Fact check: ಮುಸ್ಲಿಂ ಮಹಿಳೆಯರಿಂದ ಹಿಂದೂ ಯುವತಿಯ ಮೇಲೆ ಹಲ್ಲೆಗೆ ಯತ್ನ, ವಾಸ್ತವವೇನು?

ಜಿಮ್‌ವೊಂದರಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರು ತಮ್ಮ ಪತಿ ಮತ್ತು ಅವನ ಹಿಂದೂ ಗೆಳತಿಯನ್ನು ಥಳಿಸುವ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಜಿಮ್‌ನಲ್ಲಿ ಹಿಂದೂ ಹುಡುಗಿಯೊಂದಿಗೆ ತಮ್ಮ ಪತಿಯನ್ನು ಸಾಕ್ಷಿಸಮೇತವಾಗಿ  ಹಿಡಿದಿದ್ದಾರೆ ಮತ್ತು ಸಾರ್ವಜನಿಕವಾಗಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಮುಸ್ಲಿಂ ಮಹಿಳೆಯರು ತಮ್ಮ ಪತಿ ಮತ್ತೊಬ್ಬ ಹಿಂದೂ ಯುವತಿಯೊಂದಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಗೂಗಲ್ ರಿವರ್ಸ್ಇಮೇಜ್ ಸರ್ಚ್ ಮಾಡಿದಾಗ, ಅಕ್ಟೋಬರ್ 2021 ರಲ್ಲಿ ‘ದೈನಿಕ್ ಭಾಸ್ಕರ್‘ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ಈ ಘಟನೆಯು 15 ಅಕ್ಟೋಬರ್ 2021 ರಂದು ಸುಜಾ ಫಿಟ್‌ನೆಸ್‌ನಲ್ಲಿ ನಡೆದಿದೆ ಎಂದು ವರದಿ ಮಾಡಿದೆ.

ಭೋಪಾಲ್‌ನ ಕೊಹೆಫಿಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಲೇಖನದ ಪ್ರಕಾರ, ಉರ್ಬಾ ಶಾಹಿ ತನ್ನ ಸಹೋದರಿ ಫಿಜಾಳೊಂದಿಗೆ ಸುಜಾ ಫಿಟ್‌ನೆಸ್ ಸೆಂಟರ್‌ಗೆ ಭೇಟಿ ನೀಡಿದ್ದು, ತನ್ನ ಪತಿ ತಲ್ಹಾ ಶಾಹಿಮ್‌ಗೆ ಇನ್ನೊಬ್ಬ ಹುಡುಗಿಯ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ್ದಾರೆ. ಜಿಮ್‌ನಲ್ಲಿ ತನ್ನ ಪತಿ ಮಹಿಳಾ ಸ್ನೇಹಿತೆಯೊಂದಿಗೆ ಅನ್ಯೋನ್ಯವಾಗಿ ಮೋಜು ಮಾಡುತ್ತಿದ್ದುದನ್ನು ನೋಡಿದ ಉರ್ಬಾ ಶಾಹಿ ತನ್ನ ಪತಿ ಮತ್ತು ಆತನ ಗೆಳತಿಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ ಎಂದು ವರದಿಯಾಗಿದೆ.

ಹಲವಾರು ಮಾಧ್ಯಮ ಸಂಸ್ಥೆಗಳು ಇದೇ ವಿವರಣೆಯೊಂದಿಗೆ ಈ ವೀಡಿಯೊವನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವರದಿಗಳ ಪ್ರಕಾರ, ಎರಡೂ ಕಡೆಯವರು ಕೊಹೆಫಿಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯ ಕುರಿತು ಅಂದಿನ ಕೊಹೆಫಿಜಾ ಪೊಲೀಸ್ ಠಾಣೆ ಅಧಿಕಾರಿ ಅನಿಲ್ ಭಾಜಪೇಯಿ ಮಾತನಾಡಿ, “ಪತ್ನಿ ತನ್ನ ಪತಿಗೆ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಬಹಳ ದಿನಗಳಿಂದ ಅನುಮಾನಿಸುತ್ತಿದ್ದಳು. ಘಟನೆ ನಡೆದ ದಿನ ಪತ್ನಿ ತನ್ನ ಪತಿಯನ್ನು ಹಿಂಬಾಲಿಸಿಕೊಂಡು ಜಿಮ್ ಸೆಂಟರ್‌ಗೆ ಹೋಗಿದ್ದಳು. ಅಲ್ಲಿಗೆ ಹೋದ ಆಕೆ ಪತಿ ಹಾಗೂ ಆತನ ಗೆಳತಿಗೆ ಥಳಿಸಿದ್ದಾರೆ. ಪೊಲೀಸರು ಇನ್ನೂ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ” ಹಲ್ಲೆಗೊಳಗಾದ ಮಹಿಳೆಯ ಹೆಸರು ಮತ್ತು ಧಾರ್ಮಿಕ ಗುರುತನ್ನು ಅಂತರ್ಜಾಲದಲ್ಲಿ ಯಾವುದೇ ಸುದ್ದಿ ವೆಬ್‌ಸೈಟ್ ಬಹಿರಂಗಪಡಿಸಿಲ್ಲ.

ಈ ಹಲ್ಲೆಯಲ್ಲಿ ಭಾಗಿಯಾಗಿರುವ ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಘಟನೆಯು ಯಾವುದೇ ಕೋಮು ದ್ವೇಷದ ಹಿನ್ನಲೆ ಇಲ್ಲ  ಎಂದು ಕೊಹೆಫಿಜಾ ಪೊಲೀಸ್ ಅಧಿಕಾರಿಗಳು ‘ಬೂಮ್’ಗೆ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಭೋಪಾಲ್ ಜಿಮ್‌ನಲ್ಲಿ ತನ್ನ ಪತಿ ಪರ ಸ್ತ್ರೀಯೊಂದಿಗೆ ಸ್ನೇಹ ಸಂಬಂಧ ಇಟ್ಟುಕೊಂಡಿದ್ದ ಎಂದು  ಆರೋಪಿಸಿ ಪತಿ ಮತ್ತು ಅವನ ಮಹಿಳಾ ಸ್ನೇಹಿತೆಯ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡುವ ಹಳೆಯ ವೀಡಿಯೊವನ್ನು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿರಿ: Fact check: ಉತ್ತರ ಪ್ರದೇಶ ರಸ್ತೆ ಕುರಿತು ಸುಳ್ಳು ಟ್ವೀಟ್ ಮಾಡಿದ ಸಂಸದ ತೇಜಸ್ವಿ ಸೂರ್ಯ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights