ಸಿಎಂ ಆಗುವ ಆತುರ ನನಗಿಲ್ಲ; ಪಕ್ಷ ಅಧಿಕಾರಕ್ಕೆ ತರುವುದಷ್ಟೇ ನನ್ನ ಗುರಿ: ಡಿ.ಕೆ. ಶಿವಕುಮಾರ್

ಸಿಎಂ ಆಗುವ ಆತುರದಲ್ಲಿ ನಾನಿಲ್ಲ. ನನ್ನ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ. ವಿಧಾನಸೌಧದಲ್ಲಿ ಅಧಿಕಾರ ಹಿಡಿಯಲು ನನ್ನನ್ನು ಚಪ್ಪಡಿ ಕಲ್ಲಿನ ಮೆಟ್ಟಿಲು ಮಾಡಿಕೊಳ್ಳಿ ಅಂತಾ ನಾನೇ ಹೇಳಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ‘ಬಿಜೆಪಿ ಸಮಸ್ಯೆಗೂ, ಕಾಂಗ್ರೆಸ್ ವಿಚಾರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈಗ ನಮ್ಮಲ್ಲಿ ಯಾವ ಕುರ್ಚಿಯೂ ಖಾಲಿ ಇಲ್ಲ. ಈಗ ನಮ್ಮ ರೇಸ್ ಏನಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ. ಅದಕ್ಕೆ ನಾವು ಸಮಯ ನೀಡಬೇಕು. ಅದನ್ನು ಬಿಟ್ಟು ಬೇರೆ ವಿಚಾರಕ್ಕೆ ಸಮಯ ನೀಡಿದರೆ ಅದು ವ್ಯರ್ಥವಾಗುತ್ತದೆ ಎಂದರು.

ನಾವೆಲ್ಲರೂ ಬಿಜೆಪಿ ಮಣಿಸಲು ಶ್ರಮಿಸೋಣ. ನಾವೆಲ್ಲ ಕಾರ್ಯಕರ್ತರು. ಜನ ರಾಜ್ಯದಲ್ಲಿ ಬದಲಾವಣೆ ತರಲು ಬಯಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡೋಣ’ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಗೆಲುವು ಸಾಧ್ಯ ಎಂದು ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಹೌದಾ..? ಬಹಳ ಸಂತೋಷ’ ಎಂದು ಪ್ರತಿಕ್ರಿಯಿಸಿದರು.

ಡಿ.ಕೆ. ಶಿವಕುಮಾರ್ ಅವರಿಗೆ ವಯಸ್ಸಿದೆ, ಸಿದ್ದರಾಮಯ್ಯನವರು 2023ಕ್ಕೆ ಸಿಎಂ ಆಗಲಿ, ನಂತರ ಡಿ.ಕೆ. ಶಿವಕುಮಾರ್ ಆಗಲಿ ಎಂಬ ಶಾಸಕ ರಾಮಪ್ಪ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ, ‘ಸಿಎಂ ಆಗಬೇಕೆಂಬ ಆತುರವಿದೆ ಎಂದು ನಾನು ಯಾವತ್ತಾದರೂ ಹೇಳಿದ್ದೀನಾ..? ನನ್ನ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು, ವಿಧಾನಸೌಧದ ಮೂರನೇ ಮಹಡಿ ಏರಲು ನನ್ನನ್ನು ಮೆಟ್ಟಿಲಾಗಿ ಬಳಸಿಕೊಳ್ಳಿ ಅಂತಾ ನಾನು ಹೇಳಿದ್ದೇನೆ. ಯಾರ್ಯಾರು ಏನೇನು ಸಲಹೆ ಕೊಡುತ್ತಾರೋ, ಕೊಡಲಿ ಅದನ್ನು ಸ್ವೀಕರಿಸೋಣ’ ಎಂದರು.

ಶಾಸಕರ ಇಂತಹ ಹೇಳಿಕೆಗಳಿಂದ ಗೊಂದಲ ಸೃಷ್ಟಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ನಮ್ಮ ಪಕ್ಷದ ಹೈಕಮಾಂಡ್ ಏನು ಹೇಳಬೇಕೋ ಅದನ್ನು ಹೇಳಿದೆ. ಶಾಸಕರು ಹೇಳಿಕೆ ನೀಡುತ್ತಿದ್ದಾರೆ ಅಂತಾ ನೀವು ಹೇಳಿದ್ದೀರಿ, ನಾನೂ ಕೆಲವು ನೋಡಿದ್ದೇನೆ. ಶಾಸಕರ ಹೇಳಿಕೆಗಳನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಅವರು ನೋಡಿಕೊಳ್ಳದಿದ್ದರೆ, ಆ ಬಗ್ಗೆ ಗಮನ ಹರಿಸಲು ಕಾಂಗ್ರೆಸ್ ಪಕ್ಷ ಬದುಕಿದೆ’ ಎಂದರು.

ಇದನ್ನೂ ಓದಿ: ದೇಶಕ್ಕೆ 8 ಚಿನ್ನದ ಪದಕ ಗೆದ್ದು ತಂದ ಕ್ರೀಡಾಪಟು; ಇಂದು ಬೀದಿಬದಿಯಲ್ಲಿ ಚಿಪ್ಸ್‌, ಬಿಸ್ಕತ್ ಮಾರಿ ಬದುಕುತ್ತಿದ್ದಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights