FACT CHECK | ಚೀನಾ ಸಂವಿಧಾನದ ಪ್ರತಿಯನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದು ನಿಜವೇ?

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಚೀನಾ ಸಂವಿಂಧಾನವನ್ನು ಪ್ರದರ್ಶಿಸಿದ್ದಾರೆ ಎಂದು ಆಪಾದನೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘ಭಾರತ ಸಂವಿಧಾನದ ಅಸಲಿ ಪುಸ್ತಕವು ನೀಲಿ ಬಣ್ಣದ ಕವರ್ ಹೊಂದಿದೆ. ಇನ್ನು ಚೀನಾ ಸಂವಿಧಾನವು ಕೆಂಪು ಕವರ್ ಹೊಂದಿದೆ. ಹಾಗಾದ್ರೆ ರಾಹುಲ್ ಗಾಂಧಿ ಚೀನಾ ಸಂವಿಧಾನ ಹಿಡಿದಿದ್ದರೆ, ನಮಗೆ ಈ ಸಂಬಂಧ ಸ್ಪಷ್ಟನೆ ಬೇಕು’ ಎಂದು ರಾಹುಲ್ ಗಾಂಧಿಯ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.

ಹಿಮಂತ ಬಿಸ್ವ ಶರ್ಮಾ ಹಂಚಿಕೊಂಡ ಪೋಸ್ಟ್‌ನಲ್ಲಿ  ಹಲವು ಫೋಟೋಗಳಿದ್ದು, ಒಂದರಲ್ಲಿ ನೀಲಿ ಬಣ್ಣದ ಕವರ್ ಹೊಂದಿರುವ ಭಾರತದ ಸಂವಿಧಾನ ಪ್ರತಿ ಇದ್ದರೆ, ಮತ್ತೊಂದರಲ್ಲಿ ಕೆಂಪು ಬಣ್ಣದ ಕವರ್ ಹೊಂದಿರುವ ಚೀನಾ ಸಂವಿಧಾನ ಪ್ರತಿಯ ಫೋಟೋ, ಮತ್ತೊಂದು ಫೋಟೋದಲ್ಲಿ ರಾಹುಲ್ ಗಾಂಧಿ ಅವರ ಕೈನಲ್ಲಿ ಇರುವ ಕೆಂಪು ಕವರ್ ಹಾಗೂ ಕಪ್ಪು ಅಂಚು ಹೊಂದಿರುವ ಪುಸ್ತಕದ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಹಾಗಿದ್ದರೆ ರಾಹುಲ್ ಗಾಂಧಿ ನಿಜವಾಗಿಯೂ ಚೀನಾದ ಸಂವಿಧಾನವನ್ನು ಪ್ರದರ್ಶಿಸಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,

ಶರ್ಮಾ ಅವರ ಟ್ವೀಟ್‌ಗೆ ಪ್ರತಿಕ್ರಿಸಿರುವ ಹಲವು ಎಕ್ಸ್‌ ಖಾತೆ ಬಳಕೆದಾರರು ಉತ್ತರ ನೀಡಿದ್ದಾರೆ. ಬಿಜೆಪಿ ನಾಯಕರಿಗೆ ಇದೇ ರೀತಿಯ ಕೆಂಪು ಕವರ್ ಹಾಗೂ ಕಪ್ಪು ಅಂಚಿನ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಫೋಟೋಗನ್ನು ಪೋಸ್ಟ್‌ ಮಾಡಿದ್ದಾರೆ. ಈ ಪುಸ್ತಕಗಳು ರಾಹುಲ್ ಗಾಂಧಿ ಅವರ ಕೈನಲ್ಲಿ ಇದ್ದ ಪುಸ್ತಕಕ್ಕೆ ಹೋಲಿಕೆ ಆಗುವಂತಿದ್ದವು.

ಹಿಮಂತ ಬಿಸ್ವಾರವರು ಹಂಚಿಕೊಂಡಿರುವ ಫೋಟೊ ಮೇ 05 ರಂದು ತೆಲಂಗಾಣದ ಗದ್ವಾಯಿಯಲ್ಲಿ ನಡೆದ ಸಭೆಯದ್ದಾಗಿದೆ. ಈ ಕುರಿತು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಆ ಫೋಟೊ ಓರೆಯಾಗಿರುವ ಕಾರಣ ಸಂವಿಧಾನ ಪ್ರತಿಯಲ್ಲಿ ಏನು ಬರೆದಿದೆ ಎಂದು ಕಾಣುವುದಿಲ್ಲ.

ಹಾಗಾಗಿ ರಾಹುಲ್ ಗಾಂಧಿಯವರು ಕೆಂಪು ಬಣ್ಣದ ಹೊದಿಕೆ ಹೊಂದಿರುವ ಸಂವಿಧಾನದ ಪ್ರತಿ ಹೊಂದಿರುವ ಫೋಟೊವನ್ನು ಗೂಗಲ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಅದೇ ರೀತಿಯ ಹತ್ತಾರು ಫೋಟೊಗಳು ಕಂಡುಬಂದಿವೆ. ಅದರಲ್ಲಿ ಮಾರ್ಚ್ 03 ರಂದು ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಸಂವಿಧಾನದ ಪ್ರತಿ ತೋರಿಸುತ್ತಿರುವ ಫೋಟೊವನ್ನು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಅದರಲ್ಲಿ THE CONSTITUTION OF INDIA ಎಂದು ಸ್ಪಷ್ಟವಾಗಿ ಬರೆದಿರುವುದನ್ನು ನಾವು ನೋಡಬಹುದು. ಬ್ಯುಸಿನೆಸ್ ಸ್ಟ್ಯಾಂಡರ್ಡ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅದೇ ಫೋಟೊ ಪ್ರಕಟಿಸಿದ್ದು ಎಲ್ಲದರಲ್ಲಿಯೂ THE CONSTITUTION OF INDIA ಎಂದು ಬರೆದಿರುವುದನ್ನು ನಾವು ನೋಡಬಹುದು.

ರಾಹುಲ್ ಗಾಂಧಿಯವರು ಬಹುತೇಕ ಎಲ್ಲಾ ಸಾರ್ವಜನಿಕ ಸಭೆಗಳಿಗೆ ಕೋಟ್ ಪಾಕೆಟ್ ಎಡಿಷನ್‌ನ ಚಿಕ್ಕ ಭಾರತದ ಸಂವಿಧಾನದ ಪ್ರತಿಯನ್ನು ಕೊಂಡೊಯ್ಯುತ್ತಾರೆ. ನಾವು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಪ್ರಮಾಣ ಮಾಡುತ್ತಾರೆ. ಈ ಕುರಿತು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಹಲವಾರು ಪ್ರಕಾಶನಗಳು ಕೆಂಪು ಮತ್ತು ಕಪ್ಪು ಬಣ್ಣದ ಭಾರತದ ಸಂವಿಧಾನದ ಚಿಕ್ಕ ಪ್ರತಿಯನ್ನು ಮುದ್ರಿಸಿರುವುದನ್ನು ನೋಡಬಹುದು. ಹಲವಾರು ಆನ್‌ಲೈನ್‌ ಫ್ಲಾಟ್‌ಫಾರಂಗಳಲ್ಲಿ ಅವುಗಳನ್ನು ನಾವು ಕೊಳ್ಳಬಹುದುದಾಗಿದೆ.

 

ಇಷ್ಟೇ ಅಲ್ಲದೇ ಈ ಹಿಂದೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ರಾಷ್ಟ್ರಪತಿಗಳಾಗಿದ್ದ ರಾಮ್ ನಾಥ್ ಕೋವಿಂದ್‌ರವರು ಇದೇ ಮಾದರಿಯ ಕೆಂಪು ಬಣ್ಣದ ಭಾರತೀಯ ಸಂವಿಧಾನದ ಪ್ರತಿಯನ್ನು ಹಲವರಿಗೆ ಉಡುಗೊರೆಯಾಗಿ ನೀಡುತ್ತಿರುವ ಫೋಟೊಗಳು ಗೂಗಲ್‌ನಲ್ಲಿ ಲಭ್ಯವಿವೆ.

ಚೀನಾ ಸಂವಿಧಾನ ಹೊತ್ತಿಗೆ ಅಮೇಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಪುಸ್ತಕವು ಸಂಪೂರ್ಣ ಕೆಂಪು ಬಣ್ಣದಲ್ಲಿ ಇದ್ದು, ರಾಹುಲ್ ಗಾಂಧಿ ಅವರು ಹಿಡಿದಿರುವ ಪುಸ್ತಕದಂತಿಲ್ಲ.

 

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ  ಚೀನಾದ ಸಂವಿಧಾನದ ಪ್ರತಿ ತೋರಿಸಿದ್ದಾರೆ ಎಂಬ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಹಂಚಿಕೊಂಡ ಪೋಸ್ಟ್‌ನಲ್ಲಿ ಮಾಡಲಾದ ಆಪಾದನೆ ಸುಳ್ಳಿನಿಂದ ಕೂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತೆಲಂಗಾಣದಲ್ಲಿ AIMIM ಪಕ್ಷಕ್ಕೆ ಮತ ನೀಡಿ ಎಂದು ಮೋದಿ ಹೇಳಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights