ಯೋಚಿಸಿಯೇ ಹೇಳಿಕೆ ನೀಡಿದ್ದೇನೆ; ಹೇಳಿಕೆ ಬದಲಿಸಲು ಸಮಯ ನೀಡುವುದರಿಂದ ಪ್ರಯೋಜನವಿಲ್ಲ: ಪ್ರಶಾಂತ್ ಭೂಷಣ್

ಪ್ರಶಾಂತ್ ಭೂಷಣ್‌ ತಮ್ಮ ಹೇಳಿಕೆ ಯನ್ನು ಮರುಪರಿಶೀಲಿಸದ ಹೊರತು ಅವರನ್ನು ಶಿಕ್ಷಿಸಬೇಡಿ ಎಂಬ ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮಿಶ್ರಾ ಹೇಳಿದ್ದಾರೆ.

“ನಾನು ಯಾವುದೇ ಕ್ಷಮೆಯನ್ನು ಕೋರುವುದಿಲ್ಲ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯಾವ ಮನವಿ ಸಹ ಮಾಡುವುದಿಲ್ಲ. ನ್ಯಾಯಾಲಯವು ನೀಡುವ ಯಾವುದೇ ಶಿಕ್ಷೆಯನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ನನ್ನ ಹೇಳಿಕೆ ಬದಲಿಸಲು ಸಮಯಾವಕಾಶ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾನು ಯೋಚಿಸಿಯೇ ಹೇಳಿಕೆ ನೀಡಿದ್ದೇನೆ” ಎಂದು ಮಹಾತ್ಮ ಗಾಂಧಿಯನ್ನು ಉಲ್ಲೇಖಿಸಿ ಪ್ರಶಾಂತ್ ಭೂಷಣ್ ಹೇಳಿದರು.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ‘ಶಿಕ್ಷೆ ವಿಧಿಸಬಾರದು’ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗವಾಯಿಯವರು “ನೀವು ನಿಮ್ಮ ಹೇಳಿಕೆಯನ್ನು ಮರುಪರಿಶೀಲಿಸುತ್ತೀರಾ?” ಎಂದು ಪ್ರಶಾಂತ್ ಭೂಷಣ್‌ರವರಗೆ ಪ್ರಶ್ನಿಸಿ 2-3 ದಿನ ಸಮಯ ನೀಡುವುದಾಗಿ ಹೇಳಿದರು.

ಇದಕ್ಕೆ ಉತ್ತರಿಸಿದ ಪ್ರಶಾಂತ್ ಭೂಷಣ್‌ರವರು “ಬಹಳಷ್ಟು ಯೋಚಿಸಿ ನನ್ನ ಹೇಳಿಕೆ ನೀಡಿದ್ದೇನೆ. ಅದನ್ನು ಮರಪರಿಶೀಲಿಸುವ ಪ್ರಶ್ನೆಯಿಲ್ಲ. ನೀವು ನನಗೆ ನನ್ನ ಹೇಳಿಕೆ ಬದಲಿಸಲು ಸಮಯ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂದಿದ್ದಾರೆ.

ಪ್ರಶಾಂತ್ ಭೂಷಣ್‌ರವರ ಟ್ವೀಟ್‌ಗಳು ನ್ಯಾಯಾಲಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿವೆ ಎಂದು ಸಾಕ್ಷಿ ಸಮೇತ ನ್ಯಾಯಾಲಯವು ವಿವರಿಸದಿದ್ದರೆ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 13ರ ಉದ್ದೇಶಗಳಿಗೆ ಸೋಲುಂಟಾಗುತ್ತದೆ ಎಂದು ಡಾ.ರಾಜೀವ್ ಧವನ್ ವಾದ ಮಂಡಿಸಿದರು.

ನಾವು ಶಿಕ್ಷೆ ಪ್ರಮಾಣದ ವಿಚಾರಣೆ ನಡೆಸುವಾಗ ವ್ಯಕ್ತಿಯು ತಾನು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಬೇಕು, ಅದು ಅವರ ಮನದಾಳದಿಂದ ಬರಬೇಕು ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದರು.

ಪ್ರಶಾಂತ್ ಭೂಷಣ್‌ರವರ ಹೇಳಿಕೆಯು ನ್ಯಾಯಮೂರ್ತಿಗಳಾದ ಲೋಧಾ, ಎ.ಪಿ ಶಾ, ಮದನ್ ಲೋಕುರ್ ಮತ್ತು ಜೋಸೆಫ್‌ರವರ ಹೇಳಿಕೆಗಳನ್ನು ಪ್ರತಿಧ್ವನಿಸಿದೆ. ಹಾಗೆಂದು ಅವರ ವಿಚಾರಣೆಗಳನ್ನು ತಪ್ಪೆನ್ನಲು ಸಾಧ್ಯವೇ? ಎಂದು ಧವನ್ ವಾದಿಸಿದರು ಅದನ್ನು ನ್ಯಾಯಮೂರ್ತಿ ಮಿಶ್ರಾ ತಡೆದರು.

“ಉನ್ನತ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿರುವ 9 ನ್ಯಾಯಾಧೀಶರ ಪಟ್ಟಿ ನನ್ನ ಬಳಿ ಇದೆ. 1987ರಲ್ಲಿ ನಾನು ಕೂಡ ಹೇಳಿದ್ದೆ” ಎಂದು ಅಟಾರ್ನಿ ಜನರಲ್ ಹೇಳುತ್ತಿರುವಾಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಮಿಶ್ರಾರವರು “ಅದನ್ನೆಲ್ಲ ಕೇಳಲು ನಾವು ಇಲ್ಲಿ ಕೂತಿಲ್ಲ  ಸರ್” ಎಂದು ಹೇಳುವ ಮೂಲಕ ತಡೆದರು.

ಡಾ. ಧವನ್‌ರವರು ತಮ್ಮ ವಾದವನ್ನು ಮುಗಿಸಿದ್ದಾರೆ. ಸದ್ಯದಲ್ಲಿಯೇ ಸುಪ್ರೀಂ ತೀರ್ಪು ಪ್ರಕಟಿಸಲಿದೆ.


ಇದನ್ನೂ ಓದಿ:  ಸತ್ಯ ಹೇಳಿದ್ದೇನೆ; ಅದಕ್ಕಾಗಿ ಕ್ಷಮೆ ಕೇಳುವುದಿಲ್ಲ; ಶಿಕ್ಷೆ ಸ್ವೀಕರಿಸುತ್ತೇವೆ: ಪ್ರಶಾಂತ್ ಭೂಷಣ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights