ರಾಹುಲ್ ಭೇಟಿ ಮಾಡಿದ ಸಚಿನ್ ಪೈಲಟ್; ಕಾಂಗ್ರೆಸ್‌ ಸರ್ಕಾರಕ್ಕಿಲ್ಲ ಪತನ?

ಕಳೆದೊಂದು ತಿಂಗಳಿನಿಂದ ರಾಜಕೀಯ ಅಸ್ಥಿರತೆ ಉಂಟಾಗಿದ್ದ ರಾಜಸ್ಥಾನದಲ್ಲಿ ವಿಧಾನಸಭೆ ಅಧಿವೇಶನಕ್ಕೆ ಕೇವಲ 4 ದಿನಗಳು ಬಾಕಿ ಉಳಿದಿರುವಂತೆ ಮತ್ತು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ರಾಜಸ್ಥಾನ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ರಾಹುಲ್ ಗಾಂಧಿಯನ್ನು ಭೇಟಿಯಾಗಬೇಕೆಂದು ಆಗ್ರಹಿಸಿದ್ದ ಸಚಿನ್ ಪೈಲಟ್ ಇಬ್ಬರು ಹಿರಿಯ ಕಾಂಗ್ರೆಸ್ ಮುಖಂಡರ ಬಳಿ ಬೇಡಿಕೆಯಿಟ್ಟಿದ್ದರು. ಇಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಗ ಗಾಂಧಿ ಸಚಿನ್ ಪೈಲಟ್‌ರನ್ನು ಭೇಟಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರರಾದ ಅಹ್ಮದ್ ಪಟೇಲ್ ಮತ್ತು ಕೆ.ಸಿ ವೇಣುಗೋಪಾಲ್ ಖಚಿತಪಡಿಸಿದ್ದಾರೆ.

ಮೂಲಗಳ ಪ್ರಕಾರ ಸಚಿನ್ ಪೈಲಟ್ ತಾವು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗುವ ಮತ್ತು ತಮ್ಮ, ತಮ್ಮ ಬೆಂಬಲಿಗ ಶಾಸಕರ ಸ್ಥಾನಮಾನದ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಾಲಿಗೆ ಸಕರಾತ್ಮಕ ಅಂಶಗಳು ಹೊರಬೀಳಲಿವೆ ಎಂದು ಹಿರಿಯ ಮುಖಂಡರು ತಿಳಿಸಿದ್ದಾರೆ.

ಇದೇ 14 ರಿಂದ ರಾಜಸ್ಥಾನ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಕಾಂಗ್ರೆಸ್ ತಾನು ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯೆಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಇನ್ನು ಬಿಜೆಪಿ ತನ್ನ ಶಾಸಕರನ್ನು ಗುಜರಾತ್‌ನ ರೆಸಾರ್ಟ್‌ಗೆ ಕಳಿಸಿದೆ. ಒಟ್ಟಾರೆಯಾಗಿ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆ ಮಾತನಾಡಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ಸಮಾಧಾನ ತಂದಿದೆ ಎಂದು ಹೇಳಲಾಗುತ್ತಿದೆ.

ಸಚಿನ್ ಪೈಲಟ್ ರಾಹುಲ್ ಗಾಂಧಿ
ಸಚಿನ್ ಪೈಲಟ್ ಮತ್ತು ರಾಹುಲ್ ಗಾಂಧಿ

ಆದರೆ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹಲವು ಶಾಸಕರು ಪಕ್ಷಕ್ಕೆ ದ್ರೋಹವೆಸಗಿದ ಬಂಡಾಯವೆದ್ದವರನ್ನು ಮರಳಿ ಪಕ್ಷಕ್ಕೆ ಕರೆತರಬಾರದು ಎಂದು ಆಗ್ರಹಿಸಿದ್ದಾರೆ. ಅದೇ ಸಮಯದಲ್ಲಿ ಗೆಹ್ಲೋಟ್‌ ಮೇಲೆ ಕ್ರಮ ಆಗದ ಹೊರತು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಪೈಲಟ್ ಬಣ ಹೇಳಿಕೊಂಡಿದೆ.

ಕೋರ್ಟ್ ತೀರ್ಮಾನದ ಮೇಲೆ ಕಾಂಗ್ರೆಸ್‌ ಸರ್ಕಾರದ ಅಳಿವು/ಉಳಿವು:

ರಾಜಸ್ಥಾನದಲ್ಲಿ 2019 ರ ಸೆಪ್ಟೆಂಬರ್‌ನಲ್ಲಿ ಬಹುಜನ ಸಮಾಜ ಪಕ್ಷದ ಆರು ಮಂದಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮುಖ್ಯಮಂತ್ರಿ ಗೆಹ್ಲೋಟ್ ಸರ್ಕಾರಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಆಗಸ್ಟ್ 11ರಂದು ನಡೆಯಲಿದೆ.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ ವಿಧಾನಸಭಾಧ್ಯಕ್ಷ ಸಿ. ಪಿ. ಜೋಶಿ ಕ್ರಮ ಸರಿಯಾಗಿಲ್ಲ. ಇದಕ್ಕೆ ತಡೆಯಾಜ್ಞೆ ನೀಡಬೇಕೆಂದು ಬಿಜೆಪಿ ಶಾಸಕ ಮದನ್ ದಿಲಾವರ್ ಮತ್ತು ಬಿಎಸ್‌‌‌‌‌ಪಿ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಮಿಶ್ರ ಅವರು ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದರು.

ಅರ್ಜಿದಾರರ ಅರ್ಜಿಯನ್ನು ಸ್ವೀಕರಿಸಿದ ಏಕಸದಸ್ಯ ಪೀಠದ ನ್ಯಾ. ಮಹೇಂದ್ರ ಕುಮಾರ್ ಗೋಯಲ್ ತಡೆಯಾಜ್ಞೆ ನೀಡಲು ನಿರಾಕರಿಸಿದ್ದರು. ಆದರೆ ಸ್ಪೀಕರ್, ವಿಧಾನಸಭಾ ಕಾರ್ಯದರ್ಶಿ ಮತ್ತು ಬಿಎಸ್ಪಿ ಶಾಸಕರಿಗೆ ನೋಟಿಸ್ ನೀಡಿದ್ದರು.

ಏಕಸದಸ್ಯ ಪೀಠದ ತೀರ್ಮಾನ ತೃಪ್ತಿ ತಾರದ ಹಿನ್ನೆಲೆಯಲ್ಲಿ ಅರ್ಜಿದಾರರು ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದರು. ಮುಖ್ಯನ್ಯಾಯಮೂರ್ತಿ ಇಂದ್ರಜಿತ್ ಮಹಂತಿ, ನ್ಯಾ. ಪ್ರಕಾಶ್ ಗುಪ್ತ ಅವರಿದ್ದ ಪೀಠ ಮೇಲ್ಮನವಿ ತಿರಸ್ಕರಿಸಿದರು. ಆದರೆ ಜೈಸಲ್‌ಮರ್ ಜಿಲ್ಲಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿ ಪತ್ರಿಕೆಗಳಿಗೆ ನೋಟಿಸ್ ನೀಡುವಂತೆ ತಿಳಿಸಿತು.

ಕಾಂಗ್ರೆಸ್ ಸೇರ್ಪಡೆಯಾಗಿರುವ ಬಿಎಸ್‌ಪಿ ಆರು ಮಂದಿ ಶಾಸಕರು ಅನರ್ಹತೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ವರ್ಗಾಯಿಸಬೇಕೆಂದು ಮನವಿ ಮಾಡಿದ್ದಾರೆ.

ಇದರ ನಡುವೆಯೇ ರಾಜಸ್ಥಾನ ಹೈಕೋರ್ಟ್ ನಲ್ಲಿ ಆಗಸ್ಟ್ 11ರಂದು ಸ್ಪೀಕರ್ ತೀರ್ಮಾನದ ವಿರುದ್ದ  ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಯಲಿದೆ.

ರಾಜಸ್ಥಾನದ ಗೆಹ್ಲೋಟ್ ನೇತೃತ್ವದ ಸರ್ಕಾರ ಆಗಸ್ಟ್ 14ರಂದು ಬಹುಮತ/ವಿಶ್ವಾಸ ಮತ ಯಾಚಿಸುವ ಸಾಧ್ಯತೆ ಇದೆ. 200 ಶಾಸಕರನ್ನೊಳಗೊಂಡ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದೆ. ಇದರಲ್ಲಿ ಆರು ಮಂದಿ ಬಿಎಸ್‌ಪಿ ಶಾಸಕರು ಸೇರಿದ್ದಾರೆ. 10 ಮಂದಿ ಪಕ್ಷೇತರ ಶಾಸಕರು ಒಳಗೊಂಡಿದ್ದಾರೆ.

ಕಳೆದ ತಿಂಗಳು ಸಚಿನ್ ಪೈಲಟ್ ಸೇರಿದಂತೆ 19 ಮಂದಿ ಶಾಸಕರು ಗೆಹ್ಲೋಟ್ ನಾಯಕತ್ವದ ವಿರುದ್ದ ಬಂಡಾಯವೆದ್ದಿದ್ದು ರಾಜಸ್ಥಾನ ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡಿದ್ದಾರೆ.

ಹೀಗಾಗಿ 194ಕ್ಕೆ ಶಾಸಕರಲ್ಲಿ ಬಹುಮತಕ್ಕೆ 98 ಶಾಸಕರ ಬಲ ಬೇಕು. ಬಿಎಸ್ ಪಿ ಶಾಸಕರು ಸೇರಿ ಕಾಂಗ್ರೆಸ್ ಬಲ 98 ಇದೆ. ಒಂದೊಮ್ಮೆ ಸ್ಪೀಕರ್ ತೀರ್ಮಾನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೆ ಗೆಹ್ಲೋಟ್ ಬೆಂಬಲ 92ಕ್ಕೆ ಕುಸಿಯಲಿದೆ. ಸಿಪಿಎಂ, ಬಿಟಿಪಿ ಸೇರಿದತೆ ಕಾಂಗ್ರೆಸ್ ಬಲ 95 ಆಗುತ್ತದೆ. ಸ್ಫೀಕರ್ ಸೇರಿದರೆ 96 ಆಗುತ್ತದೆ.

ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ 72 ಶಾಸಕರನ್ನು ಹೊಂದಿದೆ. ಪೈಲಟ್ ಬೆಂಬಲಿಗ ಶಾಸಕರು ಸೇರಿದರೆ 97 ಶಾಸಕರ ಬಲ ಬಂದಂತೆ ಆಗುತ್ತದೆ. ಆಗ ಬಿಜೆಪಿ ಕೇವಲ ಒಂದು ಸ್ಥಾನದ ಕೊರತೆ ಬೀಳುತ್ತದೆ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪಿನ ಮೇಲೆ ಗೆಹ್ಲೋಟ್ ಸರ್ಕಾರ ಏಳುಬೀಳು ನಿಂತಿದೆ.


ಇದನ್ನೂ ಓದಿ: ರಾಜಸ್ಥಾನದಲ್ಲಿ ಬಿಜೆಪಿಗೆ ಬಿಕ್ಕಟ್ಟು; ಬಿಜೆಪಿ ಶಾಸಕರು ಗುಜರಾತ್‌ ರೆಸಾರ್ಟ್‌ಗೆ ಶಿಫ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights