FACT CHECK | ಭಾರತದ ತ್ರಿವರ್ಣ ಧ್ವಜದ ಮೇಲೆ ವಾಹನ ಚಲಾಯಿಸುತ್ತಿರುವ ದೃಶ್ಯ ಕೇರಳದ್ದಲ್ಲ
ರಸ್ತೆಯ ಮೇಲೆ ಭಾರತದ ತ್ರಿವರ್ಣಧ್ವಜದ ಚಿತ್ರವನ್ನು ರಚಿಸಿ ದರ ಮೇಲೆ ವಾಹನಗಳು ಚಲಾಯಿಸುತ್ತಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವಾಹನ ಸಂಖ್ಯೆ. KL-12 ವಯನಾಡ್ ಕೇರಳದಿಂದ ಈ ವೀಡಿಯೊವನ್ನು ವೀಕ್ಷಿಸಿ ಎಂಬ ಬರಹದೊಂದಿಗೆ ವಿಡಿಯೋವನ್ನು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಕೆಲವರು ತಮಿಳುನಾಡಿನ ತಂಜಾವೂರಿನಲ್ಲಿ ಈ ಘಟನೆ ನಡೆದಿದೆ ಎಂದೂ ಹಂಚಿಕೊಂಡಿದ್ದಾರೆ.
4.50 ನಿಮಿಷಗಳಲ್ಲಿ ಇರುವ ವೈರಲ್ ವಿಡಿಯೋದಲ್ಲಿ ಕೆಲವರು ಕೈಯಲ್ಲಿ ಪಾಕಿಸ್ತಾನದ ಧ್ವಜ ಹಿಡಿದು, ಹಲವರು ಘೋಷಣೆ ಕೂಗುವ ದೃರ್ಶಯಗಳನ್ನು 3.8 ನಿಮಿಷದ ವಿಡಿಯೊದಲ್ಲಿ ದಾಖಲಾಗಿದೆ. ಜನರು ಪಾಕಿಸ್ತಾನದ ಧ್ವಜವನ್ನು ಹಿಡಿದುಕೊಂಡು ಹರ್ಷೋದ್ಗಾರ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂಗೆ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಕೇರಳದ ವಯನಾಡಿನಲ್ಲಿ ಭಾರತೀಯ ಧ್ವಜವನ್ನು ಅವಮಾನಿಸಿದ ಯಾವುದೇ ವರದಿಗಳಿಲ್ಲ. ಅಂತಹ ಯಾವುದೇ ಘಟನೆ ನಿಜವಾಗಿಯೂ ನಡೆದಿದ್ದರೆ, ಮಾಧ್ಯಮಗಳು ಅದನ್ನು ವರದಿ ಮಾಡುತ್ತವೆ, ಆದರೆ, ಅಂತಹ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.ಇದಲ್ಲದೆ, ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ದೃಶ್ಯಗಳು ಕೇರಳಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ, ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿಯಲ್ಲಿ ಎಂಬ ಅನೇಕ ಸುಳಿವುಗಳನ್ನು ಕಾಣಬಹುದು.
ಇದು ಪಾಕಿಸ್ತಾನದ ಕರಾಚಿಗೆ ಸಂಬಂಧಿಸಿದ ವಿಡಿಯೊ ಎಂದು ಇಂಡಿಯಾಟುಡೇ ವರದಿ ಮಾಡಿದೆ. ವಾಹನವೊಂದರ ಮೇಲೆ ಬರೆಯಲಾಗಿರುವ ಹುನಾರ್ ಫೌಂಡೇಷನ್ ಹೆಸರು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗೆ ಸಂಬಂಧಿಸಿದ್ದಾಗಿದೆ. ವಿಡಿಯೊದಲ್ಲಿ ಕಾಣಿಸುವ ರಿಕ್ಷಾಗಳು ತಮಿಳುನಾಡಿನ ರಿಕ್ಷಾಗಳಿಗೆ ಹೋಲಿಕೆಯಾಗುವುದಿಲ್ಲ. ವಿಡಿಯೊದಲ್ಲಿ ಕಾಣಿಸುವ ಬೀದಿಬದಿಯ ಅಂಗಡಿಗಳ ಕೆಲವು ಹೆಸರುಗಳನ್ನು ಪರಿಶೀಲಿಸಿದಾಗ, ಅವು ಕರಾಚಿಯ ತಾರಿಕ್ ರಸ್ತೆಯಲ್ಲಿರುವ ಅಂಗಡಿಗಳು ಎಂಬುದು ದೃಢಪಟ್ಟಿದೆ ಎಂದು ಇಂಡಿಯಾಟುಡೇ ಹೇಳಿದೆ.
ವೈರಲ್ ವೀಡಿಯೊದ 3:38 ಅವಧಿಯ ತುಣುಕಿನಲ್ಲಿ, ‘ದಿ ಹುನಾರ್ ಫೌಂಡೇಶನ್‘ ಎಂದು ಬರೆದಿರುವ ಬಿಳಿ ವ್ಯಾನ್ ಹಾದುಹೋಗುವುದನ್ನು ಕಾಣಬಹುದು. ದಿ ಹುನಾರ್ ಫೌಂಡೇಶನ್‌ನ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಸಂಸ್ಥೆಯು ಕರಾಚಿಯಲ್ಲಿದೆ ಮತ್ತು ಇದು ಪಾಕಿಸ್ತಾನದ ಯುವಕರಿಗೆ ಕೌಶಲ್ಯ ಅಭಿವೃದ್ಧಿ/ತಾಂತ್ರಿಕ ತರಬೇತಿಯನ್ನು ನೀಡುವ ಸಂಸ್ಥೆಯಾಗಿದೆ. ಇದು ಕರಾಚಿಯ ದೆಹಲಿ ಮರ್ಕೆಂಟೈಲ್ ಸೊಸೈಟಿ ಪ್ರದೇಶದಲ್ಲಿ ತನ್ನ ಮೊದಲ ಬ್ಯಾಚ್ ಅನ್ನು ಪ್ರಾರಂಭಿಸಿತು. ಕರಾಚಿ ಮೂಲದ ಪ್ರಿಂಟಿಂಗ್ ಅಂಗಡಿಯ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ವಾಹನಗಳ ಚಿತ್ರಗಳನ್ನು ಕಾಣಬಹುದು.
3:44 ಸೆಕೆಂಡುಗಳಲ್ಲಿ ಹಳದಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಗುರುತಿಸಬಹುದು, ಅದರ ಮೇಲೆ ‘BFK-625’ ಎಂದು ಬರೆಯಲಾಗಿದೆ. Google ಸರ್ಚ್ ಮೂಲಕ, ಅಂತಹ ನಂಬರ್ ಪ್ಲೇಟ್‌ಗಳು ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಸಂಬಂಧಿಸಿವೆ ಎಂದು ಮಾಹಿತಿ ಲಭ್ಯವಾಗವೆ, ಅದರ ರಾಜಧಾನಿ ಕರಾಚಿಯಾಗಿದೆ. ವೈರಲ್ ವೀಡಿಯೊದಲ್ಲಿರುವಂತೆಯೇ ವಾಹನದ ನಂಬರ್ ಪ್ಲೇಟ್‌ಗಳ ಚಿತ್ರಗಳನ್ನು ಪ್ರಕಟಿಸಿದ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಧ್ವಜವನ್ನು ಅವಮಾನಿಸುವ ಪಾಕಿಸ್ತಾನದ ದೃಶ್ಯಗಳನ್ನು ಕೇರಳದ ವಯನಾಡ್‌ನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೊದಲ್ಲಿ ಕಾಣಿಸುವ ರಿಕ್ಷಾಗಳು ಕೇರಳಾ ರಿಕ್ಷಾಗಳಿಗೆ ಹೋಲಿಕೆಯಾಗುವುದಿಲ್ಲ. ವಿಡಿಯೊದಲ್ಲಿ ಕಾಣಿಸುವ ಬೀದಿಬದಿಯ ಅಂಗಡಿಗಳ ಕೆಲವು ಹೆಸರುಗಳನ್ನು ಪರಿಶೀಲಿಸಿದಾಗ, ಅವು ಕರಾಚಿಯ ತಾರಿಕ್ ರಸ್ತೆಯಲ್ಲಿರುವ ಅಂಗಡಿಗಳು ಎಂಬುದು ದೃಢಪಟ್ಟಿದೆ ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಚೀನಾ ಸಂವಿಧಾನದ ಪ್ರತಿಯನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದು ನಿಜವೇ?