ವಿಶೇಷ ಬಜೆಟ್ ಅಧಿವೇಶನ ಕರೆಯುವಂತೆ ಡಿಕೆ ಶಿವಕುಮಾರ್ ಒತ್ತಾಯ

‘ಕೋವಿಡ್ 19 ಮತ್ತು ಲಾಕ್ ಡೌನ್ ನಿಂದಾಗಿ ಆಗಿರುವ ಸಮಸ್ಯೆ, ಅದಕ್ಕೆ ಪರಿಹಾರ ಸಂಬಂಧ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು. ಬಜೆಟ್ ಮರುಪರಿಶೀಲನೆ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಬುಧವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಮುಖ್ಯ ಮಂತ್ರಿಗಳು ವಿಶೇಷ ಅಧಿವೇಶನ ಕರೆದು, ಕೊರೊನಾ ಸಂಷ್ಟ ಸ್ಥಿತಿ ಹಿನ್ನೆಲೆಯಲ್ಲಿ ಬಜೆಟ್ ಮಾರ್ಪಾಡು ಮಾಡಬೇಕು ಎಂದು ಹೇಳಿದರು.

ಲೋಕೋಪಯೋಗಿ, ನೀರಾವರಿ, ರಸ್ತೆಯಂತಹ ಅಭಿವೃದ್ಧಿ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ರೈತರು, ಲಾರಿ ಚಾಲಕರು, ಬೀದಿ ವ್ಯಾಪಾರಿಗಳು, ಗಾಣಿಗರು, ಮೀನುಗಾರರು, ಹೋಟೇಲ್ ಸಿಬ್ಬಂದಿ, ಕುಂಬಾರರು ಸೇರಿದಂತೆ ಅಂಸಂಘಟಿತ ವಲಯದಲ್ಲಿ ಯಾರಿಗೆಲ್ಲಾ ಈಗ ನಷ್ಟವಾಗಿದೆಯೋ ಅವರನ್ನು ಗುರುತಿಸಿ, ಅವರಿಗೆ ಕನಿಷ್ಟ 10 ಸಾವಿರ ಕೊಡಬೇಕಾದರೆ, ಬಜೆಟ್ ಗೆ ಹೊಸ ರೂಪ ನೀಡುವು ಅನಿವಾರ್ಯ ಎಂದು ತಿಳಿಸಿದರು.

ಕನಿಷ್ಠ ಮೂರು ದಿನವಾದರೂ ಈ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ನಡೆಸಿ ಸಲಹೆ ತೆಗೆದುಕೊಳ್ಳಬೇಕು. ಈ ಚರ್ಚೆ ವೇಳೆ ನಾವು ನಿಮಗೆ ಯಾವುದೇ ರೀತಿಯ ಮುಜುಗರ ಮಾಡುವುದಿಲ್ಲ. ಬೇಕಾದಷ್ಟು ವಿಚಾರದಲ್ಲಿ ನಿಮ್ಮ ವೈಫಲ್ಯಗಳಿರಬಹುದು, ಅದು ಬೇರೆ ವಿಚಾರ. ಆದರೆ ನಮ್ಮ ಸಲಹೆಯನ್ನು ನೀವು ಪಡೆಯಬೇಕು. ಈ ಅಧಿವೇಶನದಲ್ಲಿ ಭಾಗವಹಿಸಲು ನಮ್ಮ ಪಕ್ಷದ ಶಾಸಕರು, ಸದಸ್ಯರು ಯಾವುದೇ ಭತ್ಯೆಗಳನ್ನು ಪಡೆಯುವುದಿಲ್ಲ. ನಮ್ಮ ಸಲಹೆಯಂತೆ ಈಗ ನಾಲ್ಕೈದು ವರ್ಗದ ಜನರಿಗೆ 5 ಸಾವಿರ ನೀಡಲು ನಿರ್ಧರಿಸಿದ್ದೀರಿ. ಅದಕ್ಜೆ ಸ್ವಲ್ಪ ಅಭಿನಂದನೆ ಸಲ್ಕಿಸುತ್ತೇನೆ‌ ಆದರೆ ಇದು ಸಾಲದು. ಉಳಿದ ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡಲು ಕೇವಲ 1610 ಕೋಟಿ ಅಲ್ಲ, 10 ಸಾವಿರ ಕೋಟಿ ರೂಪಾಯಿ ಕೊಟ್ಟರೂ ಸಾಲದು. ಈ ವಿಚಾರದಲ್ಲಿ ನಿಮ್ಮ ಜತೆ ನಾವಿದ್ದೇವೆ ಎಂದು ಭರವಸೆ ನೀಡಿದರು.

ನಮ್ಮ ಪಕ್ಷ, ಶಾಸಕರು ಇಂತಹ ಮಾನವೀಯ ವಿಚಾರದಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ಈ ಅಸಂಘಟಿತ ಕಾರ್ಮಿಕರು ತಮ್ಮದೇ ಆದ ರೀತಿಯಲ್ಲಿ ದೇಶ ಕಟ್ಟುತ್ತಿರುವವರು. ಅವರನ್ನು ಅವರ ಉದ್ಯೋಗದ ಆಧಾರದ ಮೇಲೆ ಗುರುತಿಸಬಾರದು. ದೇಶದ ಅಭಿವೃದ್ಧಿಯಲ್ಲಿ ಉದ್ಯಮಿಗಳ ಪಾತ್ರ ಎಷ್ಟಿದೆಯೋ ಅದೇ ರೀತಿ ಈ ಕಾರ್ಮಿಕರ ಪಾತ್ರವೂ ಇದೆ. ಹೀಗಾಗಿ ಇವರನ್ನು ನಾವು ಗೌರವಯುತವಾಗಿ ನಡೆಸಿಕೊಳ್ಳುವುದು ಮುಖ್ಯ. ಬಿಲ್ಡರ್ಸ್ ಗಳ ಜತೆಗಿನ ಸಭೆ ನಡೆಸಿದ್ದಾರೆ. ಹೀಗಾಗಿ ಈ ಕಾರ್ಮಿಕರನ್ನು ವಾಪಸ್ ಕರೆತರಲು ಯಾವ ರೀತಿ ಪ್ರೋತ್ಸಾಹ ನೀಡಬೇಕು ಎಂಬುದರ ಬಗ್ಗೆ ನಾವು ಸಲಹೆ ನೀಡುವುದಿದೆ ಎಂದರು.

ಹಿಂದಿನ ಸರಕಾರದ ಬಜೆಟ್ ನಲ್ಲಿ ಘೋಷಣೆಯಾಗಿ, ಟೆಂಡರ್ ನೀಡಿದ್ದ ಯೋಜನೆಗಳನ್ನು ಕೇವಲ ಒಂದು ಪತ್ರದ ಮೂಲಕ ಈ ಸರಕಾರ ತಡೆ ಹಿಡಿದಿದೆ. ಹೀಗಿರುವಾಗ ಈ ರೀತಿ ಸರ್ಕಾರದ ನಿರ್ಧಾರಗಳನ್ನು ಹೊರಗೆ ಘೋಷಿಸುವ ಬದಲು, ಅಧಿವೇಶನದಲ್ಲೇ ಘೋಷಿಸಲಿ. ಆಗ ಎಲ್ಲವೂ ದಾಖಲೆ ಸೇರುತ್ತವೆ. ಈ ವಿಚಾರದಲ್ಲಿ ನಾವು ತಕರಾರು ಮಾಡುವುದಿಲ್ಲ. ಈಗ ನಾವು ಜನರ ಜೀವ ಹಾಗೂ ಜೀವನವನ್ನು ಕಾಪಾಡಬೇಕು. ಆ ಮೇಲೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಚಿಸೋಣ. ಈ ವಿಚಾರವನ್ನು ಅಧಿವೇಶನದಲ್ಲಿ ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ಚರ್ಚೆ ಮಾಡೋಣ.

ರಾಮನಗರ ಹಸಿರು ವಲಯವಾಗಿದ್ದರೂ ಹೊಟೇಲ್ ಆರಂಭಿಸಲು ಅನುಮತಿ ನೀಡಿಲ್ಲ. ಒಂದು ಕಡೆಗೆ ಒಂದು ರೀತಿಯ ಧೋರಣೆ ಮತ್ತೊಂದು ಕಡೆ ಬೇರೆ ರೀತಿಯ ಧೋರಣೆ ಆಗಬಾರದು. ಹೀಗಾಗಿ ವಲಯವಾರು ಸೂಚನೆ ಏನಿದೆ ಅದನ್ನು ಆಯಾ ವಲಯಗಳಲ್ಲಿ ಸರಿಯಾಗಿ ಜಾರಿಗೆ ತರಬೇಕು. ಈ ಬಗ್ಗೆ ನನ್ನ ತಮ್ಮ ಡಿ.ಕೆ‌. ಸುರೇಶ್ ಕೂಡ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಯಾರೆಲ್ಲಾ ಊರಿಗೆ ಹೋಗಿದ್ದಾರೆ, ಅವರನ್ನು ವಾಪಸು ಕರೆತಂದು, ಅವರಿಗೆ ಉದ್ಯೋಗ ನೀಡಿ ಜೀವನ ನಡೆಸಲು ಉತ್ತಮ ದಾರಿ ಮಾಡಿಕೊಡಬೇಕು. ಹೀಗಾಗಿ ಅವರಿಗೆ ಪ್ರೋತ್ಸಾಹಧನ ನೀಡಲು, ಬಿಲ್ಡರ್, ಕಾರ್ಖಾನೆ ಮಾಲೀಕರು, ಉದ್ಯಮಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಬ್ಬರಿಗೂ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು. ಅದಕ್ಕೆ ಸಲಹೆ ನೀಡಲು ನಾವು ಸಿದ್ಧರಿದ್ದೇವೆ ಎಂದರು.

ವಿರೋಧ ಪಕ್ಷಗಳ ಮಾತು ಅರ್ಥ ಮಾಡಿಕೊಂಡಿದ್ದಕ್ಕೆ ಅಭಿನಂದನೆಗಳು

ನಮ್ಮ ಬೇಡಿಕೆ ಹಾಗೂ ಮನವಿಗೆ ಸ್ಪಂದಿಸಿ ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ಕೆಲವು ವರ್ಗದ ಜನರಿಗೆ ಪರಿಹಾರ ಘೋಷಿಸಿರುವ ನಿರ್ಧಾರವನ್ನು ಸ್ವಲ್ಪಮಟ್ಟಿಗೆ ಸ್ವಾಗತಿಸುತ್ತೇನೆ. ನಾವು ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ 10 ಸಾವಿರ ನೀಡಬೇಕು ಅಂತಾ ಬೇಡಿಕೆ ಇಟ್ಟಿದ್ದೇವು. ಆದರೆ ಸರ್ಕಾರ ನೇಕಾರರು, ಕ್ಷೌರಿಕರು, ಅಗಸರು, ಆಟೋ, ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ 5 ಸಾವಿರ ನೀಡಲು ಮಾತ್ರ ಮುಂದಾಗಿದ್ದಾರೆ.

ಮುಖ್ಯಮಂತ್ರಿಗಳ ಸಂಪುಟದ ಸದಸ್ಯರಿಗೆ ಅಗತ್ಯ ಸಲಹೆ ನೀಡುವ ಜ್ಞಾನವಿಲ್ಲದಿದ್ದರೂ ಅನೇಕ ಟೀಕೆ ಟಿಪ್ಪಣಿ ಮಾಡುತ್ತಾರೆ. ಕಡೇ ಪಕ್ಷ ವಿರೋಧ ಪಕ್ಷಗಳ ಮಾತಿನಲ್ಲಿ ಸತ್ಯವಿದೆ ಎಂಬುದನ್ನು ಅರಿತುಕೊಳ್ಳುವಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಸಂತೋಷವಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಹೂವು ಬೆಳೆಗಾರರು ಮಾಡಿರುವ ಖರ್ಚನ್ನಾದರೂ ಭರಿಸಬೇಕು:

ಈಗ ಘೋಷಿಸಿರುವ ಪರಿಹಾರ ಸಾಲದು. ಕನಿಷ್ಠ 10 ಸಾವಿರ ರೂಪಾಯಿಯಾದರೂ ನೀಡಬೇಕಾಗಿತ್ತು. ಈಗ ಹೂವು ಬೆಳೆಗಾರರಿಗೆ ಹೆಕ್ಟೇರ್ ಗೆ 25 ಸಾವಿರದಂತೆ ಎಕರೆಗೆ 10 ಸಾವಿರ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಈ ಬೆಳೆಗಾರರು ಲಾಭದ ನಿರೀಕ್ಷೆಯಲ್ಲಿ ಇಲ್ಲ. ಬದಲಿಗೆ ಅವರು ಬೆಳೆಗೆ ಖರ್ಚು ಮಾಡಿದನ್ನಾದರೂ ನೀಡಬೇಕು. ಅದಕ್ಕಾಗಿಯೇ ನಾನು ಆರಂಭದಿಂದಲೂ ಈ ಬೆಳೆಗಾರರಿಗೆ ಆಗಿರುವ ನಷ್ಟದ ಬಗ್ಗೆ ಅಧಿಕಾರಿಗಳಿಂದ ವಿಡಿಯೋ ಮಾಡಿಸಿ ದಾಖಲೆ ಇಟ್ಟುಕೊಳ್ಳಿ ಎಂದು ಹೇಳುತ್ತಾ ಬಂದೆ. ಇನ್ನು ತರಕಾರಿ, ಹಣ್ಣು ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿಲ್ಲ. ಈ ಬೆಳೆಗಾರರಿಗೂ ದೊಡ್ಡ ನಷ್ಟವಾಗಿದೆ. ತರಕಾರಿ, ಹೂವು ಹಮ್ಣಿನ ಆಧಾರದ ಮೇಲೆ ರೈತರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ನಷ್ಟವಾಗಿದೆ. ಸರ್ಕಾರ ಕೊಟ್ಟ ಮಾತಿನಂತೆ ಅವರಿಗೆ ಮಾರುಕಟ್ಟೆ ಕಲ್ಪಿಸಲು ಆಗಲಿಲ್ಲ. ಕೆ.ಆರ್ ಪುರ ಮಾರುಕಟ್ಟೆಯಲ್ಲಿ ರೈತರು ಬೆಳೆದ ನೂರಾರು ಗಾಡಿಗಳನ್ನು ವಾಪಸ್ ಕಳಿಸಿದಾಗ ನಾನು ಅಲ್ಲಿಗೆ ಹೋಗಿದ್ದನ್ನು ನೀವು ನೋಡಿದ್ದೀರಿ. ಹೀಗೆ ಈ ರೈತರಿಗೂ ನಷ್ಟ ಭರಿಸಲು ಸರ್ಕಾರ ಮುಂದಾಗಬೇಕು ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights