ದತ್ತಮೂರ್ತಿಯನ್ನ ತಂದು ಎಸ್ಪಿ ಕಚೇರಿಯಲ್ಲೇ ಇಡ್ತೀವಿ : ನೀವೇ ಪೂಜೆ ಮಾಡಿ ತೀರ್ಥ-ಪ್ರಸಾದ ಹಂಚ್ಬಿಡಿ

ಕದ್ದು-ಮುಚ್ಚಿ ದತ್ತಪೀಠದಲ್ಲಿ ಮೂರ್ತಿ ಪ್ರತಿಷ್ಠಾಪಿಸೋ ದರ್ದು ಹಿಂದೂ ಸಮಾಜಕ್ಕೆ ಬಂದಿಲ್ಲ. ಯಾವ ಗೌರವದಿಂದ, ರಾಜರೋಷವಾಗಿ ಹೋಗಿ ಪ್ರತಿಷ್ಠಾಪನೆ ಮಾಡ್ಬೇಕೋ ಅದನ್ನ ಮಾಡೇ ಮಾಡ್ತೀವಿ. ಪೊಲೀಸರಿಗೆ ನಮ್ಮೇಲೆ ನಂಬಿಕೆ ಇಲ್ಲದಿದ್ರೆ ಆ ಮೂರ್ತಿಯನ್ನ ಎಸ್ಪಿ ಕಚೇರಿಯಲ್ಲೇ ಇಡ್ತೀವಿ, ನೀವೇ ಪೂಜೆ ಮಾಡಿ ತೀರ್ಥ-ಪ್ರಸಾದ ಹಂಚಿ ಎಂದು ದತ್ತಭಕ್ತರು ಪೊಲೀಸರಿಗೆ ತಾಕೀತು ಮಾಡಿದ್ದು, ಕಾಫಿನಾಡ ದತ್ತಮಾಲಾ ಅಭಿಯಾನಕ್ಕೆ ಆರಂಭದಲ್ಲೇ ವಿಘ್ನ ಎದುರಾದಂತಿದೆ. ಹಾಗಾದ್ರೆ, ಆ ಮೂರ್ತಿ ಯಾವ್ದು, ಪೊಲೀಸ್ರೇ ಯಾಕೆ ಪೂಜೆ ಮಾಡ್ಬೇಕು ಅಂತೀರಾ….. ಈ ಸ್ಟೋರಿ ನೋಡಿ……

   

ಇದು ದತ್ತಭಕ್ತರ ಇಷ್ಟದೈವ ದತ್ತಾತ್ರೇಯ ಸ್ವಾಮಿ. ಪ್ರಾಣ ಪ್ರತಿಷ್ಠಾಪನೆಯಾಗಿಲ್ಲ. ಕೆತ್ತನೆಯಾಗಿರೋ ವಿಗ್ರಹವಷ್ಟೆ. ಕಾಫಿನಾಡ ದತ್ತಮಾಲಾ ಶೋಭಾಯಾತ್ರೆಗೆಂದು ಕಾರವಾರ ಭಕ್ತರು ಕೊಟ್ಟದ್ದು. ಇದನ್ನ ಚಿಕ್ಕಮಗಳೂರಿನ ಸಾಯಿಬಾಬಾ ಮಂದಿರದಲ್ಲಿ ಇಟ್ಟಿದ್ರು. ಶೋಭಾಯಾತ್ರೆ ಬಳಿಕವೂ ಮೂರ್ತಿ ಇದೇ ಮಂದಿರದಲ್ಲಿ ಇರ್ತಿತ್ತು. ಆದ್ರೆ, ಪೊಲೀಸರು ಮೂರ್ತಿಯನ್ನ ಹೊತ್ತೊಯ್ಯಲು ಮಧ್ಯ ರಾತ್ರಿ 12 ಗಂಟೆಗೆ ದೇವಸ್ಥಾನದ ಬಳಿ ಬಂದಿದ್ದಾರೆ. ಧಾರ್ಮಿಕ ಆಚರಣೆಯಲ್ಲೂ ಪೊಲೀಸ್ ಇಲಾಖೆ ಮೂಗು ತೂರಿಸ್ತಿರೋ ಒಳ್ಳೆಯ ಬೆಳವಣಿಗೆಯಲ್ಲ, ನಾವು ಇಷ್ಟು ದಿನ ಸಹಕಾರ ನೀಡುತ್ತಾ ಬಂದಿದ್ದೇವೆಂದು ದತ್ತಭಕ್ತರು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕದ್ದು-ಮುಚ್ಚಿ ದತ್ತಪೀಠದಲ್ಲಿ ಮೂರ್ತಿ ಪ್ರತಿಷ್ಠಾಪಿಸೋ ದರ್ದು ನಮಗಿಲ್ಲ. ರಾಜರೋಷವಾಗಿ ಹೋಗೇ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ. ನಮ್ಮೇಲೆ ನಂಬಿಕೆ ಇಲ್ಲದಿದ್ರೆ ಮೂರ್ತಿಯನ್ನ ತಂದು ಎಸ್ಪಿ ಕಚೇರಿಯಲ್ಲೇ ಇಡ್ತೀವಿ, ನೀವೇ ಪೂಜೆ ಮಾಡಿ ತೀರ್ಥ-ಪ್ರಸಾದ ಹಂಚ್ಬಿಡಿ ಎಂದು ಪೊಲೀಸರಿಗೆ ಆಗ್ರಹಿಸಿದ್ದಾರೆ….

ಪೊಲೀಸರು ಮಧ್ಯರಾತ್ರಿ 12 ಗಂಟೆಗೆ ಬೀಗ ಕೇಳಿದ್ದಾರೆ. ಯಾಕೆಂದು ಕೇಳಿದ್ದಕ್ಕೆ ಮೂರ್ತಿಯನ್ನ ತೆಗೆದುಕೊಂಡು ಹೋಗಲು ಬಂದಿದ್ದೇವೆ ಅಂದ್ರಂತೆ. ಕೂಡಲೇ ಆಡಳಿತ ಮಂಡಳಿ ಹಾಗೂ ವಾಚ್‍ಮ್ಯಾನ್ ದತ್ತಭಕ್ತರಿಗೆ ಫೋನ್ ಮಾಡಿದ್ದಾರೆ. ದತ್ತಭಕ್ತರು ಸ್ಥಳಕ್ಕೆ ಬರ್ತಿದ್ದಂತೆ ಪೊಲೀಸರು ಸೆಕ್ಯೂರಿಟಿಗೆ ಬಂದಿದ್ದೇವೆ ಅಂದ್ರಂತೆ. ಸರ್.. ದೇವಸ್ಥಾನದಲ್ಲಿದೆ ಸೆಕ್ಯೂರಿಟಿ ಯಾಕೆ. ಅಷ್ಟಕ್ಕೂ ನಾವು ಸೆಕ್ಯೂರಿಟಿ ಕೇಳೇ ಇಲ್ಲ ಅಂದ್ಮೇಲೆ ಅಲ್ಲಿಂದ ಕಾಲ್ಕಿತ್ತಿದ್ದಾರಂತೆ. ಪೊಲೀಸರ ಈ ನಡೆ ದತ್ತಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು ಡಿಸಿ ಹಾಗೂ ಎಸ್ಪಿ ಇಬ್ಬರಿಗೂ ಮನವಿ ಸಲ್ಲಿಸಿದ್ದಾರೆ. ನಾಳೆ ಪಡಿ ಸಂಗ್ರಹಿಸಲಿರೋ ಭಕ್ತರು, ಶನಿವಾರ ಧರ್ಮಸಮ್ಮೇಳನ ನಡೆಸಲಿದ್ದಾರೆ. ಭಾನುವಾರ ಬೃಹತ್ ಶೋಭಾಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.

ಒಟ್ಟಾರೆ, ಸಮಾಜದ ಶಾಂತಿ-ಸುವ್ಯವಸ್ಥೆ ಜೊತೆ ಧಾರ್ಮಿಕ ಸಮಾರಂಭಗಳ ಶಾಂತಿಯತೆ ಕಾಪಾಡ್ಬೇಕಾದ ಪೊಲೀಸರೇ ಧಾರ್ಮಿಕ ಕಾರ್ಯಕ್ರಮಕ್ಕೆ ಮಧ್ಯಪ್ರವೇಶಿಸಿರೋದು ಸಂಘಟಕರ ಕೆಂಗಣ್ಣಿಗೆ ಗುರಿಯಾಗಿದೆ. ಸಂಘಟನೆಗಳು ಕೋರ್ಟ್ ತೀರ್ಪಿಗೆ ನಾವು ತಲೆಬಾಗ್ತೀವಿ ಅಂತಿದ್ರು ಪೊಲೀಸರ ಈ ನಡೆಗೆ ಕಾರಣವಂತೂ ನಿಗೂಢವಾಗಿದೆ. ಅದೇನೆ ಇದ್ರು, ದತ್ತಮಾಲಾ ಅಭಿಯಾನ ಶಾಂತಿಯುತವಾಗಿ ಮುಗಿದ್ರೆ ಸಾಕು ಅಂತಿದ್ದಾರೆ ಕಾಫಿನಾಡಿಗ್ರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights