ರಾಜ್ಯದಲ್ಲಿನ ಎಲ್ಲ ಬೆಳವಣಿಗೆಗಳಿಗೂ ಸಿಎಂ, ಗೃಹ ಸಚಿವರೇ ಜವಾಬ್ದಾರಿ ಹೊರಬೇಕು: ಡಿಕೆಶಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಆಗುತ್ತಿರುವ ಎಲ್ಲ ಪರಿಣಾಮಗಳಿಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ಜವಾಬ್ದಾರಿ ಹೊರಬೇಕು. ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕಲು ಸರ್ಕಾರ ಮುಂದಾಗಿದ್ದು, ನಾವು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹರಿಹಾಯ್ದಿದ್ದಾರೆ.

ನಿನ್ನೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಪರಿಣಾಮ ಹಾಗೂ ಮಾಧ್ಯಮಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, ‘ಈ ಕಾಯ್ದೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವರು ದೇಶದ ಐಕ್ಯತೆ, ಬಾಂದವ್ಯವನ್ನು ಹಾಳುಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ವಿನಾಕಾರಣ 144 ಸೆಕ್ಷನ್ ಜಾರಿ ಮಾಡಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪ್ರಯತ್ನಿಸಿದ್ದೀರಿ. ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡಿ ಪ್ರತಿಭಟನೆ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

‘ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಮಾಧ್ಯಮಗಳು ತೋರಿಸುತ್ತಿವೆ. ನಿನ್ನೆ ಮಂಗಳೂರು ಸೇರಿದಂತೆ ಬೇರೆಬೇರೆ ಕಡೆ ಏನಾಗುತ್ತಿದೆ ಎಂಬುದನ್ನು ನೀವೇ ವಿವರವಾಗಿ ತೋರಿಸುತ್ತಿದ್ದೀರಿ. ನಾವು ಇದನ್ನು ನಂಬಬೇಕಾ? ಅಥವಾ ಬಿಜೆಪಿ ನಾಯಕರ ವಾದ, ಮಂಡನೆ, ಹೇಳಿಕೆಗಳನ್ನು ನಂಬಬೇಕಾ ಎಂಬುದನ್ನು ನೀವೇ ವಿಶ್ಲೇಷಣೆ ಮಾಡುವುದು ಸೂಕ್ತ. ಗೌರವಾನ್ವಿತ ಮುಖ್ಯಮಂತ್ರಿ ಯಡಿಯೂರಪ್ಪನವರು ಬಹಳ ಮಾರ್ಮಿಕವಾಗಿ ತಮ್ಮ ಪಕ್ಷದ ನಾಯಕರುಗಳಿಗೆ ನೀವ್ಯಾರು ಹೇಳಿಕೆಗಳನ್ನು ನೀಡಬಾರದು ಅಂತಾ ಸೂಚನೆ ನೀಡಿದ್ದಾರೆ. ಅದರ ಅರ್ಥ ಈ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳಿಗೆ ಪ್ರಚೋದನೆ ಕೊಟ್ಟಿದ್ದು ಬಿಜೆಪಿ ನಾಯಕರುಗಳೇ ಎಂಬುದನ್ನು ಯಡಿಯೂರಪ್ಪನವರೇ ನಮ್ರತೆಯಿಂದ ಒಪ್ಪಿಕೊಂಡಿದ್ದಾರೆ.

ಅಲ್ಲಾ ಸ್ವಾಮಿ, ನೀವು 45 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೀರಿ. ರಾಜ್ಯದಲ್ಲಿ ಏನಾಗಿದೆ ಅಂತಾ ರಾಜ್ಯದ ಉದ್ದಗಲಕ್ಕೂ 144 ಸೆಕ್ಷನ್ ಜಾರಿ ಮಾಡಿದ್ದೀರಿ? ಯಾರು ಕೂಡ ತಮ್ಮ ಧ್ವನಿ ಎತ್ತಬಾರದಾ? ಯಾರೂ ಸಾಮಾಜಿಕವಾಗಿ ತಮ್ಮ ಚಿಂತನೆ ಚರ್ಚೆ ಮಾಡಬಾರದಾ? ಸಾರ್ವಜನಿಕರು ಅಧಿಕಾರವನ್ನು ಬಯಸದೇ, ತಮ್ಮ ಮನಸಲ್ಲಿ ಆಗುತ್ತಿರುವ ದುಗುಡವನ್ನು ಹೇಳಿಕೊಳ್ಳುವುದಕ್ಕೆ ಅವಕಾಶವಿಲ್ಲವೇ? ಈ ಧ್ವನಿಗಳನ್ನು ನಿಲ್ಲಿಸಲು ನೀವು ಏನು ಪ್ರಯತ್ನ ಮಾಡುತ್ತಿದ್ದೀರಿ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ. ಬ್ರಿಟೀಷರ ಕಾಲದಲ್ಲಾದರೂ ಅಷ್ಟೋ ಇಷ್ಟು ಸ್ವಾತಂತ್ರ್ಯ ಇತ್ತು. ನಿಮ್ಮ ಆಡಳಿತದಲ್ಲಿ ಅದೂ ಇಲ್ಲವಲ್ಲಾ. ಸಾರ್ವಜನಿಕರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ನೀವು ಎಲ್ಲ ಪ್ರತ್ನ ಮಾಡುತ್ತಿದ್ದೀರಿ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ರಾಷ್ಟ್ರದಲ್ಲಿ ಪ್ರತಿಯೊಬ್ಬರು ತಮ್ಮ ಧ್ವನಿ ಎತ್ತಲು ಅವಕಾಶವಿದೆ. ಅದಕ್ಕೆ ಬೆಂಬಲವಾಗಿ ನಾವು ನಿಲ್ಲುತ್ತೇವೆ. ಅದನ್ನು ಕಸಿಯಲು ನಿಮ್ಮಿಂದ ಸಾಧ್ಯವಿಲ್ಲಾ ಎಂಬುದನ್ನು ಈ ಸಂದರ್ಭದಲ್ಲಿ ಹೇಳಲು ಬಸುತ್ತೇನೆ.

ಯುವಕರು, ಸಾರ್ವಜನಿಕರು ಸರ್ಕಾರಕ್ಕೆ ತಮ್ಮ ಧ್ವನಿಯನ್ನು ಮುಟ್ಟಿಸಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಆ ಧ್ವನಿಯನ್ನು ಮುಚ್ಚಲು ಪ್ರಯತ್ನಿಸುತ್ತಿದ್ದೀರಿ. ಈ ಪ್ರಕರಣದಲ್ಲಿ ನಾನು ಯಾವುದೇ ಅಧಿಕಾರಿಗಳನ್ನು ದೂರುವುದಿಲ್ಲ. ಅಧಿಕಾರಿಗಳು ಏನು ಮಾಡುತ್ತಾರೆ? ಸರ್ಕಾರ, ಸಚಿವರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತಾರೆ. ಹೀಗಾಗಿ ನಾನು ಯಾವುದೇ ಪೊಲೀಸರನ್ನು ದೂರುವುದಿಲ್ಲ, ರಾಜ್ಯದಲ್ಲಿ ಏನೇ ಅಹಿತಕರ ಘಟನೆಗಳು ನಡೆದಿದ್ದರೆ ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವರೇ ಜವಾಬ್ದಾರಿ.

ನಾವು ಅಧಿಕಾರದಲ್ಲಿದ್ದಾಗಲೂ ಈ ದೇಶದ ಯುವಕರು, ನಾಗರೀಕರು ನಮ್ಮ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಪಾಪ ರಾಮಚಂದ್ರ ಗುಹಾ ಅವರು ಏನು ಮಾಡಿದದ್ರು. ಅವರು ಕೂಡ ನಮ್ಮ ವಿರುದ್ಧ ಮಾತನಾಡಿದ್ದರು. ನಾವು ಅದನ್ನು ಸಹಿಸಿಕೊಂಡಿದ್ದೇವೆ. ನೀವು ಅದನ್ನು ಸಹಿಸಿಕೊಳ್ಳಿ. ಅಧಿಕಾರದಲ್ಲಿರುವವರು ಇದನ್ನೆಲ್ಲ ಸಹಿಸಿಕೊಳ್ಳಲು ಸಿದ್ಧರಿರಬೇಕು. ಪ್ರತಿಭಟನೆ ಮಾಡುತ್ತಿರುವ ಆ ಯುವಕರನ್ನು ಯಾಕೆ ಹೊಡೆಯುತ್ತಿದ್ದೀರಿ, ಅವರಿಗೆ ಅನಿಸಿದ್ದನ್ನು ಅವರು ಹೇಳಬಾರದೇ?

ಜನರು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದರು. ಅವರು 10 ನಿಮಿಷವೋ, 1 ಗಂಟೆಯೋ, ಮೂರು ಗಂಟೆಯೋ ತಮ್ಮ ಅಭಿಪ್ರಾಯವನ್ನು ಹೇಳಿ ನಂತರ ಅವರು ವಾಪಸ್ ಹೋಗುತ್ತಿದ್ದರು. ವಿನಾಕಾರಣ ಸೆಕ್ಷನ್ 144 ಜಾರಿ ಮಾಡಿದ್ದಲ್ಲದೇ, ಪ್ರತಿಭಟನಾಕಾರರನ್ನು ಪೊಲೀಸರ ಮೂಲಕ ಪ್ರಚೋದಿಸಿ, ಲಾಠಿ ಪ್ರಹಾರ ಮಾಡಿಸಿ, ಅವರನ್ನು ಸಾಯಿಸಿದ್ದೀರಿ. ಇವತ್ತು ಕೇಸ್ ದಾಖಲಾಗಬೇಕಾದರೆ ಅದು ಮುಖ್ಯಮಂತ್ರಿಗಳು, ಗೃಹ ಸಚಿವರ ಮೇಲೆ ದಾಖಲಾಗಬೇಕು. ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ನಿಮ್ಮ ನಾಯಕರ ವಿರುದ್ಧ ಪ್ರಕರಣ ದಾಖಲಾಗಬೇಕೇ ಹೊರತು ಪೊಲೀಸ್ ಅಧಿಕಾರಿಗಳ ಮೇಲಲ್ಲ.

ನಿಮಗೆ 300 ಸಂಸದರನ್ನು ಆಯ್ಕೆ ಕಳುಹಿಸಲಾಗಿದೆ. ಮಿತ್ರ ಪಕ್ಷದವರೂ ಸೇರಿದರೆ 400 ದಾಟುತ್ತದೆ. ಈಗ ಯಾವುದೇ ಚುನಾವಣೆಯೂ ಇಲ್ಲ. ಇಂತಹ ಸಂದರ್ಭದಲ್ಲೂ ನೀವು ಯಾಕೆ ಈ ರೀತಿ ಸಮಾಜದಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದೀರಿ? ನಾನು ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೆ, ನನ್ನ ಬಳಿ ಸ್ವಲ್ಪ ಆಸ್ತಿ ಇದೆ. ನಾನು ಬೇಕಾದರೆ ದಾಖಲೆ ತೋರಿಸುತ್ತೇನೆ. ಬಡವರು, ಹಳ್ಳಿಗರಿಗೆ ದಾಖಲೆ ತೋರಿಸು ಎಂದರೆ ಅವರು ಎಲ್ಲಿಂದಾ ತೋರಿಸುತ್ತಾರೆ? ಬೆಂಗಳೂರಿನಲ್ಲೇ ಲಕ್ಷಾಂತರ ಜನ ಹಳ್ಳಿಗಳು, ಹೊರಗಿನಿಂದ ಬಂದು ಕೆಲಸ ಮಾಡಿ ನೆಲೆಸಿದ್ದಾರೆ. ಇವರಿಗೆ ದಾಖಲೆ ತೋರಿಸು ಎಂದರೆ ಅವರು ಎಲ್ಲಿಂದಾ ದಾಖಲೆ ತೋರಿಸುತ್ತಾರೆ?

ಯುವಕರಿಗೆ ಶಾಲೆ ಸರ್ಟಿಫಿಕೇಟ್ ತೆಗೆದುಕೊಂಡು ಬಾ ಎಂದರೆ ತಂದು ತೋರಿಸುತ್ತಾರೆ. ಅದನ್ನು ಬಿಟ್ಟು ನಿಮ್ಮ ತಂದೆಯ ದಾಖಲೆ ತೆಗೆದುಕೊಂಡು ಬಾ ಎಂದರೆ ಅವರು ಎಲ್ಲಿಂದಾ ತರ್ತಾರೆ? ಇದು ಹೇಗೆ ಸಾಧ್ಯ? ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ಮುಗಿಸಲು, ಬದಲಾವಣೆ ಮಾಡಲು ನಿಮ್ಮ ಚಿಂತನೆ ಇದೆ. ಅಂದಿನ ಕಾಲದಲ್ಲಿ ಅಂಬೇಡ್ಕರ್, ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ನಾಯಕರು ದೇಶ ಯಾವ ರೀತಿ ಸಾಗಬೇಕು ಎಂದು ಹಾಕಿ ಕೊಟ್ಟ ಸಂವಿಧಾನ ಅಡಿಪಾಯ ಇದ್ದಂತೆ. ಇಂದು ಆ ಅಡಿಪಾಯವನ್ನೇ ನೀವು ಅಲುಗಾಡಿಸುತ್ತಿದ್ದೀರಿ. ನೀವು ತಂದಿರುವ ಮಸೂದೆಗಳು ಅಸಂವಿಧಾನಿಕ. ಇದು ಸಂವಿಧಾನ ಬಾಹೀರ, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ, ಸಮಾನತೆಯ ಕೊರತೆಯಿಂದ ಕೂಡಿದೆ. ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಕಾಯ್ದೆ ತರುವ ಮೂಲಕ ಇಡೀ ದೇಶ ಹೊತ್ತಿಕೊಂಡು ಉರಿಯುವಂತೆ ಮಾಡಿದೆ.

ನೀವು ಬಡವರಿಗೆ ಅನ್ನ ಕೊಡಿ, ಉದ್ಯೋಗ ಕೊಡಿ, ಅಂಗಡಿಗಳು, ಕಾರ್ಖಾನೆಗಳು ಮುಚ್ಚುತ್ತಿವೆ. ಕೈಗಾರಿಕೆ ಸಂಸ್ಥೆಗಳಲ್ಲಿ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಿ. ಅವರ ಬದುಕನ್ನು ನೀವು ಕಟ್ಟುಕೊಡಿ. ಅದನ್ನು ಬಿಟ್ಟು ದೇಶದಲ್ಲಿ ಅಶಾಂತಿ ಮೂಡಿಸುವಂತಹ ಕೆಲಸಕ್ಕೆ ಮುಂದಾಗುತ್ತಿದ್ದೀರ. ಇದು ಕೇವಲ ಅಲ್ಪಸಂಖ್ಯಾತರ ವಿಷಯವಲ್ಲ. ನೀವು ತಂದಿರುವ ಕಾಯ್ದೆ ಇಡೀ ದೇಶದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ, ಬದುಕನ್ನು ಹಾಳು ಮಾಡುತ್ತಿದೆ. ನಾನು ನಮ್ಮ ತಂದೆ ತಾಯಿಗಳು ಅಜ್ಜ ಅಜ್ಜಿಯರು ಈ ದೇಶದಲ್ಲಿ ಹುಟ್ಟಿದ್ದೇವೆ ಎಂದು ನಿಮಗೆ ಪ್ರಮಾಣತ್ರ ಕೊಡಬೇಕಾ? ಕೊಡದಿದ್ರೆ ಜೈಲಿಗೆ ಹಾಕ್ತೀರಾ? ಹಾಕಿ, ಎಷ್ಟು ಜನರನ್ನು ಹಾಕ್ತೀರಾ?

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಚರಿತ್ರೆ ಈ ಪಕ್ಷಕ್ಕೆ ಇದೆ. ಈ ದೇಶವನ್ನು ಅಭಿವೃದ್ಧಿಶೀಲವನ್ನಾಗಿ ಮಾಡಲು ಒಂದು ಅಡಿಪಾಯ ಹಾಕಿಕೊಟ್ಟಿದ್ದೇವೆ. ಈ ದೇಶದಲ್ಲಿ ಎಲ್ಲ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಅಂತಾ ನಾವು ಹೊರಟಿದ್ದೇವೆ. ಇಡೀ ಪ್ರಪಂಚ ನೋಡುತ್ತಿದೆ. ಇ ಭಾರತ ಇಷ್ಟು ದಿನ ಒಗ್ಗಟ್ಟಾಗಿ ಬದುಕಿದೆ. ಆ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ. ಈ ಸಂದರ್ಭದಲ್ಲಿ ನೀವು ಇಂಟರ್ನೆಟ್ ಸೇವೆ ತೆಗೆಯುತ್ತಿದ್ದೀರಾ? ಇವತ್ತು ಇಡೀ ಪ್ರಪಂಚ, ಕರ್ನಾಟಕ ಮತ್ತು ದೇಶವನ್ನು ನೋಡುತ್ತಿದೆ. ಇದಕ್ಕೆ ಕಾರಣರಾಗಿರುವ ಪ್ರಧಾನ ಮಂರಿಗಳು, ಗೃಹ ಸಚಿವರು, ರಾಜ್ಯದ ಮುಖ್ಯಮಂತ್ರಿಗಳನ್ನು ಖಂಡಿಸುತ್ತೇನೆ.

ಬ್ರಿಟೀಷರನ್ನು ಹೋಡಿಸಲು ಎಷ್ಟು ಜನ ತ್ಯಾಗ ಮಾಡಿದ್ದಾರೆ. ಇವತ್ತು ಅದೇ ರೀತಿ ನಿಮ್ಮನ್ನು ಹೋಡಿಸಕ್ಕೆ ಈ ಜನ ದಂಗೆ ಆರಂಭಿಸಿದ್ದಾರೆ. ಶುಭ ಮುಹೂರ್ತ ಪ್ರಾರಂಭವಾಗಿದೆ ಎಂಬುದನ್ನು ಯಡಿಯರಪ್ಪನವರೆ ಮರೆಯಬೇಡಿ. ನಿಮ್ಮ ಅಂತ್ಯಕ್ಕೆ ಇದು ಪ್ರಾರಂಭ. ನಿಮ್ಮ ಮಕ್ಕಳಿಗೆ ನೀವು ಉದ್ಯೋಗ, ಅನ್ನ, ಶಿಕ್ಷಣ ನೀಡಲು ಆಗುತ್ತಿಲ್ಲ, ಕಾಪಾಡಲು ಆಗುತ್ತಿಲ್ಲ. ಅಂತಹುದರಲ್ಲಿ ನೆರೆ ದೇಶದಲ್ಲಿರುವವರನ್ನು ಅಲ್ಲಿಂದ ಹೋಡಿಸಿ ಕರೆದುಕೊಂಡು ಬಂದು ಇಲ್ಲಿ ಯಾವ ರೀತಿ ಸಾಕುತ್ತೀರಾ? ಇದು ಯಾವ ರೀತಿಯ ಸಿದ್ಧಾಂತ? ಇದನ್ನು ಯಾಕೆ ಹೇರುತ್ತಿದ್ದೀರಿ?

ಧರ್ಮ ಆಚರಣೆ ನಮ್ಮ ಸ್ವಾತಂತ್ರ್ಯ, ನಮ್ಮ ಹಕ್ಕು. ಯಾವ ದೇವರನ್ನು ಪೂಜಿಸಬೇಕು ಎಂಬುದು ನಮ್ಮ ಆಯ್ಕೆ, ನಿಮ್ಮದಲ್ಲ. ಈ ವಿಚಾರದಲ್ಲಿ ನೀವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಯಾವ ಧರ್ಮದಲ್ಲಿ ಹುಟ್ಟಬೇಕು, ಯಾವ ಜಾತಿಯಲ್ಲಿ ಹುಟ್ಟಬೇಕು ಅಂತಾ ಯಾರೂ ಅರ್ಜಿ ಹಾಕೊಂಡು ಹುಟ್ಟುವುದಿಲ್ಲ. ಹೀಗಾಗಿ ಇವತ್ತು ದೇಶದಲ್ಲಿ ಏನೇನು ಆಗುತ್ತಿದೆಯೋ ಅದಕ್ಕೆಲ್ಲಾ ನೀವೇ ಕಾರಣ, ನೀವೇ ನೈತಿಕ ಹೊಣೆ ಹೊರಬೇಕು. ದೇಶದಲ್ಲಿ ಸುಳ್ಳಿನ ಕಂತೆ ಸೃಷ್ಟಿಸುವ ನಿಮ್ಮ ಸಾಮಾಜಿಕ ಜಾಲತಾಣದ ಕಾರ್ಖಾನೆ ಇದೆಯಲ್ಲಾ ಅದನ್ನು ಮೊದಲು ಮುಚ್ಚಿಸಿ. ಇದು ದೇಶವನ್ನು ಕೊಲ್ಲುತ್ತಿದೆ. ದೇಶದಲ್ಲಿ ಜನ ಕೆಲಸ ಇಲ್ಲದೇ ಬೀದಿಗೆ ಬೀಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆಯನ್ನು ನೀವು ಸರಿ ಮಾಡಿ.

ಯುಟಿ ಖಾದರ್ ಅವರು ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಯಡಿಯೂರಪ್ಪನವರೆ ತಮ್ಮ ನಾಯಕರಿಗೆ ಹೇಳಿಕೆ ನೀಡಬೇಡಿ ಎಂದು ಹೇಳುವ ಮೂಲಕ ತಮ್ಮ ಪಕ್ಷದವರೇ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆ ಭಾಗದಲ್ಲಿ ನಮ್ಮ ಪಕ್ಷದಲ್ಲಿ ಕೇವಲ ಖಾದರ್ ಮಾತ್ರ ಶಾಸಕನಾಗಿದ್ದಾರೆ. ಹೀಗಾಗಿ ಅವರ ಮೇಲೆ ಆರೋಪ ಮಾಡಬೇಡಿ. ನೀವು, ನಿಮ್ಮ ನಾಯಕರು, ನಿಮ್ಮ ಸಚಿವರು ಯಾವ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ನೋಡಿ. ರಾಜ್ಯದಲ್ಲಿ ಏನಾಗಿದೆ ಎಂದು 144 ಸೆಕ್ಷನ್ ಹಾಕಿದ್ದೀರಿ? ನೀವೇನು ತುರ್ತುಪರಿಸ್ಥಿತಿ ತರಲು ಹೊರಟಿದ್ದೀರಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights