ಸಿದ್ಧತೆ ಇಲ್ಲದೆ ಮಾಡಿದ ಲಾಕ್ ಡೌನ್ ಗೊಂದಲಕ್ಕೆ ಕಾರಣವಾಗಿದೆ: ಸೋನಿಯಾ ಗಾಂಧಿ

ಕೊರೊನ ಸಂಕ್ರಾಮಿಕವನ್ನು ತಡೆಗಟ್ಟಲು ಕೇಂದ್ರ ಸರ್ಕಾರ 21 ದಿನಗಳ ಲಾಕ್ ಡೌನ್ ಘೋಷಿಸಿತ್ತು. ಈ ಲಾಕ್ ಡೌನ್ ನಿಂದ ಸಾಂಕ್ರಾಮಿಕವನ್ನು ಒಂದು ಮಟ್ಟಕ್ಕೆ ತಡೆಯಲು ಸಾಧ್ಯವಾಗಿದ್ದರೂ, ವಲಸೆ ಕಾರ್ಮಿಕರ ಸಂಕಷ್ಟವನ್ನು ತೀವ್ರಗೊಳಿಸಿತ್ತು. ಸಿದ್ಧತೆ ಮಾಡಿಕೊಳ್ಳದೆ ಮಾಡಿದ ಈ ಲಾಕ್ ಡೌನ್ ಲಕ್ಷಾಂತರ ವಲಸೆ ಕಾರ್ಮಿಕರ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ನಡೆಸುವ ವೇಳೆಯಲ್ಲಿ ಈ ದೇಶ ಹಿಂದೆಂದೂ ಕಾಣದ ಆರೋಗ್ಯ ಮತ್ತು ಮಾನವತಾವಾದದ ಬಿಕ್ಕಟ್ಟಿನಲ್ಲಿ  ಸಿಲುಕಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. “ಸಮಸ್ಯೆ ತೀವ್ರವಾಗಿದೆ ಆದರೆ ಇದರಿಂದ ಹೊರಬರುವ ನಮ್ಮ ಸಂಕಲ್ಪ ಅದಕ್ಕೂ ದೊಡ್ಡದಾಗಿರಬೇಕು” ಎಂದು ಅವರು ಹೇಳಿದ್ದಾರೆ.

ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ವಿಷಯವನ್ನು ಚರ್ಚಿಸಿದ್ದಾರೆ. ಬಡ ಮತ್ತು ಹಿಂದುಳಿದ ಜನರ ತೊಂದರೆಗಳ ಬಗ್ಗೆ ಮಾತನಾಡಿರುವ ಸೋನಿಯಾ “ನಮ್ಮ ದೇಶದಲ್ಲಿ ಸಾಂಕ್ರಾಮಿಕದಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗುವುದು ಬಡ ಮತ್ತು ಹಿಂದುಳಿದ ಜನ. ನಾವೆಲ್ಲಾ ಒಟ್ಟಿಗೆ ಬಂದು ಈ ಕಷ್ಟಕರ ದಿನಗಳಲ್ಲಿ ಏನೆಲ್ಲಾ ಬೆಂಬಲ ಕೊಡಬಹುದೋ ಅದನ್ನೆಲ್ಲ ಮಾಡಬೇಕು” ಎಂದಿದ್ದಾರೆ.

“ಆಹಾರ ಮತ್ತು ವಸತಿಗಾಗಿ ಲಕ್ಷಾಂತರ ಜನ ತಮ್ಮ ಗ್ರಾಮಗಳಿಗೆ ನೂರಾರು ಕಿಲೋಮೀಟರ್ ನಡೆದು ಹೋಗುವುದನ್ನು ನೋಡುವುದು ತೀವ್ರ ಸಂಕಟ. ಈ ಬವಣೆಯನ್ನು ಸಂಪೂರ್ಣ ಕಡಿಮೆ ಮಾಡುವುದು ನಮ್ಮ ಕರ್ತವ್ಯ” ಎಂದಿದ್ದಾರೆ.

ಈ ಗೊಂದಲಗಳನ್ನು ನಿವಾರಿಸಲು ಸರ್ಕಾರ ಸರಿಯಾದ ಮತ್ತು ಸಮಗ್ರ ಯೋಜನೆಯನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. “ರೈತರಿಗೆ ತ್ವರಿತಾಗಿ ಗೊಬ್ಬರ ಮತ್ತು ಕ್ರಿಮಿನಾಶಕಗಳ ಅವಶ್ಯಕತೆ ಇದೆ. ಈ ಆರ್ಥಿಕ ಸಂಕಷ್ಟದಲ್ಲಿ ಅವರಿಗೆ ಆರ್ಥಿಕ ನೆರವು ಮತ್ತು ಅವರಿಗೆ ಸಾಲ ಸರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕು” ಎಂದು ಕೂಡ ಸೋನಿಯಾ ಗಾಂಧಿ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights