Fact check: ಬಜರಂಗದಳದ ಹರ್ಷ ಹತ್ಯೆಯ ಆರೋಪಿಗಳನ್ನು ನನ್ನ ಬ್ರದರ್ಸ್ ಎಂದು ಡಿ.ಕೆ ಶಿವಕುಮಾರ್ ಹೇಳಿಲ್ಲ
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ಮೇಲೆ ಎಫ್ಐಆರ್ ದಾಖಲಾಗಿದ್ದು, 6 ಜನರನ್ನು ಬಂಧನ ಮಾಡಲಾಗಿದೆ. ಬಂಧಿತ ಆರೋಪಿಗಳ ಸಂಪೂರ್ಣ ಬಯೋಡೇಟಾವನ್ನು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಖಾಸಿಫ್ (30), ಸಯ್ಯದ್ ನದೀಂ ಎಂಬುವವರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿತ್ತು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಆಸೀಫ್ ಉಲ್ಲಾ ಖಾನ್, ರಿಹಾನ್ ಷರೀಫ್, ನಿಹಾನ್, ಅಬ್ದುಲ್ ಅಫ್ನಾನ್ ಎಂಬುವವರನ್ನು ಬಂಧಿಸಲಾಗಿದೆ.
ಪ್ರಕರಣ ಇನ್ನು ತನಿಖೆಯ ಹಂತದಲ್ಲಿ ಇರುವಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಹರ್ಷನನ್ನು ಹತ್ಯೆ ಮಾಡಿದ ಆರೋಪಿಗಳ ಪರವಾಗಿ ಮಾತನಾಡುತ್ತಿದ್ದಾರೆ, ಆರೋಪಿಗಳ ರಕ್ಷಣೆಗೆ ಇಳಿದಿದ್ದಾರೆ ಪ್ರತಿಪಾದಿಸುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಗಳನ್ನು “ಅವರು ನನ್ನ ಬ್ರದರ್ಸ್” ಎಂದು ಕರೆದಿದ್ದಾರೆ. ಆರೋಪಿಗಳನ್ನು ರಕ್ಷಿಸಲು ಮುಂದಾಗಿದ್ದಾರೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಷನ ಹತ್ಯೆಯ ಆರೋಪಿಗಳನ್ನು ಸೇಫ್ ಮಾಡುವಂತಹ, ಅಥವ ಅವರು ನಮ್ಮ ಸಹೋದರರರಿದ್ದ ಹಾಗೆ ಎಂದು ಹೇಳುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ” ವಿಡಿಯೊದಲ್ಲಿ ಡಿಕೆ ಶಿವಕುಮಾರ್ ಅವರು ಮಾತನಾಡುತ್ತ “ನೀವು ಬರೀ ಮುಸಲ್ಮಾನರ ಹೆಸರನ್ನ ತೆಗೆದುಕೊಂಡಿದ್ದೀರಲ್ಲ ದೇ ಆರ್ ಮೈ ಬ್ರದರ್ಸ್, ವಿ ಲೀವ್ ಟುಗೇದರ್, ವೀ ಡೈ ಟುಗೆದರ್” ಎಂದು ಹೇಳುವ ಹೇಳಿಕೆಯನ್ನು ವಿಡಿಯೋದಲ್ಲಿ ನೋಡಬಹುದು.
ವಾಸ್ತವವಾಗಿ ಈ ವಿಡಿಯೋಗೂ ಶಿವಮೊಗ್ಗದ ಬಜರಂಗದಳ ಹರ್ಷ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಡಿಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಕೇವಲ 10 ಸೆಕೆಂಡುಗಳಿದ್ದು ಅದರ ಸಂಪೂರ್ಣ ವಿಡಿಯೋವನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಪೂರ್ಣ ವಿಡಿಯೋ ಲಭ್ಯವಾಗಿದೆ.
ಹಾಗಿದ್ದರೆ ಡಿಕೆ ಶಿವಕುಮಾರ್ ಮಾತನಾಡಿರುವ ವಿಡಿಯೊದಲ್ಲಿ ಪ್ರಸ್ತಾಪಿಸಿರು ಘಟನೆ ಯಾವುದು?
6 ಮೇ 2021 ರಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡ ಸಂದರ್ಭದಲ್ಲಿ ಬಿಬಿಎಂಎಪಿ ಉಸ್ತುವಾರಿಯಲ್ಲಿ ನಡೆಯುತ್ತಿದ ವಾರ್ ರೂಮ್ ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಶಾಸಕರಾದ ಎಲ್. ಎ. ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಸತೀಶ್ ರೆಡ್ಡಿ ಅವರ ಜತೆಗೂಡಿ ದಾಳಿ ನಡೆಸಿದ್ದರು. ಕೋವಿಡ್ ಸೋಂಕಿತರಿಗೆ ಹಾಸಿಗೆ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದರು. ವಾರ್ ರೂಮ್ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಒಂದೇ ಸಮುದಾಯದ (ಮುಸ್ಲಿಂ) 17 ಮಂದಿಯ ಹೆಸರು ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸಿದ್ದರು.
ವಾರ್ ರೂಮ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 212 ಮಂದಿಯ ಪೈಕಿ 17 ಮಂದಿ ಮುಸ್ಲಿಂ ಸಮುದಾಯದ ಸಿಬ್ಬಂದಿಯ ಮೇಲೆ ಆರೋಪ ಮಾಡಿ ವಜಾ ಮಾಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ”ಇವರೆಲ್ಲರನ್ನೂ ಮದರಸಾಕ್ಕೆ ನೇಮಕ ಮಾಡಿಕೊಂಡಿದ್ದೀರಾ ಅಥವಾ ಕಾರ್ಪೋರೇಷನ್ಗಾ?” ಎಂದು ಶಾಸಕ ರವಿಸುಬ್ರಹ್ಮಣ್ಯ ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
BJP ಯು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿದೆ ಎಂದು ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ತೇಜಸ್ವಿ ಸೂರ್ಯ ಮತ್ತು ವಾರ್ ರೂಮ್ ಮೇಲೆ ದಾಳಿ ಮಾಡಿದ ಶಾಸಕರಾದ ಎಲ್. ಎ. ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಸತೀಶ್ ರೆಡ್ಡಿ ಅವರನ್ನು ತರಾಟೆ ತೆಗೆದುಕೊಂಡಿದ್ದರು. “ನಾನು ಏನೋ ಅಂದಕೊಂಡಿದ್ದೆ. ಆದ್ರೆ ಅವನು ಗಾನ್ ಕೇಸ್. ಒನ್ ಟೈಮ್ ಕ್ರಾಪ್ ಎಂದು ಕುಹಕವಾಡಿದ್ದರು ಜೊತೆಗೆ “ನೀವು ಬರೀ ಮುಸಲ್ಮಾನರ ಹೆಸರನ್ನ ತೆಗೆದುಕೊಂಡಿದ್ದೀರಲ್ಲ “ದೇ ಆರ್ ಮೈ ಬ್ರದರ್ಸ್, ವಿ ಲೀವ್ ಟುಗೇದರ್, ವೀ ಡೈ ಟುಗೆದರ್ (ಜೊತೆಗೆ ಬದುಕುತ್ತೇವೆ, ಜೊತೆಗೆ ಸಾಯುತ್ತೇವೆ) ” ಎಂದಿದ್ದರು.
ಕ್ಷಮೆ ಕೋರಿದ್ದ ತೇಜಸ್ವಿ ಸೂರ್ಯ:
ತೇಜಸ್ವಿ ಸೂರ್ಯ ಮಾಡಿದ್ದ ಆರೋಪದಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಇಲ್ಲ ಎಂದು ಖಾತ್ರಿಯಾಗುತ್ತಿದಂತೆ ಸಂಸದರ ಮೇಲೆ ಟೀಕೆಗಳು ಕೇಳಲಾರಂಭಿಸಿತ್ತು, ಮುಸ್ಲಿಂ ಸಮುದಾಯವನ್ನು ಕ್ಷಮೆ ಕೋರಬೇಕೆಂಬ ಆಗ್ರಹವು ಹೆಚ್ಚಾಗಿತ್ತು. ಘಟನೆಯ ಬಳಿಕ ಹಲವು ಸಿಬ್ಬಂದಿ ಕೆಲಸಕ್ಕೆ ಹಾಜರಾಗದ ಕಾರಣ ತೇಜಸ್ವಿ ಸೂರ್ಯ ಸಿಬ್ಬಂದಿಗಳಲ್ಲಿ ಕ್ಷಮೆ ಕೋರಿ ಹೇಳಿಕೆ ನೀಡಿದ್ದರು, ”ಸಿಬ್ಬಂದಿ ಮೇಲೆ ದ್ವೇಷವಿಲ್ಲ. ನೀವೆಲ್ಲರೂ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ,” ಎಂದು ಹೇಳಿದ್ದರು.

ತೇಜಸ್ವಿ ಸೂರ್ಯ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡುಲು ಸುದ್ದಿಗೋಷ್ಠಿ ನಡೆಸಿದ್ದ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಎಡಿಟ್ ಮಾಡಿ 20 ಫೆಬ್ರವರಿ 2022 ರ ರಾತ್ರಿ ನಡೆದ ಹರ್ಷನ ಹತ್ಯೆಗೆ ಸಂಬಂಧಿಸಿದ ಆರೋಪಿಗಳ ಪರವಾಗಿ ಮಾತನಾಡಿದ್ದಾರೆ ಎಂಬಂತೆ ವಿಡಿಯೊವನ್ನು ಎಡಿಟ್ ಮಾಡಿ ಮತ್ತು ಅದಕ್ಕ ಆರೋಪಿಗಳ ಫೋಟೋಗಳ ಕ್ರಾಪ್ಡ್ ಪೋಸ್ಟರ್ ಡಿಸೈನ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಕೊರೋನಾ ಸಂಕಷ್ಟದ ಸಮಯದಲ್ಲಿ ಕೊರೋನಾ ವಾರಿಯರ್ರ್ಸ್ ಆಗಿ ಸೇವೆ ಮಾಡುತ್ತಿದ್ದ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಂಡು ತೇಜಸ್ವಿ ಸೂರ್ಯ ಮಾಡಿದ್ದ ಬೆಡ್ ಬುಕ್ಕಿಂಗ್ ಆರೋಪಕ್ಕೆ ಪ್ರತಿಕ್ರಿಸಿ ನಡೆಸಿದ ಸುದ್ದಿಗೋಷ್ಠಿಯ ವಿಡಿಯೋವನ್ನು ಶಿವಮೊಗ್ಗ ಘಟನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳುವ ಮೂಲಕ ಸುಳ್ಳು ಸುದ್ದಿಯನ್ನು ಹರಿಯಬಿಡುತ್ತಿದ್ದಾರೆ. ಇದನ್ನು ನಂಬುವ ಮುಂಚೆ ಎಚ್ಚರಿಕೆಯಿಂದ ಪರಿಶೀಲಿಸಿ ಎಂಬುದು ನಮ್ಮ ಕಳಕಳಿ.
ಇದನ್ನು ಓದಿರಿ: Fact check: ಮುಸ್ಲಿಂ ಮಹಿಳೆಯರಿಂದ ಹಿಂದೂ ಯುವತಿಯ ಮೇಲೆ ಹಲ್ಲೆಗೆ ಯತ್ನ, ವಾಸ್ತವವೇನು?

