ಕಾರ್ಮಿಕರಿಗಾಗಿ ಸರ್ಕಾರಗಳು ಮಾಡಿದ್ದೇನೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಗುಡುಗಿನ ಸುಪ್ರಿಂ ಕೋರ್ಟ್

ಪ್ರತಿ ದಿನವೂ ವಲಸೆ ಕಾರ್ಮಿಕರ ಬವಣೆ, ಹಸಿವು, ಸಾವು ನೋವಿನ ವರದಿಗಳು ದಾಖಲಾಗುತ್ತಿದ್ದು ಈ ಕುರಿತು ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಜನರಿಗೆ ಸಹಾಯ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ್ದೇನು ಎಂದು ಪ್ರಶ್ನಿಸಿದೆ.

ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಮೂರು ನ್ಯಾಯಾಧೀಶರ ಪೀಠದಿಂದ ಕನಿಷ್ಠ 50 ಪ್ರಶ್ನೆಗಳನ್ನು ಕೇಳಿದ್ದು ವಲಸೆ ಕಾಮಿಕರ ವಿಚಾರದಲ್ಲಿ ಸರ್ಕಾರಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿಂದೆ ಇದೇ ಸುಪ್ರೀಂ ಕೋರ್ಟ್‌ ರೈಲುಹಳಿಗಳಲ್ಲಿ ಮಲಗಿ ಸಾವನಪ್ಪಿದ ಕಾರ್ಮಿಕರ ಬಗ್ಗೆ ಮಾತನಾಡುತ್ತಾ “ಜನರನ್ನು ರೈಲು ಹಳಿಗಳ ಮೇಲೆ ಮಲಗದಂತೆ ತಡೆಯಲಾಗುವುದಿಲ್ಲ. ಜನರು ನಡೆದಯಂತೆ ತಡೆಯಲಾಗುವುದಿಲ್ಲ” ಎಂದು ಅಭಿಪ್ರಾಯಪಟ್ಟಿತ್ತು.

ಈ ಬಗ್ಗೆ ಮದ್ರಾಸ್‌ ಹೈಕೋರ್ಟ್‌, ಆಂಧ್ರ ಪ್ರದೇಶದ ಹೈಕೋರ್ಟ್‌‌ಗಳು ಸುಪ್ರೀಂ ಕೋರ್ಟ್ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದವು. ಆನಂತರವಷ್ಟೇ ಸುಪ್ರೀಂ ಕೋರ್ಟ್‌ ವಲಸೆ ಕಾರ್ಮಿಕರಿಗಾಗುತ್ತಿರುವ ಅನ್ಯಾಯಗಳ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೊಂಡಿತ್ತು.

ರೈಲುಗಳು ಓಡುತ್ತವೆ, ವಲಸಿಗರನ್ನು ಸಾಗಿಸುತ್ತವೆ ಮತ್ತು ಊಟವನ್ನು ಒದಗಿಸಲಾಗಿದೆ. ಕೇಂದ್ರವು “ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಸುಪ್ರೀಂ ಕೋರ್ಟ್ ಈ ಬಗ್ಗೆ ಸಂಪೂರ್ಣವಾಗಿ ತೃಪ್ತಿಪಟ್ಟಿತ್ತು” ಎಂದು ತುಷಾರ್‌ ಮೆಹ್ತಾರವರು ಸರ್ಕಾರದ ಪರವಾಗಿ ವರದಿ ಒಪ್ಪಿಸಿದರು.

ಅಲ್ಲದೆ ಕೇಂದ್ರವು “ನಿರಾಶವಾದಿಗಳು ಈ ವಿಷಯವನ್ನು ರಾಜಕೀಯ ಭಾಷಣಗಳಿಗೆ ವೇದಿಕೆಯನ್ನಾಗಿ ಮಾಡಿಕೊಳ್ಳಲು ಅವಕಾಶ ನೀಡಬಾರದು” ಎಂದು ನ್ಯಾಯಾಲಯಕ್ಕೆ ತಿಳಿಸಿದೆ … ಯಾರು ಇಂದು ಪ್ರಶ್ನಿಸುತ್ತಿದ್ದಾರೆ ವಲಸಿಗರಿಗೆ ಅವರ ಕೊಡುಗೆ ಏನು ಎಂಬುದರ ಕುರಿತು ಅಫಿಡವಿಟ್‌ಗಳನ್ನು ಸಲ್ಲಿಸಲಿ ಎಂದು ಕೇಂದ್ರ ತಿಳಿಸಿದೆ.

“ವಲಸಿಗರಿಗೆ ಮೊದಲ ಸಮಸ್ಯೆ ಸಾರಿಗೆಯಾಗಿದೆ. ನೋಂದಣಿಯಾದ ನಂತರವೂ ಅವರು ವಾರಗಳವರೆಗೆ ಕಾಯುತ್ತಿದ್ದಾರೆ. ಈ ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆಯೇ? ಇಲ್ಲದಿದ್ದರೆ ಅವರ ಹಣವನ್ನು ರಾಜ್ಯವು ಹೇಗೆ ಪಾವತಿಸುತ್ತಿದೆ” ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. “ಎಲ್ಲರನ್ನೂ ಒಂದೇ ಸಮಯದಲ್ಲಿ ಸಾಗಿಸಲು ಸಾಧ್ಯವಿಲ್ಲ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅವರು ಸಾರಿಗೆ ಪಡೆಯುವವರೆಗೆ ಅವರಿಗೆ ಸರ್ಕಾರಗಳು ಆಹಾರ ಮತ್ತು ಆಶ್ರಯವನ್ನು ನೀಡಬೇಕು” ಎಂದು ನ್ಯಾಯಾಲಯ ಹೇಳಿದೆ.

ಆದರೆ ಈಗಿರುವ ಪರಿಸ್ಥಿತಿಯನ್ನು ಅಭೂತಪೂರ್ವವಾಗಿದೆ ಎಂದಿರುವ ಕೇಂದ್ರ ಸರ್ಕಾರ, ಮೇ 1 ರಂದು ವಿಶೇಷ ರೈಲು ಸೇವೆ ಪ್ರಾರಂಭವಾದಾಗಿನಿಂದ ಸುಮಾರು 91 ಲಕ್ಷ ವಲಸಿಗರನ್ನು ತಮ್ಮ ರಾಜ್ಯಗಳಿಗೆ ಸಾಗಿಸಲಾಗಿದೆ ಎಂದು ಹೇಳಿದೆ. ಕೊನೆಯ ದಿನಗಳಲ್ಲಿ, ರೈಲ್ವೆ ಅವರಿಗೆ 84 ಲಕ್ಷ ಊಟವನ್ನು ಒದಗಿಸಿದೆ ಎಂದು ಸರ್ಕಾರ ಹೇಳಿದೆ. ಅಲ್ಲದೇ ಪ್ರತಿಯೊಬ್ಬ ವಲಸೆ ಕಾರ್ಮಿಕನು ತನ್ನೂರು ತಲುಪುವವರೆಗೂ ರೈಲು ಸೇವೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದೆ.

ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಅಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಸಿಕ್ಕಿಕೊಂಡಿರುವ ವಲಸಿಗರಿಗೆ ತಕ್ಷಣ ಪರಿಹಾರ ನೀಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, ಅವರಿಗೆ ಪರಿಹಾರ ಒದಗಿಸಲು ಕೈಗೊಂಡ ಕ್ರಮಗಳ ಬಗ್ಗೆ ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಬೇಕು ಎಂದು ಹೇಳಿದೆ.

ಈ ಕುರಿತು ಈವರೆಗೆ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರ ಮನವಿಗಳು ಸೇರಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights