Fact Check: ಉಕ್ರೇನ್‌ನಲ್ಲಿ ಅಮೆರಿಕನ್‌ ಆಕ್ಟಿವಿಸ್ಟ್‌ ಸಾವನ್ನಪ್ಪಿದ್ದು ಸತ್ಯವೇ?: ವೈರಲ್‌ ಆದ ಫೋಟೋ ಯಾವುದು?

ಉಕ್ರೇನ್ ಮೇಲೆ ರಷ್ಯಾವು ಯುದ್ದ ಘೋಷಿಸಿದ ನಂತರ ಅಮೆರಿಕನ್‌ ಪ್ರಜೆಯ ಮೊದಲ ಸಾವು ಸಂಭವಿಸಿದೆ ಎಂದು ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸಿಎನ್‌ಎನ್‌ ಉಕ್ರೇನ್‌ ಹೆಸರಿನಲ್ಲಿರುವ ಟ್ವೀಟರ್ ಖಾತೆಯಲ್ಲಿ ವ್ಯಕ್ತಿಯೊಬ್ಬರ ಚಿತ್ರವನ್ನು ಪ್ರಕಟಿಸಲಾಗಿದ್ದು, ಆತನನ್ನು ಅಮೆರಿಕನ್‌ ಪ್ರಜೆ ಬರ್ನಿ ಗೋರ್ಸ್ ಎಂದು ಹೇಳಲಾಗಿದೆ.

ಉಕ್ರೇನ್‌ ಬಿಕ್ಕಟ್ಟಿನ ಬಗ್ಗೆ ಪೋಸ್ಟ್‌ ಮಾಡಿರುವ ಸಿಎನ್‌ಎನ್‌ ಉಕ್ರೇನ್‌ ಟ್ವೀಟರ್ ಹ್ಯಾಂಡಲ್‌, ಅಮೇರಿಕನ್ ಪ್ರಜೆಯ ಮೊದಲ ಸಾವು ಸಂಭವಿಸಿದೆ ಎಂದು ಘೋಷಿಸಲು ನಾವು ವಿಷಾಧಿಸುತ್ತೇವೆ. ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ನಡೆಸಿದ ಗಣಿ ಸ್ಫೋಟದಲ್ಲಿ ಇಂದು ಬೆಳಿಗ್ಗೆ ಸಾಮಾಜಿಕ ಕಾರ್ಯಕರ್ತ ಬರ್ನಿ ಗೋರ್ಸ್ ಅವರು ಸಾವನ್ನಪ್ಪಿದ್ದಾರೆ” ಎಂದು ಬರೆದು ಪೋಟೋವನ್ನು ಟ್ವೀಟ್‌ ಮಾಡಿಲಾಗಿದೆ. ಇದನ್ನು ಕೆಲವರು ರೀ-ಟ್ವೀಟ್‌ ಮಾಡಿದ್ದರು. ನಂತರ, ಈ ಟ್ವೀಟ್‌ಅನ್ನು ಅಳಿಸಿ ಹಾಕಲಾಗಿದೆ. ಅದರ ಸ್ಕ್ರೀನ್‌ ಶಾಟ್‌ಗಳನ್ನು ನೆಟ್ಟಗರು ಬಳಸಿಕೊಂಡು ಸಿಎನ್‌ಎನ್‌ ವಿರುದ್ದ ಹಾಸ್ಯ ಮಾಡುತ್ತಿದ್ದಾರೆ.

Image

ಇದೇ ಪೋಟೋ ಈ ಹಿಂದೆ ಅಫ್ಘಾನಿಸ್ತಾನವನ್ನು ತಾಲಿಬಾನ್‌ಗಳು ವಶಕ್ಕೆ ಪಡೆದುಕೊಂಡಾಗಲೂ ವೈರಲ್‌ ಆಗಿತ್ತು. ಆ ವೇಳೆ, ‘CNN ಅಫ್ಘಾನಿಸ್ತಾನ’ ಎಂಬ ಟ್ವೀಟರ್ ಹ್ಯಾಂಡಲ್‌ನಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಫ್ಘಾನ್‌ನಲ್ಲಿ ತಾಲಿಬಾನ್ CNN ಪತ್ರಕರ್ತ ಬರ್ನಿ ಗೋರ್ಸ್ ಅವರನ್ನು ಗಲ್ಲಿಗೇರಿಸಿದೆ ಎಂದು ಪೋಸ್ಟ್‌ ಮಾಡಲಾಗಿತ್ತು.

Image

ಹೀಗಾಗಿ, ಉಕ್ರೇನ್‌ನಲ್ಲಿ ಅಮೆರಿಕನ್ ಪ್ರಜೆ, ಆಕ್ಟಿವಿಸ್ಟ್‌ ಸಾವನ್ನಪ್ಪಿದ್ದಾರೆ ಎಂಬ ಪ್ರತಿಪಾದನೆ ಮತ್ತು ಫೋಟೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್‌:

ಪದೇ-ಪದೇ ಸಿಎನ್‌ಎನ್‌ ಹೆಸರಿನ ಟ್ವೀಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ವಾಸ್ತವವಾಗಿ ಯೂಟ್ಯೂಬರ್ ಜೋರ್ಡಿ ಜೋರ್ಡಾನ್ ಅವರ ಚಿತ್ರವಾಗಿದೆ. ಆತ ಅಮೆರಿಕಾದ ಆಕ್ಟಿವಿಸ್ಟ್‌ ಅಗಲೀ ಅಥವಾ ಸಿಎನ್‌ಎನ್ ವರದಿಗಾರರಾಗಲೀ ಅಲ್ಲ.

ಟ್ವಿಟಲ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರವನ್ನು ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ, ಜೋರ್ಡಿ ಜೋರ್ಡಾನ್ ಅವರ YouTube ಚಾನಲ್‌ ದೊರೆತಿದೆ. ಮತ್ತು aletheagroup.com ವೆಬ್‌ಸೈಟ್‌ನಲ್ಲಿ ಕೋರ್ಡಿ ಜೋರ್ಡಾನ್‌ ಬಗ್ಗೆ “The Life and Times of “Bernie Gores” ಎಂಬ ಅಂಕಣವನ್ನು ಪ್ರಕಟಿಸಿದ್ದು, ಆತನ ಬಗ್ಗೆ ಪರಿಚಯಿಸಿದೆ. ಜೋರ್ಡಿ ಜೋರ್ಡಾನ್ ಇನ್ನೂ ಬದುಕಿದ್ದಾರೆ ಮತ್ತು ಅವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಇಂದು ಕೂಡ ವಿಡಿಯೋ ಗೇಮ್‌ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ, ಸಿಎನ್‌ಎನ್‌ ಉಕ್ರೇನ್‌ ಹೆಸರಿನ ಟ್ವಿಟರ್ ಹ್ಯಾಂಡಲ್‌ಗೂ ಸಿಎನ್‌ಎನ್‌ಗೂ ಯಾವುದೇ ಸಂಬಂಧವಿಲ್ಲ. ಸಿಎನ್‌ಎನ್‌ನ ಯಾವುದೇ ರಾಷ್ಟ್ರ ಹೆಸರಿನೊಂದಿಗೆ ಪ್ರತ್ಯೇಕ ಟ್ವಿಟರ್ ಹ್ಯಾಂಡಲ್‌ಗಳನ್ನು ಹೊಂದಿಲ್ಲ. ಮಾತ್ರವಲ್ಲದೆ, ಸಿಎನ್‌ಎನ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ ಬ್ಲೂ ಟಿಕ್‌ಅನ್ನು ಹೊಂದಿದೆ. ಹೀಗಾಗಿ, ಚಿತ್ರವನ್ನು ಹಂಚಿಕೊಂಡಿರುವ ಟ್ವಿಟರ್ ಹ್ಯಾಂಡಲ್‌ CNNನ ಅಧಿಕೃತ ಟ್ವೀಟರ್ ಹ್ಯಾಂಡಲ್‌ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉಕ್ರೇನ್‌ನಲ್ಲಿ ಇದೂವರೆಗೆ ಸುಮಾರು 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ, ಯಾವುದೇ ಅಮೆರಿಕನ್‌ ಪ್ರಜೆ ಸಾವನ್ನಪ್ಪಿರುವ ಬಗ್ಗೆ ನಿರ್ದಿಷ್ಟವಾಗಿ ಸುದ್ದಿಯಾಗಿಲ್ಲ. ಮತ್ತು ಟ್ವೀಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಫೋಟೋ ಯೂಟ್ಯೂಬರ್ ಜೋರ್ಡಿ ಜೋರ್ಡಾನ್ ಎಂಬುವವರಾಗಿದ್ದು, ಅವರು ಬದುಕಿದ್ದಾರೆ. ಅವರ ಪೋಟೋವನ್ನು ಆಗಾಗ್ಗೆ ಇಂತಹ ಸುಳ್ಳು ಸುದ್ದಿಗಳ ಪ್ರಸಾರದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ:

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights