ಉತ್ತರ ಪ್ರದೇಶದಲ್ಲಿ ಇಬ್ಬರು ಅರ್ಚಕರ ಕೊಲೆ; ಕೋಮು ಬಣ್ಣ ನೀಡಬೇಡಿ ಎಂದು ಬೋಧಿಸಿದ ಶಿವಸೇನೆ
ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಪಗೋಣ ಗ್ರಾಮದ ಅನೂಪ್ ಶಹರ್ ಪ್ರದೇಶದ ದೇವಸ್ಥಾನವೊಂದರಲ್ಲಿ ಇಬ್ಬರು ಅರ್ಚಕರನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ. ಈ ವ್ಯಕ್ತಿಯನ್ನು ಕಳ್ಳ ಎಂದು ಹಿಂದೆ ಈ ಅರ್ಚಕರು ಆರೋಪಿಸಿದ್ದರು ಎನ್ನಲಾಗಿದೆ.
ಆರೋಪಿಯನ್ನು ಮುರಳಿ ಎಂದು ಗುರುತಿಸಲಾಗಿದ್ದು ಈ ಘಟನೆ ನಡೆದಾಗ ಆರೋಪಿ ಡ್ರಗ್ ಗಳ ಮತ್ತಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. ಖಡ್ಗವನ್ನು ಹಿಡಿದು ಬೆತ್ತಲೆಯಾಗಿ ತಿರುಗಾಡುತ್ತಿದ್ದಾಗ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಆತನನ್ನು ಬಂಧಿಸಲಾಗಿದ್ದು ಪ್ರಶ್ನೆ ಮಾಡಬೇಕಿದೆ.
ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದು ವಿಸ್ತೃತ ವರದಿ ಸಲ್ಲಿಸುವಂತೆ ಹೇಳಿದ್ದಾರೆ. ಕೊಲೆಯಾದ ಅರ್ಚಕರನ್ನು 55 ವರ್ಷದ ಜಗದೀಶ್ ಅಲಿಯಾಸ್ ರಂಗಿದಾಸ್ ಮತ್ತು 46 ವರ್ಷದ ಶೇರ್ ಸಿಂಗ್ ಎಂದು ಗುರುತಿಸಲಾಗಿದೆ.
ಇದರ ಬಗ್ಗೆ ಪ್ರತಿಕ್ರಿಯಿಯಿಸಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ ವಾದ್ರ ಇದಕ್ಕೆ ರಾಜಕೀಯ ಬಣ್ಣ ನೀಡದೆ ಆರೋಪಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ. “ಇಂದು ಬುಲಂದ್ ಶಹರ್ ನಲ್ಲಿ ಇಬ್ಬರು ಮಲಗಿದ್ದ ಸಾಧುಗಳನ್ನು ಕೊಲೆ ಮಾಡಲಾಗಿದೆ” ಎಂದು ಟ್ವೀಟ್ ಮಾಡಿರುವ ಅವರು “ಈ ಬರ್ಬರಾ ಕೃತ್ಯದ ಬಗ್ಗೆ ಸತ್ಯ ತನಿಖೆಯಿಂದ ಹೊರಬರಬೇಕಿದೆ ಮತ್ತು ಈ ಸಂದರ್ಭದಲ್ಲಿ ಇದನ್ನು ಯಾರೂ ರಾಜಕೀಯಗೊಳಿಸಬಾರದು” ಎಂದಿದ್ದಾರೆ.
ಪಾಲ್ಗಾರ್ ನಲ್ಲಿ ಸಾಧುಗಳನ್ನು ಥಳಿಸಿ ಕೊಲೆ ಮಾಡಿದ ಘಟನೆಗೆ ಇಲ್ಲದ ಕೋಮು ಬಣ್ಣ ನೀಡಲು ಪ್ರಯತ್ನಿಸಿದ್ದ ಬಿಜೆಪಿ ಮುಖಂಡರನ್ನು ಉದ್ದೇಶಿಸಿ ಶಿವಸೇನೆ ನಾಯಕ ಸಂಜಯ್ ರಾವತ್ ಕೂಡ ಟ್ವೀಟ್ ಮಾಡಿದ್ದು “ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಇಬ್ಬರು ಸಾಧು ಸಂತರನ್ನು ದೇವಾಲಯದಲ್ಲಿ ಹತ್ಯೆ ಮಾಡಲಾಗಿದೆ. ಮಹಾರಾಷ್ಟ್ರದ ಪಾಲ್ಗಾರ್ ನಲ್ಲಿ ಮಾಡಿದಂತೆ ಈ ಘಟನೆಗೆ ಕೋಮು ಬಣ್ಣ ನೀಡಬಾರದಾಗಿ ನಾನು ಮನವಿ ಮಾಡುತ್ತೇನೆ” ಎಂದು ಬರೆದಿದ್ದಾರೆ.

