14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶದ ಸಮಗ್ರ ಮಾಹಿತಿ

ರಾಜ್ಯದ ಎರಡು ಮಹಾನಗರ ಪಾಲಿಕೆಗಳು, ಆರು ನಗರಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್‌ಗಳು ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ವಿಪಕ್ಷ ಕಾಂಗ್ರೆಸ್ ಅತಿಹೆಚ್ಚು ಕಡೆ ಗೆಲುವು ಸಾಧಿಸಿದ್ದರೆ, ಆಡಳಿತಾರೂಢ ಪಕ್ಷ ಬಿಜೆಪಿ ಎರಡನೆ ಸ್ಥಾನಕ್ಕೆ ಇಳಿದಿದ್ದು, ಜೆಡಿಎಸ್ ಮೂರನೆ ಸ್ಥಾನದಲ್ಲಿದೆ.

ಕುತೂಹಲ ಕೆರಳಿಸಿದ್ದ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 151, ಬಿಜೆಪಿ 125, ಜೆಡಿಎಸ್ 63, ಸಿಪಿಎಂ 1, ಎಸ್‌ಡಿಪಿಐ 7 ಸೇರಿದಂತೆ ಪಕ್ಷೇತರರು 71 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದ್ದರೆ, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ, ಎರಡು ಮಹಾನಗರ ಪಾಲಿಕೆಗಳಲ್ಲಿ ಕಾಂಗ್ರೆಸ್-ಬಿಜೆಪಿ ತಲಾ ಒಂದೊಂದು ದಕ್ಕಿಸಿಕೊಂಡಿವೆ.

ಉಳಿದಂತೆ ಕನಕಪುರ, ಗೌರಿಬಿದನೂರು ನಗರಸಭೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದು, ಕೋಲಾರ, ಮುಳಬಾಗಿಲು, ರಾಬರ್ಟ್‌ಸನ್ ಪೇಟೆ ಮತ್ತು ಚಿಂತಾಮಣಿ ನಗರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ ರಾಜಕೀಯ ಪಕ್ಷಗಳಿಗೆ ಕೆಲವೆಡೆ ಸೋಲು ಕಂಡಿದ್ದರೆ, ಕೆಲವೆಡೆ ಗೆಲುವಿನ ನಗೆ ಬೀರಿದ್ದಾರೆ.

ಫಲಿತಾಂಶದ ಸಮಗ್ರ ಮಾಹಿತಿ

ಮಂಗಳೂರು ಮಹಾನಗರ ಪಾಲಿಕೆ: ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಪೈಕಿ 44 ವಾರ್ಡ್‌ಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಬಾರಿ 14 ಸ್ಥಾನಗಳಿಗೆ ಕುಸಿದಿದೆ. ಎಸ್‌ಡಿಪಿಐ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಫಲಿತಾಂಶವು ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಮುಖಭಂಗವನ್ನುಂಟು ಮಾಡಿದೆ.

ದಾವಣಗೆರೆ ಮಹಾನಗರ ಪಾಲಿಕೆ: ಮಹಾನಗರ ಪಾಲಿಕೆಯಲ್ಲಿ 22 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ 17 ಸ್ಥಾನ ದೊರೆತದ್ದು , ಜೆಡಿಎಸ್ 1 ಸ್ಥಾನದಲ್ಲಿ ಜಯಗಳಿಸಿದೆ. 5 ಸ್ಥಾನಗಳು ಪಕ್ಷೇತರರ ಪಾಲಾಗಿದ್ದು ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 3 ಶಾಸಕರು, ಒಬ್ಬ ಸಂಸದರಿದ್ದಾರೆ.

ಕಾಂಗ್ರೆಸ್‌ನಿಂದ ಇಬ್ಬರು ಶಾಸಕರಿದ್ದು, ಬಿಜೆಪಿಯಿಂದ ಒಬ್ಬ ಶಾಸಕ ಹಾಗೂ ಒಬ್ಬ ಸಂಸದರಿದ್ದಾರೆ. ಐವರು ಪಕ್ಷೇತರರ ಪೈಕಿ ಒಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡ ಇಬ್ಬರು ಪಕ್ಷೇತರರು ಗೆದ್ದಿದ್ದಾರೆ. ಆದರೂ, ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ರಾಮನಗರ ಜಿಲ್ಲೆ

ಕನಕಪುರ ನಗರಸಭೆ: ಇಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ. ಆದರೂ ಒಟ್ಟಾರೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಲ್ಲಿನ 19 ವಾರ್ಡ್‌ಗಳಲ್ಲಿ ಕಾಂಗ್ರೆಸ್, 4 ವಾರ್ಡ್‌ಗಳಲ್ಲಿ ಜೆಡಿಎಸ್, 1 ವಾರ್ಡ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಚುನಾವಣೆಗೂ ಮುನ್ನವೇ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

ಮಾಗಡಿ ಪುರಸಭೆ: ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷವು ಸರಳ ಬಹುಮತ ಪಡೆದಿದೆ. ಒಟ್ಟು 23 ಸ್ಥಾನಗಳ ಪೈಕಿ 12ರಲ್ಲಿ ಜೆಡಿಎಸ್, 10ರಲ್ಲಿ ಕಾಂಗ್ರೆಸ್ ಹಾಗೂ 1 ವಾರ್ಡಿನಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ.

ಕೋಲಾರ ಜಿಲ್ಲೆ

ಕೋಲಾರ ನಗರಸಭೆ: ನಗರಸಭೆಯ 35 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ಸಿಕ್ಕಿಲ್ಲ. 12 ವಾರ್ಡ್‌ಗಳಲ್ಲಿ ಕಾಂಗ್ರೆಸ್, 8 ವಾರ್ಡ್‌ಗಳಲ್ಲಿ ಜೆಡಿಎಸ್, 8 ವಾರ್ಡ್‌ಗಳಲ್ಲಿ ಪಕ್ಷೇತರರು, 4 ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಹಾಗೂ 3 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ನಗರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 18 ಸದಸ್ಯ ಬಲ ಬೇಕಿದೆ.

ಮುಳಬಾಗಿಲು ನಗರಸಭೆ: ಮುಳಬಾಗಿಲು ನಗರಸಭೆಯ 10 ವಾರ್ಡ್‌ಗಳಲ್ಲಿ ಜೆಡಿಎಸ್, 7 ವಾರ್ಡ್‌ಗಳಲ್ಲಿ ಕಾಂಗ್ರೆಸ್, 2 ವಾರ್ಡ್‌ಗಳಲ್ಲಿ ಬಿಜೆಪಿ, 1 ವಾರ್ಡ್‌ನಲ್ಲಿ ಎಸ್‌ಡಿಪಿಐ ಹಾಗೂ 11 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಆ ಮೂಲಕ 31 ಸಂಖ್ಯಾಬಲವಿರುವ ಮುಳಬಾಗಿಲು ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ರಾಬರ್ಟ್‌ಸನ್‌ ಪೇಟೆ ನಗರಸಭೆ: ಈ ನಗರಸಭೆಯಲ್ಲಿನ 35 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳಲ್ಲಿ ಕಾಂಗ್ರೆಸ್, 3 ವಾರ್ಡ್‌ಗಳಲ್ಲಿ ಬಿಜೆಪಿ, 2 ವಾರ್ಡ್‌ಗಳಲ್ಲಿ ಜೆಡಿಎಸ್, 1 ವಾರ್ಡ್‌ನಲ್ಲಿ ಸಿಪಿಎಂ ಹಾಗೂ 16 ವಾರ್ಡ್‌ಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಹೀಗಾಗಿ, ಈ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ

ಗೌರಿಬಿದನೂರು ನಗರಸಭೆ: ನಗರಸಭೆಯ ಒಟ್ಟು 31 ವಾರ್ಡುಗಳಲ್ಲಿ ಕಾಂಗ್ರೆಸ್- 15, ಜೆಡಿಎಸ್-6, ಬಿಜೆಪಿ- 3 ಹಾಗೂ 7 ಪಕ್ಷೇತರ ಅಭ್ಯರ್ಥಿ ವಿಜೇತರಾಗಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷವು ನಗರಸಭೆ ಅಧಿಕಾರಿ ಹಿಡಿಯುಲ್ಲಿ ಸಫಲವಾಗಿದೆ.

ಚಿಂತಾಮಣಿ ನಗರಸಭೆ: ಚಿಂತಾಮಣಿ ನಗರಸಭೆಯಲ್ಲಿ ಜೆಡಿಎಸ್ ಮತ್ತು ಭಾರತೀಯ ಪ್ರಜಾ ಪಾರ್ಟಿ ಪಕ್ಷಗಳಿಗೆ ತಲಾ 14 ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ಪಕ್ಷ 1 ಸ್ಥಾನದಲ್ಲಿ ಮತ್ತು ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚಿಂತಾಮಣಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ಜಿಲ್ಲೆ:

ಜೋಗಕಾರ್ಗಲ್ ಪಟ್ಟಣ ಪಂಚಾಯತ್: ಈ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿಯು 9 ಸ್ಥಾನ ಗೆಲ್ಲುವ ಮೂಲಕ ಸರಳ ಬಹುಮತ ಗಳಿಸುವಲ್ಲಿ ಸಫಲವಾಗಿದೆ. ಕಾಂಗ್ರೆಸ್ ಒಂದು ಸ್ಥಾನ ಗಳಿಸಿದರೆ, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಜಯಗಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ

ಬಿರೂರು ಪುರಸಭೆ: ಈ ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ನಡೆದ 22 ವಾರ್ಡ್‌ಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 9, ಜೆಡಿಎಸ್ 2 ಮತ್ತು ಪಕ್ಷೇತರರು 2 ಸ್ಥಾನಗಳಲ್ಲಿ ಜಯಗಳಿಸಿವೆ. ಪುರಸಭೆಯ ಒಟ್ಟು 23 ವಾರ್ಡ್‌ಗಳ ಪೈಕಿ ಒಂದರಲ್ಲಿ (16ನೇ ವಾರ್ಡ್) ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ ನಡೆದಿತ್ತು. ಆ ಮೂಲಕ ಬಿಜೆಪಿ 10 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಧಾರವಾಡ:

ಕುಂದಗೋಳ ಪಟ್ಟಣ ಪಂಚಾಯತ್: ಇಲ್ಲಿನ ಪಟ್ಟಣ ಪಂಚಾಯತ್‌ನಲ್ಲಿನ 19 ಸ್ಥಾನಗಳ ಪೈಕಿ ಕಾಂಗ್ರೆಸ್ 5, ಬಿಜೆಪಿ 12 ಹಾಗೂ ಪಕ್ಷೇತರರು 2 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ.

ಬಳ್ಳಾರಿ ಜಿಲ್ಲೆ

ಕಂಪ್ಲಿ ಪುರಸಭೆ: ಕಂಪ್ಲಿ ಪುರಸಭೆಯಲ್ಲಿ ಬಿಜೆಪಿ ಜಯ ಸಾಧಿಸಿದೆ. ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ 13 ಹಾಗೂ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲವು ಸಾಧಿಸಿವೆ.

ಕೂಡ್ಲಿಗಿ ಪಟ್ಟಣ ಪಂಚಾಯತ್: ಪಟ್ಟಣ ಪಂಚಾಯತ್ ನ ಒಟ್ಟು 20 ಸ್ಥಾನಗಳಲ್ಲಿ ಬಿಜೆಪಿ 7, ಕಾಂಗ್ರೆಸ್ 6, ಜೆಡಿಎಸ್ 4 ಹಾಗೂ ಮೂರು ಸ್ಥಾನಗಳಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಉಪ ಚುನಾವಣೆ ಫಲಿತಾಂಶ

ವಿವಿಧ ಕಾರಣಗಳಿಂದ ತೆರವುಗೊಂಡಿದ್ದ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕೊಳ್ಳೇಗಾಲ ನಗರಸಭೆ, ಮಹಲಿಂಗಪುರ ಪುರಸಭೆ, ಚಿತ್ತಾಪುರ ಪುರಸಭೆ, ಚಡಚಣ ಪಟ್ಟಣ ಪಂಚಾಯತ್‌ಗಳಲ್ಲಿನ ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಹೊಳೇನರಸೀಪುರ ಪುರಸಭೆಗೆ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights