ದೆಹಲಿ ನಂತರ AAP ಗುರಿ ಬಿಹಾರ ವಿಧಾನ ಸಭಾ ಚುನಾವಣೆ: APP ನಾಯಕ…

ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಇತ್ತೀಚೆಗೆ ದೆಹಲಿಯಿಂದ ಮರಳಿದ ಎಎಪಿಯ ಬಿಹಾರ ಮುಖ್ಯಸ್ಥ ಶತ್ರುಘನ್ ಸಾಹು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಎಲ್ಲಾ ಸ್ಥಾನಗಳಿಗೆ ಆಪ್‌ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಎಕ್ಸಿಟ್‌ ಪೋಲ್‌ಗಳು ಊಹಿಸಿದಂತೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಉತ್ತಮ ಪ್ರದರ್ಶನ ನೀಡಿದರೆ, ಅದರ ಗೆಲುವು ಬಿಹಾರದ ಮೇಲೆ ನೇರ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ದೆಹಲಿ ವಿಧಾನಸಭಾ ಚುನಾವಣೆಯ ನಂತರ ಮುಂದಿನ ಏಳೆಂಟು ತಿಂಗಳಲ್ಲಿ ನಡೆಯಲಿರುವ ಬಿಹಾರ ರಾಜ್ಯ ಚುನಾವಣೆಯ ಮೇಲೆ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಕಣ್ಣಿಟ್ಟಿದೆ. ಅಲ್ಲಿ ತಾವು ಹೊಸ ಪರ್ಯಾಯವನ್ನು ನೀಡುವುದಾಗಿ ಘೋಷಿಸಿದ್ದಾರೆ.

2015 ರಲ್ಲಿ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಪ್‌ ಸ್ಪರ್ಧಿಸದೆ ಬಿಜೆಪಿ ವಿರೋಧಿ ಗುಂಪನ್ನು ಬೆಂಬಲಿಸಿತ್ತು. ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ಎಎಪಿ ಬಿಹಾರದ 40 ಸ್ಥಾನಗಳಲ್ಲಿ 39 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು ಆದರೆ ಯಾವುದನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. 2019ರಲ್ಲಿಯೂ ಸಹ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆಪ್‌ ಸೋಲನ್ನು ಅನುಭವಿಸಿತ್ತು.

ಆದರೆ ದೆಹಲಿ ಚುನಾವಣೆಯ ನಂತರ ಬಿಹಾರದಲ್ಲಿ ನಡೆಯುತ್ತಿರುವ ‘ಜನ ಸಂವಾದ್ ಯಾತ್ರೆ’ ಮೂಲಕ ಪಕ್ಷವು ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಕೆಲಸ ಈಗಾಗಲೇ ಪ್ರಾರಂಭಿಸಿದೆ ಎಂದು ಸಾಹು ಹೇಳಿದ್ದಾರೆ.

“ನಮಗೆ ಹೆಚ್ಚಿನ ಮಾಧ್ಯಮಗಳು ಪ್ರಚಾರ ನೀಡಿಲ್ಲ, ಆದರೆ ಜನಸಾಮಾನ್ಯರ ಬೆಂಬಲ ಬಹಳ ಉತ್ತೇಜನಕಾರಿಯಾಗಿದೆ” ಎಂದು ಸಾಹು ಹೇಳಿದ್ದಾರೆ.

“ಜನರು ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಸಂತೋಷವಾಗಿಲ್ಲದ ಕಾರಣ ಬದಲಾವಣೆಯನ್ನು ಬಯಸುತ್ತಾರೆ. ಆದರೆ ಅವರು ಆರ್‌ಜೆಡಿಯ ತೇಜಸ್ವಿ ಯಾದವ್‌ರಲ್ಲಿ ಕಾರ್ಯಸಾಧ್ಯವಾದ ಪರ್ಯಾಯವನ್ನು ಕಾಣುವುದಿಲ್ಲ. ಹಳೆಯ ಆರ್‌ಜೆಡಿ ಆಡಳಿತದ ನೆನಪು ಜನರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದೆ. ಆದರೆ ನಾವು ಹೊಸ ಮತ್ತು ವಿಶ್ವಾಸಾರ್ಹ ಪರ್ಯಾಯವನ್ನು ನೀಡುತ್ತೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಜನ ಸಂವಾದ ಯಾತ್ರೆ’ ಈಗಾಗಲೇ ರಾಜ್ಯದ 26 ಜಿಲ್ಲೆಗಳಲ್ಲಿ ನಡೆದಿದೆ ಮತ್ತು ಉಳಿದ ಪ್ರದೇಶಗಳನ್ನು ಒಳಗೊಳ್ಳಲು ಫೆಬ್ರವರಿ 20ರಿಂದ ಪುನರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಎಎಪಿ ಸಾಮಾನ್ಯ ಜನರ ಜೀವನವನ್ನು ಬಾಧಿಸುವ ಸರಳ ಸಮಸ್ಯೆಗಳೊಂದಿಗೆ ಬಿಹಾರಕ್ಕೆ ತನ್ನದೇ ಆದ ಪ್ರವೇಶವನ್ನು ಮಾಡಲು ಬಯಸಿದೆ. ನಾವು ಯಾವುದೇ ರಾಜಕೀಯ ಸಮೀಕರಣಕ್ಕೆ ಬರುವುದಿಲ್ಲ ಅಥವಾ ಯಾವುದೇ ಮೈತ್ರಿಗೆ ಸೇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಉಸ್ತುವಾರಿ ಹೊತ್ತಿರುವ ಸಂಸದ ಸಂಜಯ್ ಸಿಂಗ್ ಮತ್ತು ಪಕ್ಷದ ಇತರ ಹಿರಿಯ ನಾಯಕರು ಕೂಡ ಈ ವರ್ಷ ಬಿಹಾರದಲ್ಲಿ ಹೆಚ್ಚಿನ ಸಮಯ ಕಳೆಯುವ ನಿರೀಕ್ಷೆಯಿದೆ.

ಬಿಹಾರದ ಮೂವರು ಪ್ರಮುಖ ಪಕ್ಷಗಳಾದ ಜನತಾದಳ (ಯುನೈಟೆಡ್), ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ದೆಹಲಿಯಲ್ಲಿ ಎಎಪಿ ವಿರುದ್ಧ ಹೋರಾಡಿದವು ಎಂದು ಸಾಹು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights