FACT CHECK | ಮುಸ್ಲಿಂ ವ್ಯಕ್ತಿಯ ಗಡ್ಡವನ್ನೆಳೆದು ಹಲ್ಲೆ ಮಾಡಿದ ವ್ಯಕ್ತಿ ಹಿಂದೂ ಅಲ್ಲ
ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಂ ವ್ಯಕ್ತಿಯ ಗಡ್ಡ ಎಳೆದು ಹಲ್ಲೆ ನಡೆಸಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಿಂದೂ ವ್ಯಕ್ತಿಯೊಬ್ಬರು ಮುಸ್ಲಿಂ ವ್ಯಕ್ತಿಯ ಗಡ್ಡವನ್ನು ಎಳೆದು ಹಲ್ಲೆ ಮಾಡುತ್ತಿರುವುದನ್ನು ತೋರಿಸಲಾಗಿದ್ದು, ಈ ಘಟನೆ ಭಾರತದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
“ಮುಸ್ಲಿಂ ಗುರುತುಗಳು ಮುಸ್ಲಿಮರ ಮೇಲೆ ಕಿರುಕುಳ ಮಾಡಲು ಸಹಾಯ ಮಾಡುತ್ತದೆ. ಅವರ ಗಡ್ಡ, ಕ್ಯಾಪ್ ಮತ್ತು ಗುರುತಿನ ಕಾರಣದಿಂದಾಗಿ ಅವರು ಯಾವುದೇ ಸಮಯದಲ್ಲಿ ದ್ವೇಷ ಮತ್ತು ಗುಂಪು ಹತ್ಯೆಗೆ ಬಲಿಯಾಗಬಹುದು! ಅತ್ಯಂತ ದುರದೃಷ್ಟಕರ ವಿಷಯವೆಂದರೆ ಈ ದ್ವೇಷಕ್ಕೆ ಸರ್ಕಾರದ ರಕ್ಷಣೆ ಇದೆ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ, ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಂ ವ್ಯಕ್ತಿಯ ಗಡ್ಡ ಎಳೆದು ಹಲ್ಲೆ ನಡೆಸಿರುವುದು ನಿಜವೇ ಎಂದು ಪರಿಶೀಲಿಸಲು ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಜೂನ್ 28 ರಂದು ನ್ಯೂಸ್ 18 ಮಾಡಿದ ವರದಿಯೊಂದು ಲಭ್ಯವಾಗಿದೆ.

ಈ ವರದಿಗಳ ಪ್ರಕಾರ, ಈ ಘಟನೆ ಬಾಂಗ್ಲಾದೇಶದ ಘಿಯೋರ್ ಉಪಜಿಲ್ಲಾದಲ್ಲಿ ನಡೆದಿದ್ದು, ಅಲ್ಲಿ ಅಲಿ ಅಜಮ್ ಮಾಣಿಕ್ ಎಂಬ ಸ್ಥಳೀಯ ಕಂಪ್ಯೂಟರ್ ಅಂಗಡಿ ಮಾಲೀಕ ನಾಸಿಮ್ ಭೂಯಾನ್ ಎಂಬ ವ್ಯಕ್ತಿಯಿಂದ ಹಲ್ಲೆಗೊಳಗಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.ಮಾಣಿಕ್ ಗಂಜ್ ಜಿಲ್ಲೆಯಲ್ಲಿ ಅಲಿ ‘ಮಾಣಿಕ್ ಕಂಪ್ಯೂಟರ್’ ಎಂಬ ಅಂಗಡಿಯನ್ನು ನಡೆಸುತ್ತಿದ್ದ ಎನ್ನಲಾಗಿದೆ. ನಾಸಿಮ್ ಪ್ರತಿದಿನ ಅಂಗಡಿಗೆ ಭೇಟಿ ನೀಡಿ, ತನ್ನ ಕೆಲಸ ಮುಗಿಸಿಕೊಂಡು, ಹಣ ನೀಡದೆ ಹೊರಟುಹೋದನೆಂದು ವರದಿಯಾಗಿದೆ. ಅಲಿ ಹಣ ಪಾವತಿಸಲು ಕೇಳಿದಾಗ, ನಾಸಿಮ್ ಅಂಗಡಿಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ ಎಂದು ವರದಿಯಾಗಿದೆ.
ಜೂನ್ 23, 2025 ರಂದು, ನಾಸಿಮ್ ಮತ್ತೆ ಅಂಗಡಿಗೆ ಭೇಟಿ ನೀಡಿದ್ದ, ಆದರೆ ಅಲಿ ಇನ್ನೊಬ್ಬ ಗ್ರಾಹಕರ ಕೆಲಸ ಮಾಡುತ್ತಿದ್ದ ಕಾರಣ ಕಾಯಲು ತಿಳಿಸಿದ್ದ. ಇದರಿಂದ ಕೋಪಗೊಂಡ ನಾಸಿಮ್ ಅಲಿಯ ಗಡ್ಡವನ್ನು ಎಳೆದು ಹಲ್ಲೆ ಮಾಡಿದನು. ಅಂಗಡಿಯಲ್ಲಿದ್ದ ಇತರ ಗ್ರಾಹಕರು ದಾಳಿಯನ್ನು ತಡೆಯಲು ಮಧ್ಯಪ್ರವೇಶಿಸಿದರು. ಘಟನೆಯ ಸಮಯದಲ್ಲಿ, 15,000 ಮೌಲ್ಯದ ಕಂಪ್ಯೂಟರ್ ಮಾನಿಟರ್ ಗೆ ಹಾನಿಯಾಗಿದ್ದು, ಅಲಿ ಘಿಯೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ನಂತರ ನಾಸಿಮ್ನನ್ನು ಜೂನ್ 27, 2025 ರಂದು ಬಂಧಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ವಿವಾದದ ಫೋಟೋಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗಿದ್ದು, ಇದನ್ನು ಕೋಮು ನಿರೂಪಣೆಯೊಂದಿಗೆ ಭಾರತದಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿದೆ. ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಆಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತ ಎಂದು AI ವಿಡಿಯೋ ಹಂಚಿಕೆ

