ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ವೈದ್ಯರ ನೆರವಿಗೆ ಬಂದ ಮಾನವ ರೊಬೊ….!
ಕೊರೊನಾದಿಂದಾಗಿ ಇಡೀ ಜಗತ್ತೇ ತಲ್ಲಣಗೊಂಡಿದೆ. ಪೊಲೀಸರು, ವಾಲೆಂಟೀಯರ್ಸ್ ಹಾಗೂ ವೈದ್ಯರು ಜೀವದ ಹಂಗು ತೊರೆದು ಕೊರೊನಾ ತಡೆಗೆ ಶ್ರಮಿಸುತ್ತಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗ. ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡಿ ಪ್ರಾಣಕ್ಕೆ ಕುತ್ತು ತರುವ ಮಹಾಮಾರಿ. ಹೀಗಾಗಿ ಸೋಂಕು ಹರಡುವಿಕೆಯನ್ನ ತಡೆಗಟ್ಟಲು ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದರೆ ವೈದ್ಯರು ಮಾತ್ರ ರೋಗಿಗಳ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿನೇ ಹೇಳೋದು ಅವರು ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡಲು ಶ್ರಮಿಸುತ್ತಿದ್ದಾರೆಂದು. ಇಂಥವರ ನೆರವಿಗೆ ಸದ್ಯ ಮಾನವ ನಿರ್ಮಿತ ರೋಬೋ ನಿಂತುಕೊಂಡಿದೆ.
ಹೌದು… ಸೋಂಕಿತರಿಂದ ದೂರ ಉಳಿಯುವುದು, ಅಂತರ ಕಾಯ್ದುಕೊಳ್ಳುವುದು ಸಾಮಾನ್ಯ ಜನರಿಂದಾಗಬಹುದು. ಆದರೆ ವೈದ್ಯರಿಂದ ಇದು ಸಾಧ್ಯವಿಲ್ಲ. ಮುಂಜಾಗೃತಾ ಕ್ರಮವಹಿಸಿಕೊಂಡು ರೋಗಿಗಳ ಬಳಿ ತೆರಳಲೇಬೇಕು. ಕೆಲವೊಮ್ಮೆ ರೋಗ ವೈದ್ಯರಿಗೂ ತಗಲುವ ಸಾಧ್ಯೆತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ವೈದ್ಯರ ನೆರವಿಗಾಗಿ ರೋಬೋಗಳು ಆಸ್ಪತ್ರೆಗಳಿಗೆ ಬಂದಿಳಿದಿವೆ.
ಹರಿಯಾಣದ ಗುರುಗಾಂವ್ನಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಮಾನವ ರೊಬೊಟ್ಗಳನ್ನು ಬಳಸಿಕೊಳ್ತಿದ್ದು ಈ ಮೂಲಕ ರೋಗಿಗಳ ಜೊತೆ ಮನುಷ್ಯರು ಕಡಿಮೆ ಸಂಪರ್ಕ ಹೊಂದಲು ಸಹಕರಿಸುತ್ತಿವೆ. ಮಿಲಾಗ್ರೋ ಹ್ಯೂಮನ್ ಟೆಕ್ ಸಿದ್ಧಪಡಿಸಿರುವ ಮಾನವ ರೊಬೊಟ್ಗಳು, ಏಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯ ಕಾರ್ಯಕರ್ತರು ಸೊಂಕಿತರದೊಂದಿಗೆ ಕಡಿಮೆ ಸಂಪರ್ಕ ಹೊಂದಲು ನೆರವಾಗಿವೆ. ರೋಗಿಯ ಮೇಲ್ವಿಚಾರಣೆಯಿಂದ ಹಿಡಿದು ರೂಮನ್ನು ಸ್ವಚ್ಛಗೊಳಿಸುವುದು, ಸ್ಯಾನಿಟೈಸ್ ಮಾಡುವುದು ಸೇರಿದಂತೆ ಅನೇಕ ಕಾರ್ಯಗಳನ್ನು ರೊಬೊಟ್ಗಳೇ ನಿರ್ವಹಿಸುತ್ತವೆ.
ಈ ಬಗ್ಗೆ ಮಾತನಾಡಿರುವ ಮಿಲಾಗ್ರೋ ಸ್ಥಾಪಕ ಮತ್ತು ಅಧ್ಯಕ್ಷ ರಾಜೀವ್ ಕಾರ್ವಾಲ್, ಇಟಲಿಯಂತೆಯೇ ನಾವು ಸಹ ಆರೋಗ್ಯ ಕ್ಷೇತ್ರದ ಅನುಕೂಲಕ್ಕಾಗಿ ಈ ಮಾನವ ರೊಬೊಟ್ಗಳನ್ನು ತಯಾರಿಸಿದ್ದೇವೆ. ಇದರಿಂದ ಆಸ್ಪತ್ರೆ ಒಳಾಂಗಣದಲ್ಲಿ ಆಗುವ ಸೋಂಕು ಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದ್ದು, ಸಾಂಕ್ರಾಮಿಕ ರೋಗದಿಂದ ಶೀಘ್ರ ಮುಕ್ತಿಹೊಂದಲು ಸಹಕಾರವಾಗಲಿದೆ. ವಿಶೇಷವೆಂದರೆ, ಈ ಮಾನವ ರೊಬೋಗಳನ್ನು ಮುಟ್ಟುವ ಅವಶ್ಯಕತೆಯಿರುವುದಿಲ್ಲ ಬದಲಿಗೆ ಸಂಬಂಧಪಟ್ಟ ಮಾಲೀಕ ಅಂದರೆ ವೈದ್ಯರು ನೀಡುವ ಮಾಹಿತಿಯಂತೆ ಕೆಲಸ ಮಾಡುತ್ತದೆ. ಒಂದು ವೇಳೆ, ಆ ವೈದ್ಯರು ಲಭ್ಯವಿಲ್ಲದಿದ್ದರೆ ಕೆಲ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಇತರರು ರೊಬೋ ಆಪರೇಟ್ ಮಾಡಬಹುದು ಎಂದಿದ್ದಾರೆ.

