ಮೋದಿ ಘೋಷಿಸಿದ, ವಲಸೆ ಕಾರ್ಮಿಕರಿಗೆ ಕೊಟ್ಟ ಪ್ಯಾಕೇಜಿನಲ್ಲಿರುವ ಸೊನ್ನೆಗಳೆಷ್ಟು?

ನಿನ್ನೆ ಕೋವಿಡ್ ಪ್ಯಾಕೇಜಿನ ಧಾರವಾಹಿಯ ಎರಡನೇ ಕಂತು ಪ್ರಕಟವಾಯಿತಷ್ಟೆ. ಅದನ್ನೇ ವಲಸೆ ಕಾರ್ಮಿಕರ ಬದುಕು-ಭವಿಷ್ಯಕ್ಕಿಂತ ಅವರ ನೆನಪಿಗೆ ಆರ್ಪಿಸಿದಂತಿದೆ.

ಈ ಪ್ಯಾಕೇಜು, ಮೋದಿ ಸರ್ಕಾರಕ್ಕೆ ಭಾರತದ ಈ ವರ್ಗಗಳು ಎದುರಿಸುತ್ತಿರುವ ಘನಘೋರ ಪರಿಸ್ಥಿತಿಗಳ ಬಗ್ಗೆ ಅರಿವು ಇಲ್ಲ. ಕಾಳಜಿಯು ಇಲ್ಲ ಹಾಗು ಕನಿಷ್ಠ ಸಂವೇದನೆಯು ಇಲ್ಲ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ.

ಅದರಲ್ಲೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಈ ಸಂವೇದನಾಶೂನ್ಯತೆಯ ಸಾಕಾರ ರೂಪವೇ ಆಗಿದ್ದಾರೆ.

ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಪ್ರಾನ್ಸಿನ ರಾಣಿಯಾಗಿದ್ದ ಮೇರಿ ಆಂಟನಿತ್ ಅವರನ್ನು ನೆನಪಿಗೆ ತರುತ್ತಾರೆ. ಆಗ ತಿನ್ನಲು ಬ್ರೆಡ್ ಕೂಡ ಇಲ್ಲದೆ ಹಸಿವು ಬಡತನಗಳಿಂದ ಕಂಗೆಟ್ಟಿದ್ದ ರೈತಾಪಿ ಜನ ಪ್ರಾನ್ಸಿನ ಅರಮನೆಗೆ ಮುತ್ತಿಗೆ ಹಾಕಿದ್ದರಂತೆ. ರೈತರೆಂದರೆ ಯಾರು ಏನು ಎಂದೇ ಅರಿವಿರದ ಆ ಮಹಾರಾಣಿ ಮೇರಿ “ತಿನ್ನಲು ಬ್ರೆಡ್ ಇಲ್ಲದಿದ್ದರೇನಂತೆ ಈ ರೈತರು ಕೇಕ್ ತಿನ್ನಬಹುದಲ್ಲ” ಎಂದು ಸಲಹೆ ಕೊಟ್ಟಿದ್ದರಂತೆ…. ಅದೇ ರೀತಿ ನಮ್ಮ ನಿರ್ಮಲಾ ಮೇಡಂ..

ಮೇರಿ ಆಂಟನಿತ್

 

ಸ್ವಲ್ಪ ದಿನಗಳ ಹಿಂದೆ, ಈ ದೇಶದ ಬಡಜನತೆಯ ನಿತ್ಯದ ಆಹಾರದ ಅವಿಭಾಜ್ಯ ಖಾದ್ಯವಾಗಿರುವ ಈರುಳ್ಳಿಯ ಬೆಲೆ ಗಗನಕ್ಕೇರಿತ್ತಷ್ಟೆ. ಸರ್ಕಾರವು ಈರುಳ್ಳಿ ಬೆಲೆಯನ್ನು ನಿಯಂತ್ರಸಬೇಕೆಂದು ಆಗ್ರಹಿಸುತ್ತಿದ್ದಾಗ ನಮ್ಮ ಭಾರತದ ಮೇರಿ ನಿರ್ಮಲಾ ಅವರು “ನಾನು ಈರುಳ್ಳಿ ಬಳಸುವುದೇ ಇಲ್ಲ” ಎಂದು ಸಂಸತ್ತಿನಲ್ಲಿ ಉತ್ತರಿಸಿದ್ದರು. ಇದು ಈ ಬಾಲ್ಕನಿ ಸರ್ಕಾರಕ್ಕೆ ಸಂಕಷ್ಟದಲ್ಲಿರುವ ಭಾರತದ ಬಗ್ಗೆ ಇರುವ ಗ್ರಹಿಕೆ ಮತ್ತು ಕಾಳಜಿ.

ಇದೆ ಧೋರಣೆಯೇ ಮೊನ್ನೆ MSME ಕ್ಷೇತ್ರಕ್ಕೆ ಘೋಷಿಸಿದ ಪ್ಯಾಕೇಜಿನಲ್ಲು ವ್ಯಕ್ತವಾಗಿತ್ತು. ಅದೇ ಅಮಾನವೀಯ ಧೋರಣೆಯು ನಿನ್ನೆ ವಲಸೆ ಕಾರ್ಮಿಕರಿಗೆಂದು ಘೋಷಿಸಿದ ಪ್ಯಾಕೇಜಿನಲ್ಲ ಢಾಳಾಗಿ ಕಾಣುತ್ತಿತ್ತು. ವಾಸ್ತವವಾಗಿ ಅವರ ಪತ್ರಿಕಾ ಗೋಷ್ಠಿ ನಡೆಯುತ್ತಿರುವಾಗಲೇ ತಮ್ಮ ಊರುಗಳನ್ನು ಸೇರಿಕೊಳ್ಳಲು ಸಾವಿರ ಕಿಮಿ ದೂರ ಕ್ರಮಿಸಿದ್ದ 14 ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮೇಲೆ ಉತ್ತರ ಪ್ರದೇಶ ಹಾಗು ಮಧ್ಯ ಪ್ರದೇಶಗಳಲ್ಲಿ ಎರಡು ಬೇರೆಬೇರೆ ಪ್ರಕರಣಗಳಲ್ಲಿ ವಾಹನಗಳು ಹರಿದು ಪ್ರಾಣ ಬಿಟ್ಟಿದ್ದರು. ಇದೇ ರೀತಿ ಈಗಾಗಲೇ ಮೋದಿ ಸರ್ಕಾರದ ವಿವೇಚನಾ ರಹಿತ ಲಾಕ್ದೌನಿನ ಕ್ರೌರ್ಯಕ್ಕೆ ಬಲಿಯಾಗಿ 383 ಕ್ಕೂ ವಲಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಮೋದಿ ಸರ್ಕಾರ ಇದ್ದಕ್ಕಿದ್ದಂತೆ ಅವರನ್ನು ಅನಾಥರನ್ನಾಗಿಸಿದೆ.

ಹೀಗಾಗಿ ವಲಸೆ ಕಾರ್ಮಿಕರ ಪ್ಯಾಕೇಜಿನಲ್ಲಿ ಏನಿಲ್ಲವೆಂದರೂ ಇನ್ನು ಬೀದಿಯಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ವ್ಯವಸ್ಥೆಯ ಘೋಷಣೆಯಾದರೂ ಆಗಬೇಕಿತ್ತು..

ಆದರೆ ಮೇರಿ ನಿರ್ಮಲಾ ಅವರ ಪತ್ರಿಕಾ ಗೋಷ್ಠಿಯಲ್ಲಿ ಸರ್ಕಾರದ ಲಾಕ್ದೌನ್ ಮಾಡಿದ ಈ ಕೊಲೆಗಳ ಬಗ್ಗೆ ಒಂದು ಪಶ್ಚಾತ್ತಾಪದ ದನಿಯು ಇರಲಿಲ್ಲ. ಊರಿಗೆ ಸೇರಿಸುವ ವ್ಯವಸ್ಥೆಯ ಬಗ್ಗೆ ಒಂದಕ್ಷರವೂ ಇರಲಿಲ್ಲ. ಅದನ್ನು ನಿರೀಕ್ಷೆ ಮಾಡುವುದು ದುರಾಸೆಯೇ ಆದೀತು.

ಹೋಗಲಿ ಘೋಷಿಸಿದ ಪ್ಯಾಕೇಜಿನಲ್ಲಾದರೂ ಏನಿತ್ತು?

ಸರ್ಕಾರದ ನಿನ್ನೆಯ ಘೋಷಣೆಯ ಪ್ರಕಾರ ಭಾರತದಲ್ಲಿ 8 ಕೋಟಿ ವಲಸೆ ಕಾರ್ಮಿಕರಿದ್ದಾರೆ. ಆದರೆ ವಾಸ್ತವದಲ್ಲಿ 2011 ರ ಸೆನ್ಸಸ್ ಪ್ರಕಾರ ನೋಡಿದರು ಈ ದೇಶದಲ್ಲಿ 12 ವಲಸೆ ಕಾರ್ಮಿಕರಿದ್ದಾರೆ. ಇನ್ನುಳಿದ ಲೆಕ್ಕಕ್ಕೆ ಸಿಗದ 4 ಕೋಟಿ ಕಾರ್ಮಿಕರು ಈ ಘೋಷಣೆಯಲ್ಲೇ ಅನಾಥರಾಗಿ ಹೋದರು.

 ಲೆಕ್ಕಕ್ಕಿರುವವರಿಗಾದರೂ ಬದುಕು-ಭವಿಷ್ಯ ಕಟ್ಟಿಕೊಳ್ಳಲು ಏನು ಕೊಡಲಾಗಿದೆ?

ಇಂದು ಈ ವಲಸೆ ಕಾರ್ಮಿಕರು ತಮಗಿದ್ದ ಉದ್ಯೋಗ, ಉಳಿತಾಯ ,ಆದಾಯ ಎಲ್ಲವನ್ನು ಕಳೆದುಕೊಂಡು ಹಳ್ಳಿಗೆ ಮರಳುತ್ತಿದ್ದಾರೆ. ಹಳ್ಳಿಗಳಲ್ಲಿರುವ ಈ ವಲಸೆ ಕಾರ್ಮಿಕರ ಕುಟುಂಬಗಳು ಸಹ ಇವರು ಪ್ರತಿ ತಿಂಗಳು ಕಳಿಸುತ್ತಿದ್ದ ಹಣವನ್ನು ಆಧರಿಸಿಯೇ ಬದುಕುತ್ತಿದ್ದವು. ಹೀಗಾಗಿ ಊರಿಗೆ ಮರಳುತ್ತಿರುವ ವಲಸೆ ಕಾರ್ಮಿಕರು ಮಾತ್ರವಲ್ಲ..ಅವರನ್ನು ನಂಬಿಕೊಂಡು ಊರಲ್ಲೇ ಇದ್ದ ಅವರ ಕುಟುಂಬಗಳು ಸಹ ಈ ಲಾಕ್ದೌನಿನಿಂದ ಹೊತ್ತು ಊಟಕ್ಕೂ ದಾರಿಯಿಲ್ಲದಂತಾಗಿದ್ದಾರೆ.

ಹಾಗು ಈ ಸದ್ಯಕ್ಕೆ ನಗರದ ಆರ್ಥಿಕತೆಯು ಚೇತರಿಸಿಕೊಳ್ಳುವ ಪರಿಸ್ಥಿತಿಯು ಇಲ್ಲದಿರುವುದರಿಂದ ಸರ್ಕಾರವು ಮುಂದಿನ ಒಂದು ವರ್ಷಕ್ಕಾದರೂ ಈ 12 ಕೋಟಿ ಕುಟುಂಬಗಳ ಆಹಾರ ಹಾಗು ಉದ್ಯೋಗ ಖಾತರಿಗಳಿಗೆ ಬೇಕಾಗುವಷ್ಟು ಸಂಪನ್ಮೂಲವನ್ನು ಪ್ಯಾಕೇಜಿನಲ್ಲಿ ಒದಗಿಸಬೇಕಿತ್ತು.

ಅಂದರೆ 12 ಕೋಟಿ ಜನರಿಗೆ ಮುಂದಿನ ಕನಿಷ್ಠ 12 ತಿಂಗಳಿಗೆ ಬೇಕಾಗುವಷ್ಟು ಪಡಿತರ ಹಾಗು NREGA ಅಡಿಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಬೇಕಾದಷ್ಟು ಸಂಪನ್ಮೂಲವನ್ನು ಒದಗಿಸಬೇಕಿತ್ತು. ಇದಕ್ಕಾಗಿ ಏನಿಲ್ಲವೆಂದರೂ ಕನಿಷ್ಠ 1 ಲಕ್ಷ ಕೋಟಿ ರು. ಸಂಪನ್ಮೂಲವನ್ನು ನೇರವಾಗಿ ವರ್ಗಾವಣೆ ಮಾಡಬೇಕಿತ್ತು.

ಆದರೆ ಸರ್ಕಾರವು ಈ ಪ್ಯಾಕೇಜಿನಲ್ಲಿ 8 ಕೋಟಿ ವಲಸೆ ಕಾರ್ಮಿಕರಿಗೆ ಮುಂದಿನ ಎರಡು ತಿಂಗಳ ಪಡಿತರವನ್ನು ಮಾತ್ರ ಉಚಿತವಾಗಿ ನೀಡಲಿದೆ. ಹಾಗು NREGA ಬಾಬತ್ತಿನಲ್ಲೂ ಕೇವಲ ನೂರು ದಿನಗಳು ಅಂದರೆ ಮೂರೂ ತಿಂಗಳ ಉದ್ಯೋಗವನ್ನು ಹಳ್ಳಿಗಳಲ್ಲಿ ಒದಗಿಸಲು ಬೇಕಾಗುವಷ್ಟು ಹಣವನ್ನು ಮಾತ್ರ ಪ್ಯಾಕೇಜಿನಲ್ಲಿ ಒದಗಿಸಿದೆ. ಈ ಲೆಕ್ಕಾಚಾರದ ಭಾಗವಾಗಿ ಕೇವಲ 3500 ಕೋಟಿ ರು,ಗಳನ್ನೂ ಮಾತ್ರ ಒದಗಿಸಿದೆ.

 ಮೂರು ತಿಂಗಳ ನಂತರ ಈ 12 ಕೋಟಿ ಬಡ ಭಾರತೀಯರ ಕಥೆಯೇನು?

ಸರ್ಕಾರದ, RBI ನ , IMF ನ , NOMURA, Credit-sussie, PwC ನಂತಹ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳ ಅಂದಾಜಿನ ಪ್ರಕಾರ ಈ ವರ್ಷ ಭಾರತದ ಅಭಿವೃದ್ಧಿ ದರ ಶೇ. 1ಕ್ಕೆ ಇಳಿಯಲಿದೆ ಅಥವಾ ನಕಾರಾತ್ಮಕವಾಗಲಿದೆ. ನಿರುದ್ಯೋಗ ದರ ಈಗಾಗಲೇ ಶೇ. 23ಕ್ಕೆ ತಲುಪಿದೆ.

ಇದರ ಅರ್ಥವಿಷ್ಟೆ. ಮುಂದಿನ ಇಡೀ 12 ತಿಂಗಳುಗಳ ಕಾಲ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುವುದಿಲ್ಲ. ಹೀಗಾಗಿ ವಲಸಿಗರು ವಾಪಸ್ ಬರಲು ಬೇಕಾದ ಉದ್ಯೋಗಳನ್ನು ನಗರಗಳು ಸೃಷ್ಟಿಸುವುದಿಲ್ಲ. ಗ್ರಾಮಗಳಲ್ಲಂತೂ ಈ ಮೊದಲೇ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇಂಥಾ ಸಂದರ್ಭದಲ್ಲಿ ಸರ್ಕಾರವು ಮುಂದೆ ನಿಂತು ಇಡೀ ವರ್ಷಕ್ಕೆ ಉದ್ಯೋಗಗಳನ್ನು ಸೃಷ್ಟಿಸಬೇಕು. ಹಳ್ಳಿಯಲ್ಲಿ ಮಾತ್ರವಲ್ಲ. ನಗರದಲ್ಲೂ “ನಗರ NREGA” ಯೋಜನೆಯನ್ನು ರೂಪಿಸಬೇಕು.

ಆದರೆ ಬಾಲ್ಕನಿ ಭಾರತದ ಮೇರಿ ನಿರ್ಮಲಾಗು ಹಾಗು ಆಧುನಿಕ ನೀರೊ ದೊರೆಯಾದ ಪ್ರಧಾನಿ ಮೋದಿಗೂ ಈ ಬಡಪಾಯಿ ಭಾರತದ ದುರಂತಗಳು ಲೆಕ್ಕಕ್ಕೇ ಇಲ್ಲ…

ಅವರ ‘ಆತ್ಮನಿರ್ಭರ” ಯೋಜನೆಗಳಿಗೆ ಬರ್ಬರವಾಗಿ ಬಲಿಯಾಗಲೇ ಬೇಕಾದ ಕೊಲ್ಯಾಟರಲ್ ಡ್ಯಾಮೇಜಷ್ಟೇ ..

ಅಷ್ಟು ಮಾತ್ರವಲ್ಲ. ಈ ಪ್ಯಾಕೇಜೆಂಬುದೇ ಬಡಭಾರತದ ಬಗ್ಗೆ ಮಾಡುತ್ತಿರುವ ಕ್ರೂರ ಹಾಸ್ಯವೆಂಬುದು ನಿನ್ನೆಯ ಪ್ಯಾಕೇಜಿನ ಗಣಿತದಿಂದ ಮತ್ತೊಮ್ಮೆ ಸಾಬೀತಾಗಿದೆ.

ಏಕೆಂದರೆ ಪ್ರಧಾನಿ ಮೋದಿಯವರು ಮಾಡಿದ ಘೋಷಣೆಯ ಪ್ರಕಾರ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಮಾರ್ಚ್ನಲ್ಲಿ ಘೋಷಿಸಲಾದ 1.6 ಲಕ್ಷ ಕೋಟಿ ಯು ಸೇರಿಕೊಳ್ಳುತ್ತದೆ. ಮಾತ್ರವಲ್ಲ . ಎರಡು ಹಂತಗಳಲ್ಲಿ RBI ಘೋಷಿಸಿರುವ ನಗದು ಹರಿವಿನ -ಅಂದರೆ ಹಣದ ವರ್ಗಾವಣೆಯುಯಲ್ಲ. ಸಾಲದ ಪೂರೈಕೆ ಮಾತ್ರ- ಮೊತ್ತವು ಸೇರಿಕೊಳ್ಳುತ್ತದೆ.

 20 ಲಕ್ಷ ಕೋಟಿಗಳಲ್ಲಿ ಈವರೆಗೆ ಎಷ್ಟು ಘೋಷಣೆಯಾದಂತಾಯಿತು?

ನಿನ್ನೆ ಘೋಷಿಸಿದ ಪ್ಯಾಕೇಜಿನ ಮೊತ್ತ 3.1 ಲಕ್ಷ ಕೋಟಿ .
ಮೊನ್ನೆ MSME ಗಳಿಗೆಂದು ಘೋಷಿಸಿದ ಪ್ಯಾಕೇಜಿನ ಮೊತ್ತ 6 ಲಕ್ಷ ಕೋಟಿ.
ಈಗಾಗಲೇ RBI ಘೋಷಿಸಿರುವ ನಗದು ಹರಿವಿನ ಪ್ಯಾಕೇಜು 6 ಲಕ್ಷ ಕೋಟಿ
ಮಾರ್ಚ್ನಲ್ಲಿ ಘೋಷಿಸಿದ ಮೊದಲ ಪ್ಯಾಕೇಜು 1.76 ಲಕ್ಷ ಕೋಟಿ

ಅಂದರೆ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಅಂದಾಜು 17 ಲಕ್ಷ ಕೋಟಿ ರು ಘೋಷಣೆ ಆಗಿಗಿಹೋಗಿದೆ.

ಆದರೆ ಇದರಲ್ಲಿ ತಮ್ಮದಲ್ಲದ ತಪ್ಪಿಗೆ ಹಾಗು ಸರ್ಕಾರದ ವಿವೇಚನಾರಹಿತ ಹಾಗು ಅಮಾನವೀಯ ಲಾಕ್ದೌನ್ ಚಿತ್ರಹಿಂಸೆಗಳಿಗೆ ಗುರಿಯಾಗಿ ಜೀವನ ಮತ್ತು ಜೀವನೋಪಾಯಗಳನ್ನು ಕಳೆದುಕೊಂಡಿರುವ ಈ ದೇಶದ ಶೇ. 85ರಷ್ಟು ಬಡ-ಕೆಳಮಧ್ಯಮ ವರ್ಗಗಳ ಜೋಬಿಗೆ ಅಥವಾ ತಟ್ಟೆಗಳಿಗೆ ನೇರವಾಗಿ ವರ್ಗಾಯಿಸಲಾಗಿರುವುವೆಷ್ಟು?

ಮೊದಲು ಘೋಷಿಸಿದ 1.76 ಲಕ್ಷ ಕೋಟಿಗಳಲ್ಲಿ 50,000 ಕೋಟಿ.

MSME ಗಳಿಗೆಂದು ಘೋಷಿಸಿದ 6 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಕೇವಲ 4000 ಕೋಟಿ.

ನಿನ್ನೆ ಘೋಷಿಸಲಾದ 3.1 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಕೇವಲ 3500 ಕೋಟಿ ..

ಅಂದರೆ ಈವರೆಗಿನ 17 ಲಕ್ಷ ಕೋಟಿ ಪ್ಯಾಕೇಜಿನಲ್ಲಿ 110 ಕೋಟಿಗೂ ಹೆಚ್ಚಿರುವ ಬಡ-ಹಾಗು ಕೆಳಮಧ್ಯಮ ವರ್ಗಗಳ ಸಂಕಷ್ಟಗಳಿಗೆ ತುರ್ತಾಗಿ ಒದಗಿ ಬರಬಹುದಾದದ್ದು 60000 ಕೋಟಿಗೂ ಕೋಟಿಗೂ ಕಡಿಮೆ.

ಉಳಿದ 16.4 ಲಕ್ಷ ಕೋಟಿ ಕೇವಲ ಕನ್ನಡಿಯ ಗಂಟಷ್ಟೆ..ಪಡೆದುಕೊಳ್ಳುವ ಪವಾಡ ಗೊತ್ತಿರುವವರಿಗೆ ಮಾತ್ರ ದಕ್ಕುವ ಮೊತ್ತವದು.

ಆದರೆ ಕೋವಿಡ್ ದಾಳಿಯಾಗುವ ಕೆಲವು ತಿಂಗಳ ಹಿಂದೆ ಆರ್ಥಿಕ ಪುನಶ್ಚೇತನದ ಹೆಸರಿನಲ್ಲಿ ಮೋದಿ ಸರ್ಕಾರವು ನೇರ ತೆರಿಗೆಯ ಮೇಲ್ಮಿತಿಯನ್ನು ಶೇ. 35 ರಿಂದ ಶೇ. 25 ಕ್ಕೆ ಇಳಿಸಿದ್ದು ನಿಮ್ಮ ನೆನಪಿನಲ್ಲಿರಬಹುದು.

ಆದರೆ ನೇರ ತೆರಿಗೆ ಇಲಾಖೆಯ ಪ್ರಕಾರವೇ ದೇಶದ ಶೇ. 99.1 ಕಂಪನಿಗಳ ವಹಿವಾಟು 400 ಕೋಟಿ ಗಳಿಗಿಂತ ಕಡಿಮೆ ಮತ್ತು ಅವರು ಶೇ. 25 ರಷ್ಟು ಮಾತ್ರ ನೇರ ತೆರಿಗೆಯನ್ನು ಕಟ್ಟುತ್ತಿದ್ದರು.

ಹೀಗಾಗಿ ನೇರ ತೆರಿಗೆಯ ಮೇಲ್ಮಿತಿ ಶೇ. 35 ರಿಂದ ಶೇ, 25 ಕ್ಕೆ ಅಂದರೆ ಶೇ. 10 ರಷ್ಟು ಇಳಿಕೆಯಾದ ಲಾಭ ಪಡೆದುಕೊಂಡಿದ್ದು ಕೇವಲ ಶೇ. 0.9 ರಷ್ಟು ಕಂಪನಿಗಳು ಮಾತ್ರ. ಅರ್ಥಾತ್ 4500 ಉದ್ದಿಮೆಪತಿಗಳು ಮಾತ್ರ .

ಈ ಕ್ರಮದ ಮೂಲಕ ಯಾವ ಸಂಕಷ್ಟದಲ್ಲೂ ಇರದಿದ್ದ 4500 ಉದ್ದಿಮೆಪತಿಗಳ ಬಳಿ 1,45,000 ಕೋಟಿ ಹಣ ಉಳಿಯುವಂತೆ ಮಾಡಿದ ಮೋದಿ ಸರ್ಕಾರ ಅತ್ಯಂತ ಸಂಕಷ್ಟದಲ್ಲಿರುವ 110 ಕೋಟಿ ಭಾರತೀಯರಿಗೆ ಒದಗಿಸುತ್ತಿರುವುದು ಕೇವಲ 60,000 ಕೋಟಿ ರು. ಗಳು ಮಾತ್ರ..

ಇದು ಆಧುನಿಕ ಮೇರಿ ನಿರ್ಮಲಾ ಹಾಗು ಆಧುನಿಕ ನೀರೋ ಮೋದಿ ಸರ್ಕಾರದ ನಿಜವಾದ ವರ್ಗ ಸ್ವರೂಪ.

| – ಶಿವಸುಂದರ್ |

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights