‘ಸೋಂಕಿತರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದರೂ ಕ್ವಾರಂಟೈನ್”: ಟ್ವೀಟ್ ಮಾಡಿದ್ದಕ್ಕೆ ಪತ್ರಕರ್ತನ ಬಂಧನ

ಕೋವಿಡ್-19 ಸೋಂಕಿತ ರೋಗಿಗಳ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದರೆ ಕ್ವಾರಂಟೈನ್ ಮಾಡುವ ಅಗತ್ಯವೇನು ಎಂದು ಪ್ರಶ್ನಿಸಿದ ಫ್ರೀಲಾನ್ಸ್ ಪತ್ರಕರ್ತನನ್ನು ಅಂಡಮಾನ್ ಮತ್ತು ನಿಕೊಬಾರ್ ಆಡಳಿತ ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಪತ್ರಕರ್ತ ಜುಬೈರ್ ಅಹ್ಮದ್ ಅವರಿಗೆ ಸೋಮವಾರ ಸಂಜೆ ಪೋರ್ಟ್ ಬ್ಲೇರ್ ಕೋರ್ಟ್ ನಿಂದ ಜಾಮೀನು ದೊರೆತಿದೆ ಎಂದು ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಕಳೆದ ಕೆಲವು ದಿನಗಳಿಂದ ಪ್ರಾದೇಶಿಕ ದಿನಪತ್ರಿಕೆಗಳಿಂದ ಮಾಹಿತಿ ಕಲೆಹಾಕಿ ಸೋಮವಾರ ಜುಬೈರ್ “ಕೋವಿಡ್-19 ರೋಗಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಕ್ಕೆ ಹಲವು ಕುಟುಂಬಗಳನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಿದ್ದು ಏಕೆ ಎಂದು ಯಾರಾದರು ವಿವರಿಸಬಲ್ಲರೆ?” ಎಂದು ಟ್ವೀಟ್ ಮಾಡಿ ಅಂಡಮಾನ್ ಆಡಳಿತ ಮತ್ತು ಎಲ್ ಜಿ ಮೀಡಿಯಾ ಸೆಲ್ ಅನ್ನು ಟ್ಯಾಗ್ ಮಾಡಿದ್ದರು.

ಮತ್ತೊಂದು ಟ್ವೀಟ್ ನಲ್ಲಿ “#ಕೋವಿಡ್19  ಕ್ವಾರಂಟೈನ್ ಆಗಿರುವ ವ್ಯಕ್ತಿಗಳು ತಮ್ಮ ಪರಿಚಿತ ವ್ಯಕ್ತಿಗಳ ಜೊತೆಗೆ ದೂರವಾಣಿಯಲ್ಲಿ ಮಾತನಾಡಬಾರದು ಎಂದು ವಿನಂತಿಸಿಕೊಳ್ಳುತ್ತೇನೆ. ದೂರವಾಣಿ ಕರೆಗಳ ಆಧಾರದಲ್ಲಿ ಜನರನ್ನು ಟ್ರೇಸ್ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ” ಎಂದು ಅವರು ಬರೆದಿದ್ದರು.

ಈ ಬಂಧನದ ಮಾಹಿತಿ ನೀಡಿದ ಅಂಡಮಾನ್ ನಿಕೊಬಾರ್ ದ್ವೀಪಗಳ ಡಿಜಿಪಿ ದೀಪೇಂದ್ರ ಪಾಠಕ್ “ಆಡಳಿತ ತಪ್ಪು ಕೆಲಸ ಮಾಡುತ್ತಿದೆ ಎಂದು ಆ ವ್ಯಕ್ತಿ ಸರಣಿ ಟ್ವೀಟ್ ಮಾಡುತ್ತಿದ್ದ. ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಆಡಳಿತದ ಜೊತೆಗೆ ಸಹಕರಿಸಬೇಡಿ ಎಂದು ಕರೆ ನೀಡಿದ್ದ. ನಾವು ಕಾನೂನು ಪ್ರಕ್ರಿಯೆ ಪಾಲಿಸಿ ಆತನನ್ನು ಬಂಧಿಸಿದ್ದೇವೆ” ಎಂದು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

“ಕೋವಿಡ್ ಪಾಸಿಟಿವ್ ರೋಗಿಗಳನ್ನು ಪತ್ತೆ ಹಚ್ಚುವ ಒಂದು ವಿಧಾನ ಅವರ ಕರೆಗಳನ್ನು ಟ್ರ್ಯಾಕ್ ಮಾಡುವುದು ಮತ್ತು ಅದನ್ನು ಪರಿಶೀಲಿಸಿ ಅವರನ್ನು 28 ದಿನಗಳ ವರೆಗೆ ಮನೆಯಲ್ಲಿಯೇ ಪ್ರತ್ಯೇಕತೆಯಲ್ಲಿ ಇರಿಸುವುದು” ಎಂದು ಕೂಡ ಅವರು ಹೇಳಿದ್ದಾರೆ.

“ನಾನು ಆಡಳಿತಕ್ಕೆ ಪ್ರಶ್ನೆ ಮಾಡಿದೆ. ಅದಕ್ಕೆ ಉತ್ತರಿಸುವ ಬದಲು ಅವರು ನನ್ನನು ಬಂಧಿಸಿದ್ದಾರೆ” ಎಂದು ಜಾಮೀನು ಸಿಕ್ಕ ನನತರ ಜುಬೈರ್ ಹೇಳಿದ್ದಾರೆ. “ನಮಗೆ ಪ್ರಶ್ನಿಸುವ ಹಕ್ಕಿದೆ ಆದರೆ ಅವರು ನನಗೆ ಪಾಠ ಕಲಿಸಲು ಬಂಧಿಸಿದ್ದಾರೆ” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights