FACT CHECK | ಪಶ್ಚಿಮ ಬಂಗಾಳದ ಮಮತಾ ಸರ್ಕಾರ ರಂಜಾನ್‌ಗೆ ರಜೆ ನೀಡಿ, ದುರ್ಗಾ ಪೂಜೆಗೆ ರಜೆ ನಿರಾಕರಿಸುತ್ತದೆ ಎಂಬ ಅಮಿತ್ ಶಾ ಅರೋಪದಲ್ಲಿ ಸತ್ಯವಿದೆಯೇ?

ಚುನಾವಣೆ ಎಂದರೆ ಹಾಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ತಮ್ಮ ಎದುರಾಳಿಗಳನ್ನು ಹಣಿಯಲು ನಾನಾ ಕನಸರತ್ತು ಮಾಡುವುದು ಸಾಮಾನ್ಯ. 2024ರ ಲೋಕಸಭಾ ಚುನಾವಣೆಯಲ್ಲಿ ಇಂತಹ ವಿಧ್ಯಮಾನಗಳು ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ ಅದಕ್ಕೆ ಉದಾಹರಣೆ ಎಂಬಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಕೋಮು ತಾರತಮ್ಯದ ಆರೋಪವನ್ನು ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸೇರಾಂಪೋರ್‌ನಲ್ಲಿ ಚುನಾವಣಾ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಮಮತಾ ಬ್ಯಾನರ್ಜಿ ಮುಸ್ಲಿಮರಿಗೆ ರಂಜಾನ್ ಸಮಯದಲ್ಲಿ ಸರ್ಕಾರ ರಜೆ ಮಂಜೂರು ಮಾಡುತ್ತಾರೆ. ಆದರೆ ದುರ್ಗಾ ಪೂಜೆಗೆ ನಮಗೆ ರಜೆ ನೀಡುವುದಿಲ್ಲ. ಯಾಕೆ ಈ ತಾರತಮ್ಯ?” ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು “ಈ ಇಮಾಮ್‌ಗಳು ಮತ್ತು ಮುಲ್ಲಾಗಳು ಬಂಗಾಳದ ಖಜಾನೆಯಿಂದ ಸಂಬಳ ಪಡೆಯಬೇಕೇ? ಇಲ್ಲ ಎಂದು ಹೈಕೋರ್ಟ್ ಹೇಳಿದ್ದರಿಂದ ಮಮತಾ ಬ್ಯಾನರ್ಜಿ ಅವರು ವಕ್ಫ್ ಮಂಡಳಿಯಿಂದ ಸಂಬಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 

 

 

 

 

 

 

 

 

 

 

 

ಹಾಗಿದ್ದರೆ ಅಮಿತ್ ಶಾ ಆರೋಪಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ಮುಸ್ಲಿಂರನ್ನು ಓಲೈಸಲು ರಂಜಾನ್ ಗೆ ಮಾತ್ರ ರಜೆ ನೀಡಿ ಹಿಂದೂಗಳ ದುರ್ಗಾ ಪೂಜೆಗೆ ರಜೆ ನೀಡುವುದಿಲ್ಲ ಎಂಬುದು ನಿಜವೇ? ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಅಮಿತ್ ಶಾ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಪಶ್ಚಿಮ ಬಂಗಾಳ ಸರ್ಕಾರದ 2024 ರ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿದಾಗ, ರಜಾ ದಿನಗಳನ್ನು ಎರಡು ಪಟ್ಟಿಗಳಾಗಿ ವಿಂಗಡಿಸಿದ್ದು ಅದನ್ನು ಆರ್ಥಿಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದು ಲಭ್ಯವಾಗಿದೆ

N. I. ಆಕ್ಟ್ ಅಡಿಯಲ್ಲಿ 2024 ರ ಸಾರ್ವಜನಿಕ ರಜಾದಿನಗಳು ಎಂಬ ಪಟ್ಟಿಯಲ್ಲಿ ಅಕ್ಟೋಬರ್ 2 ರಂದು ಮಹಾಲಯ, ಅಕ್ಟೋಬರ್ 10 ರಂದು ದುರ್ಗಾ ಪೂಜೆ ಮಹಾ ಸಪ್ತಮಿ,  ಅಕ್ಟೋಬರ್ 11 ದುರ್ಗಾ ಪೂಜೆ ಮಹಾ ಅಸ್ತಮಿ ಮತ್ತು ಅಕ್ಟೋಬರ್ 12 ರಂದು ದುರ್ಗಾ ಪೂಜೆ ದಶಮಿಗೆ ರಜೆ ಘೋಷಿಸಿದೆ.

ಕೋಲ್ಕತ್ತಾದ ರಿಜಿಸ್ಟ್ರಾರ್ ಆಫ್ ಅಶ್ಯೂರೆನ್ಸ್ ಕಚೇರಿಗಳನ್ನು ಹೊರತುಪಡಿಸಿ, ಪಶ್ಚಿಮ ಬಂಗಾಳ ಸರ್ಕಾರದ ಅಡಿಯಲ್ಲಿನ ಕಚೇರಿಗಳು, ಕೋಲ್ಕತ್ತಾದ ಸ್ಟಾಂಪ್ ರೆವಿನ್ಯೂ ಕಲೆಕ್ಟರ್ ಕಚೇರಿಗಳಿಗೆ ಸಾರ್ವಜನಿಕ ರಜಾದಿನಗಳಲ್ಲಿ ಪಟ್ಟಿ ಮಾಡದ ಪಟ್ಟಿ II ರಲ್ಲಿ ನಿರ್ದಿಷ್ಟಪಡಿಸಿದ ದಿನಗಳಲ್ಲಿ ರಜೆ ಘೋಷಿಸಿದೆ. ಪಟ್ಟಿ II ಅಕ್ಟೋಬರ್ 7 ರಂದು ಮಹಾ ಚತುರ್ಥಿ, ಅಕ್ಟೋಬರ್ 8 ರಂದು ಮಹಾ ಪಂಚಮಿ, ಅಕ್ಟೋಬರ್ 9 ರಂದು ಮಹಾ ಷಷ್ಠಿ ಮತ್ತು ಅಕ್ಟೋಬರ್ 14 ಮತ್ತು 15 ರಂದು ದುರ್ಗಾ ಪೂಜೆಗೆ ಹೆಚ್ಚಿನ ರಜಾದಿನಗಳನ್ನು ಘೋಷಿಸಿದೆ. 2023 ಮತ್ತು 2022ರಲ್ಲಿಯೂ ದುರ್ಗಾ ಪೂಜೆಗೆ ರಜೆ ಘೋಷಿಸಿತ್ತು. ಹಾಗಾಗಿ ಅಮಿತ್ ಶಾ ಹೇಳಿಕೆ ಸುಳ್ಳಿನಿಂದ ಕೂಡಿದೆ.

ಮುಸ್ಲಿಂ ಧರ್ಮಗುರುಗಳು ಮಾತ್ರ ಬಂಗಾಳದ ಸರ್ಕಾರಿ ಸಂಬಳ ಪಡೆಯುತ್ತಾರೆಯೇ?

2012 ರಲ್ಲಿ, ಮಮತಾ ಬ್ಯಾನರ್ಜಿ ಸರ್ಕಾರವು ಇಮಾಮ್‌ಗಳು ಮತ್ತು ಮುಜಿನ್‌ಗಳಿಗೆ ಗೌರವಧನವನ್ನು ಘೋಷಿಸಿತು. ಈ ನಿರ್ಧಾರವನ್ನು ಆ ಸಮಯದಲ್ಲಿ ಕಲ್ಕತ್ತಾ ಹೈಕೋರ್ಟ್ ಪ್ರಶ್ನಿಸಿತ್ತು. ಅಂದಿನಿಂದ ಮಾಸಿಕ ಭತ್ಯೆಗಳನ್ನು ವಕ್ಫ್ ಬೋರ್ಡ್ ಮೂಲಕ ನೀಡಲಾಗುತ್ತಿದೆ.

ಮತ್ತೆ ಸೆಪ್ಟೆಂಬರ್ 2020 ರಲ್ಲಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಸುಮಾರು 8,000 ಹಿಂದೂ ಪುರೋಹಿತರಿಗೆ ತಿಂಗಳಿಗೆ ₹ 1,000 ಗೌರವಧನವನ್ನು ಘೋಷಿಸಿದರು. ಆ ವರ್ಷದ ದುರ್ಗಾಪೂಜೆಗೂ ಮುನ್ನ ಗೌರವಧನ ಆರಂಭಿಸುವಂತೆ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದರು. ಕ್ರಿಶ್ಚಿಯನ್ ಪಾದ್ರಿಗಳು ಸೇರಿದಂತೆ ಎಲ್ಲಾ ಧರ್ಮಗಳ ಪ್ರತಿನಿಧಿಗಳು ಬೆಂಬಲವನ್ನು ಕೇಳಿದರೆ ಅವರಿಗೆ ಸಹಾಯ ಮಾಡಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಆ ಸಂದರ್ಭದಲ್ಲಿ ಹೇಳಿದ್ದರು.

ಆಗಸ್ಟ್ 2023 ರಲ್ಲಿ ಮುಸ್ಲಿಂ ಧರ್ಮಗುರುಗಳು ಮತ್ತು ಹಿಂದೂ ಪುರೋಹಿತರ ಮಾಸಿಕ ಭತ್ಯೆಗಳಲ್ಲಿ 500 ರೂ ಹೆಚ್ಚಳವನ್ನು ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದರು. ಹೆಚ್ಚಳದ ನಂತರ ಇಮಾಮ್‌ಗಳು ಈಗ ರೂ. 3000 ಮತ್ತು ಮುಸೆಝಿನ್‌ಗಳು ಮತ್ತು ಹಿಂದೂ ಪುರೋಹಿತರು ರೂ. 1500 ಭತ್ಯೆ ಪಡೆಯುತ್ತಿದ್ದಾರೆ.

ಆದ್ದರಿಂದ ‘ಇಮಾಮ್ ಮತ್ತು ಮುಲ್ಲಾ’ಗಳು ಮಾತ್ರ ಸಂಬಳ ಪಡೆಯುತ್ತಾರೆ ಎಂದು ಹೇಳುವುದು ಸರಿಯಲ್ಲ. ಹಿಂದೂ ಅರ್ಚಕರಿಗೂ ಭತ್ಯೆ ಸಿಗುತ್ತದೆ. ಇಮಾಮ್‌ಗಳು ಮತ್ತು ಮುಜಿನ್‌ಗಳಿಗೆ ಸ್ಟೈಫಂಡ್ ಘೋಷಿಸಿದ ಎಂಟು ವರ್ಷಗಳ ನಂತರ ಹಿಂದೂ ಪುರೋಹಿತರಿಗೆ ಸ್ಟೈಫಂಡ್ ಘೋಷಿಸಲಾಯಿತು. ಹಾಗಾಗಿ ಅಮಿತ್ ಶಾ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ದ ಮಾಡಿರುವ ಆರೋಪ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದ ತ್ರಿವರ್ಣ ಧ್ವಜದ ಮೇಲೆ ವಾಹನ ಚಲಾಯಿಸುತ್ತಿರುವ ದೃಶ್ಯ ಕೇರಳದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights