BJP ನಾಯಕರನ್ನು ಟೀಕಿಸುತ್ತಿರುವ ಈ ಯುವಕ ಹರ್ಷ ಅಲ್ಲ, CFI ಮುಖಂಡ ಸರ್ಫರಾಜ್ ಗಂಗಾವತಿ

ಇತ್ತೀಚೆಗೆ ಶಿವಮೊಗ್ಗದಲ್ಲಿ ಹತ್ಯೆಯಾದ ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ, ಬಿಜೆಪಿ ಮತ್ತು ಅದರ ನಾಯಕರ ವಿರುದ್ದ ಮಾತನಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿಡಾಡುತ್ತಿದೆ. ಅವರು ಬಿಜೆಪಿ ವಿರುದ್ಧ ಹೀಗೆ ಮಾತನಾಡಿರುವುದರಿಂದಲೇ ಅವರ ಹತ್ಯೆ ಮಾಡಲಾಗಿದೆ ಎಂದು ಕೂಡಾ ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.

“ಗೆಳೆಯರೇ ತಪ್ಪದೆ ಹರ್ಷನ ಮಾತು ಕೇಳಿ. ಇದರಲ್ಲಿ ಬಿಜೆಪಿ, ಕೇಂದ್ರ ಸರಕಾರ, ಬಸವರಾಜ್ ಪಾಟೀಲ್ ಯತ್ನಾಳ್, ಸಂಘಪರಿವಾರ, ಎಬಿವಿಪಿ, ಭಜರಂಗದಳದ ಇತಿಹಾಸದ ಬಗ್ಗೆ ಹೇಳಿಕೆ ನೀಡಿದ್ದಾನೆ. ಅಂದಿನ ಹರ್ಷನ ಮಾತಿಗೂ, ಇಂದಿನ ಹರ್ಷನ ಸಾವಿಗೆ ಯಾರು ಕಾರಣ? ನೀವೆ ವಿಚಾರ ಮಾಡಿ ಸ್ವಾಮಿ” ಎಂದು ವೈರಲ್ ಪೋಸ್ಟ್‌ ಹೇಳುತ್ತದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಮೋದಿಯಿಂದಾಗಿ ಕೊರೊನಾ ಸಮಯದಲ್ಲಿ ಪ್ರತಿ ಮನೆಗೆ ಲಕ್ಷ್ಮಿ ದೇವಿ ಬಂದಿದ್ದರು ಎಂಬ ಅಮಿತ್ ಹೇಳಿಕೆ ನಿಜವೆ?

ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಅಧ್ಯಕ್ಷ ರೋಶನ್ ಶೆಟ್ಟಿ ಕೂಡಾ ಇದೇ ನಿರೂಪಣೆಯೊಂದಿಗೆ ಈ ವಿಡಿಯೊವನ್ನು ತನ್ನ ಫೇಸ್‌ಬುಕ್‌ ಖಾತೆಯಿಂದ ಹಂಚಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲೂ ಈ ವಿಡಿಯೊವನ್ನು ಹಲವಾರು ಜನರು ಶೇರ್‌ ಮಾಡಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ. ನಾನುಗೌರಿ.ಕಾಂ ಈ ವಿಡಿಯೊ ಬಗ್ಗೆ ಪರಿಶೀಲಿಸುವಂತೆ ಹಲವಾರು ಮನವಿಗಳು ಬಂದಿವೆ.

ಫ್ಯಾಕ್ಟ್‌ಚೆಕ್‌

ನಾನುಗೌರಿ.ಕಾಂ ಈ ವಿಡಿಯೊ ಬಗ್ಗೆ ಪರೀಶಿಲಿಸಿದಾದ ವಿಡಿಯೊದಲ್ಲಿ ಮಾತನಾಡುತ್ತಿರುವ ವ್ಯಕ್ತಿಯು ಶಿವಮೊಗ್ಗದಲ್ಲಿ ಇತ್ತೀಚೆಗೆ ಹತ್ಯೆಯಾದ ಹರ್ಷ ಅಲ್ಲ ಎಂದು ಖಚಿತವಾಗಿದೆ. ವೈರಲ್‌ ವಿಡಿಯೊದಲ್ಲಿ ಇರುವ ಯುವಕ ಸರ್ಫರಾಝ್ ಗಂಗಾವತಿ ಆಗಿದ್ದು, ಇವರು SDPI ಅಂಗ ಸಂಸ್ಥೆಯಾದ CFI ಎಂಬ ವಿದ್ಯಾರ್ಥಿ ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಇವರು ಫೆಬ್ರವರಿ 8 ರಂದು ಬೆಂಗಳೂರಿನ ಪ್ರೆಸ್‌ಕ್ಲಬ್‌‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ವಿಡಿಯೊ ಇದಾಗಿದೆ.

ವಿಡಿಯೊದಲ್ಲಿ ಟಿವಿ9ಕನ್ನಡ ಡಿಜಿಟಲ್‌ ಲೊಗೊ ಇದ್ದು, ವೈರಲ್‌ ಆಗಿರುವ ವಿಡಿಯೊದ ಪೂರ್ತಿ ಆವೃತ್ತಿ ಈಗ ಟಿವಿ9 ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಿಲ್ಲ(ಅಥವಾ ನಮಗೆ ಸಿಕ್ಕಿಲ್ಲ). ಆದರೆ ಫೆಬ್ರವರಿ 8 ರಂದು ನಡೆದ ಪತ್ರಿಕಾಗೋಷ್ಠಿಯ 01:45 ನಿಮಿಷದ ವಿಡಿಯೊ ಯೂಟ್ಯೂಬ್‌‌ ಚಾನೆಲ್‌ನಲ್ಲಿ ಇನ್ನೂ ಇದೆ. ಟಿವಿ9 ಕನ್ನಡ ಈ ವಿಡಿಯೊವನ್ನು, “Hijab Row: ಬೆಂಗಳೂರಲ್ಲಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಸುದ್ದಿಗೋಷ್ಠಿ |CFI |Tv9 Kannada” ಎಂಬ ಶೀರ್ಷಿಕೆಯೊಂದಿಗೆ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಅ‌ಪ್‌ಲೋಡ್‌ ಮಾಡಿದೆ.

ಇಷ್ಟೇ ಅಲ್ಲದೆ, ಈ ಪತ್ರಿಕಾಗೋಷ್ಠಿಯ ಸಾರಾಂಶವನ್ನು ಸರ್ಫರಾಝ್‌ ಅವರು ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಹೇಳಬಹುದಾದರೆ, ಶಿವಮೊಗ್ಗದಲ್ಲಿ ಹತ್ಯೆಯಾದ ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂದಳದ ಕಾರ್ಯಕರ್ತ ಹರ್ಷ ಅವರಿಗೂ, ವೈರಲ್ ಆಗಿರುವ ಈ ವಿಡಿಯೊಗೂ ಯಾವುದೆ ಸಂಬಂಧವಿಲ್ಲ. ವಿಡಿಯೊದಲ್ಲಿ ಇರುವುದು SDPIಯ ಅಂಗ ಸಂಸ್ಥೆಯಾದ CFI ವಿದ್ಯಾರ್ಥಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸರ್ಫರಾಜ್ ಗಂಗಾವತಿಯಾಗಿದ್ದಾರೆ.

ಇದನ್ನೂ ಓದಿ: Fact check: ಬಜರಂಗದಳದ ಹರ್ಷ ಹತ್ಯೆಯ ಆರೋಪಿಗಳನ್ನು ನನ್ನ ಬ್ರದರ್ಸ್ ಎಂದು ಡಿ.ಕೆ ಶಿವಕುಮಾರ್ ಹೇಳಿಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights