2021 ಜನಗಣತಿ ಮತ್ತು ಎನ್ ಪಿ ಆರ್ ಪ್ರಕ್ರಿಯೆಗಳನ್ನು ಬೇರ್ಪಡಿಸಿ: ಕೇಂದ್ರಕ್ಕೆ ಪತ್ರ ಬರೆದ ಸಮಾಜ ವಿಜ್ಞಾನಿಗಳು ಮತ್ತು ಆರ್ಥಿಕ ತಜ್ಞರು

ಕೇಂದ್ರ ಸರ್ಕಾರ 2021ರ ಜನಗಣತಿ ಮತ್ತು ರಾಷ್ಟ್ರೀಯ ಜನಗಣತಿ ನೊಂದಣಿ (ಎನ್ ಪಿ ಆರ್) ಪಕ್ರಿಯೆಗಳನ್ನು ಒಟ್ಟಿಗೆ ನಡೆಸಲು ನಿಶ್ಚಯಿಸಿರುವುದು ಹಲವು ವಲಯಗಳಿಂದ ಟೀಕೆಗೆ ಗುರಿಯಾಗಿದೆ. ಎನ್ ಪಿ ಆರ್ ಮುಂದೆ ನಡೆಯಲಿರುವ ಎನ್ ಸಿ ಆರ್ (ರಾಷ್ಟ್ರೀಯ ಪೌರತ್ವ ನೊಂದಣಿ) ಪ್ರಕ್ರಿಯೆಗೆ ಪೂರ್ವಭಾವಿ ಅಭ್ಯಾಸ ಎಂದು ಹಲವು ನಾಗರಿಕರಲ್ಲಿ ಆತಂಕ ಮನೆಮಾಡಿದೆ. ಎನ್ ಪಿ ಆರ್ ಪ್ರಕ್ರಿಯೆಯಲ್ಲಿ, ಕೆಲವು ನಾಗರಿಕರ ಪೌರತ್ವದ ಬಗ್ಗೆ ಸಂದೇಹವನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಕೂಡ ಹಲವು ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈಗ ದೇಶದ ಮತ್ತು ವಿಶ್ವದ ಸುಮಾರು 190 ಜನ ಆರ್ಥಿಕ ತಜ್ಞರು ಮತ್ತು ಸಮಾಜ ವಿಜ್ಞಾನಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದು, ೨೦೨೧ರ ಜನಗಣತಿ ಪ್ರಕ್ರಿಯೆ ಮತ್ತು ಎನ್ ಪಿ ಆರ್ ಗಳನ್ನು ಪ್ರತ್ಯೇಕಿಸುವಂತೆ ಆಗ್ರಹಿಸಿದ್ದಾರೆ. ಈ ಎರಡೂ ಪ್ರಕ್ರಿಯೆಗಳನ್ನು ಒಟ್ಟಿಗೆ ನಡೆಸಿದರೆ, ಭಾರತೀಯ ದತ್ತಾಂಶ ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದ ಪ್ರತಿ ಮನೆಗಳಲ್ಲಿ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವ ಜನಗಣತಿ ಮಾಹಿತಿ ಬಹಳ ಗೌಪ್ಯವಾದದ್ದು ಮತ್ತು ಇದನ್ನು ಕಾಯ್ದುಕೊಳ್ಳುವುದು ಅತಿ ಮುಖ್ಯ. ಈ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಡಿಕೊಳ್ಳುವುದು ಮತ್ತು ಅದು ಇತರ ಪ್ರಕ್ರಿಯೆಗಳಿಂದ ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕಿದೆ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಎನ್ ಪಿ ಆರ್ ಮಾಹಿತಿ ಸಂಗ್ರಹದ ಸಮಯದಲ್ಲಿ ನಾಗರಿಕರ ಪೌರತ್ವದ ಬಗ್ಗೆ “ಸಂಶಯ” ವ್ಯಕ್ತಪಡಿಸಲು ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಸಮಾಜದ ಹಲವು ವಲಯಗಳಲ್ಲಿ ಆತಂಕ ಬೆಳೆಯುತ್ತಿದೆ. ಇದು ದೇಶದ ಹಲವೆಡೆ ಸಾರ್ವಜನಿಕ ಸಂಶಯಕ್ಕೆ ಎಡೆಮಾಡಿಕೊಟ್ಟಿರುವುದಲ್ಲದೆ, ಎನ್ ಪಿ ಆರ್ ನಿಂದ ಇರುವ ಹೆಚ್ಚಿನ ಉಪಯೋಗಗಳ ಬಗ್ಗೆ ಯಾವುದೇ ಸ್ಪಷ್ಟತೆ ಕೂಡ ಇಲ್ಲ ಎಂದು ತಿಳಿಸಿದ್ದಾರೆ.

ಎನ್ ಪಿ ಆರ್ ಪ್ರಕ್ರಿಯೆಯನ್ನು 2021ರ ಜನಗಣತಿ ಜೊತೆಗೆ ನಡೆಸುವುದು ಸೆನ್ಸಸ್ ಕಾಯ್ದೆ 1948ರ 15ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಆ ವಿಧಿ ಜನಗಣತಿ ಅಧಿಕಾರಿ ಕಾರ್ಯ ನಿರ್ವಹಿಸುವಾಗ ಸಿದ್ಧಪಡಿಸುವ ಪುಸ್ತಕ, ನೊಂದಣಿ ಅಥವಾ ದಾಖಲೆಯನ್ನು ಮತ್ಯಾರೂ ಉಪಯೋಗಿಸದಂತೆ ತಡೆಯುತ್ತದೆ ಎಂದು ಕೂಡ ತಿಳಿಸಿದ್ದಾರೆ.

ಹರ್ಶ್ ಮಂದರ್, ಜೆ ಎನ್ ಯು ನ ಹಿಮಾಂಶು, ಲಂಡನ್ ವಿಶ್ವವಿದ್ಯಾಲಯದ ಜಾನ್ ಹ್ಯಾರಿಸ್, ದೆಹಲಿ ವಿಶ್ವವಿದ್ಯಾಲಯದ ನಂದಿನಿ ಸುದರ್, ಪ್ರಭಾತ್ ಪಟ್ನಾಯಕ್, ಉಮಾ ಚಕ್ರವರ್ತಿ ಹೀಗೆ 190 ಸಮಾಜ ವಿಜ್ಞಾನಿ ಮತ್ತು ಆರ್ಥಿಕ ತಜ್ಞರು ಸಹಿ ಮಾಡಿದ್ದು, ೨೦೨೧ ರ ಜನಗಣತಿಯ ಸಮಗ್ರತೆಯನ್ನು ಉಳಿಸಿಕೊಳ್ಳಲು ಎನ್ ಪಿ ಆರ್ ಪ್ರಕ್ರಿಯ ಜೊತೆಗೆ ಅದನ್ನು ಬೇರ್ಪಡಿಸಬೇಕು ಎಂದು ಆಗ್ರಹಿಸಿರುವುದಲ್ಲದೆ, ಸದ್ಯಕ್ಕೆ ಎನ್ ಪಿ ಆರ್ ಅಡಿ ಮಾಹಿತಿ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights