FACT CHECK | ಆಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತ ಎಂದು AI ವಿಡಿಯೋ ಹಂಚಿಕೆ

ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನದ ಅಪಘಾತದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗಿದ್ದವು, ಇದರಲ್ಲಿ ಅರ್ಧಕ್ಕೆ ಅರ್ಧ ನಕಲಿ ಎಂದು ಸಾಬೀತಾಯಿತು. ಈಗ ಆಗ್ರಾ ವಿಮಾನ ನಿಲ್ದಾಣದ ಹೆಸರಿನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ, ವಿಮಾನ ಲ್ಯಾಂಡ್ ಆಗುವಾಗ ಬೆಂಕಿ ಹೊತ್ತಿಕೊಳ್ಳುವುದನ್ನು ಕಾಣಬಹುದು. ಈ ಘಟನೆ ಆಗ್ರಾ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಜುಲೈ 1 ರಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಆಗ್ರಾದಿಂದ ಬಂದದ್ದು ಎಂದು ಹೇಳಿಕೊಂಡು ವಿಡಿಯೋ ಪೋಸ್ಟ್ ಮಾಡಿ, “ಆಗ್ರಾ ವಿಮಾನ ನಿಲ್ದಾಣದಲ್ಲಿ ಒಂದು ದೊಡ್ಡ ಘಟನೆ ಸಂಭವಿಸಿದೆ. ಲ್ಯಾಂಡಿಂಗ್ ಸಮಯದಲ್ಲಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವಂತೆ ಆಗ್ರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್‌ ಮಾಡಿದಾಗ ಅಂತಹ ಯಾವುದೇ ಘಟನೆ ಸಂಭವಿಸಿದ ವರದಿಗಳಿಲ್ಲ. ವೈರಲ್ ಆದ ವಿಡಿಯೋವನ್ನು ವಿವರವಾಗಿ ತನಿಖೆ ಮಾಡಿದಾಗ, ಇದು ನಕಲಿ ಎಂದು ಸಾಬೀತಾಗಿದೆ. ವಾಸ್ತವವಾಗಿ, ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ವಿಡಿಯೋವನ್ನು ಆಗ್ರಾದಿಂದ ಬಂದಿದೆ ಎಂದು ಹೇಳಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋವನ್ನು ತನಿಖೆ ಮಾಡಲು ನಾವು ಮೊದಲು ಗೂಗಲ್ ಓಪನ್ ಸರ್ಚ್ ಟೂಲ್ ಅನ್ನು ಬಳಸಿ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದ ಹೇಳಿಕೆಯನ್ನು ದೃಢೀಕರಿಸುವ ಒಂದೇ ಒಂದು ಸುದ್ದಿ ನಮಗೆ ಸಿಗಲಿಲ್ಲ. ಆಗ್ರಾದಲ್ಲಿ ಎಲ್ಲಿಯಾದರೂ ವಿಮಾನ ಅಪಘಾತಕ್ಕೀಡಾಗಿದ್ದರೆ, ಅದು ಖಂಡಿತವಾಗಿಯೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು.ಆದರೆ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಬಳಿಕ ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವಿಡಿಯೋದಲ್ಲಿ ಎಕ್ಸ್‌ಟ್ರೀಮ್ ಡ್ರೈವ್ ಎಂದು ಬರೆದಿರುವುದು ಕಾಣಬಹುದು. ಇದರ ಆಧಾರದ ಮೇಲೆ, ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಎಕ್ಸ್‌ಟ್ರೀಮ್ ಡ್ರೈವ್ ಹೆಸರಿನ ಹ್ಯಾಂಡಲ್ ಅನ್ನು ಸರ್ಚ್ ಮಾಡಿದಾಗ, ಮೇ 1 ರಂದು ಇಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಅನೇಕ ಬಳಕೆದಾರರು ತಮ್ಮ ಕಾಮೆಂಟ್‌ಗಳಲ್ಲಿ ಇದನ್ನು AI ವಿಡಿಯೋ ಎಂದು ಕರೆದಿದ್ದಾರೆ. ಈ ವಿಡಿಯೋ ಹಲವಾರು ವೇದಿಕೆಗಳಲ್ಲಿ ಕಂಡುಬಂದಿದೆ. ಈ ವೀಡಿಯೊವನ್ನು ಇನ್​ಸ್ಟಾಗ್ರಾಮ್ ಮತ್ತು ಯೂಟ್ಯೂಬ್​ನಲ್ಲಿ ವಿಭಿನ್ನ ದಿನಾಂಕಗಳಲ್ಲಿ ವಿಭಿನ್ನ ಹೇಳಿಕೆಯೊಂದಿಗೆ ವೈರಲ್ ಮಾಡಲಾಗಿದೆ.

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಮಾನದ ಲೋಗೋ ವಿಚಿತ್ರವಾಗಿದೆ. ಲೋಗೋದ ಬದಲಿಗೆ ಅಸ್ಪಷ್ಟ ಪದಗಳನ್ನು ಬಳಸಲಾಗಿದೆ. ಅದೇ ರೀತಿ, ವಿಮಾನದ ಕಿಟಕಿಗಳು ಅಸ್ವಾಭಾವಿಕವಾಗಿ ಅಲುಗಾಡುತ್ತಿರುವುದು ಕಂಡುಬಂದಿದೆ. ವಿಮಾನ ಕೆಳಗೆ ಬಿದ್ದಾಗ ಅವು ತಮ್ಮ ಆಕಾರವನ್ನು ಬದಲಾಯಿಸುತ್ತವೆ. ಇದೆಲ್ಲವೂ ವೈರಲ್ ವೀಡಿಯೊ ನಿಜವಲ್ಲ ಎಂಬ ಅನುಮಾನ ಮೂಡಿತು.

vishvasnews

ಹಾಗಾಗಿ ಎಐ ಅಂಶಗಳನ್ನು ಪತ್ತೆ ಹಚ್ಚುವ ಸಾಫ್ಟ್​ವೇರ್ WasitAI ನಲ್ಲಿ ಈ ವಿಡಿಯೋವನ್ನು ರನ್ ಮಾಡಿದಾಗ ಇದು AI ರಚಿತ ಎಂದು ಫಲಿತಾಂಶ ನೀಡಿದೆ. ಈ ವಿಡಿಯೋವನ್ನು AI ಸಹಾಯದಿಂದ ರಚಿಸಲಾಗಿದೆ ಎಂದು ಹೇಳಿದೆ. ಈ ಎಲ್ಲ ಮಾಹಿತಿಯ ಆಧಾರದ ಮೇಲೆ  ವೈರಲ್ ವಿಡಿಯೋ ನಕಲಿ ಎಂಭುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಗ್ರಾದಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ, ವೈರಲ್ ಆಗುತ್ತಿರುವ ವಿಡಿಯೋ ಎಐ ಯಿಂದ ರಚಿಸಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಎಐ ಯಿಂದ ರಚಿಸಲಾದ ನಕಲಿ ವಿಡಿಯೋವನ್ನು ನೈಜ ಘಟನೆ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 65 ವರ್ಷದ ಅಜ್ಜಿಯನ್ನು ಮದುವೆಯಾದ 21 ವರ್ಷದ ಯುವಕ ಎಂದು ಸ್ಕ್ರಿಪ್ಟ್‌ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights