ಲೈಂಗಿಕ ಕಾರ್ಯಕರ್ತರಿಂದ ಭಾರತದಲ್ಲಿ ಕೊರೊನಾ ಹೆಚ್ಚಾಗುತ್ತಿದೆಯಾ?

ಭಾರತದಲ್ಲಿ ಕೊರೊನಾ ವೈರಸ್‌ ದಿನಕಳೆಂದಂತೆ ಸಮರೋಪಾದಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಲಾಕ್‌ಡೌನ್ ಸಡಿಲಿಕೆಯಾದ ನಂತರದಲ್ಲಂತೂ ದಿನಕ್ಕೆ ಸರಾಸರಿ 3,000 ಹೊರ ಪ್ರಕರಣಗಳು ದಾಖಲಾಗುತ್ತಲೇ ಇವೆ. ಮೇ 16ರಂದು ಕೂಡ 3,740 ಪ್ರಕರಣಗಳು ದಾಖಲಾಗಿವೆ. ಹಾಗಿದ್ದರೆ, ದೇಶದಲ್ಲಿ ಕೊರೊನಾ ಸೋಂಕಿತರು ಸಂಖ್ಯೆ ಹೆಚ್ಚಾಗಲು ರೆಡ್‌ಲೈಟ್‌ ಏರಿಯಾಗಳು ಕಾರಣವಾ? ಲೈಂಗಿಕ ಕಾರ್ಯಕರ್ತರಿಂದ ಕೊರೊನಾ ಸೋಂಕು ಹರಡುತ್ತಿದೆಯಾ? ಎಂಬ ಹೊಸ ಚರ್ಚೆ ಹುಟ್ಟಿಕೊಂಡಿದೆ.

ದೇಶಾದ್ಯಂತ ಮಾರ್ಚ 24 ರಂದು ಲಾಕ್‌ಡೌನ್ ವಿಧಿಸಿದ ನಂತರ ಹೆಚ್ಚು ಸಂಕಷ್ಟಕ್ಕೆ ತುತ್ತಾದವರು ವಲಸೆ ಕಾರ್ಮಿಕರು. ಅವರನ್ನು ಬಿಟ್ಟರೆ ನಂತರದ ಸ್ಥಾನ ಲೈಂಗಿಕ ಕಾರ್ಯಕರ್ತರದ್ದು. ಹೊಟ್ಟೆ ಪಾಡಿಗಾಗಿ ವೇಷ್ಯಾವಾಟಿಕೆ ವೃತ್ತಿ ಹಿಡಿದವರು ಲಾಕ್‌ಡೌನ್‌ನಿಂದಾಗಿ ಅವರ ಕೆಲಸಕ್ಕೂ ಬ್ರೇಕ್‌ ಬಿದ್ದತ್ತು. ಇದರಿಂದಾಗಿ ಕೆಲಸವಿಲ್ಲದೆ, ತಮ್ಮೂರು ತಲುಪುವ ಹಾದಿಯನ್ನು ಅವರೂ ಹಿಡಿದ್ದರು. ಮತ್ತೂ ಕೆಲವರು ಎಲ್ಲಿಯಾದರೂ ತಮ್ಮ ಕೆಲಸ ಸಿಗಬಹುದೆಂದು ಕಾದಿದ್ದರು.

ಲಾಕ್‌ಡೌನ್‌ನಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಲೈಂಗಿಕ ಕಾರ್ಯಕರ್ತರು ಹಾಗೂ ವೇಷ್ಯಾವಾಟಿಕೆ ಸ್ಥಳ ಮೇಲೆ ಅಮೆರಿಕಾದ ಸಂಶೋಧನಾ ತಂಡ ಅಧ್ಯಯನ ನಡೆಸಿದೆ. ಭಾತರ ಸರ್ಕಾರವು ವೇಷ್ಯವಾಟಿಕೆ ನಡೆಯುವ ಪ್ರದೇಶಗಳನ್ನು ಸಂಪೂರ್ಣವಾಗಿ ಮುಚ್ಚಿದರೆ ಸಾಕು, ಶೇ.72ರಷ್ಟು ಕೊರೋನಾ ಸೋಂಕು ಪ್ರಕರಣಗಳನ್ನು ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಯಾಲೆ ವೈದ್ಯಕೀಯ ಕಾಲೇಜಿನ ಸಂಶೋಧಕರನ್ನು ಒಳಗೊಂಡ ತಂಡ ಅಧ್ಯಯನ ನಡೆಸಿದೆ.”ಭಾರತದಲ್ಲಿ ‘ರೆಡ್ ಲೈಟ್ ಏರಿಯಾ ಅಥವಾ ಲೈಂಗಿಕ ಕಾರ್ಯಕರ್ತರ ಪ್ರದೇಶದ ಮೇಲಿನ ಚಟುವಟಿಕೆಗಳ ಮೇಲೆ ನಿಯಂತ್ರಣ ವಿಧಿಸಿದಷ್ಟೂ ಸೋಂಕು ಹರಡುವ  ಭೀತಿ ದೂರವಾಗಲಿದೆ. ದೇಶದಲ್ಲಿ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟುವುದು ಕೂಡ ಸದ್ಯದ ಲೆಕ್ಕಾಚಾರಕ್ಕಿಂತ 17 ದಿನಗಳಷ್ಟು ವಿಳಂಬವಾಗಲಿದೆ” ಎಂದು ಯಾಲೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಜೆಫೆರಿ ಟೌನ್ಸೆಂಡ್ ಅವರು ಹೇಳಿದ್ದಾರೆ.

ಜಪಾನ್‌ನಲ್ಲಿ ಇಂತಹ ಪ್ರದೇಶದ ಚಟುವಟಿಕೆಗಳ ಮೇಲೆ ನಿಯಂತ್ರಣ ವಿಧಿಸಲಿಲ್ಲ. ಹೀಗಾಗಿ ಅಂತಹ ಪ್ರದೇಶಗಳಿರುವ ನಗರಗಳಲ್ಲಿ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದ್ದವು. ಇದೇ ಕಾರಣಕ್ಕಾಗಿ ಆಸ್ಟ್ರೇಲಿಯಾದಲ್ಲಿ ವೇಶ್ಯಾಗೃಹಗಳನ್ನು ಅನಿರ್ದಿಷ್ಟಾವಧಿಗೆ ಬಂದ್‌ ಮಾಡಿ ಆದೇಶ  ಹೊರಡಿಸಲಾಗಿದೆ. ಜರ್ಮನಿ, ನೆದರ್ಲೆಂಡ್ಸ್‌ನಲ್ಲೂ ವೇಶ್ಯಾಗೃಹಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಸರ್ಕಾರಗಳು ಹೇಳಿವೆ ಎನ್ನಲಾಗಿದೆ.

ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ (ನ್ಯಾಕೊ) ದಾಖಲೆಗಳ ಪ್ರಕಾರ, ಭಾರತದಲ್ಲಿ 6,37,500 ಲೈಂಗಿಕ ಕಾರ್ಯಕರ್ತರಿದ್ದು, ಪ್ರತಿದಿನ ಐದು ಲಕ್ಷ ಗ್ರಾಹಕರು ವೇಶ್ಯಾ ಗೃಹಗಳಿಗೆ ಭೇಟಿ ನೀಡುತ್ತಾರೆ. ಒಂದುವೇಳೆ ಈ ಪ್ರದೇಶದ ಚಟುವಟಿಕೆಗಳ ಪುನರಾರಂಭಕ್ಕೆ ಅವಕಾಶ ನೀಡಿದರೆ  ಸೋಂಕು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಾಗಿದೆ. ಲೈಂಗಿಕ ಕ್ರಿಯೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿರುವ ಕಾರಣ ಸೋಂಕು ಕ್ಷಿಪ್ರವಾಗಿ ಹರಡಲಿದೆ. ಅದರಿಂದ ಸಮುದಾಯಕ್ಕೂ ಕ್ಷಿಪ್ರವಾಗಿ ಹರಡುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಲಾಕ್‌ಡೌನ್‌ ತೆರವುಗೊಳಿಸಿದ ನಂತರದ ಅವಧಿಯಲ್ಲೂ ಇಂತಹ ಲೈಂಗಿಕ ಚಟುವಟಿಕೆ ತಾಣಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದರೆ ಕೊರೋನಾ ವೈರಸ್ ಭವಿಷ್ಯದ ಸಾವಿನ ಪ್ರಮಾಣವು ಶೇ 63ರಷ್ಟು ತಗ್ಗಲಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಈ ವರದಿಯನ್ನು ಭಾರತ  ಸರ್ಕಾರ ಮಾತ್ರವಲ್ಲದೆ ಸಂಬಂಧಿತ ರಾಜ್ಯ ಸರ್ಕಾರಗಳ ಜತೆಗೂ ಹಂಚಿಕೊಳ್ಳಲಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕವೂ ‘ಕೆಂಪು ದೀಪ’ ಪ್ರದೇಶದ ಮೇಲಿನ ನಿರ್ಬಂಧವನ್ನು ಮುಂದುವರಿಸಲು ಶಿಫಾರಸು ಮಾಡಲಾಗಿದೆ. ದೇಶದಲ್ಲಿ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟುವುದು  ವಿಳಂಬವಾದಷ್ಟೂ ಸರ್ಕಾರಕ್ಕೆ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಲು ಹಾಗೂ ಯೋಜಿತ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಕಾಲಾವಕಾಶ ಸಿಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆದರೆ, ಇದೂವರೆಗೂ ದೇಶದಲ್ಲಿ ಹೆಚ್ಚಾಗಿರುವ ಹಾಗೂ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಹರಡುವಿಕೆಗೆ ಲೈಂಗಿಕ ಕಾರ್ಯಕರ್ತರು ಕಾರಣರಲ್ಲ ಎಂಬುದು ಸತ್ಯದ ಸಂಗತಿ. ಸದ್ಯ ವೇಶ್ಯಾವಾಟಿಕೆ ಚಟುವಟಿಕೆಗಳೂ ಕೂಡ ನಿಂತಿವೆ.

ಲಾಕ್‌ಡೌನ್‌ ತೆರವುಗೊಳಿಸಿದ ನಂತರದಲ್ಲಿ ರೆಡ್‌ಲೈಟ್‌ ಏರಿಯಾಗಳಲ್ಲಿನ ಚಟುವಟಿಕೆಗಳೂ ಆರಮಭವಾಗಬಹುದು. ಆ ಸಂದರ್ಭದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಯೂ ಇದೆ. ಆ ಕಾರಣಕ್ಕಾಗಿ ಲೈಂಗಿಕ ಕಾರ್ಯಕರ್ತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಅದಕ್ಕೂ ಮುಂಚೆ ಸರ್ಕಾರ ಲೈಂಗಿಕ ಚಟುವಟಿಕೆಯನ್ನೇ ತಮ್ಮ ಜೀವನ ವೃತ್ತಿಯನ್ನಾಗಿಸಿಕೊಂಡಿರುವ ಲೈಂಗಿಕ ಕಾರ್ಯಕರ್ತರ ಜೀವನವನ್ನು ಮುನ್ನಡೆಸಲು ಬೇಕಿರುವ ಸೌಲಭ್ಯಗಳನ್ನು ಪೂರೈಸಬೇಕು. ಇಲ್ಲವಾದರೆ, ಈಗಾಗಲೇ ನಾನಾ ರೀತಿಯ ಸಂಕಷ್ಟಗಳಿಂದ ವೇಶ್ಯಾವಟಿಕೆ ವೃತ್ತಿಹಿಡಿದಿರುವವರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬುದು ಸರ್ಕಾರ ಎಚ್ಚರಿಕೆ ವಹಿಸಬೇಕಾದ ಸಂಗತಿ. ಈ ಬಗ್ಗೆ ಸಂಶೋಧನಾ ತಂಡವು ಶಿಫಾರಸ್ಸು ಮಾಡದೇ ಇರುವುದು ಸೋಜಿಗ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights