43,574ಕೋಟಿಗೆ ರಿಲಯನ್ಸ್ ಜಿಯೋದಲ್ಲಿ 9.99% ಷೇರು ಖರೀದಿಸಿದ ಫೇಸ್ಬುಕ್

ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ 43,574ಕೋಟಿಗೆ (5.7 ಬಿಲಿಯನ್ ಡಾಲರ್) ರಿಲಯನ್ಸ್ ಜಿಯೋದಲ್ಲಿ 9.99% ಷೇರುಗಳನ್ನು ಖರೀದಿಸಿದೆ. ಡಿಜಿಟಲ್ ಆಪ್, ಮೊಬೈಲ್ ಸೇವೆ ವಲಯದಲ್ಲಿರುವ ರಿಲಯನ್ಸ್ ಜಿಯೋ ಇಲ್ಲಿಯವರೆಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಸಂಪೂರ್ಣ ಒಡೆತನದ ಸಂಸ್ಥೆಯಾಗಿತ್ತು.

ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಫೇಸ್ಬುಕ್ ನಲ್ಲಿ ಇದರ ಬಗ್ಗೆ ಪೋಸ್ಟ್ ಬರೆದಿದ್ದು “ಕೆಲವು ಪ್ರಮುಖ ಯೊಜನೆಗಳ ಮೇಲೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಮತ್ತು ಅದು ಭಾರತದಾದ್ಯಂತ ಜನರಿಗೆ ಹಲವು ವಾಣಿಜ್ಯ ಅವಕಾಶಗಳನ್ನು ಸೃಷ್ಟಿಸಲಿದೆ” ಎಂದಿರುವುದಲ್ಲದೆ “ಲಾಕ್ ಡೌನ್ ನಿಂದ ಹಲವು ಉದ್ದಿಮೆದಾರರಿಗೆ ಗ್ರಾಹಕರ ಜೊತೆಗೆ ಹೊಸ ಸಂಪರ್ಕಗಳನ್ನು ಮತ್ತು ವ್ಯವಹಾರವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಹೊಸ ಡಿಜಿಟಲ್ ಸಲಕರಣೆಗಳು ಬೇಕಾಗಿದೆ. ಇದಕ್ಕೆ ನಾವು ಸಹಾಯ ಮಾಡಬಲ್ಲೆವು – ಅದಕ್ಕಾಗಿಯೇ ನಾವು ಜಿಯೋ ಜೊತೆಗೆ ಸೇರಿಕೊಂಡು ಭಾರತದಲ್ಲಿ ಜನರಿಗೆ ಮತ್ತು ವ್ಯವಹಾರಕಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಕರಿಸಲಿದ್ದೇವೆ” ಎಂದು ಬರೆದಿದ್ದಾರೆ.

ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ “ನಮ್ಮ ದೀರ್ಘ ಕಾಲದ ಜತೆಗಾರನಾಗಿ ಫೇಸ್ಬುಕ್ ಅನ್ನು ಸ್ವಾಗತಿಸುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ” ಎಂದಿರುವ ಅವರು “ಈ ಒಪ್ಪಂದ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯ ಕನಸನ್ನು ಸಾಕಾರಗೊಳಿಸುವುದಕ್ಕೆ ಸಹಕಾರಿಯಾಗುವುದಲ್ಲದೆ, ಪ್ರತಿ ಭಾರತೀಯನಿಗೂ ಸುಲಭವಾಗಿ ಬದುಕುವುದಕ್ಕೆ ಮತ್ತು ಸುಲಭವಾಗಿ ವ್ಯವಹಾರ ನಡೆಸುವುದಕ್ಕೆ ನೆರವಾಗುವ ದೊಡ್ಡ ಗುರಿ ಹೊಂದಿದೆ. ಕೊರೊನ ನಂತರದ ದಿನಗಳಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುವ ನಂಬಿಕೆ ಇದೆ” ಎಂದಿದ್ದಾರೆ.

ಈ ಹೊಂದಾಣಿಕೆಯಿಂದ ವಾಟ್ಸ್ ಆಪ್ ಸೂಪರ್ ಆಪ್ ಆಗಿ ಹೊರಹೊಮ್ಮಲಿದೆ ಎಂದು ತಿಳಿಸಿರುವ ಹೇಳಿಕೆಯಲ್ಲಿ “ನಮ್ಮ ಹೊಂದಾಣಿಕೆ, ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಜನರು ಹೊಸ ರೀತಿಯಲ್ಲಿ ವ್ಯವಹಾರ ಮಾಡುವುದಕ್ಕೆ ಅನುಕೂಲ ಮಾಡಿಕೊಡುವ ಗುರಿ ಹೊಂದಿದೆ. ಉದಾಹರಣೆಗೆ ನಾವು ಜಿಯೋಮಾರ್ಟ್ ಅನ್ನು ವಾಟ್ಸ್ ಆಪ್ ಬಲದೊಂದಿಗೆ ಹೊಂದಿಸಿ ಹಲವು ವ್ಯವಹಾರಗಳನ್ನು ಒಟ್ಟಿಗೆ ತರುವ, ಮೊಬೈಲ್ ಖರೀದಿಯನ್ನು ಸುಲಭವಾಗಿಸುವ ಯೋಜನೆ ಹೊಂದಿದ್ದೇವೆ” ಎಂದಿದ್ದಾರೆ.

ಭಾರತದಲ್ಲಿ 400 ಮಿಲಿಯನ್ ನಷ್ಟು ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್, ಡಿಜಿಟಲ್ ಹಣ ವ್ಯವಹರಿಸುವುದಕ್ಕೆ ಸರ್ಕಾರದಿಂದ ಪರವಾನಗಿಗೆ ಸದ್ಯಕ್ಕೆ ಕಾಯುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights