Delhi Election :APP ಗೆಲುವು : ಕೋಮುವಾದ ರಾಜಕಾರಣಕ್ಕೆ ಅಭಿವೃದ್ಧಿಯ ಉತ್ತರ..

ಶಾಲೆ, ಆಸ್ಪತ್ರೆಗಳನ್ನು ಚೆನ್ನಾಗಿ ಮಾಡಿದ್ದಲ್ಲದೇ ನೀರು ಹಾಗೂ ವಿದ್ಯುತ್‍ನ ಬಿಲ್ ಕಡಿಮೆ ಮಾಡಿದ್ದ ಸರ್ಕಾರವು ದೆಹಲಿ ಜನರಲ್ಲಿ ‘ಫೀಲ್‍ಗುಡ್’ ಭಾವನೆ ಬರುವಂತೆ ಮಾಡಿತ್ತು. ಅದನ್ನು ಒಡೆಯಲು ಬಿಜೆಪಿಯ ಬಳಿ ಸಮರ್ಥ ವಾದವಿರಲಿಲ್ಲ. ದೆಹಲಿಯ ಕನ್ನಾಟ್‍ ಸ್ಥಳದಲ್ಲಿ ನಾವು ಕಳೆದ 2 ಗಂಟೆಗಳು ಅದನ್ನು ಸಾಬೀತುಮಾಡಿದವು.

ಚುನಾವಣೆಯು ಇನ್ನೂ ಐದು ದಿನಗಳಿವೆ ಎಂದಾಗ ಒಂದು ಪುಟ್ಟ ತಂಡದ ಭಾಗವಾಗಿ ದೆಹಲಿಗೆ ಹೊರಟ ಸಂದರ್ಭದಲ್ಲಿ ಹೊರಬಿದ್ದಿದ್ದ ಸಮೀಕ್ಷೆಗಳು ಆಪ್ ಪಕ್ಷಕ್ಕೆ ಬಹುಮತ ಬರುತ್ತವೆಂದು ಹೇಳಿದ್ದವು. ಆದರೆ, ಖುದ್ದು ಪ್ರಧಾನಮಂತ್ರಿಯೂ ಸೇರಿದಂತೆ ಬಿಜೆಪಿಯ ಎಲ್ಲಾ ದೊಡ್ಡ ನಾಯಕರುಗಳೂ ಕೋಮು ಧ್ರುವೀಕರಣಕ್ಕೆ ಕೈ ಹಾಕಿದ್ದು ಎದ್ದು ಕಾಣುತ್ತಿತ್ತು. ಇದರಿಂದ ಆಪ್ ಪಾಳೆಯದಲ್ಲೂ ಸ್ವಲ್ಪಮಟ್ಟಿಗಿನ ಆತಂಕ ಉಂಟಾಗಿತ್ತು. ದೆಹಲಿಯಿಂದ ಬಂದಕೂಡಲೇ ಗೆಳೆಯರು ಚುನಾವಣಾ ಫಲಿತಾಂಶ ಏನಾಗಬಹುದು ಎಂದು ಕೇಳಿದಾಗ ನಮ್ಮ ಉತ್ತರ ಸ್ಪಷ್ಟವಿತ್ತು.

‘ಇವಿಎಂ ತಿರುಚುವಿಕೆಯ ವಾದದ ಪರವಾಗಿ ನಾನು ಎಂದೂ ಇಲ್ಲ. ಆದರೆ, ದೆಹಲಿಯ ಚುನಾವಣಾ ಪ್ರಚಾರ, ಜನಸಾಮಾನ್ಯರ ಒಲವುಗಳು ಮತ್ತು ಖುದ್ದಾಗಿ ನಡೆಸಿದ ಅಧ್ಯಯನದ ನಂತರ ಒಂದು ಮಾತನ್ನಂತೂ ಖಚಿತವಾಗಿ ಹೇಳಬಹುದು. ಈ ಚುನಾವಣೆಯಲ್ಲಿ ಆಪ್ ಪಕ್ಷವು ಕನಿಷ್ಠ 45ರಿಂದ 50 ಸೀಟುಗಳನ್ನು ಗೆಲ್ಲದಿದ್ದರೆ ಇವಿಎಂ ತಿರುಚುವಿಕೆಯು ನಡೆಯುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಒಂದುವೇಳೆ ಕೋಮು ಧ್ರುವೀಕರಣದ ಪ್ರಯತ್ನ ನಡೆಯದೇ ದೆಹಲಿಯ ಅಭಿವೃದ್ಧಿಯ ಆಧಾರದ ಮೇಲಷ್ಟೇ ಚುನಾವಣೆ ನಡೆದಿದ್ದರೆ ಆಪ್ ಪಕ್ಷವು 65ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುತ್ತದೆ.’

ನಮ್ಮ ತಂಡವು ದೆಹಲಿಯ ವಿವಿಧ ವಿಭಾಗಗಳಲ್ಲಿ ಸುಮಾರು 250 ಜನರನ್ನು ಮಾತಾಡಿಸಿದ್ದಲ್ಲದೇ, ಆಪ್ ಪಕ್ಷದ ಪ್ರಚಾರದ ಉಸ್ತುವಾರಿ ಹೊತ್ತಿದ್ದವರ ಜೊತೆ ಚರ್ಚೆ ನಡೆಸಿತು. ವಿವಿಧ ಬಡಾವಣೆಗಳಲ್ಲಿ ತಳಮಟ್ಟದಲ್ಲಿ ನಡೆಯುತ್ತಿದ್ದ ಅಭ್ಯರ್ಥಿಗಳ ಕ್ಯಾಂಪೇನ್ ಮತ್ತು ಅದಕ್ಕೆ ಜನರ ಪ್ರತಿಕ್ರಿಯೆಯನ್ನು ಗಮನಿಸಿತು. ಆಪ್ ಮತ್ತು ಬಿಜೆಪಿ ಪಕ್ಷವು ಜನ ಸೇರುವ ಕಡೆ ನಡೆಸುತ್ತಿದ್ದ ಪ್ರಚಾರವನ್ನು ‘ಪ್ರಚಾರದ ಕಡೆಯ ಘಳಿಗೆ’ಯವರೆಗೂ (ಫೆ.6ರ ಸಂಜೆ 6 ಗಂಟೆ) ನೋಡಿದೆವು. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರು ಯಾವ ಪಕ್ಷವನ್ನು ಯಾವ ರೀತಿ ಸಮರ್ಥಿಸಿಕೊಳ್ಳುತ್ತಿದ್ದಾರೆಂಬುದನ್ನು ಪರಿಶೀಲಿಸಿದೆವು.

ಬೀದಿಯಲ್ಲಿ ಮಾತಾಡಿಸಿದವರಲ್ಲಿ ಶೇ.80ರಷ್ಟು ಜನರು ಆಪ್‍ಗೆ ಮತ ಹಾಕುತ್ತೇವೆಂದು ಹೇಳಿದರೆ, ಒಟ್ಟು 4 ಜನರು ಮಾತ್ರ ಕಾಂಗ್ರೆಸ್ ಹೆಸರನ್ನು ಹೇಳಿದರು. ಬಿಜೆಪಿಗೆ ಮತ ಹಾಕುತ್ತೇವೆಂದು ಹೇಳಿದವರಲ್ಲಿ ಪ್ರತಿಯೊಬ್ಬರೂ ಮುಸ್ಲಿಮರು, ಶಹೀನ್‍ಬಾಗ್, ಮೋದಿಯ ಕುರಿತು ಮಾತನಾಡಿದ್ದರು. ನಾವು ಮಾತಾಡಿಸಿದವರಲ್ಲಿ ಬಹುತೇಕರು ಮಧ್ಯಮವರ್ಗಕ್ಕಿಂತ ಕೆಳಗಿನ ಸ್ತರದವರೇ ಆಗಿದ್ದರು. ಅದಕ್ಕಿಂತ ಮೇಲಿನ ವಲಯಗಳವರ ಮನೋಭಾವದ ಕುರಿತು ನಮಗೆ ಸರಿಯಾದ ಗ್ರಹಿಕೆ ಸಿಕ್ಕಲಿಲ್ಲವಾದರೂ, ಈ ತಳಸ್ತರಗಳೇ ನಿರ್ಣಾಯಕವಾಗಿವೆ. ಏಕೆಂದರೆ, ದೆಹಲಿಯ ಶೇ.49ರಷ್ಟು ಜನರು ಸ್ಲಂ ಮತ್ತು ಕೆಳಮಧ್ಯಮ ವರ್ಗದ ಕಾಲೋನಿಗಳಲ್ಲೇ ವಾಸಿಸುತ್ತಾರೆ. ಜೊತೆಗೆ ಈ ದೇಶದಲ್ಲಿ ಹೆಚ್ಚು ಮತ ಹಾಕುವುದು ಈ ಜನರೇ ಆಗಿದ್ದಾರೆ. ಈ ಟ್ರೆಂಡ್ ಮುಂದಿನ ಎರಡು ದಿನಗಳಲ್ಲಿ ಏನಾಗಬಹುದು ಮತ್ತು ಕೋಮುಗಲಭೆಯೇನಾದರೂ ಸಂಭವಿಸಬಹುದಾ ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದರು. ಜಾಮಿಯಾದಿಂದ ಹೊರಟ ಮೆರವಣಿಗೆ ಮೇಲೆ ಮತ್ತು ಶಾಹಿನ್‍ಬಾಗ್‍ನಲ್ಲಿ ಗುಂಡು ಹಾರಿಸಿದ ಪ್ರಕರಣವು ಕೋಮುಉದ್ವಿಗ್ನತೆಯನ್ನು ಉಂಟು ಮಾಡಿರಲಿಲ್ಲವಾದರೂ, ಬಿಜೆಪಿ ಪರಿವಾರದಲ್ಲಿ ಹತಾಶೆ ಮಡುಗಟ್ಟುತ್ತಿರುವುದು ಸ್ಪಷ್ಟವಿತ್ತು. ಹಾಗಾಗಿ ಕಡೆಯ ದಿನದ ಬೆಳವಣಿಗೆಯ ಕುರಿತು ಪ್ರಶ್ನೆಯನ್ನಿಟ್ಟುಕೊಂಡೇ ನಾವು ದೆಹಲಿಯಿಂದ ಮರಳಿದೆವು.

ಈ ಲೇಖನವನ್ನು ನೀವು ಓದುವ ಹೊತ್ತಿಗೆ ಫಲಿತಾಂಶ ಬಂದಿರುತ್ತದೆ. ಹಾಗಾಗಿ ದೆಹಲಿಯ ಮತದಾರರು ಏನು ಉತ್ತರ ಕೊಟ್ಟಿದ್ದಾರೆ ಎಂಬುದು ನೇರವಾಗಿ ಗೊತ್ತಾಗಿರುತ್ತದೆ. ಆದ್ದರಿಂದ ಆಪ್‍ನ ಪ್ರಚಾರದ ತಂತ್ರಗಳು ಇತ್ಯಾದಿಗಳು ಹೇಗಿದ್ದವು ಮತ್ತು ನಾವು ಗ್ರೌಂಡ್‍ನಲ್ಲಿ ಏನು ನೋಡಿದೆವು ಎಂಬುದನ್ನಷ್ಟೇ ಇಲ್ಲಿ ಬರೆಯಲಾಗಿದೆ.

‘ರಾಜಕೀಯ ಪಕ್ಷವಾಗಿ ಮೆಚ್ಯೂರಿಟಿ’ ಪಡೆದುಕೊಂಡ ಆಮ್ ಆದ್ಮಿ ಪಕ್ಷವು ತನ್ನ ‘ಆಕ್ಟಿವಿಸಂ ರೀತಿಯ ವಿಧಾನಗಳಿಂದ’ ಪಾಠ ಕಲಿಯಲು ತೀರ್ಮಾನಿಸಿ ಬಹಳ ಕಾಲವಾಗಿದೆ. ಪಂಜಾಬ್‍ನಲ್ಲಿ ಗೆದ್ದು ಅಧಿಕಾರ ಹಿಡಿಯಬಹುದು ಎಂಬ ಪರಿಸ್ಥಿತಿ ಇದ್ದಾಗ ಅದನ್ನು ಪಡೆಯಲಾಗದ್ದೇ ಇದ್ದುದು ಏಕೆ ಎಂಬುದರ ಬಗ್ಗೆ ಅವರೊಳಗೆ ಗಂಭೀರ ಮಂಥನ ನಡೆದಿದೆ. ಚುನಾವಣಾ ಪ್ರಚಾರದ ಶಿಖರ ಬೇಗ ಮುಟ್ಟಿಬಿಟ್ಟಿದ್ದು (early peaking), ಪ್ರಬಲ ಸ್ಥಳೀಯ ನಾಯಕತ್ವವನ್ನು ಬೆಳೆಸಿ ಮುಂದಕ್ಕೆ ತರದೇ ಇದ್ದದ್ದು, ಪ್ರತೀ ಕ್ಷೇತ್ರದಲ್ಲೂ ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದು ಟಿಕೆಟ್ ಸಿಗದವರು ಅಭ್ಯರ್ಥಿಯ ಕಾಲೆಳೆದದ್ದು ಹೀಗೆ ಹಲವು ಕಾರಣಗಳನ್ನು ಆಪ್‍ನ ಮುಂಚೂಣಿ ನಾಯಕರು ಮುಂದಿಡುತ್ತಾರೆ.

ದೆಹಲಿಯ ಪ್ರಚಾರದ ವಿಚಾರದಲ್ಲಿ ಎದ್ದು ಕಾಣುತ್ತಿದ್ದ ಆಪ್‍ನ ತಂತ್ರಗಳು ಮೂರು. ಇಡೀ ಪ್ರಚಾರವನ್ನು ದೆಹಲಿ ಸರ್ಕಾರದ ಸಾಧನೆಗಳ ಸುತ್ತ ತಿರುಗಿಸುವುದು, ಕೋಮು ಧ್ರುವೀಕರಣದ ಬಿಜೆಪಿಯ ಟ್ರ್ಯಾಪ್‍ಗೆ ಬೀಳದಿರುವುದು ಮತ್ತು ಕೇಜ್ರಿವಾಲ್‍ರನ್ನು ಕೇಂದ್ರೀಕರಿಸಿ ಪ್ರಚಾರ ಮಾಡಿ ‘ಕೇಜ್ರಿವಾಲ್ ಎದುರಿಗೆ ಯಾರು’ ಎಂಬ ಸ್ಥಿತಿ ನಿರ್ಮಿಸಿ ಅದಕ್ಕೆ ಉತ್ತರವಿಲ್ಲದಂತೆ ಮಾಡುವುದು. ಮೊದಲನೆಯ ತಂತ್ರವು ಸಕಾರಾತ್ಮಕವಾದುದು ಮತ್ತು ಅದು ಈ ಪಕ್ಷದ ಸಾಧನೆಗಳಲ್ಲೊಂದು ಎಂದು ಎಲ್ಲರೂ ಒಪ್ಪುತ್ತಾರಾದರೂ, ಎರಡು ಮತ್ತು ಮೂರನೆಯ ತಂತ್ರಗಳ ಕುರಿತು ಕೆಲವರು ಭಿನ್ನಮತವನ್ನೂ ತೋರಬಹುದು. ಕೇಜ್ರಿವಾಲ್ ಶಹೀನ್‍ಬಾಗ್‍ಗೆ ಖುದ್ದಾಗಿ ಹೋಗಿ ಬೆಂಬಲ ತೋರಿಸಬೇಕಿತ್ತು ಹಾಗೂ ಒಬ್ಬನೇ ನಾಯಕನನ್ನು ಈ ಪ್ರಮಾಣದಲ್ಲಿ ಬಿಂಬಿಸುವುದು ಪ್ರಜಾತಾಂತ್ರಿಕವಾಗಿ ಎಷ್ಟು ಸರಿ ಎಂಬ ಮಾತುಗಳನ್ನು ಕೆಲವರು ‘ಪ್ರಜಾತಂತ್ರವಾದಿಗಳು’ ಮುಂದಿಟ್ಟರು. ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ, ಪೊಲಿಟಿಕಲಿ ಕರೆಕ್ಟ್ ಆಗಿದ್ದರೆ ಸಾಕು ಎಂದು ಇಂದಿನ ಸ್ಥಿತಿಯಲ್ಲೂ ಹೇಳುವುದಾದರೆ ಅಂಥವರೊಂದಿಗೆ ನಾವು ಚರ್ಚೆಗೆ ಹೋಗುವುದಿಲ್ಲ ಎಂದು ಆಪ್ ನಾಯಕರೊಬ್ಬರು ಹೇಳಿದರು.

ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿಯ ಒಳಕೊಠಡಿಗಳಲ್ಲಿ ನಡೆದ ಚರ್ಚೆಯಲ್ಲಿ ಅದರ ಮುಖಂಡರು ಪಕ್ಷವು ನಡೆಸುತ್ತಿರುವ ನಾಲ್ಕು ಬಗೆಯ ಪ್ರಚಾರದ ವಿವರಗಳನ್ನು ಮುಂದಿಟ್ಟರು. ಸ್ಥಳೀಯವಾಗಿ ಅಭ್ಯರ್ಥಿಯು ಸ್ಥಳೀಯ ಕಾರ್ಯಕರ್ತರನ್ನೇ ಆಧರಿಸಿ ನಡೆಸುವ ಪ್ರಚಾರ, ಆಪ್‍ನ ದೆಹಲಿ ನಾಯಕತ್ವವು ಕೇಂದ್ರೀಯವಾಗಿ ಸ್ಥಳೀಯ ಕಾರ್ಯಕರ್ತರು ಮತ್ತು ಕಲಾತಂಡಗಳೊಂದಿಗೆ ನಡೆಸುವ ಪ್ರಚಾರ, ದೇಶದ ವಿವಿಧ ಭಾಗಗಳಿಂದ (ಸುಮಾರು 2000 ಜನ ವಾಲಂಟಿಯರ್‌ಗಳು ಬಂದಿದ್ದಾರೆಂದು ಹೇಳಲಾಯಿತು) ಬಂದ ಕಾರ್ಯಕರ್ತರ ಮೂಲಕ ಬಜ್ (Buzz – visibility) ಪ್ರಚಾರ ಹಾಗೂ ಪ್ರಶಾಂತ್ ಕಿಶೋರ್ ನೇತೃತ್ವದ ಐ-ಪ್ಯಾಕ್‍ನವರು ನಡೆಸುವ ಪ್ರಚಾರ. ಕೇಂದ್ರೀಯ ಮಟ್ಟದಲ್ಲಿ ಒಂದಕ್ಕೊಂದು ಸಂಬಂಧ ಸಂಯೋಜನೆ ಇರುತ್ತದಾದರೂ, ನಾಲ್ಕೂ ಸಹಾ ಸಮಾನಾಂತರವಾಗಿ ನಡೆಯುವ ಪ್ರಚಾರಗಳಾಗಿದ್ದವು.

ಅಚ್ಚೇ ಬೀತೇ ಪಾಂಚ್‍ಸಾಲ್ – ಲಗೇ ರಹೋ ಕೇಜ್ರಿವಾಲ್ ಘೋಷಣೆಯಿಂದ ಹಿಡಿದು ಎಲ್ಲೆಡೆ ಕೇಜ್ರೀವಾಲರೇ ಇದ್ದರು. ರಿಪೋರ್ಟ್ ಕಾರ್ಡ್‍ನಲ್ಲಿ ಕೇಜ್ರಿವಾಲರ ಸಾಧನೆಯ ಜೊತೆಗೆ, ಮುಂದಿನ ಐದು ವರ್ಷಗಳಲ್ಲಿ ಈ 10 ಅಂಶಗಳನ್ನು ನಾನು ಜಾರಿ ಮಾಡುತ್ತೇನೆಂಬ ಗ್ಯಾರಂಟಿ ಕಾರ್ಡ್‍ನಲ್ಲೂ ಅರವಿಂದ ಕೇಜ್ರಿವಾಲ್ ನೀಡಿದ ಭರವಸೆ. ನಮ್ಮ ಪ್ರಣಾಳಿಕೆಯನ್ನು ಜಾರಿ ಮಾಡಲು ನಾನಿರುತ್ತೇನೆಂಬ ಮಾತು ಕೊಡುತ್ತೇನೆ. ಬಿಜೆಪಿಯಿಂದ ಯಾರು ಎಂಬ ಪ್ರಶ್ನೆಯನ್ನು ಚುನಾವಣೆಗೆ ನಾಲ್ಕು ದಿನಗಳಿದ್ದಾಗ ಸ್ವತಃ ಕೇಜ್ರಿ ಮುಂದಿಟ್ಟರು. ಬಿಜೆಪಿಯ ಪ್ರಣಾಳಿಕೆ ಬಂದಿದೆ, ಅದನ್ನು ಜಾರಿ ಮಾಡುವ ನಾಯಕ ಯಾರು ಅಂತ ನಾಳೆ 1 ಗಂಟೆ ಒಳಗೆ ಹೇಳಿ, ಅವರೊಂದಿಗೆ ನಾನು ಮುಖಾಮುಖಿ ಚರ್ಚೆಗೆ ಸಿದ್ಧ ಎಂದು ಘೋಷಿಸಿದರು. ಮರುದಿನ 1 ಗಂಟೆಯ ಪತ್ರಿಕಾಗೋಷ್ಠಿಯಲ್ಲಿ ನಾವೂ ಹಾಜರಿದ್ದೆವು. ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಯಾರೂ ಘೋಷಿಸಿರದಿದ್ದರಿಂದ, ಸ್ವತಃ ಅಮಿತ್‍ಶಾ ಬರುವುದಿದ್ದರೆ ನಾನು ಸಿದ್ಧ ಎಂದು ಕೇಜ್ರಿವಾಲ್ ಘೋಷಿಸಿದರು. ಅವರು, ನಾನು, ಅವರ ಕಡೆಯಿಂದ ಒಬ್ಬ ಆ್ಯಂಕರ್ ಮತ್ತು ನಮ್ಮ ಕಡೆಯಿಂದ ಒಬ್ಬ ಆ್ಯಂಕರ್ ಆಗಬಹುದಾ ಎಂದು ಕೇಳಿದರು. ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ಬೇರಾರೂ ಸಮರ್ಥರಿಲ್ಲ ಎಂಬುದನ್ನು ಅವರು ಆ ಮೂಲಕ ನಿರೂಪಿಸಿದ್ದರು.

ಹಾಗೆಯೇ ದೆಹಲಿಯಲ್ಲಿ ತಮ್ಮ ಸಾಧನೆಯೇನು ಎಂಬುದನ್ನು ಮುಂದಿಟ್ಟ ಆಪ್ ಪಕ್ಷದ ಎದುರು ಮಿಕ್ಕವರು ಬಾಯಿಬಿಚ್ಚುವುದೇ ಕಷ್ಟವಿತ್ತು. ಆಪ್ ತಾನು ಹೇಳಿಕೊಂಡಷ್ಟನ್ನು ಸಾಧಿಸಿದೆಯೇ? ದೆಹಲಿಯ ಎಲ್ಲಾ ಶಾಲೆಗಳೂ, ಎಲ್ಲಾ ಮೊಹಲ್ಲಾ ಕ್ಲಿನಿಕ್‍ಗಳೂ ಅವರು ಹೇಳುತ್ತಿರುವಷ್ಟೇ ಗುಣಮಟ್ಟ ಹೊಂದಿದೆಯೇ ಎಂದು ಕೇಳುವ ಪ್ರಯತ್ನವನ್ನು ಬಿಜೆಪಿ ಮತ್ತು ಅದರ ಪರವಾದ ಮೀಡಿಯಾ ಆ್ಯಂಕರ್‌ಗಳು ಮಾಡಿದರು. ಆ ಮೂಲಕ ತಾವು ಆಪ್ ಪರವಾಗಿಯೇ ಪ್ರಚಾರ ಮಾಡುವಂತಾಗುತ್ತದೆ ಎಂಬುದು ಅವರಿಗೆ ಬಹುಬೇಗ ಗೊತ್ತಾಯಿತು. ಪರ್ಸೆಪ್ಶನ್ ಸಂಗ್ರಾಮದಲ್ಲಿ ಆಪ್ ಗೆದ್ದಾಗಿತ್ತಲ್ಲದೇ, ಬೇರಾರೂ ಮಾಡಿರದ ಸಾಧನೆ ಮಾಡಿದ್ದರಿಂದ ‘ನೀವು ಅಧಿಕಾರದಲ್ಲಿ ಇರುವ ಕಡೆ ಇದರಲ್ಲಿ ಅರ್ಧವಾದರೂ ಮಾಡಿದ್ದೀರಾ?’ ಎಂದು ಕೇಳಿದರೆ ಸ್ವತಃ ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಕಷ್ಟವಾಗುತ್ತಿತ್ತು.

ಮೋದಿಯ ಅಭಿಮಾನಿಗಳು ಮತ್ತು ಪ್ರಧಾನಿಯಾಗಿ ಮೋದಿಯೇ ಇರಬೇಕು ಎಂದು ಬಯಸುವವರೂ ರಾಜ್ಯ ಸರ್ಕಾರಕ್ಕೆ ಕೇಜ್ರಿವಾಲೇ ಇರಲಿ ಎಂದು ಹೇಳುವಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಕೇಂದ್ರಕ್ಕೆ ಮೋದಿ, ಸ್ಥಳೀಯವಾಗಿ ಕೇಜ್ರಿವಾಲ್ ಎಂಬ ಒಂದು ಕಿವಿಯಿಂದ ಕಿವಿಗೆ ಹರಡುವ ಕ್ಯಾಂಪೇನ್‍ಅನ್ನು ಸ್ವತಃ ಆಪ್ ತೇಲಿಬಿಟ್ಟಿದೆಯೆಂಬ ಆರೋಪವನ್ನೂ ಕೆಲವರು ಮಾಡಿದರು. ಅದೇನೇ ಇದ್ದರೂ ಆಪ್ ಪಕ್ಷವು ಮೋದಿ ವಿರುದ್ಧ ಈ ಕ್ಯಾಂಪೇನ್‍ಅನ್ನು ಕೇಂದ್ರೀಕರಿಸಲಿಲ್ಲ. ಹಾಗೆಂದು ಬಿಜೆಪಿ ಅಥವಾ ಇನ್ನಾವುದೇ ನಾಯಕರ ಸುತ್ತಲೂ ಸುತ್ತಲಿಲ್ಲ. ಬದಲಿಗೆ ಕೇಜ್ರಿವಾಲ್ ಸುತ್ತ ಕೇಂದ್ರೀಕರಿಸಿದರು!

ಚುನಾವಣೆ ಪೂರ್ವದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಹಾಕಿದ್ದರೆನ್ನಲಾದ ಫ್ಲೆಕ್ಸ್‌ ಹೀಗಿದೆ.

ಶಾಲೆ, ಆಸ್ಪತ್ರೆಗಳನ್ನು ಚೆನ್ನಾಗಿ ಮಾಡಿದ್ದಲ್ಲದೇ ನೀರು ಹಾಗೂ ವಿದ್ಯುತ್‍ನ ಬಿಲ್ ಕಡಿಮೆ ಮಾಡಿದ್ದ ಸರ್ಕಾರವು ದೆಹಲಿ ಜನರಲ್ಲಿ ‘ಫೀಲ್‍ಗುಡ್’ ಭಾವನೆ ಬರುವಂತೆ ಮಾಡಿತ್ತು. ಅದನ್ನು ಒಡೆಯಲು ಬಿಜೆಪಿಯ ಬಳಿ ಸಮರ್ಥ ವಾದವಿರಲಿಲ್ಲ. ದೆಹಲಿಯ ಕನ್ನಾಟ್‍ಪ್ಲೇಸ್‍ನಲ್ಲಿ ನಾವು ಕಳೆದ 2 ಗಂಟೆಗಳು ಅದನ್ನು ಸಾಬೀತುಮಾಡಿದವು. ಅಲ್ಲಿ ತೆರೆದ ಜೀಪ್ ಮತ್ತಿತರ ವಾಹನಗಳಲ್ಲಿ 20ಕ್ಕೂ ಹೆಚ್ಚು ಯುವಕರು ‘ಮೋದಿ, ಮೋದಿ’ ಎಂದು ಕೂಗುತ್ತಾ ಪ್ರಚಾರ ಮಾಡುತ್ತಿದ್ದರು. ಅವರು ಹಾಕಿಕೊಂಡಿದ್ದ ಮೋದಿ ಮುಖವಾಡದ ಜೊತೆಗೆ ಕೈಯ್ಯಲ್ಲೂ ಹತ್ತಿಪ್ಪತ್ತು ಮುಖವಾಡಗಳನ್ನು ಹಿಡಿದಿದ್ದರು. ಅದನ್ನು ಮುಖಕ್ಕೇರಿಸಿಕೊಳ್ಳಲು ಜನರ ಕೊರತೆ ಇತ್ತು. ಕನ್ನಾಟ್‍ಪ್ಲೇಸ್‍ನ ಜನನಿಬಿಡ ಪ್ರದೇಶದಲ್ಲಿ ಅವರ ಘೋಷಣೆ ‘ಗೋಲಿ ಮಾರೋ ಸಾಲೋಂಕೋ’ ಆಗಿತ್ತು!! ಯಾರಿಗೋ ಹೊಡೆಯಲು ಹೋಗುತ್ತಿರುವ ರೀತಿಯ ಬಾಡಿ ಲಾಂಗ್ವೇಜ್ ಮೇಲ್ನೋಟಕ್ಕೇ ಕಾಣುತ್ತಿತ್ತು.

ಫುಟ್‍ಪಾತ್ ಮೇಲೆ ಕೆಲವು ವಸ್ತುಗಳನ್ನು ಮಾರುತ್ತಿದ್ದ ಮಧ್ಯವಯಸ್ಸು ದಾಟಿದ ಮಹಿಳೆಯೊಬ್ಬರು ಅವರನ್ನು ಸುಮ್ಮನೇ ಹೋಗಲು ಬಿಡಲಿಲ್ಲ. ಜೀಪಿನಿಂದಿಳಿದು ಬಂದು ಕರಪತ್ರವನ್ನು ಕೊಟ್ಟವರ ಬಳಿ ಆಕೆ ಏನೋ ವಾದ ಮಾಡುತ್ತಿದ್ದಂತಿತ್ತು. ನಾವು ಹತ್ತಿರಕ್ಕೆ ಹೋಗುವ ಹೊತ್ತಿಗೆ ಆಕೆ ‘15 ಲಕ್ಷ ಎಲ್ಲಿ?’ ಎಂದು ಕೇಳಿದರು. ‘ನಮಗೆ ರಾಮಮಂದಿರ ಇದೆ, 15 ಲಕ್ಷ ಬೇಡ’ ಎಂದು ಎದೆ ಬಡಿದುಕೊಂಡು ಒಬ್ಬ ಹೇಳಿದ್ದಲ್ಲದೇ ಆಕೆಯನ್ನು ದಬಾಯಿಸುವ ರೀತಿ ಮುನ್ನುಗ್ಗುತ್ತಿದ್ದ. ‘ಬೇರೋಜ್‍ಗಾರ್ ಹೋ ಕ್ಯಾ? ಮೋದಿನೇ ಕುಚ್ ರೋಜ್‍ಗಾರ್ ದಿಯಾ? (ನಿರುದ್ಯೋಗಿಯಾ ನೀನು? ಮೋದಿ ಏನಾದರೂ ಕೆಲಸ ಕೊಟ್ಟರಾ?)’ ಎಂದು ಆಕೆ ಕೇಳಿದ್ದು ನಮಗೆ ಆಶ್ಚರ್ಯ ಹುಟ್ಟಿಸಿತು. ಪ್ರತಿಯಾಗಿ ಆತ ‘ತುಮ್‍ಕೋ ಕ್ಯಾ ಕೇಜ್ರಿವಾಲ್‍ನೇ ರೋಜ್‍ಗಾರ್ ದಿಯಾ? (ನಿನಗೆ ಕೇಜ್ರಿವಾಲ್ ಉದ್ಯೋಗ ಕೊಟ್ಟನಾ?)’ ಎಂದ. ಪಕ್ಕದಲ್ಲಿ ನೋಡುತ್ತಿದ್ದ ಒಬ್ಬ ವ್ಯಕ್ತಿ ‘ನೀನೊಬ್ಬ ಕಾರ್ಯಕರ್ತ. ಹೀಗೆ ನಾಗರಿಕರ ಜೊತೆ ಮಾತಾಡುವುದು ಸರಿಯಾ?’ ಎಂದರು. ಬಿಜೆಪಿಯ ಕಾರ್ಯಕರ್ತ ವಾಪಸ್ಸು ‘ಯಾಕೆ, ನಾನು ನಾಗರಿಕ ಅಲ್ವಾ?’ ಎಂದ.

ಅದೇ ಹೊತ್ತಿಗೆ ಇನ್ನೊಂದು 50 ಮೀ ದೂರದಲ್ಲಿ ಆಟೋ ಚಾಲಕರ ಗುಂಪು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿತ್ತು. ಅಲ್ಲಿ ಬಿಜೆಪಿ ಕಾರ್ಯಕರ್ತರು ಹಾದುಹೋದ ನಂತರ ಒಬ್ಬ ಆಟೋ ಚಾಲಕ ಬಿಜೆಪಿಯ ಪರವಾಗಿ ಏನೋ ಹೇಳಿದ್ದಾರೆ. ಉಳಿದವರೆಲ್ಲರೂ ಅದಕ್ಕೆ ತೀವ್ರವಾದ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತಿದ್ದರು. ಅಷ್ಟು ಹೊತ್ತಿಗೆ ಕನಿಷ್ಟ ನಾಲ್ಕೈದು ಆಟೋ ಚಾಲಕರ ಜೊತೆ ನಾವು ಮಾತಾಡಿದ್ದರಿಂದ ಆ ವಾದಗಳು ನಮಗೆ ಪರಿಚಿತವಾಗಿದ್ದವು. ಕೇಜ್ರಿವಾಲ್ ಬರುವ ಮುಂಚೆ ಆಟೋ ಚಾಲಕರು ಲೈಸೆನ್ಸ್ ನವೀಕರಣಕ್ಕೆ ಹೋದರೆ 12,000 ರೂ ಖರ್ಚಾಗುತ್ತಿತ್ತಂತೆ. ‘ನಮ್ಮ ಬಳಿ ಎಲ್ಲಾ ದಾಖಲೆಗಳಿದ್ದರೂ ಸಾಲಿನಲ್ಲಿ ಕಾದು ಕಾದು ಏಜೆಂಟರಿಗೆ, ಸಿಬ್ಬಂದಿಗೆ ಲಂಚ ನೀಡಬೇಕು. ಈಗ ಅಲ್ಲಿ ಕಟ್ಟಬೇಕಾದ 2,000 ರೂ ಮಾತ್ರ ಖರ್ಚಾಗುತ್ತದೆ’. ಆದರೆ ಅಲ್ಲಿನ ಬಿಜೆಪಿ ಪರವಾದ ವ್ಯಕ್ತಿಯ ಬಳಿ ಬೇರೆ ವಾದವಿತ್ತು. ‘ಕೇಜ್ರಿವಾಲ್ ಮಹಿಳೆಯರಿಗೆ ಬಸ್‍ನಲ್ಲಿ ಫ್ರೀ ಮಾಡಿರುವುದರಿಂದ ನಮಗೆ ವ್ಯಾಪಾರ ಕಡಿಮೆಯಾಗಿದೆ’. ‘ಏನೂ ಇಲ್ಲ. ಮೆಟ್ರೋದಲ್ಲಿ ಹೋಗುತ್ತಿದ್ದವರು ಬಸ್‍ನಲ್ಲಿ ಹೋಗುತ್ತಿದ್ದಾರಷ್ಟೇ. ತಿಂಗಳಿಗೆ 2000 ರೂ ಕಡಿಮೆಯಾದರೆ ಎಷ್ಟೊಂದು ಅನುಕೂಲವಾಗುತ್ತದೆ. ನಮ್ಮನೆ ಹೆಣ್ಣುಮಕ್ಕಳಿಗೂ ಅನುಕೂಲವಾಗುತ್ತಿಲ್ವಾ? ಅಷ್ಟಕ್ಕೂ ಮೀರಿ ಐದು ಪರ್ಸೆಂಟ್ ಕಡಿಮೆಯಾದರೆ ಆಗಲಿ’. ಎಲ್ಲಾ ಆಟೋ ಚಾಲಕರೂ ಈ ವಾದಕ್ಕೆ ದನಿಗೂಡಿಸುತ್ತಿದ್ದರು.

ದೆಹಲಿಯ ಜನರಿಗೆ ನಾವೇನು ಕೊಡುತ್ತೇವೆ ಎಂದು ಬಿಜೆಪಿಯು ಹೇಳಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಅವರು ಶಹೀನ್‍ಬಾಗ್‍ನ ಮೊರೆ ಹೋಗಿದ್ದರು. ಆದರೆ ಅದನ್ನು ಬಿಜೆಪಿ ಬಳಸಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ಹಾಗಾಗಿಯೇ ಎರಡನೇ ಬಾರಿ ಶಹೀನ್‍ಬಾಗ್‍ನಲ್ಲಿ ಗುಂಡು ಹಾರಿಸಿದ ವ್ಯಕ್ತಿಯು ಆಪ್‍ನ ಕಾರ್ಯಕರ್ತ ಎಂದು ದೆಹಲಿಯ ಡಿಸಿಪಿಯೊಬ್ಬರ ಕೈಲಿ ಹೇಳಿಸಲಾಯಿತು. ನಾವು ಭಾಗವಹಿಸಿದ ಆಪ್‍ನ ಪತ್ರಿಕಾಗೋಷ್ಠಿ ನಡೆದ ಸ್ಥಳದಲ್ಲೇ ಆ ವ್ಯಕ್ತಿ ಹಿಂದೊಮ್ಮೆ ಆಪ್ ಸೇರಿದ್ದ. ಈ ಕುರಿತು ಅರವಿಂದ್ ಕೇಜ್ರಿವಾಲ್‍ರನ್ನು ಪತ್ರಕರ್ತರು ಕೇಳಿದರು. ‘ಆತ ನಮ್ಮ ಕಾರ್ಯಕರ್ತ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ತಪ್ಪು ಮಾಡಿದ್ದಾನೆ. ಮೊದಲು ವಿಚಾರಣೆ ನಡೆಸಿ ಶಿಕ್ಷೆ ಕೊಡಿ. ಆಪ್ ಕಾರ್ಯಕರ್ತ ಹೌದಾದರೆ ಡಬಲ್ ಶಿಕ್ಷೆ ಕೊಡಿ’ ಎಂದು ಕೇಜ್ರಿವಾಲ್ ಹೇಳಿದರು. ಬಿಜೆಪಿ ನಡೆಸಿದ ಪ್ರಯತ್ನಗಳು ಸಫಲವಾಗದಂತೆ ನೋಡಿಕೊಳ್ಳುವುದು ಸುಲಭವಿರಲಿಲ್ಲ; ಆದರೆ ‘ರಾಜಕಾರಣಿಯಾಗಿ ಮೆಚ್ಯೂರ್’ ಆಗಿದ್ದ ಕೇಜ್ರಿವಾಲ್‍ರಿಗೆ ಅದು ಕಷ್ಟವೂ ಆಗಿರಲಿಲ್ಲ.

ಆದರೆ, ಬಿಜೆಪಿಯ ಪರವಾಗಿ ವಾದ ಮಾಡುತ್ತಿದ್ದವರೆಲ್ಲರೂ ಅಗ್ರೆಸಿವ್ ಆಗಿದ್ದರು. ರಾತ್ರಿ 10 ಗಂಟೆಯಲ್ಲಿ ಆಂಧ್ರಭವನದಲ್ಲಿ ಊಟ ಮುಗಿಸಿ ಹೊರಬಂದಾಗ ಸಿಕ್ಕ ಟ್ಯಾಕ್ಸಿ ಚಾಲಕ ಅದಕ್ಕೆ ಉದಾಹರಣೆ. ಗಾಡಿ ಹತ್ತುವ ಮುಂಚೆ ಚುನಾವಣೆಯ ಕುರಿತು ಆತನ ಅಭಿಪ್ರಾಯ ಕೇಳಿದೆವು. ಪಕ್ಕದಲ್ಲೇ ಹತ್ತಾರು ಆಟೋ ಚಾಲಕರಿದ್ದು ಅವರುಗಳು ಆಪ್ ಪರವಾಗಿ ಇರುವ ಸಾಧ್ಯತೆ ನಿಚ್ಚಳವಾಗಿತ್ತು. ಆದರೂ ಆತನಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ‘ದೇಶದ ಜನರ ಹೃದಯದಲ್ಲಿ ಮೋದಿಗಿರುವ ಜಾಗವನ್ನು ಯಾರೂ ಬದಲಿಸಲಾಗಿಲ್ಲ. ಹಾಗಾಗಿ ಬಿಜೆಪಿಯೇ ಗೆಲ್ಲುತ್ತದೆ ನೋಡಿ’ ಎಂದಷ್ಟೇ ಹೇಳಿ ಸುಮ್ಮನಾಗಲಿಲ್ಲ. ‘ನಾನು ಬಿಜೆಪಿಯ ಪರ. ನೀವು ನನ್ನ ಗಾಡಿ ಹತ್ತದಿದ್ದರೂ ಪರವಾಗಿಲ್ಲ’ ಎಂದು ಘೋಷಿಸಿದ!!

ಅಂದಹಾಗೆ ಮುಖ್ಯರಸ್ತೆಗಳ ಕೆಲವು ದೊಡ್ಡ ಹೋರ್ಡಿಂಗ್‍ಗಳಲ್ಲಿ ಕಾಂಗ್ರೆಸ್ ಪ್ರಚಾರ ಕಂಡಿತು ಮತ್ತು ಶೀಲಾ ದೀಕ್ಷಿತ್‍ರ ಫೋಟೋ ಅದರಲ್ಲಿ ಎದ್ದು ಕಾಣುತ್ತಿತ್ತು. ಆದರೆ ಒಬ್ಬ ಆಟೋ ಡ್ರೈವರ್ ಹೇಳಿದ ಮಾತು ದೆಹಲಿಯ ಕಾಂಗ್ರೆಸ್‍ನ ಕುರಿತ ಷರಾ ಬರೆದಂತಿತ್ತು.
‘ಕಾಂಗ್ರೆಸ್ ತೋ ಖತಂ ಹೋಗಯಾ’.

                                                                                                      ಡಾ : ವಾಸು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights