Lock down effect : ಸಾರಿಗೆ, ಅಬಕಾರಿ ಇಲಾಖೆಗಳ ಕೈ ಖಾಲಿ, ಸಂಬಳಕ್ಕೂಹಣವಿಲ್ಲ..

ಕೊರೋನಾ ವಿರುದ್ಧದ ಸುದೀರ್ಘ ಲಾಕ್‌ಡೌನ್ ಪರಿಣಾಮವಾಗಿ ತಿಂಗಳ ಸಂಬಳ ಸಾರಿಗೆಗೂ ವಿವಿಧ ಇಲಾಖೆಗಳ ಬಳಿ ಹಣವಿಲ್ಲದಂತಾಗಿದೆ. ಲಾಕ್‌ಡೌನಿನ ಕಾರಣ ಯಾವುದೇ ಚಟುವಟಿಕೆಗಳು ನಡೆಯದೇ ಆದಾಯ ಮೂಲಗಳಿಗೆ ಕಲ್ಲು ಬಿದ್ದಿದ್ದು, ಇದರಿಂದಾಗಿ ಸಿಬ್ಬಂದಿಯ ಪಗಾರಕ್ಕೂ ಹಣವಿಲ್ಲದಂತಹ ಪರಿಸ್ಥಿತಿ ಹಲವಾರು ಇಲಾಖೆಗಳಲ್ಲಿದೆ.

ದೇಶವ್ಯಾಪಿ ಲಾಕ್‌ಡೌನ್‌ಗೂ ಮುನ್ನವೇ ರಾಜ್ಯದಲ್ಲಿ ಆರಂಭವಾದ ಸಾರಿಗೆ ನಿರ್ಬಂಧದ ಕಾರಣ ಸಾರಿಗೆ ಸಂಸ್ಥೆ ತೀವ್ರ ಹಣಕಾಸಿನ ಮುಗ್ಗಟ್ಟು ಅನುಭವಿಸುತ್ತಿದೆ. ಸಾರಿಗೆ ಇಲಾಖೆಯಡಿ ಬರುವ ವಿವಿಧ ಸಾರಿಗೆ ನಿಗಮಗಳಲ್ಲಿ ಈ ತಿಂಗಳ ಸಂಬಳ ನೀಡಲೂ ಹಣದ ಕೊರತೆ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಕಳೆದ ತಿಂಗಳ 23ರಿಂದಲೇ ರಾಜ್ಯದಲ್ಲಿ ಮದ್ಯ ಮಾರಾಟ ಸಂಫೂರ್ಣವಾಗಿ ಸ್ಥಗಿತಗೊಂಡಿರುವ ಕಾರಣ ಇಲಾಖೆ ಆದಾಯವಿಲ್ಲದೇ ಸೊರಗಿದೆ. ಮದ್ಯ ಮಾರಾಟದ ಮೇಲಿನ ನಿರ್ಬಂಧ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ನೌಕರರ ಸಂಬಳಕ್ಕೆ ಗತ್ಯಂತರ ಇಲ್ಲದಂತಾಗಿದೆ ಎಂದು ಅಬಕಾರಿ ಸಚಿವರೇ ಹೇಳಿದ್ದಾರೆ.

ಇದೇ ವೇಳೆ ರಾಜ್ಯ ಸರಕಾರಿ ನೌಕರರ ತಿಂಗಳ ಸಂಬಳದ ಮೇಲೆ ಕೊರೋನಾ ಪ್ರಭಾವ ಬೀರುವ ಸ್ಪಷ್ಟ ಲಕ್ಷಣಗಳು ಗೋಚರಿಸಿವೆ.  ಮಹಾಮಾರಿ ಎದುರಿಸಲು ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ರಾಜ್ಯದ ಆದಾಯ ಮೂಲಗಳು ಬತ್ತಿಹೋಗಿರುವ ಹಿನ್ನೆಲೆಯಲ್ಲಿ ಸರಕಾರಿ ನೌಕರರ ಪಗಾರಕ್ಕೂ ಕತ್ತರಿ ಬೀಳುವ ಸಾಧ್ಯತೆಗಳಿವೆ.

ಮಾರ್ಚ್‌ ತಿಂಗಳಲ್ಲಿ ಹೇಗೋ ಹೊಂದಿಸಿ ಸಂಬಳ ಬಟವಾಡೆ ಮಾಡಲಾಗಿತ್ತು. ಆದರೆ ಇಡೀ ಏಪ್ರಿಲ್ ತಿಂಗಳು ಲಾಕ್‌ಡೌನಿಗೆ ಆಹಾರವಾದ ಕಾರಣ ಸರಕಾರದ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಇನ್ನೂ ಲಾಕ್‌ಡೌನ್ ಸದ್ಯಕ್ಕೆ ಕೊನೆಯಾಗುವ ಯಾವುದೇ ಸೂಚನೆಗಳೂ ಖಾಣುತ್ತಿಲ್ಲ. ಹೀಗಿರುವಾಗ ಸರಕಾರಿ ನೌಕರರಿಗೆ ಪಗಾರ ನೀಡುವುದೂ ಕಷ್ಟವಾಗಿದೆ.

 

ಈ ಹಿನ್ನೆಲೆಯಲ್ಲಿ ಸರಕಾರಿ ನೌಕರರ ತಿಂಗಳ ಪಗಾರದಲ್ಲಿ 5-10 ಶೇ.ದಷ್ಟು ಕಡಿತ ಮಾಡುವುದರ ಜೊತೆಗೇ ಹೆಚ್ಚುವರಿ ತುಟ್ಟಿಭತ್ಯೆಯನ್ನು ಸಹ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಸರಕಾರ ಆಲೋಚನೆ ನಡೆಸಿದೆ ಎಂದು ಹೇಳಲಾಗುತ್ತಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights