Facebook-BJP ನಂಟು: ಫೇಸ್‌ಬುಕ್‌ನ ಭಾರತದ ನಿರ್ದೇಶಕಿ ಅಂಖಿದಾಸ್‌ ವಿರುದ್ಧ ಎಫ್‌ಐಆರ್‌!

ಫೇಸ್‌ಬುಕ್‌ನ ಭಾರತದ ಸಾರ್ವಜನಿಕ ನೀತಿ ನಿರ್ದೇಶಕರಾದ ಅಂಖಿದಾಸ್ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ರಾಯ್‌ಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಗಸ್ಟ್ 17 ರಂದು ಪತ್ರಕರ್ತ ಅವೇಶ್ ತಿವಾರಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಚಾನೆಲ್ ಸ್ವರಾಜ್ ಎಕ್ಸ್‌ಪ್ರೆಸ್‌ನ ರಾಜ್ಯ ಬ್ಯೂರೋ ಮುಖ್ಯಸ್ಥರಾಗಿರುವ ಛತ್ತೀಸ್‌ಗಢ ಮೂಲದ ಪತ್ರಕರ್ತ ಅವೇಶ್ ತಿವಾರಿ ಅವರು ದೂರು ನೀಡಿದ್ದು, “ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಲವಾರು ದ್ವೇಷ ಭಾಷಣ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ನಿರ್ಬಂಧಿಸದಂತೆ ಅಂಖಿ ದಾಸ್ ತನ್ನ ನೌಕರರ ಮೇಲೆ ಒತ್ತಡ ಹೇರಿದ್ದಾರೆ. ಇದು ‘ಭಾರತೀಯ ಮಾರುಕಟ್ಟೆಯಲ್ಲಿ ರಾಜಕೀಯ ಲಾಭ ಗಳಿಸಲು’ ಮಾಡಲಾದ ಅಪರಾಧ” ಎಂದು  ದೂರಿನಲ್ಲಿ ಆರೋಪಿಸಿದ್ದಾರೆ.

ನಿನ್ನೆಯೇ, ಅಂಖಿ ದಾಸ್ ಅವರು ಕೂಡ ತನಗೆ ಮಾರಣಾಂತಿಕ ಬೆದರಿಕೆ ಮತ್ತು ಆನ್‌ಲೈನ್ ಕಿರುಕುಳ ನೀಡಲಾಗುತ್ತಿದೆ ಎಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಆವೇಶ್ ತಿವಾರಿಯವರ ಹೆಸರನ್ನು ಉಲ್ಲೇಖಿಸಿದ್ದು, ಆಗಸ್ಟ್ 16 ರಂದು ತಿವಾರಿ ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಅಂಖಿ ದಾಸ್‌ ಅವರ ಅರೋಪವನ್ನು ತಿವಾರಿ ನಿರಾಕರಿಸಿದ್ದಾರೆ.

 Ankhi Das
Ankhi Das

ಎರಡೂ ಎಫ್‌ಐಆರ್‌ಗಳು ಅಮೆರಿಕ ವಾಲ್‌ಸ್ಟ್ರೀಟ್‌ ಜರ್ನಲ್ ಪ್ರಕಟಿಸಿದ ಫೇಸ್‌ಬುಕ್‌ ಮತ್ತು ಬಿಜೆಪಿ ನಂಟು ವರದಿಯ ನಂತರದ ಬೆಳವಣಿಗೆಗಳಾಗಿವೆ.

ತಿವಾರಿ ದೂರಿನ ಎಫ್‌ಐಆರ್‌ನಲ್ಲಿ ಇತರ ಇಬ್ಬರು ಫೇಸ್‌ಬುಕ್ ಬಳಕೆದಾರರಾದ ಛತ್ತೀಸ್‌ಗಢ ನಿವಾಸಿ ವಿವೇಕ್ ಸಿನ್ಹಾ ಮತ್ತು ಇಂದೋರ್ ನಿವಾಸಿ ರಾಮ್ ಸಾಹು ಅವರನ್ನೂ ಹೆಸರಿಸಲಾಗಿದೆ. ಸಿನ್ಹಾ ಮತ್ತು ಸಾಹು ಸೇರಿದಂತೆ ಅಂಖಿ ದಾಸ್  “ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಉದ್ದೇಶದಿಂದ ವಿಷಯವನ್ನು ಪ್ರಕಟಿಸಲು ಮತ್ತು ಪ್ರಸಾರ ಮಾಡಲು ಫೇಸ್‌ಬುಕ್ ಅನ್ನು ಬಳಸಿದ್ದಾರೆ” ಎಂದು ತಿವಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಟಿ ರಾಜಾ ಸಿಂಗ್, ಅನಂತ್‌ಕುಮಾರ್ ಹೆಗ್ಡೆ ಮತ್ತು ಕಪಿಲ್ ಮಿಶ್ರಾ ಸೇರಿದಂತೆ ಹಲವಾರು ಬಿಜೆಪಿ ನಾಯಕರ ಮೇಲೆ ದ್ವೇಷ ಭಾಷಣ ನಿರ್ಬಂಧವನ್ನು ಅನ್ವಯಿಸದಂತೆ ಅಂಖಿ ದಾಸ್ ಫೇಸ್‌ಬುಕ್‌ನ್ನು ನಿರ್ಬಂಧಿಸಿದ್ದಾರೆ ಎಂದು ಅಮೇರಿಕದ ಪತ್ರಿಕೆ ವರದಿ ಮಾಡಿದ ನಂತರ ಎರಡೂ ಎಫ್‌ಐಆರ್‌ಗಳು ದಾಖಲಾಗಿವೆ.

ಫೇಸ್‌ಬುಕ್‌ನ ಕಟೆಂಟ್‌ ಪಾಲಿಸಿ ನಿಯಮಗಳು ಆಡಳಿತರೂಢ ಬಿಜೆಪಿ ಪರವಾಗಿವೆ. ಬಿಜೆಪಿ ಮತ್ತು ಹಿಂದೂತ್ವ ನಾಯಕರು ದ್ವೇಷ ಭಾಷಣಗಳು ತನ್ನ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದರೂ ಕೂಡ ಫೇಸ್ ಬುಕ್ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿ ಕಾರ್ಯಕರ್ತರ ನಿಯಮ ಉಲ್ಲಂಘನೆಗಳಿಗೆ ಶಿಕ್ಷೆ ನೀಡುವುದು ಅಥವಾ ಪ್ರಶ್ನಿಸುವುದು “ದೇಶದ ಕಂಪನಿಯ ವ್ಯವಹಾರ ಭವಿಷ್ಯವನ್ನು ಹಾನಿಗೊಳಿಸುತ್ತದೆ” ಎಂದು ಫೇಸ್‌ಬುಕ್‌ನ ಹಿರಿಯ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವಾಲ್‌ಸ್ಟ್ರೀಟ್‌ ಜರ್ನಲ್ ವಿಶೇಷ ವರದಿ ಮಾಡಿತ್ತು.

ನಾನು ಎಂದಿಗೂ ದಾಸ್‌ ಅವರನ್ನು ಸಂಪರ್ಕಿಸಿಲ್ಲ ಅಥವಾ ಸಂವಹನ ನಡೆಸಿಲ್ಲ: ತಿವಾರಿ

ನಾನು ಎಂದಿಗೂ ಅಂಖಿ ದಾಸ್‌ ಅವರನ್ನು ಸಂಪರ್ಕಿಸಿಲ್ಲ ಮತ್ತು ಅವರೊಂದಿಗೆ ಸಂವಹನ ನಡೆಸಿಲ್ಲ. ಅವರಿಗೆ ಬೆದರಿಕೆ ಹಾಕಿರುವುದು ಸುಳ್ಳು ಸುದ್ದಿ ಎಂದು ಪತ್ರಕರ್ತ ತಿವಾರಿ ತಿಳಿಸಿದ್ದಾರೆ. ದೂರಿನಲ್ಲಿ ನನ್ನನ್ನು ಏಕೆ ಹೆಸರಿಸಲಾಗಿದೆ ಎಂದು ನನಗೆ ತಿಳಿದಿಲ್ಲ. ನಾನು ಸಹೋದ್ಯೋಗಿಗಳಿಂದ ಇದರ ಬಗ್ಗೆ ತಿಳಿದುಕೊಂಡೆ. ಇದು ಬಹಳ ಮುಖ್ಯವಾದ ವಿಷಯವಾಗಿದೆ. ವಾಸ್ತವದಲ್ಲಿ ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿದ ವರದಿಯನ್ನು ನಾನು ಸರಳವಾಗಿ ಪೋಸ್ಟ್ ಮಾಡಿದ್ದೇನೆ ಎಂದು ತಿವಾರಿ ತಿಳಿಸಿದ್ದಾರೆ.

ಅಂಖಿ ದಾಸ್ ಕುರಿತು ಮಾತನಾಡಿದ್ದಕ್ಕಾಗಿ, ಸಾಹು ಮತ್ತು ಸಿನ್ಹಾ ನನಗೆ ಮಾರಣಾಂತಿಕ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ತಿವಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪುಲ್ವಾಮಾ, ಸಿಎಎ-ಎನ್‌ಆರ್‌ಸಿ ಕುರಿತು ಫೇಸ್‌ಬುಕ್ ನನ್ನ ಪೋಸ್ಟ್‌ಗಳನ್ನು ನಿರ್ಬಂಧಿಸಿದೆ ಎಂದು ತಿವಾರಿ ಹೇಳಿದ್ದಾರೆ. ಫೆಬ್ರವರಿ 2019 ರಿಂದ ಸರ್ಕಾರದ ನೀತಿಗಳನ್ನು ಟೀಕಿಸುವ ಹಲವಾರು ಪೋಸ್ಟ್‌ಗಳನ್ನು ಸೂಕ್ತ ವಿವರಣೆಯಿಲ್ಲದೆ ಫೇಸ್‌ಬುಕ್ ತೆಗೆದುಹಾಕಿದೆ ಎಂದು ಅವರು ಆರೋಪಿಸಿದರು.

25 ವರ್ಷಗಳಿಂದ ಪತ್ರಕರ್ತನಾಗಿರುವ ನಾನು ಪ್ರಶ್ನೆಗಳನ್ನು ಕೇಳುವುದು ನನ್ನ ಕರ್ತವ್ಯ. ಆದರೆ ಪುಲ್ವಾಮಾ ದಾಳಿ, ಸಿಎಎ-ಎನ್‌ಆರ್‌ಸಿ ಮತ್ತು ಛತ್ತೀಸ್‌ಗಢದ ಬುಡಕಟ್ಟು ಸಮಸ್ಯೆಗಳು ಸೇರಿದಂತೆ ನನ್ನ ಹಲವಾರು ಪೋಸ್ಟ್‌ಗಳನ್ನು ಈ ಹಿಂದೆ ಫೇಸ್‌ಬುಕ್ ನಿರ್ಬಂಧಿಸಿದೆ ಎಂದು ತಿವಾರಿ ದೂರಿದ್ದಾರೆ.

ಭಿಲೈ ಅವರ ಬುಡಕಟ್ಟು ಆಂದೋಲನದ ಕುರಿತು ವೈರಲ್ ಆಗಿದ್ದ ನನ್ನ ಲೈವ್ ವೀಡಿಯೊ ಒಂದನ್ನು ಇದ್ದಕ್ಕಿದ್ದಂತೆ ನಿರ್ಬಂಧಿಸಲಾಗಿದೆ. ಇದು ಫೇಸ್‌ಬುಕ್ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ನನಗೆ ತಿಳಿಯಿತು. ಆದರೆ ನಾನು ಏನು ತಪ್ಪು ಮಾಡಿದೆ ಎಂದು ಫೇಸ್‌ಬುಕ್ ಎಂದಿಗೂ ವಿವರಿಸಲಿಲ್ಲ ಎಂದು ತಿವಾರಿ ಆರೋಪಿಸಿದರು.


ಇದನ್ನೂ ಓದಿ:  ಫೇಸ್‌ಬುಕ್‌ಅನ್ನು ಬಿಜೆಪಿ ನಿಯಂತ್ರಿಸುತ್ತಿದೆ; RSSನ ದ್ವೇಷದ ಪೋಸ್ಟ್‌ಗಳಿಗೆ FB ನೆರವಾಗಿದೆ: ವರದಿ


ಇದನ್ನೂ ಓದಿ: ಯಾವುದೇ ರಾಜಕೀಯ ಸ್ಥಾನ ಅಥವಾ ಪಕ್ಷವನ್ನು ಲೆಕ್ಕಿಸದೇ ಹಿಂಸಾತ್ಮಕ ಪೋಸ್ಟ್‌ಗಳನ್ನು ನಿರ್ಬಂಧಿಸುತ್ತೇವೆ: ಫೇಸ್‌ಬುಕ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights