SSLC ಪರೀಕ್ಷೆ ರದ್ದು: ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡಿದ ತಮಿಳುನಾಡು

ಬೋರ್ಡ್ ಪರೀಕ್ಷೆ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನಿರಾಕರಿಸಿರುವುದರಿಂದ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸರ್ಕಾರ SSLC ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡುವ ತೀರ್ಮಾನ ಕೈಗೊಂಡಿದೆ.

ತೆಲಂಗಾಣ ರಾಜ್ಯದ ನಂತರ ತಮಿಳುನಾಡು ಸರ್ಕಾರವೂ ಇದೇ ತೀರ್ಮಾನ ತೆಗೆದುಕೊಂಡಿದೆ. ತಜ್ಞ ವೈದ್ಯರ ಸಲಹೆ ಮತ್ತು ಆಂತರಿಕ ಮಾಹಿತಿ ಪಡೆದ ನಂತರ SSLC ಮತ್ತು ಹನ್ನೊಂದನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಬಡ್ತಿ ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಪಳನಿಸ್ವಾಮಿ ತಿಳಿಸಿದ್ದಾರೆ.

12ನೇ ತರಗತಿ ಪರೀಕ್ಷೆಗೆ ಗೈರುಹಾಜರಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಸಧ್ಯದ ಪರಿಸ್ಥಿತಿಯನ್ನು ನೋಡಿಕೊಂಡು ಪರೀಕ್ಷೆ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

SSLC ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಈ ಹಿಂದೆ ನಡೆಸಲಾದ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳನ್ನು ಲೆಕ್ಕಹಾಕಿ ಆಂತರೀಕ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡಲು ನಿರ್ಧರಿಸಲಾಗಿದೆ.

ಬಾಕಿ ಇರುವ ಪರೀಕ್ಷೆಗಳನ್ನು 2 ಹಂತದಲ್ಲಿ ವಿಭಜಿಸಲಾಗಿದೆ. ಶೇಕಡ 80ರಷ್ಟು ಅಂಕಗಳ ಮೌಲ್ಯಮಾಪನ, ವಿದ್ಯಾರ್ಥಿಗಳ ಪ್ರಗತಿ, ಅರ್ಧವಾರ್ಷಿಕ ಪರೀಕ್ಷೆಯಲ್ಲಿ ತೆಗೆದುಕೊಂಡಿರುವ ಅಂಕಗಳು ಮತ್ತು ಶೇಕಡ 20ರಷ್ಟು ಹಾಜರಾತಿಯನ್ನು ಮುಂಬಡ್ತಿಗೆ ಪರಿಗಣಿಸಲಾಗುವುದು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಈ ಹಿಂದೆ ಜೂನ್ 15 ರಿಂದ 26ರವರೆಗೆ SSLC ಪರೀಕ್ಷೆ ನಡೆಸಲು ತಮಿಳುನಾಡು ಸರ್ಕಾರ ತೀರ್ಮಾನಿಸಿತ್ತು. ಮೌಲ್ಯಮಾಪನವನ್ನು ಆಗಸ್ಟ್ ನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಈಗ ಮದ್ರಾಸ್ ಹೈಕೋರ್ಟ್ ಪರೀಕ್ಷೆ ನಡೆಸಲು ನಿರಾಕರಿಸಿರುವುದರಿಂದ ಈ ತೀರ್ಮಾನಕ್ಕೆ ಬಂದಿದೆ.

ತಮಿಳುನಾಡಿನಲ್ಲಿ 9.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ ಪರೀಕ್ಷೆ ನಡೆಸದೇ ಇರುವುದರಿಂದ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕಾಗಿ ಬಂದಿದೆ. 11ನೇ ತರಗತಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights