ರಾಹುಲ್‌ಗಾಂಧಿಯ ಅಂದಿನ ಟ್ವೀಟ್‌ ಮತ್ತು ಭಾರತದ ಇಂದಿನ ಪರಿಸ್ಥಿತಿ: ಏನು ಹೇಳುತ್ತದೆ

ಕೊರೊನಾ ವೈರಸ್‌ಗೆ ನಿಯಂತ್ರಣಕ್ಕಾಗಿ ಭಾರತದಲ್ಲಿ ಎರಡನೇ ಹಂತದ ಲಾಕ್‌ಡೌನ್‌ ಘೋ‍ಷಿಸಲಾಗಿದೆ. ಆದರೂ ವೈರಸ್‌ ತನ್ನ ಆಕ್ರಮಣವನ್ನು ನಿಲ್ಲಿಸಿಲ್ಲ. ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದೇ ಪ್ರಮಾಣದಲ್ಲಿ ಸಾವಿನ ಸಂಖ್ಯೆಯೂ ಏರಳವಾಗುತ್ತಲೇ ಇದೆ. ಹಾಗಾಗಿಯೇ ಏಪ್ರಿಲ್‌ 16ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ಗಾಂಧಿಯವರು ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಒಂದೇ ಪರಿಹಾರವಲ್ಲ, ಕೇವಲ ಲಾಕ್‌ಡೌನ್‌ನಿಂದ ವೈರಸ್‌ ನಿಯಂತ್ರಣ ಸಾಧ್ಯವಿಲ್ಲ. ತೀವ್ರಗತಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಹೇಳಿದ್ದರು. ಇದಕ್ಕೆ ಯಥಾಪ್ರಕಾರ ಬಿಜೆಪಿ ಐಟಿ ಸೆಲ್‌ ಟೀಕೆಗಳನ್ನು ಮಾಡಿ ಕೈತೊಳೆದುಕೊಳ್ಳುತ್ತಿದೆ.

ಇಂಥದ್ದೇ ಎಚ್ಚರಿಕೆಯನ್ನು ರಾಹುಲ್‌ಗಾಂಧಿಯವರು ಕೊರೊನಾ ಸೋಂಕು ಭಾರತಕ್ಕೂ ಹರಡಬಹುದಾದ ಸಾಧ್ಯತೆಗಳಿದ್ದ ಸಂದರ್ಭದಲ್ಲಿ ಅಂದರೆ, ಫೆಬ್ರವರಿ 12 ರಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ನೀಡಿದ್ದರು. ಕೊರೊನಾ ವೈರಸ್‌ನಿಂದ ಭಾರತದಲ್ಲಿ ಎದುರಾಗಹುದಾದ ಸಂಕಷ್ಟಗಳನ್ನು ಎದುರಿಸಲು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಚ್ಚರಿಕೆಯನ್ನು ನೀಡಿದ್ದರು. ಆ ಕಾರಣಕ್ಕಾಗಿ ಅವರು ಎಲ್ಲರಿಂದೂ ಅಪಹಾಸ್ಯಕ್ಕೆ ಒಳಪಡಬೇಕಾಯಿತೇ ವಿನಃ, ಸರ್ಕಾರ ಅವರ ಆತಂಕವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಾಗಿ ಕೇಂದ್ರದ ಹಿರಿಯ ಮಂತ್ರಿಗಳು ದೇಶದಲ್ಲಿ ಯಾವುದೇ ಆರೋಗ್ಯ ತುರ್ತುಸ್ಥಿತಿ ಎದುರಾಗುತ್ತಿಲ್ಲ. ಅಂತಹ ಸಂದರ್ಭಗಳೂ  ಇಲ್ಲ ಎಂದು ಹೇಳಿದ್ದರು.

ಏಪ್ರಿಲ್ 16ರಂದು ಮಾಧ್ಯಮಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ರಾಹುಲ್‌ಗಾಂಧಿಯವರು, ಎರಡು ತಿಂಗಳ ಹಿಂದಿನ ಅವರ ಹಳೆಯ ಟ್ವೀಟ್‌ ಮಾಡಿದ ದಿನದಿಂದ ಇಲ್ಲಿಯವರೆಗೆ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಭಾರತ ಈಗ ವಿಸ್ತೃತ ಲಾಕ್‌ಡೌನ್ ಹಂತದಲ್ಲಿದೆ. 13,000 ಕ್ಕೂ ಹೆಚ್ಚು ಜನರು ವೈರಸ್‌ಗೆ ತುತ್ತಾಗಿದ್ದಾರೆ. 400ಕ್ಕೂ ಹೆಚ್ಚು ಜನರು ವೈರಸ್‌ಗೆ ಬಲಿಯಾಗಿದ್ದಾರೆ. ಲಕ್ಷಾಂತರ ವಲಸಿಗರು ಮತ್ತು ಕಾರ್ಮಿಕ ವರ್ಗದವರು ತಮ್ಮ ಭವಿಷ್ಯದಲ್ಲಿ ಏನಾಗಬಹುದು ಎಂಬ ಅರಿವೇ ಇಲ್ಲದೆ ಎದುರು ನೋಡುತ್ತಿದ್ದಾರೆ. ಆರ್ಥಿಕ ಕುಸಿತದಿಂದಾಗಿ ಶ್ರೀಮಂತರು ತಮ್ಮ ಬ್ಯಾಂಕ್ ಖಾತೆಗಳನ್ನು ಅಪನಂಬಿಕೆಯಲ್ಲಿ ನೋಡುತ್ತಿದ್ದಾರೆ ಎಂದು ಉಲ್ಲೇಖಿಸಿ ಮಾತನಾಡಿದರು. ಇದು ಮಾಧ್ಯಮಗಳಿಗೆ ರಾಹುಲ್‌ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಲು ಯತ್ನಿಸುತ್ತಿದ್ದಾರೆ ಎಂದಷ್ಟೇ ಕಾಣಿಸಿತ್ತು.

ಆದರೆ, ರಾಹುಲ್‌ ಗಾಂಧಿಯವರ ಸಂದೇಶವು ಸ್ಪಷ್ಟವಾಗಿತ್ತು: ಅವರು ಬಿಕ್ಕಟ್ಟಿನ ಸಂದರ್ಭದಲ್ಲಿ ರಚನಾತ್ಮಕ ಸಲಹೆಗಳನ್ನು ನೀಡಲು ಬಯಸಿದ್ದರು ಮತ್ತು ಬಿಜೆಪಿಯೊಂದಿಗೆ ರಾಜಕೀಯ ದ್ವೇಷದಲ್ಲಿ ತೊಡಗಬಾರದು. “ನಾವು ಒಟ್ಟಿಗೆ ಹೋರಾಡಿದರೆ ಮಾತ್ರ ವೈರಸ್ ಅನ್ನು ಸೋಲಿಸಬಹುದು, ನಾವು ಪರಸ್ಪರ ಜಗಳವಾಡಿದರೆ ದೇಶದ ಪ್ರಜೆಗಳನ್ನು ಕಳೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.  ಇದೆಲ್ಲದರ ನಡುವೆಯೂ ಈ ಎರಡು ತಿಂಗಳಲ್ಲಿ ಬದಲಾಗದ ಸಂಗತಿಯೂ ಇದೆ. ಅದು ರಾಹುಲ್‌ಗಾಂಧಿಯವರು ನೀಡುವ ಸಲಹೆಗಳನ್ನು ಬಿಜೆಪಿ ತಮಾಷೆಯಾಗಿ ಭಾವಿಸುವುದು ಮತ್ತೂ ಗಾಂಧಿ ಕುಟುಂಬದ ಬಗೆಗಿನ ಬಿಜೆಪಿಯ ರೋಗಗ್ರಸ್ಥ ದ್ವೇಷ. ಬಿಜೆಪಿಯ ಮೇಲೆ ಸಹಾನುಭೂತಿ ಹೊಂದಿರುವ ಮಾಧ್ಯಮಗಳು ಕಾಂಗ್ರೆಸ್‌ ನಾಯಕ ಈ ಸುದ್ದಿಗೋಷ್ಠಿಯನ್ನು ಕೇಂದ್ರದ ಮೇಲೆ “ದಾಳಿ” ಎಂದು ಬಣ್ಣಿಸಿದ್ದವು. ಆದರೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ಎಲ್ಲಾ ರಾಜಕೀಯ ಪಕ್ಷಗಳ ಅಗತ್ಯತೆಯ ಬಗ್ಗೆ ಪದೇ ಪದೇ ಒತ್ತಿ ಹೇಳಿದರು. ಬಿಕ್ಕಟ್ಟಿನ ಸಮಯದಲ್ಲಿ ಒಟ್ಟಿಗೆ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹೆಚ್ಚಿನ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳನ್ನು ಈ ಸಂದರ್ಭದಲ್ಲಿ ಬದಿಗಿಡಬೇಕು ಎಂದು ಪ್ರತಿಪಾದಿಸಿದರು. “ಮೋದಿಯವರು ನಿರ್ದಿಷ್ಟ ಕಾರ್ಯಶೈಲಿಯನ್ನು ಹೊಂದಿದ್ದಾರೆ, ಆದರೆ ನಾವು ಅದರ ಸುತ್ತಲೂ ಒಂದು ಮಾರ್ಗವನ್ನು ಕಂಡುಕೊಳ್ಳಬಹುದು” ಎಂದು ಅವರು ಹೇಳಿದರು.

ರಾಹುಲ್‌ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದ 16 ವರ್ಷಗಳಲ್ಲಿ, ಅವರು ಹೇಳುವ ಅಥವಾ ಮಾಡುವ ಯಾವುದೂ ಎಂದಿಗೂ ಬಿಜೆಪಿಯಿಂದ ಪ್ರಶಂಸೆಯನ್ನು ಅಥವಾ ಅನುಮೋದನೆಯನ್ನು ಪಡೆಯುವುದಿಲ್ಲ ಎಂದು ಅರಿತುಕೊಂಡಿರಬಹುದು. ಆದರೂ, ಕಾಂಗ್ರೆಸ್ ಮುಖಂಡರು ಬಿಜೆಪಿ ನೇತೃತ್ವದ ಸರ್ಕಾರಕ್ಕೆ “ರಚನಾತ್ಮಕ ಸಲಹೆಗಳನ್ನು” ನೀಡಲು ಸಿದ್ಧರಿದ್ದಾರೆ. ಅವರ ತಾಯಿ ಮತ್ತು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕೂಡ ಕಳೆದ ಒಂದು ತಿಂಗಳಿನಿಂದ ಹಲವಾರು ಬಾರಿ ಮೋದಿಗೆ ಸಲಹೆಗಳನ್ನು ನೀಡಿದ್ದರು.

ಭಾರತದ ಈಗಾಗಲೇ ಟ್ಯಾಂಕಿಂಗ್ ಎಕಾನಮಿಯನ್ನು ಮತ್ತು ಕೊರೊನಾ ಸೋಂಕಿನ ವಿರುದ್ಧದ ಹೋರಾಟವನ್ನು ಎದುರಿಸುತ್ತಿದೆ. ಆರೋಗ್ಯ ಮತ್ತು ಆರ್ಥಿಕತೆಯು ಕ್ರಿಯಾತ್ಮಕ ಕಾರ್ಯತಂತ್ರದ ಅಗತ್ಯವಿರುವ “ಎರಡು ಪಾರ್ಶ್ವಗಳು” ಎಂದು ಅವರು ಗುರುತಿಸಿದ್ದಾರೆ.

ಅದಕ್ಕಾಗಿಯೇ, ಆರೋಗ್ಯದ ದೃಷ್ಟಿಯಿಂದ ಪ್ರಸ್ತುತ ಲಾಕ್‌ಡೌನ್ “ಪರಿಹಾರವಲ್ಲ.” ಆದರೆ ವೈರಸ್ ವಿರುದ್ಧ “ವಿರಾಮ ಬಟನ್” ಎಂದು ಗಾಂಧಿ ಸ್ಪಷ್ಟಪಡಿಸಿದರು. ವೈರಸ್‌ ನಿಯಂತ್ರಣಕ್ಕೆ ಹೆಚ್ಚೆಚ್ಚು ಪರೀಕ್ಷೆಗಳನ್ನು ಮಾಡಬೇಕು. ರೋಗಲಕ್ಷಣವಿರುವ ರೋಗಿಗಳನ್ನು ಪರೀಕ್ಷಿಸುವ ಮೂಲಕ “ವೈರಸ್ ಅನ್ನು ಬೆನ್ನಟ್ಟುವ” ಪ್ರಸ್ತುತ ತಂತ್ರವನ್ನು ಬದಲಾಯಿಸುವಂತೆ ಸರ್ಕಾರವನ್ನು ಕೋರಿದರು. ಭಾರತದ ಪ್ರಸ್ತುತ ಪರೀಕ್ಷಾ ದರ “ಪ್ರತಿ ಮಿಲಿಯನ್‌ಗೆ 199 ಜನರು ಅಥವಾ ಪ್ರತಿ ಜಿಲ್ಲೆಗೆ 350 ಪರೀಕ್ಷೆಗಳು”, ಇದು ಯಾವುದೇ ರೀತಿಯಲ್ಲಿ ಸಾಕಾಗುವುದಿಲ್ಲ. ಅಲ್ಲದೆ, ಲಾಕ್‌ಡೌನ್ ತೆರವಾದ ನಂತರ ವೈರಸ್ ಸಮುದಾಯಕ್ಕೆ ಮತ್ತೆ ಹರಡುತ್ತದೆ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ತಡವಾಗಿದೆ, ಈಗಲಾದರೂ ಎಚ್ಚೆತ್ತುಕೊಂಡು ಹೆಚ್ಚು ಪರೀಕ್ಷೆಗಳನ್ನು ತ್ವರಿತಗತಿಯಲ್ಲಿ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟದ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಲಾಕ್‌ಡೌನ್ ಆರ್ಥಿಕತೆಯ ಮೇಲೆ ಮತ್ತು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಂಟುಮಾಡುವ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಏಕಕಾಲದಲ್ಲಿ “ಸೆಫ್ಟಿ ನೆಟ್‌” ಯೋಜನೆಯನ್ನು ಅಭಿವೃದ್ಧಿಪಡಿಬೇಕು. 1.75 ಲಕ್ಷ ಕೋಟಿ ರೂ. ಮೊತ್ತ ಸ್ಟಿಮುಲಸ್‌ (ಉದ್ದೀಪನ) ಪ್ಯಾಕೇಜ್‌ ಘೋಷಿಸಿ ಬಡವರಿಗೆ ಹೆಚ್ಚಿನ ಪ್ರಮಾಣದ “ನಗದು ವರ್ಗಾವಣೆ ಮತ್ತು ಕನಿಷ್ಠ ಹಣಕಾಸಿನ ನೆರವು” ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಡತನದ ಅಂಚಿನಲ್ಲಿರುವವರಿಗೆ ಉತ್ತಮ ಧಾನ್ಯಗಳ ವಿತರಣೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ “ರಕ್ಷಣಾತ್ಮಕ ಪ್ಯಾಕೇಜ್” ನೀಡಬೇಕು. ಇದು ಭಾರತದ ಬೃಹತ್ ಜನಸಂಖ್ಯೆಯ ವಲಸೆ ಕಾರ್ಮಿಕರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಬಲ್ಲದು. ಇದರಿಂದಾಗಿ ಉದ್ಯೋಗ ಹರಸಿ ನಗರಗಳಿಗೆ ವಲಸೆ ಬಂದಿದ್ದ ಕಾರ್ಮಿಕರು ತಮ್ಮ ಹಳ್ಳಿಗೆಳಿಗೆ ಮರಳುತ್ತಿರುವ ದೀರ್ಘ ಮತ್ತು ಪ್ರಾಯಶಃ ಮಾರಣಾಂತಿಕ ಕಾಲ್ನಡಿಗೆಯಿಂದ ಮುಕ್ತಿ ನೀಡಬಲ್ಲದು ಮತ್ತು ಜೀವನವನ್ನು ಸುಧಾರಿಸಲು ನೆರವಾಗಬಲ್ಲದು ಎಂದು ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ.

ಈಗಾಗಲೇ 21 ದಿನಗಳ ಲಾಕ್‌ಡೌನ್‌ನಿಂದಾಗಿ ಸಾಮಾನ್ಯ ನಾಗರಿಕರ ಮೇಲೆ ಉಂಟಾಗಿರುವ ಸವಾಲುಗಳು ಹಾಗೂ ಅವರ ಜೀವನ ಮತ್ತು ಜೀವನೋಪಾಯದ ಮೇಲೆ ಅದರ ಪ್ರಭಾವದ ಪ್ರಮಾಣವನ್ನು ಅರಿತುಕೊಳ್ಳುಲು ಸಾಧ್ಯವಾಗಿರುವುದರಿಂದ ಗಾಂಧಿಯವರ ಯಾವುದೇ ಸಲಹೆಗಳು ಸಮಂಜಸವಾಗಿದೆ. ಆದರೆ, ಕಾಂಗ್ರೆಸ್‌ ನಾಯಕನ ಎಂಬ ಕಾರಣಕ್ಕಾಗಿಯೂ ಅಥವಾ ಗಾಂಧಿ ಕುಟುಂಬದವರೆಂಬ ಕಾರಣಕ್ಕಾಗಿಯೂ ಅವರ ಸಲಹೆಗಳನ್ನು ನಿರಾಕರಿಸುವುದು ಕೇಂದ್ರದ ಮೂರ್ಖತನವಾಗುತ್ತದೆ.

ಆದಾಗ್ಯೂ, ಒತ್ತಿಹೇಳಬೇಕಾದ ಅಂಶವೆಂದರೆ ಛತ್ತೀಸ್‌ಘಡ, ಪಂಜಾಬ್, ರಾಜಸ್ಥಾನ, ಪುದುಚೇರಿ ಅಥವಾ ಮಧ್ಯಪ್ರದೇಶ (ಕಮಲ್ ನಾಥ್ ಸರ್ಕಾರವನ್ನು ಬಿಜೆಪಿ ಉರುಳಿಸುವ ಮೊದಲು) – ಕಾಂಗ್ರೆಸ್ ಆಡಳಿತದ ಕೆಲವೇ ರಾಜ್ಯಗಳಲ್ಲಿ ಯಾವುದೂ ರಾಹುಲ್‌ ಗಾಂಧಿಯವರು ಫೆಬ್ರವರಿ 12ರಂದು ನೀಡಿದ್ದ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ರಾಹುಲ್‌ ಗಾಂಧಿ ವೈರಸ್‌ ಬಗ್ಗೆ ಟ್ವೀಟಿಸಿದ್ದ ಸಂದರ್ಭದಲ್ಲಿ ಬಿಜೆಪಿ ಮಧ್ಯಪ್ರದೇಶದ ಸರ್ಕಾರವನ್ನು ಉರುಳಿಸುವ ಯತ್ನದಲ್ಲಿ ನಿರತವಾಗಿದ್ದರೆ, ಪ್ರಧಾನಿ ಮೋದಿಯವರು ನಮಸ್ಥೆ ಟ್ರಂಪ್‌ ಕಾರ್ಯಕ್ರಮದ ತಯಾರಿಯಲ್ಲಿ ಬಿಸಿಯಾಗಿದ್ದರು.

ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರ ಕೊರೊನಾ ವೈರಸ್‌ ಬಗ್ಗೆ ಗಂಭೀರವಾಗಿದ್ದಿರಲಿಲ್ಲ. ದೇಶದಲ್ಲಿಯೇ ಕೊರೊನಾ ವೈರಸ್‌ ಸೋಂಕಿಗೆ  ಬಲಿಯಾದ ಮೊದಲ ಸಾವು ಸಂಭವಿಸಿದ್ದರೂ ಕರ್ನಾಟಕದಲ್ಲಿಯೇ. ಮಾರ್ಚ್‌ 11 ರಂದು ಸಾವು ಸಂಭವಿಸಿದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ. ಯಾವುದೇ ಗಂಭೀರ ಕ್ರಮಗಳನ್ನು ಕೈಗೊಳ್ಳದೆ, ಕೇವಲ ವಿದೇಶದಿಂದ ಬರುವವರನ್ನು ಏರ್‌ಪೋಟ್‌ಗಳಲ್ಲಿ ಪರೀಕ್ಷಿಸುವುದರಲ್ಲಷ್ಟೇ ನಿರತವಾಗಿತ್ತು. ಈ ಸಾವು ಸಂಭವಿಸಿದ 10 ದಿನಗಳ ಕಾಲಹರಣ ಮಾಡಿದ ಸರ್ಕಾರ ಮಾರ್ಚ್‌ 21ರಂದು ಮಾಲ್‌ಗಳು ಹಾಗೂ ಸಮಾರಂಭಗಳಿಗೆ ತಡೆ ನೀಡಿತ್ತು. ಅದಾದ ಮೂರುದಿನಗಳ ಬಳಿಕ ಯಾವ ಸುಳಿವೂ ಇಲ್ಲದೆ ದೇಶಾದ್ಯಂತ ಲಾಕ್‌ಡೌನ್‌ ವಿಧಿಸಲಾಯಿತು.

ಆದರೆ, ರಾಜ್ಯದ ನಾನಾ ಭಾಗಗಳಿಂದ ಕೂಲಿ ಕೆಲಸಕ್ಕಾಗಿ ದೊಡ್ಡ ನಗರಗಳಿಗೆ, ಅದರಲ್ಲೂ ಕರ್ನಾಟಕದಲ್ಲಿ ಬೆಂಗಳೂರಿಗೆ ಗುಳೆ ಬಂದು, ಸಣ್ಣ ಗುಡಿಸಲುಗಳಲ್ಲಿ, ರಸ್ತೆ ಬದಿ, ಬಸ್‌ ನಿಲ್ದಾಣಗಳಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದ ಈ ವಲಸೆ ಕಾರ್ಮಿಕರು ತಮ್ಮೂರಿಗೂ ಹೋಗಲಾರದೆ, ತಾವು ಕೂಲಿ ಮಾಡುತ್ತಿದ್ದ ಪ್ರದೇಶದಲ್ಲಿ ಇರಲು ಅಸತಿಯೂ ಇಲ್ಲದೆ, ಅಕ್ಷರ ಸಹ ಬೀದಿ ಪಾಲಾಗಿದ್ದರು. ಇಂತಹ ಜನರ ಮೇಲೆ ಲಾಕ್‌ಡೌನ್‌ ವಿಧಿಸಿದ ಆರಂಭದಲ್ಲಿ ಕೆಲವೆಡೆ ಲಾಠಿ ಪ್ರಹಾರವೂ ನಡೆದಿತ್ತು. ತಿನ್ನಲು ಆಹಾರವಿಲ್ಲದವರಿಗೆ, ಲಾಠಿ ಏಟಿನ ರುಚಿ ಬಯಸದೆಯೂ ದಯಾಪಾಲಿಸಿತ್ತು.

ಜೀವ, ಜೀವನ ಉಳಿಸಿಕೊಳ್ಳಲು ಜನರು ನಡೆದೆ ತಮ್ಮೂರಿನೆಡೆಗೆ ಹೆಜ್ಜೆ ಹಾಕಿದ್ದಾರೆ. ಎರಡನೇ ಹಂತದ ಲಾಕ್‌ಡೌನ್‌ ಘೋಷಿಸಿದರೂ ಸಹ ಇವರ ನಡಿಗೆ ಇನ್ನೂ ನಿಂತಿಲ್ಲ. ತಮ್ಮೂರನ್ನು ಇನ್ನೂ ಸೇರಲಾಗಿಲ್ಲ. ಈ ಮಧ್ಯೆ ಬಿಸಿಲಿನಲ್ಲಿ ನಡೆಯಲಾರದೆ ನಡುರಸ್ತೆಯಲ್ಲೇ ಜೀವ ಕಳೆದುಕೊಂಡರ ಸಂಖ್ಯೆಯೂ ಕಡಿಮೆಯಲ್ಲ. ಆ ಸಂಖ್ಯೆಯೂ 20ರ ಗಡಿದಾಟಿದೆ.

ಇನ್ನು ಅಲ್ಪ-ಸ್ವಲ್ಪ ಹಣ ಕೂಡಿಟ್ಟು ಸ್ವ-ಉದ್ಯೋಗ ಆರಂಭಿಸಿದ್ದರ ಕತೆಯೂ ಅಂತದ್ದೇ ಅಂಗಡಿ, ಚಿಲ್ಲರೆ ವ್ಯಾಪಾರ ಮಾಡುತ್ತಿದ್ದವ ಕೈ ನಿಂತು ಹೋಗಿದೆ. ಈಗಾಗಲೇ ದುಡಿಮೆ ಇಲ್ಲದೆ 25 ದಿನಗಳನ್ನು ದೂಡಿರುವ ಜನರ ಕೈ ಖಾಲಿಯಾಗಿದೆ. ಇನ್ನೂ 16 ದಿನಗಳ ಲಾಕ್‌ಡೌನ್‌ ಬಾಕಿ ಇದೆ. ಈ ಲಾಕ್‌ಡೌನ್‌ ಇನ್ನೂ ಮುಂದುವರಿಯಬಹುದಾದ ಸೂಚನೆಗಳೇ ಹೆಚ್ಚಾಗಿವೆ. ಹೀಗಿರುವಾಗ ಬಡವರು, ಹಿಂದುಳಿದವರ ಜೀವನ ಚಿಂತಾಜನಕವಾಗಿದೆ.

ಕರ್ನಾಟಕದ ಕೆಲವು ಭಾಗಗಳಲ್ಲಿ ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ಒಮ್ಮೆ ಮಾತ್ರ ಮನೆ ಬಾಗಿಲಿಗೆ ಸರ್ಕಾರವೋ, ಅಥವಾ ನೆರವು ನೀಡಲು ಬಂದವರೋ ಒಂದಷ್ಟು ಆಹಾರ ಧಾನ್ಯಗಳನ್ನು ಕೊಟ್ಟು ಸಹಾಯ ಮಾಡಿದ್ದರು. ಒಮ್ಮೆ ಕೊಟ್ಟು ಹೋದವರು ಮತ್ತೆ ತಿರುಗಿ ನೋಡಿಲ್ಲ. ಜನರ ದಿನನಿತ್ಯದ ಬೇಡಿಕೆಗಳನ್ನು ಪೂರೈಸುವ ಮಾತನಾಡುತ್ತಿರುವ ಸರ್ಕಾರದ ಯಾವ ಯೋಜನೆಗಳೂ ಜನರನ್ನು ತಲುಪಿಲ್ಲ. ಹಳ್ಳಿಗಳಲ್ಲಿ ಪಡಿತರ ಚೀಟಿಯ ಅಕ್ಕಿ-ಗೋಧಿ ಬಿಟ್ಟರೆ ಮತ್ತಾವುದೂ ಹಳ್ಳಿಜನರಿಗೆ ಸಿಗುತ್ತಿಲ್ಲ. ಆದಾಯವೇ ಇಲ್ಲದೆ ಕುಳಿತಿರುವ ಹಳ್ಳಿಗಳ ಜನರು ತರಕಾರಿಗಳನ್ನೂ ಕೊಳ್ಳಲು ಹಣವಿಲ್ಲದೆ ಪರಿತಪಿಸುತ್ತಿದ್ದಾರೆ. ಇದಾವುದರ ಅರಿವೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕಾಗಲೀ ಇದ್ದಂತಿಲ್ಲ.

ಇಂತಹ ಸಂದರ್ಭದಲ್ಲಿ ರಾಹುಲ್‌ಗಾಂಧಿ ನೀಡಿರುವ ಸಲಹೆಗಳ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸು ಹಾದಿಯಲ್ಲಿದೆ. ಆದರೆ, ಕೇಂದ್ರ ಸರ್ಕಾರ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಸೋಜಿಕ್ಕೇ ಹೋಗಿಲ್ಲ.

 

– ಸೋಮಶೇಖರ್ ಚಲ್ಯ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights