ದೇವರಾದ ಕೊರೊನಾ: ಕೋಳಿ ಕೋಯ್ದು ಹಬ್ಬ ಮಾಡಿದ ಹಳ್ಳಿ ಜನ!
ಕೊರೊನಾ ಸೋಂಕು ಜನರನ್ನು ಬಲಿ ಪಡೆಯದಂತೆ ಹಾಗೂ ಸೋಂಕನ್ನು ಊರಿನಿಂದ ಹೊರ ಕಳಿಸುವುದಕ್ಕಾಗಿ, ಸೋಂಕಿನ ಹೆಸರಲ್ಲಿ ಕೋಳಿ ಕೋಯ್ದು ಪೂಜೆ ಮಾಡಿ ಹಬ್ಬ ಆಚರಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಪಿ.ನೇರಲಕೆರೆ ಗ್ರಾಮದಲ್ಲಿ ನಡೆದಿದೆ.
ಹಳ್ಳಿಗಳಲ್ಲಿ ಹಲವಾರು ವರ್ಷಗಳಿಂದ ಕೆಲವು ಆಚರಣೆಗಳು ಚಾಲ್ತಿಯಲ್ಲಿವೆ. ಇಡೀ ಜಗತ್ತನ್ನೇ ಇಂದು ಕೊರೊನಾ ಆವರಸಿಕೊಂಡಿರುವ ರೀತಿಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ದೇಶಾದ್ಯಂತ ಪ್ಲೇಗ್, ಮಲೇರಿಯಾ, ಕಾಲರಾ ದಂತಹ ಕೆಲವು ರೋಗಗಳು ಜನರನ್ನು ಮಾರಣಹೋಮ ನಡೆಸಿದ್ದವು.
ಇಂತಹ ಭೀರಕ ರೋಗಗಳಿಗೆ ತುತ್ತಾಗುತ್ತಿದ್ದ ಜನ, ಇದು ದೇವರ ಶಾಪವೆಂದು ಭಾವಿಸಿ, ದೇವರಿಗೆ ಶಾಂತಿ ಮಾಡಬೇಕೆಂಬ ಉದ್ದೇಶದಿಂದ ಪ್ಲೇಗ್ ರೋಗ ಹರಡುವ ವೈರಸ್‌ಅನ್ನು ಪ್ಲೇಗ್ ಅಮ್ಮ ಎಂಬ ಹೆಸರಿನೊಂದಿಗೆ ಕರೆದು ಊರಿನ ಜನರೆಲ್ಲರೂ ಊರ ಹೊರಗೆ ಇಟ್ಟಿಗೆ ಸೇರಿ ಕೋಳಿ ಕೋಯ್ದು ಪೂಜೆ ಮಾಡುತ್ತಿದ್ದರು. ಹೀಗೆ ಮಾಡುವುದರಿಂದ ಸೋಂಕು ಶಾಂತವಾಗುತ್ತದೆ ಎಂಬುದು ಅವರ ಹಳ್ಳಿಗರ ಭಾವನೆ.
ಅಲ್ಲದೆ, ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಸುಂಕಿನ ಹುಳಗಳ ಹಾವಳಿ ಹೆಚ್ಚಾದಾಗಲೂ ಸುಂಕನ್ನು ಊರಿನಿಂದ ಹೊರಗೆ ಕಳಿಸುವ ಉದ್ದೇಶಕ್ಕಾಗಿನ ಪೂಜೆಗಳೂ ನಡೆಯುತ್ತವೆ.
ಪ್ಲೇಗ್ ಅಮ್ಮನನ್ನು, ಸುಂಕಿನ ಅಮ್ಮನನ್ನು ಕೋಳಿ ಕೋಯ್ದು ಪೂಜೆ ಮಾಡಿ ಊರಿಂದ ಹೊರಗೆ ಕಳಿಸುತ್ತೇವೆ. ಅದಕ್ಕಾಗಿ ಹಬ್ಬ ಮಾಡಬೇಕೆಂಬುದು ಕೆಲವು ಹಳ್ಳಿಗಳ ವಾಡಿಕೆ.
ಸದ್ಯಕ್ಕೆ ಅದು ಈಗ ಕೊರೊನಾ ಸೋಂಕನ್ನೂ ಊರಿನಿಂದ ಕಳಿಸುವ ಹಬ್ಬವಾಗಿ ಮಾರ್ಪಟ್ಟಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಪಿ.ನೇರಲಕೆರೆ ಗ್ರಾಮದಲ್ಲಿ ಈ ಹಬ್ಬ ನಡೆದಿದೆ.
ಊರಿನ ಜನರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಂಬಿಟ್ಟುಗಳನ್ನು ಮಾಡಿಕೊಂಡು, ಅದನ್ನು ಪೂಜೆಯ ತಟ್ಟೆಯಲ್ಲಿಕೊಂಡು ಜೊತಗೆ, ದೀಪ, ಕರ್ಪೂರ, ಊದು ಕಡ್ಡಿಗಳ, ಹೂಗಳನ್ನು ತೆಗೆದುಕೊಂಡು ಊರಿಂದ ಹೊರಗೆ ಹೋಗಿರುವ ಕೆರೆ ಅಂಗಳದ ಒಂದು ಭಾಗದಲ್ಲಿ ತಾತ್ಕಾಲಿಕ ಕಲ್ಲಿನ ದೇವರನ್ನು ಪ್ರತಿಷ್ಠಾಪಿಸಿ, ಆ ಕಲ್ಲಿಗೆ ಕೊರೊನಮ್ಮ ಎಂದು ಹೆಸರಿಟ್ಟಿದ್ದಾರೆ.
ಆ ಕಲ್ಲಿಗೆ ಪೂಜೆ ಮಾಡಿದ್ದಾರೆ. ಅಲ್ಲದೆ, ಹಳ್ಳಿಯ ಪ್ರತಿ ಮನೆಯವರೂ ತಲಾ ಒಂದೊಂದು ಕೋಳಿಗಳನ್ನು ತಂದು ಆ ಕಲ್ಲಿಗೆ ಬಲಿ ಕೊಟ್ಟು, ರಕ್ತವನ್ನು ಅರ್ಪಿಸಿ, ಸೋಂಕು ಜನರನ್ನು ಬಲಿ ಪಡೆಯದಂತೆ, ಸೋಂಕು ಊರನ್ನು ಬಿಟ್ಟು ಹೊರಹೋಗುವಂತೆ ಹಾಗೂ ಊರಿಗೆ ಬಾರದಂತೆ ಪ್ರಾರ್ಥಿಸಿ ಪೂಜೆ ಮಾಡಿದ್ದಾರೆ.
ಇದನ್ನೂ ಓದಿ: ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ ಮಾಡಿದರೂ ಅವರನ್ನು ಮಟ್ಟಹಾಕಬೇಕು: ಹೆಚ್‌ಡಿಕೆ

