20,000 ವಿಶೇಷ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ: ಡೀಟೈಲ್ಸ್
ಜಗತ್ತನ್ನೇ ಕಾಡುತ್ತಿರುವ ಕೊರೋನಾ ವೈರಸ್ ಭಾರತದ ಜನರನ್ನೂ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಒಟ್ಟು 173 ಸೋಂಕಿತರಿದ್ದು, ನಾಲ್ಕು ಜನರು ಕೊರೋನಾಗೆ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಒಬ್ಬರು ಸಾವನ್ನಪ್ಪಿದ್ದಾರೆ. ಪಕ್ಕದ ರಾಜ್ಯ ಕೇರಳ ಕೂಡ ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿದ್ದು, ಒಟ್ಟು 25 ಮಂದಿಗೆ ಈ ವೈರಸ್ ಅಂಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳಕ್ಕೆ 20,000 ಸಾವಿರ ಕೋಟಿ ರೂಗಳ ವಿಶೇಷ ಪ್ಯಾಕೆಜ್ ಬಿಡುಗಡೆ ಮಾಡಿದ್ದಾರೆ.
ಕೇರಳ 31,170 ಜನರ ಮೇಲೆ ನಿಗಾ ವಹಿಸಲಾಗಿದೆ. ಈ ಪೈಕಿ 237 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇರಳ ಸರ್ಕಾರ ಕಾರ್ಯಪ್ರೌವೃತ್ತವಾಗಿ ಕೆಲಸ ಮಾಡುತ್ತಿದೆ.
20 ಸಾವಿರ ಕೋಟಿ ರೂಗಳಲ್ಲಿ 500 ಕೋಟಿ ರೂಪಾಯಿ ಹಣವನ್ನು ಆರೋಗ್ಯ ಪ್ಯಾಕೇಜ್ಗೆ, 200 ಕೋಟಿ ರೂ. ಸಾಲ ಹಾಗೂ ಉಚಿತ ರೇಷನ್, 2,000 ಕೋಟಿ ರೂ. ಉದ್ಯೋಗ ಖಾತ್ರಿ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ಏಪ್ರಲ್ ತಿಂಗಳೊಳಗೆ 20 ರೂಪಾಯಿಗೆ ಊಟ ತಿಂಡಿ ನೀಡುವ 1,000 ‘ಸುಭಿಕ್ಷಾ ರೆಸ್ಟೋರೆಂಟ್’ ಹೋಟೆಲ್ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.
ಅಲ್ಲದೆ, ರಾಜ್ಯದ ಪ್ರತಿಯೊಬ್ಬರಿಗೂ (ಎಪಿಎಲ್ ಇರಲಿ ಬಿಪಿಎಲ್ ಇರಲಿ ಎಲ್ಲರಿಗೂ) ಒಂದು ತಿಂಗಳ ಕಾಲ ಉಚಿತ ಪಡಿತರ ಆಹಾರ ಪೂರೈಕೆ ಮಾಡುವುದಾಗಿ ಘೋಷಿಸಿದೆ. ನಿವೃತ್ತಿ ವೇತನ ಪಡೆಯುತ್ತಿರುವವರಿಗೆ ಏಪ್ರಿಲ್ ಮತ್ತು ಮೇ ಎರಡೂ ತಿಂಗಳ ನಿವೃತ್ತಿ ವೇತನವನ್ನು ಈ ತಿಂಗಳಿನಲ್ಲೇ ನೀಡಲಾಗುತ್ತಿದೆ.
ಗ್ರಾಮೀಣ ಪ್ರದೇಶಕ್ಕೆ 2,000 ಕೋಟಿ ರೂಗಳ ವಿಶೇಷ ಹೂಡಿಕೆ ಮಾಡಿ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹರಿಗೆ ಎರಡು ತಿಂಗಳ ಕೂಲಿ ನೀಡಲಾಗುವುದು.
ಕೊರೋನಾ ವೈರಸ್ ದಾಳಿ ಮಾಡುತ್ತಿದ್ದಂತೆ ದೇಶದ ಆರ್ಥಿಕತೆ ಕುಸಿಯುತ್ತಿದೆ. ಕೇರಳದ ಜನತೆ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ನೀಗಿಸುವ ಉದ್ದೇಶದಿಂದ ಈ ವಿಶೇಷ ಪ್ಯಾಕೆಜ್ ಬಿಡುಗಡೆ ಮಾಡಲಾಗಿದೆ.
ಕೇರಳದಲ್ಲಿ ಮಾರಣಾಂತಿಕ ವೈರಸ್ ದಾಳಿಯಿಂದ ಬಳಲುತ್ತಿರುವವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮಾ. 31ರವರೆಗೆ ಸಿನಿಮಾ ಥಿಯೇಟರ್ಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ಕೆಲವು ದಿನಗಳವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಕೇರಳದಲ್ಲಿ ಹಬ್ಬಗಳ ಸಂಭ್ರಮಾಚರಣೆಯನ್ನು ಮುಂದೂಡಲು ಸಿಎಂ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ. ಒಂದುವೇಳೆ ಈಗಾಗಲೇ ಮದುವೆ ಸಮಾರಂಭ ನಿಗದಿಯಾಗಿದ್ದರೆ ಹೆಚ್ಚು ಜನರನ್ನು ಕರೆಯದೆ, ತೀರಾ ಹತ್ತಿರದವರ ಸಮ್ಮುಖದಲ್ಲಿ ಮದುವೆ ಮಾಡಲು ಸೂಚಿಸಲಾಗಿದೆ.

