ಫ್ಯಾಕ್ಟ್‌ಚೆಕ್ : ಜಟಾಯು ನಂತರ ಋಕ್ಷ (ಕರಡಿ) ಗಳು ಅಯೋಧ್ಯೆಗೆ ಬಂದಿವೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹತ್ತಿರವಾಗುತ್ತಿರುವಂತೆಯೇ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿಗಳು ಪ್ರಸಾರವಾಗುತ್ತಿವೆ.

ರಾಮಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಅಯೋಧ್ಯಗೆ ಜಟಾಯು ಪಕ್ಷಿಗಳು ಬಂದಿವೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿತ್ತು, ಆದರೆ ಅದು ಸುಳ್ಳು. 2021ರ ಹಳೆಯ ವಿಡಿಯೋವನ್ನು ಕದ್ದು ಅಯೋಧ್ಯೆಯದ್ದು ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಈಗ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಮುಖ್ಯವಾಗಿ ಸಂಘಪರಿವಾರ ಕಾರ್ಯಕರ್ತರ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಗರುಡನ ನಂತರ ಈಗ ಋಕ್ಷ (ಕರಡಿ) ಹಿಂಡು ಅಯೋಧ್ಯೆಗೆ ತಲುಪಿದೆ ಎಂದು ಹೇಳುವ ಪೋಸ್ಟ್‌ವೊಂದು ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಈಗ ಇದೇನು ಪವಾಡವೋ ಅಥವಾ ದೇವರ ದರ್ಶನದ ದಾಹವೋ? ದೇವರ ಆಟ ದೇವರಿಗೇ ಗೊತ್ತು. ಜೈ ಶ್ರೀರಾಮ್ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜನವರಿ 4, 2024ರಂದು ಈ ಟಿವಿ ಭಾರತ್‌ನ ವರದಿಯೊಂದು ಲಭ್ಯವಾಗಿದೆ.

ಜನವರಿ 4, 2024ರ ಇಟಿವಿ ಮಧ್ಯಪ್ರದೇಶ ವರದಿಯಲ್ಲಿ “ಮಧ್ಯಪ್ರದೇಶದ ಶಾಧೋಲ್‌ ಅರಣ್ಯದಿಂದ ಆವೃತವಾಗಿರುವ ಜಿಲ್ಲೆಯಾಗಿದ್ದು ಇಲ್ಲಿನ ಅಮ್ಝೋರ್ ಅರಣ್ಯ ವಲಯದ ಬಾನ್ಸುಕ್ಲಿ ಗ್ರಾಮಕ್ಕೆ ಕರಡಿಗಳ ಹಿಂಡು ಲಗ್ಗೆಹಾಕಿದೆ. ಇಲ್ಲಿನ ಗ್ರಾಮಸ್ಥರು ಅರಣ್ಯದ ಬದಿಯಲ್ಲಿ ಮಾತ್ರ ಕರಡಿಗಳನ್ನು ಕಾಣುತ್ತಿದ್ದು, ಏಕಾಏಕಿ ಗ್ರಾಮಕ್ಕೆ ಹಿಂಡು ಬಂದಿದ್ದರಿಂದ ಗಾಬರಿಗೊಂಡಿದ್ದಾರೆ. ಹಲವು ಕರಡಿಗಳು ಬಂದಿದ್ದರಿಂದ ಗ್ರಾಮಸ್ಥರು ಬೊಬ್ಬೆ ಹಾಕಿ ಅವುಗಳನ್ನು ಓಡಿಸಲು ಯತ್ನಿಸಿದ್ದು, ಕೆಲವು ಓಡಿ ಹೋಗಿವೆ” ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವಿಡಿಯೋದ ಕೀ ಫ್ರೇಮ್‌ ಮತ್ತು ವರದಿಯಲ್ಲಿ ಪ್ರಸಾರವಾಗುತ್ತಿರವ ಚಿತ್ರಗಳು ಒಂದೇ ರೀತಿ ಇರುವುದನ್ನು ಕಾಣಬಹುದು. ಜನವರಿ 4, 2024ರ ಝೀ ಮಧ್ಯಪ್ರದೇಶ-ಛತ್ತೀಸ್‌ ಗಢ ವರದಿಯಲ್ಲೂ ಶಾಧೋಲ್‌ ಜಿಲ್ಲೆಯ ಗ್ರಾಮವೊಂದಕ್ಕೆ ಕರಡಿಗಳು ಲಗ್ಗೆ ಇಟ್ಟ ಸುದ್ದಿಯನ್ನು ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜನವರಿ 4, 2024ರಂದು ಮಧ್ಯಪ್ರದೇಶದ ಶಾಧೋಲ್‌ ಜಿಲ್ಲೆಯ ಗ್ರಾಮವೊಂದಕ್ಕೆ ಕರಡಿಗಳು ಲಗ್ಗೆ ಇಟ್ಟ ವಿಡಿಯೋವನ್ನು ಅಯೋಧ್ಯೆಗೆ ಕರಡಿಗಳ ಹಿಂಡು ಬಂದಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಮನ ದರ್ಶನಕ್ಕೆ ಜಟಾಯು ಪಕ್ಷಿಗಳು ಅಯೋಧ್ಯೆಗೆ ಬಂದಿವೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights