ದೆಹಲಿ ಹಿಂಸಾಚಾರ: ಜಾಮಿಯ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹ ಬಂಧನ; ಯುಎಪಿಎ ಅಡಿ ಪ್ರಕರಣ
2020ರ ಫೆಬ್ರವರಿ ತಿಂಗಳಿನಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 24 ವರ್ಷದ ಜಾಮಿಯ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 2019 ರಿಂದ ಪ್ರಾರಾಂಭವಾಗಿದ್ದ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ವಿರೋಧಿ ಶಾಂತಿಯುತ ಪ್ರತಿಭಟನೆಗಳ ಮೇಲೆ ಪೊಲೀಸರು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈಗ ದೆಹಲಿ ಪೋಲಿಸರು ಈ ಕ್ರಮಗಳಿಗೆ ಮುಂದಾಗಿದ್ದಾರೆ.
ಆರೋಪಿ ಆಸಿಫ್ ಇಕ್ಬಾಲ್ ತನ್ಹ ಅವರನ್ನು ಡಿಸೆಂಬರ್ 15 ರಂದು ಜಾಮಿಯಾದಲ್ಲಿ ನಡೆದ ಹಿಂಸಾಚಾರಿ ಸಂಬಂಧ ಬಂಧಿಸಲಾಗಿದ್ದು ಏಳು ದಿನಗಳ ಪೊಲೀಸ್ ಬಂಧನಕ್ಕೆ ಒಪ್ಪಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ದಳದ ಪ್ರಕಾರ ಆಸಿಫ್ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯು ಎ ಪಿ ಎ) ಅಡಿ ಕ್ರಮ ತೆಗೆದುಕೊಳ್ಳಲು ದೂರು ದಾಖಲಿಸಲಾಗಿದೆ.
ಆಸಿಫ್ ಮೂರನೇ ವರ್ಷದ ಬಿ ಎ ವಿದ್ಯಾರ್ಥಿಯಾಗಿದ್ದು ಸ್ಟೂಡೆಂಟ್ಸ್ ಇಸ್ಲಾಮಿಕ್ ಸಂಸ್ಥೆಯ ಸದಸ್ಯ ಎಂದು ಪೋಲಿಸರು ಇಂಡಿಯಾ ಟುಡೆ ವಾಹಿನಿಗೆ ಹೇಳಿರುವುದು ವರದಿಯಾಗಿದೆ. ನಾಗರಿಕ ತಿದ್ದುಪಡಿ ಕಾಯ್ದೆ (ಸಿ ಎ ಎ) ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಆಸಿಫ್ ಸಕ್ರಿಯ ಪಾತ್ರ ವಹಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
“ಸಿ ಎ ಎ ವಿರೋಧಿ ಪ್ರತಿಭಟನೆಗಳು ಮತ್ತು ನಂತರ ರಾಷ್ಟ್ರ ರಾಜಧಾನಿಯಲ್ಲಿ ಆದ ಗಲಭೆಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾಗಿರುವ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಮೀರನ್ ಹೈದರ್ ಮತ್ತು ಸಫೂರ (ಜರ್ಗಾರ್) ಅವರ ಜೊತೆಗಾರನಾಗಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದು ವರದಿಯಾಗಿದೆ.
ಹೊಸ ನಾಗರಿಕ ಕಾಯ್ದೆಯ ಪರ ಮತ್ತು ವಿರೋಧಿಗಳ ನಡುವೆ ಫೆಬ್ರವರಿ 23 ರಿಂದ 26ರವರೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಘರ್ಷಣೆ ಮತ್ತು ಗಲಭೆಯಲ್ಲಿ 53 ಜನ ಮೃತಪಟ್ಟು ನೂರಾರು ಜನರಿಗೆ ಗಾಯವಾಗಿತ್ತು. ಮುಸ್ಲಿಮರು ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ನಡೆದ ಹಿಂಸಾಚಾರವನ್ನು ತಡೆಯಲು ಪೊಲೀಸರು ಕ್ರಮ ತೆಗೆದುಕೊಳ್ಳದೆ ಪಕ್ಷಪಾತ ತೋರಿದ್ದಾರೆ ಎಂದು ದೆಹಲಿ ಪೊಲೀಸರ ವಿರುದ್ಧ ಹಲವರು ಆರೋಪಿಸಿದ್ದರು. ಸಿಖ್ ವಿರೋಧಿ ಗಲಭೆಗಳ ನಂತರ ನಡೆದ ಅತಿ ದೊಡ್ಡ ಗಲಭೆ ಇದಾಗಿತ್ತು.
ಕಳೆದ ತಿಂಗಳು ಪೊಲೀಸರು ಜೆ ಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್, ಜಾಮಿಯಾ ಮಿಲಿಯ ಇಸ್ಲಾಮಿಯಾ ವಿದ್ಯಾರ್ಥಿಗಳಾದ ಹೈದರ್ ಮತ್ತು ಜರ್ಗರ್ ಅವರನ್ನು ಯು ಎ ಪಿ ಎ ಅಡಿ ಬಂಧಿಸಿದ್ದರು. ರಾಜ್ಯದ್ರೊಹ, ಕೊಲೆ, ಕೊಲೆಗೆ ಯತ್ನ, ವಿಭಿನ್ನ ಸಮುದಾಯ ಮತ್ತು ಧರ್ಮಗಳ ನಡುವೆ ದ್ವೇಷ ಹುಟ್ಟಿಸಲು ಪ್ರಯತ್ನ, ಮತ್ತು ಗಲಭೆ ಆರೋಪಗಳನ್ನು ಈ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹೊರಿಸಿದ್ದಾರೆ.
ಏಪ್ರಿಲ್ 13 ರ ಹೊತ್ತಿಗೆ ಪೊಲೀಸರು 800 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ಯಾವುದೇ ಸನ್ನಿವೇಶವಿರಲಿ ಬಂಧನಗಳನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರದ ಆದೇಶ ಇದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದರು.

