ಮಾನವೀಯತೆಯ ಚಿಲುಮೆ: ಮದುವೆಗೆ ಕೂಡಿಟ್ಟ ಹಣವನ್ನು ವಲಸೆ ಕಾರ್ಮಿಕರ ಆಹಾರಕ್ಕೆ ಬಳಸಿದ ರಿಕ್ಷಾ ಚಾಲಕ

ತನ್ನ ಮದುವೆಯ ಖರ್ಚಿಗೆಂದು 2 ಲಕ್ಷ ರುಪಾಯಿ ಹಣವನ್ನು 30 ವರ್ಷದ ಪುಣೆ ಆಟೋರಿಕ್ಷಾ ಚಾಲಕ ಕೂಡಿಟ್ಟಿದ್ದರು. ಕೊರೊನ ಲಾಕ್ ಡೌನ್ ನಿಂದ ಮದುವೆ ಮುಂದೂಡಲಾಯಿತು. ಆದರೆ ಕೂಡಿಟ್ಟ ಹಣವನ್ನು ಅವರು ಈಗ ಪುಣೆಯ ವಲಸೆ ಕಾರ್ಮಿಕರ ಆಹಾರಕ್ಕಾಗಿ ವ್ಯಯಿಸಿ ಮಾನವೀಯತೆ ಮೆರೆದಿದ್ದಾರೆ.

ಚಾಲಕ ಅಕ್ಷಯ್ ಕೊಥಾವಲೆ ಅಷ್ಟಕ್ಕೇ ನಿಲ್ಲಿಸಿಲ್ಲ. ಅವರು ಹಿರಿಯ ನಾಗರಿಕರನ್ನು ಮತ್ತು ಗರ್ಭಿಣಿ ಮಹಿಳೆಯರನ್ನು ಕ್ಲಿನಿಕ್ಕಿಗಳಿಗೆ ಕರೆದುಕೊಂಡು ಹೋಗಲು ತಮ್ಮ ಆಟೋವನ್ನು ಉಚಿತ ಸೇವೆಗೆ ಬಳಸಿದ್ದಾರೆ. ಅಲ್ಲದೆ ನಗರವನ್ನು ಸುತ್ತಿ ಕೊರೊನ ವೈರಾಣುವಿನ ಬಗ್ಗೆ ಅರಿವು ಮೂಡಿಸಲು ಶ್ರಮಿಸುತ್ತಿದ್ದಾರೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.

ಮದುವೆಗೆ ಆಹ್ವಾನಿಸಲಾಗುವ 400 ಅತಿಥಿಗಳ ಊಟ ಉಪಚಾರಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಕೊಥಾವಲೆ ಅವರು ತನ್ನ ಗೆಳೆಯರೊಡಗೂಡಿ ಈಗ ಪುಣೆ ಬೀದಿಗಳಲ್ಲಿ ಆಹಾರ ವಸತಿಗಾಗಿ ಪರದಾಡುತ್ತಿರುವ ವಲಸೆ ಕಾರ್ಮಿಕರ ಸಣ್ಣ ಸಣ್ಣ ಪೂರೈಕೆಗಳಿಗಾಗಿ ಬಳಸುತ್ತಿದ್ದಾರೆ.

“ಮೇ 25 ರಂದು ನಡೆಯಬೇಕಿದ್ದ ನನ್ನ ಮದುವೆಗೆ 2 ಲಕ್ಷ ರೂಗಳನ್ನು ಆಟೊ ಓಡಿಸಿ ಸಂಪಾದಿಸಿದ್ದರಿಂದ ಉಳಿಸಿ ಕೂಡಿಟ್ಟಿದ್ದೆ. ಆದರೆ ಲಾಕ್ ಡೌನ್ ಮುಂದುವರೆದಿರುವುದರಿಂದ ನಾನು ಮತ್ತು ನನ್ನ ಭಾವಿ ಪತ್ನಿ ಮದುವೆ ಸಮಾರಂಭವನ್ನು ಮುಂದೂಡಲು ನಿಶ್ಚಯ ಮಾಡಿದೆವು. ಒಪ್ಪತ್ತಿನ ಊಟಕ್ಕೂ ಒದ್ದಾಡಿ ಬದುಕಲು ಕಷ್ಟ ಪಡುತ್ತಿದ್ದ ಎಷ್ಟೋ ಜನಗಳನ್ನು ಬೀದಿಗಳಲ್ಲಿ ನೋಡಿದೆ. ಆಗ ನನ್ನ ಕೆಲವು ಗೆಳೆಯರು ಮತ್ತು ನಾನು ಈ ದಿನಗೂಲಿ ಕಾರ್ಮಿಕರಿಗೆ ಏನಾದರು ಮಾಡಬೇಕೆಂದು ನಿಶ್ಚಯಿಸಿದೆವು” ಎಂದು ಅವರು ಹೇಳಿದ್ದಾರೆ.

“ಇದಕ್ಕಾಗಿ ನನ್ನ ಉಳಿತಾಯವನ್ನು ಬಳಸಲು ಮನಸ್ಸು ಮಾಡಿದೆ. ಇದಕ್ಕೆ ನನ್ನ ಗೆಳೆಯರೂ ಕೈಜೋಡಿಸಿದರು. ಇದಕ್ಕಾಗಿ ನನ್ನ ಗೆಳೆಯರು ಅಡುಗೆ ಗೃಹವನ್ನು ಸ್ಥಾಪಿಸಿ ಚಪಾತಿ ಪಲ್ಯವನ್ನು ಮಾಡತೊಡಗಿದರು. ಈಗ ಅಗತ್ಯವಿರುವ ವಲಸೆ ಕಾರ್ಮಿಕರಿಗೆ ಇದನ್ನು ಹಂಚುತ್ತಿದ್ದೇವೆ. ನನ್ನ ರಿಕ್ಷಾ ಬಳಸಿ ರೈಲ್ವೇ ನಿಲ್ದಾಣದ ಮಲ್ಧಕ್ಕಾ ಚೌಕ್, ಸಂಗಮವಾಡಿ ಮತ್ತು ಯೆರ್ವಾಡ ಪ್ರದೇಶಗಳಲ್ಲಿ ಹಂಚುತ್ತಿದ್ದೇವೆ” ಎಂದು ಅಕ್ಷಯ್ ಹೇಳಿದ್ದಾರೆ.

ಈಗ ಅವರ ಉಳಿತಾಯ ಮುಗಿಯುತ್ತಾ ಬಂದಿರುವುದರಿಂದ ಅವರು ಚಪಾತಿ ಪಲ್ಯಕ್ಕೆ ಬದಲಾಗಿ ಪಲಾವ್ ಅಥವಾ ಅನ್ನ ಸಾಂಬಾರ್ ಅನ್ನು ಹಂಚಲು ಪ್ರಾರಂಭಿಸಿದ್ದಾರೆ. ಆದರೆ ಈಗಾಲೂ ಅಗತ್ಯ ಇರುವವರಿಗೆ ಆಹಾರ ನೀಡುತ್ತಿರುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಉಳಿದಿರುವ ಹಣದಿಂದ ಮೇ 31ರವಗೆ ಇದನ್ನು ಮುಂದುವರೆಸಲು ಸಾಧ್ಯವಾಗಲಿದೆ ಎನ್ನುತ್ತಾರೆ. ಅಗತ್ಯ ಬಿದ್ದಿರುವವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಕೂಡ ಈ ಬಳಗ ಒದಗಿಸುತ್ತಿದೆ.

ದೇಶದಾದ್ಯಂತ ವಲಸೆ ಕಾರ್ಮಿಕರು ಬರಿಗಾಲಲ್ಲಿ ನಡೆದು ಹೋಗುತ್ತಿರುವ, ಆಹಾರ ನೀರು ಇಲ್ಲದೆ ನರಳುತ್ತಿರುವ ಸಂದರ್ಭದಲ್ಲಿ ಇಂತಹ ಬೆರಳೆಣಿಕೆಯ ನಾಗರಿಕರು ಮಾನವೀಯತೆ ಮೆರೆಯುತ್ತಿರುವುದು ಆದರ್ಶಪ್ರಾಯವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights