Corona vs IPL : ರಸದೌತಣ ನೀಡುವ ಕ್ರಿಕೆಟ್‌ ಟೂರ್ನಿಗೂ ಕೊರೊನಾ ಕಂಟಕ..!

ಚಿಯರ್ ಗರ್ಲ್ಸ್ ಸಂಭ್ರಮ, ಸಿಕ್ಸ-ಫೋರ್‌ಗಳ ಸುರಿಮಳೆ, ಸೂಪರ್ ಮ್ಯಾನ್ ಕ್ಯಾಚ್, ಅದ್ಭುತ ಫೀಲ್ಡಿಂಗ್, ಎಗರಿ ಬೀಳೋ ವಿಕೆಟ್‌ಗಳು ಇದೆಲ್ಲಾ ಕಾಣಸಿಕ್ಕೋ ಭಾರತದ ಕ್ರಿಕೆಟ್‌ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಂಕಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿ ನಡೆಯೋದೇ ಅನುಮಾನವೆಂಬಂತಾಗಿದೆ. ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್‌ ರಸದೌತಣ ಉಣಬಡಿಸೋ ಕ್ರಿಕೆಟ್‌ ಟೂರ್ನಿಗೆ ಕಂಟಕ ಎದುರಾಗಿದೆ.

ಮಾರಕ ಸೋಂಕು ಕೊರೊನಾ ವೈರಸ್‌ನಿಂದಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್‌ ಇನ್ ಇಂಡಿಯಾವು (ಬಿಸಿಸಿಐ) ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸಬೇಕಾದ ಒತ್ತಡದಲ್ಲಿದೆ. ಐಪಿಎಲ್ ವೇಳಾಪಟ್ಟಿಯಂತೆ ಟೂರ್ನಿ ಏಪ್ರಿಲ್ 29ಕ್ಕೆ ಆರಂಭವಾಗಬೇಕಿತ್ತು.

ಒಲಿಂಪಿಕ್ಸ್ ಮುಂದೂಡಿಕೆ, ಭಾರತದ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ವಿಧಿಸಿರುವುದರಿಂದ ಬಿಸಿಸಿಐ, ಐಪಿಎಲ್ ಅನ್ನು ರದ್ದುಗೊಳಿಸುವ ಅನಿವಾರ್ಯತೆಯಲ್ಲಿದೆ.

‘ಈ ಸಂದರ್ಭದಲ್ಲಿ ಏನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಐಪಿಎಲ್ ಅನ್ನು ಮುಂದೂಡಿದ ದಿನದಲ್ಲಿ ಇದ್ದ ಸ್ಥಿಯಲ್ಲೇ ಇದ್ದೇವೆ. ಕಳೆದ 10 ದಿನಗಳಿಂದ ಏನೂ ಬದಲಾವಣೆಯಾಗಿಲ್ಲ. ಹೀಗಾಗಿ ನಿಮ್ಮ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ,’ ಎಂದು ಮಾರ್ಚ್ 24ರಂದು ಮಾತನಾಡಿದ್ದ ಗಂಗೂಲಿ ಹೇಳಿದ್ದರು
ಜಪಾನ್‌ನ ಟೋಕಿಯೋದಲ್ಲಿ ನಡೆಯಬೇಕಿದ್ದ 2020 ಒಲಿಂಪಿಕ್ಸ್ ಕ್ರೀಡಾಕೂಟವೇ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಮಾರ್ಚ್ 29ಕ್ಕೆ ಆರಂಭಗೊಳ್ಳಬೇಕಾಗಿದ್ದ ಐಪಿಎಲ್ ಕೂಡ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ಈ ವರ್ಷ ಐಪಿಎಲ್ ನಡೆಯೋದೇ ಅನುಮಾನವೆಂಬಂತಾಗಿದೆ. ಹಾಗೂ ನಡೆದರೂ ಜುಲೈನಿಂದ ಸೆಪ್ಟೆಂಬರ್ ಮಧ್ಯೆ ನಡೆಯಬಹುದು ಎನ್ನಲಾಗುತ್ತಿದೆ.

ಮೊದಲು ‘ಮನುಷ್ಯತ್ವ ಮೊದಲು ಉಳಿದೆಲ್ಲವೂ ಅನಂತರ ಬರುತ್ತದೆ. ಈಗಿನ ಸಂದರ್ಭ ಗಮನಿಸಿದರೆ ಪರಿಸ್ಥಿತಿ ಬೇಗ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ಮಾತನಾಡುವಂತೆಯೇ ಇಲ್ಲ. ಒಂದು ವೇಳೆ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ಐಪಿಎಲ್ ನಡೆಯಲಾರದು,’ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಮಾಲಕ ನೆಸ್ ವಾಡಿಯಾ ಪಿಟಿಐ ಜೊತೆ ಹೇಳಿಕೊಂಡಿದ್ದರು.

ಕೊರೊನಾ ಭೀತಿಯಿಂದ ಮಾರ್ಚ್ 24ರಂದು ಐಪಿಎಲ್ ಫ್ರಾಂಚೈಸಿ ಮಾಲಕರ ಸಭೆಯನ್ನೂ ಬಿಸಿಸಿಐ ರದ್ದು ಮಾಡಿತ್ತು. ಸೋಂಕು ಹಬ್ಬುವುದನ್ನು ತಪ್ಪಿಸಲು ಭಾರತದಾದ್ಯಂತ ಏಪ್ರಿಲ್ 15ರ ವರೆಗೂ ಲಾಕ್ ಡೌನ್ ವಿಧಿಸಲಾಗಿದೆ. ವಿಶ್ವದಾದ್ಯಂತ ಸುಮಾರು 381761ಕ್ಕೂ ಹೆಚ್ಚು ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಸುಮಾರು 16558ಕ್ಕೂ ಹೆಚ್ಚು ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights