಂದ ಮಧ್ಯಪ್ರದೇಶ ವಿಧಾನಸಭೆಯ ಬಲಾಬಲ 206ಕ್ಕೆ ಕುಸಿದಿದೆ. ಇಬ್ಬರು ಸದಸ್ಯರ ಮರಣದಿಂದಾಗಿ ಎರಡು ಸ್ಥಾನಗಳು ಖಾಲಿ ಇವೆ. ಬಹುಮತಕ್ಕೆ 104 ಸದಸ್ಯರ ಅಗತ್ಯವಿದ್ದು ಕಾಂಗ್ರೆಸ್‌ ಸದ್ಯಕ್ಕೆ 92 ಸದಸ್ಯರನ್ನು ಒಳಗೊಂಡಿದ್ದು 07 ಇತರ ಪಕ್ಷಗಳ ಮತ್ತು ಸ್ವತಂತ್ರ ಶಾಸಕರ ಬೆಂಬಲ ಪಡೆದಿದ್ದು ಅದರ ಒಟ್ಟು ಬಲ 99 ಇದೆ. ಸರಳ ಬಹುಮತಕ್ಕೆ 04 ಸದಸ್ಯರ ಕೊರತೆಯುಂಟಾಗಿದ್ದು, ಬಿಜೆಪಿ 107 ಸದಸ್ಯರನ್ನು ಹೊಂದುವ ಮೂಲಕ ಸರಳ ಬಹುಮತಕ್ಕಿಂತ ಮುಂದಿದೆ.

ಮಧ್ಯಪ್ರದೇಶದ ಕಮಲ್ ನಾಥ್ ಸರ್ಕಾರ ಇಂದು ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕು ಎಂದು ನಿನ್ನೆ ಸುಪ್ರೀಂ ಕೋರ್ಟ್ ಹೇಳಿತ್ತು. ಅಷ್ಟೆ ಅಲ್ಲದೆ ಬಹುಮತ ಸಾಬಿತು ಪಡಿಸುವುದನ್ನು ವಿಡಿಯೋ ಮಾಡಿ, ಅದನ್ನು ನೇರ ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ತೀರ್ಪಿನ ನಂತರ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಸತ್ಯಮೇವ ಜಯತೆ” – ಅಂದರೆ “ಸತ್ಯವು ಮೇಲುಗೈ ಸಾಧಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಬಹುಮತ ಸಾಬೀತುಪಡಿಸುತ್ತದೆ ಮತ್ತು ರಾಜ್ಯದಲ್ಲಿ ತನ್ನ ಸರ್ಕಾರವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಪಿಎಲ್ ಪುನಿಯಾ ಪ್ರತಿಪಾದಿಸಿದ್ದಾರೆ.  “ಯಾರ ಬಳಿ ಸಂಖ್ಯೆ ಇರುತ್ತದೋ ಅವರು ಗೆಲ್ಲುತ್ತಾರೆ” ಎಂದು ಪಕ್ಷದ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿರುವುದಾಗಿ ಎನ್‌ಡಿಟಿವಿಗೆ ವರದಿ ಮಾಡಿದೆ.

ಕಳೆದ ವರ್ಷ ರಾಜ್ಯ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಮಸೂದೆಯ ಪರವಾಗಿ ಇಬ್ಬರು ಬಿಜೆಪಿ ಶಾಸಕರಾದ ನಾರಾಯಣ್ ತ್ರಿಪಾಠಿ ಮತ್ತು ಶರದ್ ಕೋಲ್ ಅವರು ಮತದಾನವನ್ನು ಉಲ್ಲೇಖಿಸಿರುವ ಕಾನೂನು ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ಪಿಸಿ ಶರ್ಮಾ, “ಆಗ ಇಬ್ಬರು ಶಾಸಕರು ಇದ್ದರು. ಆದರೆ ಈ ಬಾರಿ ಬಿಜೆಪಿಯ ಕಡೆಯಿಂದ ಕನಿಷ್ಠ ಎಂಟು ಶಾಸಕರು ನಮಗೆ ಮತ ಚಲಾಯಿಸುತ್ತಾರೆ” ಎಂದಿದ್ದಾರೆ. ಆ ಮೂಲಕ ಸರ್ಕಾರ ಉಳಿಸಿಕೊಳ್ಳುವ ತಮ್ಮ ಆಶಾವಾದವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.

ಆದರೆ, ಮತ್ತೊಬ್ಬ ಕಾಂಗ್ರೆಸ್ ಮುಖಂಡರೊಬ್ಬರು, “ಪ್ರತಿಪಕ್ಷದ ಕಡೆಯಿಂದ ಐದು ಶಾಸಕರನ್ನು ಪಡೆಯುವುದು ಅಸಂಭವವಾಗಿದೆ, ಈಗ ತಕ್ಕಡಿ ಬಿಜೆಪಿಯ ಪರವಾಗಿ ಓರೆಯಾಗುತ್ತಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ಯಾವುದೇ ಬಿಜೆಪಿ ಶಾಸಕರು ನಮ್ಮ ಕಡೆಗೆ ಬರಲು ಇಷ್ಟಪಡುವುದಿಲ್ಲ. ವಿಶೇಷವಾಗಿ ಬಿಜೆಪಿ ಬಲವಾದ ಕೇಂದ್ರ ನಾಯಕತ್ವವನ್ನು ಹೊಂದಿರುವಾಗ ಈ ಸಮಯದಲ್ಲಿ ದಂಗೆ ಏಳುವುದು ಅವರ ರಾಜಕೀಯ ಜೀವನವನ್ನು ಅಪಾಯಕ್ಕೆ ತಳ್ಳುವ ಸಂಭವವಿದೆ. ದುರದೃಷ್ಟವಶಾತ್, ನಾವು ಕರ್ನಾಟಕದಂತಹ ಪರಿಸ್ಥಿತಿಯತ್ತ ಸಾಗುತ್ತಿದ್ದೇವೆ” ಎಂದಿದ್ದಾರೆ.

ಈ ನಡುವೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ರವರು ವಿಶ್ವಾಸಮತ ಯಾಚನೆಗೆ ಎರಡು ಗಂಟೆಗಳ ಮುನ್ನ ಪತ್ರಿಕಾಗೋಷ್ಠಿ ಕರೆದಿದ್ದು, ಬಹುಮತ ಸಾಬೀತುಪಡಿಸುವ ಗೋಜಿಗೆ ಹೋಗದೇ ರಾಜೀನಾಮೆ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights