18 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಯುವಕನನ್ನ ಬಲಿಪಡೆದ ಲಾಠಿಚಾರ್ಜ್‌…!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದ ವಿವಿದೆಡೆ ಪ್ರತಿಭಟನೆಗಳು ಜೋರಾಗಿವೆ. ಮಂಗಳೂರಿನಲ್ಲಿ ಗೋಲಿಬಾರ್‌ಗೆ ಇಬ್ಬರು ಪ್ರಾಣ ತೆತ್ತಿದ್ದಾರೆ. ಈಗಿನ ಘಟನಾವಳಿಗಳು 18 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯನ್ನು ನೆನಪಿಸುತ್ತಿವೆ. ಆಗ ನಡೆದಿದ್ದ ಲಾಠಿಚಾರ್ಜ್‌ಗೆ ಯುವಕನೊಬ್ಬ ಬಲಿಯಾಗಿದ್ದ. ಆತನ ಕುಟುಂಬವೀಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಕೋಮು ದಳ್ಳುರಿಗೆ ತತ್ತರಿಸಿದ ಕುಟುಂಬವೊಂದರ ಕರುಣಾಜನಕ ಕಥೆ ಮನ ಮಿಡಿಯುವಂತಿದೆ.

ದಯನೀಯ ಸ್ಥಿತಿಯಲ್ಲಿರುವ ತಾಯಿ- ಮಗ
ಅಂಗವಿಕಲ ಮಗನ ಎದುರು ಅಸಹಾಯಕ ಸ್ಥಿತಿಯಲ್ಲಿ ಕುಳಿತು ರೋಧಿಸುವ ತಾಯಿ. ಒಪ್ಪತ್ತಿನ ಊಟಕ್ಕೂ ಪರದಾಡುವ ದೈನೇಸಿ ಪರಿಸ್ಥಿತಿ‌. ಮನೆಗೆ ಆಸರೆಯಾಗಿದ್ದ ಪತಿಯನ್ನು ಕಳೆದುಕೊಂಡು 18 ವರ್ಷಗಳಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಮಹಿಳೆ. ಇಂತಹ ಮನಕಲಕುವ ದೃಶ್ಯಗಳು ಕಂಡು ಬರುವುದು ಹುಬ್ಬಳ್ಳಿಯ ಟಿಪ್ಪುನಗರದಲ್ಲಿ.

ಕರುಣಾಜನಕ ಕಥೆ
ಈ ಕುಟುಂಬದ ಕರುಣಾಜನಕ ಸ್ಥಿತಿಯ ಹಿಂದೆ ಗಲಭೆಯೊಂದರ ಕರಾಳ ನೆನಪಿದೆ. ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ನಿಂದ 2001ರಲ್ಲಿ ಅಶೋಕ್ ಸಿಂಘಾಲ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಅಶೋಕ್ ಸಿಂಘಾಲ್ ನೇತ್ರತ್ವದಲ್ಲಿ ಹುಬ್ಬಳ್ಳಿಯ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್ ಶೋ ಆಯೋಜಿಸಲಾಗಿತ್ತು. ಈ ವೇಳೆ ಕಲ್ಲು ತೂರಾಟ ನಡೆದು ಗಲಭೆ ಸೃಷ್ಟಿಯಾಗಿತ್ತು. ಸಾವಿರಾರು ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಲಾಠಿ ಏಟಿಗೆ ಅಂಬಾಲಾಲ್ ಮೆಹರವಾಡೆ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಹಿಗ್ಗಾಮುಗ್ಗಾ ಥಳಿತಕ್ಕೆ ಒಳಗಾಗಿದ್ದರಿಂದ ವಾರಗಟ್ಟಲೆ ಆಸ್ಪತ್ರೆಯಲ್ಲಿ ಬಳಲಿದ್ದ. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಆ ಕರಾಳ ಘಟನೆ ಇಂದಿಗೂ ಈ ಕುಟುಂಬವನ್ನು ಕಣ್ಣೀರಿನಲ್ಲಿ ಕೈತೊಳೆಯುವಂತರ ಮಾಡಿದೆ.

ವಿಧವೆಯ ಗಾಯದ ಮೇಲೆ ಬರೆ
ಆ ವೇಳೆ ಅಂಬಾಲಾಲ್ ಪತ್ನಿ ಹೇಮಾ ತುಂಬು ಗರ್ಭೀಣಿಯಾಗಿದ್ದರು. ಪತಿಯ ಆರೈಕೆಗೆ ಸಾಕಷ್ಟು ಕಷ್ಟ ಪಟ್ಟಿದ್ದರು. ಚಿಕಿತ್ಸೆ ಫಲಿಸದೆ ಪತಿ ಸಾವನ್ನಪ್ಪಿದಾಗ ಮಾನಸಿಕ ಮತ್ತು ದೈಹಿಕವಾಗಿ ಜರ್ಜಿತರಾಗಿದ್ದರು. ಪತಿ ಸಾವಿನ ದುಃಖದಲ್ಲಿದ್ದ ಹೇಮಾಗೆ ಮತ್ತೊಂದು ಆಘಾತ ಕಾದಿತ್ತು. ಗರ್ಭಿಣಿಯಾಗಿದ್ದ ಹೇಮಾ ಅನಾರೋಗ್ಯದ ಕಾರಣ ವಿಕಲಚೇತನ ಮಗು ಜನಿಸಿತ್ತು.‌ ಗಲಭೆಯಲ್ಲಿ ಗಂಡನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ವಿಕಲಚೇತನ ಮಗನನ್ನು ಆರೈಕೆ ಮಾಡಬೇಕಾದ ಸಂಕಷ್ಟ ಮತ್ತೊಂದೆಡೆ.

ನೆರವು ಸಿಗದೆ ದುಸ್ತರವಾದ ಬದುಕು
ಕಳೆದ 18 ವರ್ಷಗಳಿಂದ ಅಂಗವಿಕಲ ಮಗನನ್ನು ಜೋಪಾನ ಮಾಡಲು ಹೇಮಾ ಹರಸಾಹಸ ಪಡ್ತಿದ್ದಾರೆ. ಘಟನೆಯ ನಂತರ ಹಲವು ರಾಜಕೀಯ ನಾಯಕರು ಸ್ವಾಂತನದ ಮಾತುಗಳನ್ನಾಡಿದ್ರು. ಆದರೆ ಮಾತುಗಳಿಂದ ಹೊಟ್ಟೆ ತುಂಬ ಬೇಕಲ್ಲ. ಯಾರೊಬ್ಬರೂ ಆರ್ಥಿಕ ನೆರವು ನೀಡಿಲ್ಲ. ಸರ್ಕಾರದಿಂದ ಒಂದು ಲಕ್ಷ ಪರಿಹಾರ ಸಿಗುತ್ತೆ ಎಂದು ನೀಡಲಾಗಿದ್ದ ಭರವಸೆಯೂ ಈಡೇರಿಲ್ಲ. ಆರ್ಥಿಕವಾಗಿ ಸದೃಢರಲ್ಲದ ಹೇಮಾ ತವರು ಮನೆಯವ್ರು ಇರಲು ಆಶ್ರಯ ಕೊಟ್ಟಿದ್ದಾರಷ್ಟೆ. ಮಗನಿಗೆ ಸರ್ಕಾರದಿಂದ ಬರುವ ಅಂಗವಿಕಲ ವೇತನದಿಂದಲೇ ತಾಯಿ ಮಗನ ಜೀವನ ನಡೆಯುತ್ತಿದೆ.

ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ
ಅಂಬಾಲಾಲ್ ಮೆಹರವಾಡೆ ಕಡಲೆಕಾಯಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಅವರ ಸಾವಿನಿಂದ ಕುಟುಂಬರ ಆಧಾರ ಸ್ತಂಭ ಕಳಚಿದಂತಾಗಿದೆ. ಮಗನಿಗ ವ್ಹೀಲ್‌ಚೇರ್ ತೆಗೆದುಕೊಳ್ಳಲು ತನ್ನ ಬಳಿ ದುಡ್ಡಿಲ್ಲವೆಂದು ಹೇಮಾ ಕಣ್ಣೀರು ಸುರಿಸುತ್ತಿದ್ದಾರೆ. ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಗಲಭೆಯಿಂದ ಗೆಲುವಿಲ್ಲ
ಬೇರೆಯವರ ಮನೆಗೆ ಬೆಂಕಿ ಹಚ್ಚಿ ಕೆಲವು ರಾಜಕೀಯ ಪುಡಾರಿಗಳು ತಮ್ಮ ಬೇಳೆ ಬೇಯಿಸಿಕೊಂಡರು.
ಗಲಭೆಗಳು ಕೆಲವರಿಗೆ ರಾಜಕೀಯ ಲಾಭ ತಂದುಕೊಡಬಹುದು. ಆದರೆ ಇಂತಹ ಅಮಾಯಕ ಬಡ ಕುಟುಂಬಗಳ ಪಾಲಿಗೆ ಕರಾಳ ಅಧ್ಯಾಯಗಳಾಗಿ ಉಳಿದುಬಿಡುತ್ತವೆ. ಪ್ರತಿಭಟನೆ, ಹೋರಾಟ ಅಂತಾ ಹೋಗಿ ಗಲಭೆಗಳಲ್ಲಿ ತೊಡಗುವವರು ಈ ಕುಟುಂಬದ ಕರುಣಾಜನಕ ಕಥೆ ನೋಡಿಯಾದ್ರು ಸುಧಾರಿಸಬೇಕಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights