ಲಕ್ಷ್ಮಣ ಸವದಿಯಿಂದ ಅನರ್ಹ ಶಾಸಕರಿಗೆ ಆಕ್ಷೇಪಾರ್ಹ ಹೇಳಿಕೆ : ಕಣ್ಣೀರಿಟ್ಟ ಮಹೇಶ್ ಕುಮಟಳ್ಳಿ
ಅವರು ಬೇರೆ ಶಬ್ದಗಳನ್ನು ಬಳಸಬಹುದಿತ್ತು. ನನಗೆ ಏನಾದ್ರು ಹೇಳಿದ್ರೆ ನಾನು ಸಹಿಸಿಕೊಳ್ಳುತ್ತಿದ್ದೆ. ಆದರೆ ಅವರು ನನ್ನ ತಾಯಿ ಬಗ್ಗೆ ಮಾತನಾಡಿದ್ರು. ಆ ದೇವರು ಅವರಿಗೆ ಒಳ್ಳೆದು ಮಾಡಲಿ. ನನಗೆ ವಿಷ ಕೊಟ್ಟರೂ ಅಮೃತವಾಗಲಿ ಎಂದು ಗೊಳೋ ಅಂತ ಅತ್ತಿದ್ದು ಬೇರೆ ಯಾರು ಅಲ್ಲ ಅಥಣಿ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ.
ಹೌದು…. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರಣರಾದ ಅನರ್ಹ ಶಾಸಕರ ಬಗ್ಗೆ ಬಿಜೆಪಿ ನಾಯಕರು ತುಸು ಹೆಚ್ಚಿನ ಸಾಫ್ಟ್ ಕಾರ್ನರ್ ಹೊಂದಿದ್ದರೆ, ಡಿಸಿಎಂ ಲಕ್ಷ್ಮಣ ಸವದಿ ಮಾತ್ರ ಆ ಶಾಸಕರ ವಿರುದ್ಧ ನಾಲಗೆ ಹರಿ ಬಿಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡುವ ಭರಾಟೆಯಲ್ಲಿ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ.
ಮೊಬೈಲ್ ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಾ, ಕುಮಟಳ್ಳಿ ಅವರ ಬಗ್ಗೆ ಆ ದರಿದ್ರ ಮಕ್ಕಳ ಬಗ್ಗೆ ಮಾತನಾಡಬೇಡ. ಅವರ ಹೆಸರನ್ನೂ ನೆನಪಿಸಬೇಡಿ. ಅವನ ಸುದ್ದಿ ಕಟ್ಕೊಂಡು ನನಗೇನಾಗಬೇಕಿದೆ ಎಂದೆಲ್ಲಾ ಮಾತನಾಡಿದ್ದಾರೆ.
ಈ ಆಕ್ಷೇಪಾರ್ಹ ನುಡಿಮುತ್ತುಗಳ ಝಲಕ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದುಕೊಂಡು ಸವದಿ ಅವರ ಬಾಯಲ್ಲಿ ಇಂತಹ ಮಾತುಗಳು ಬರಬಾರದಿತ್ತು ಎಂದು ಹೇಳಿದ್ದಾರೆ.

