ಭ್ರಷ್ಟಾಚಾರ ಆರೋಪ: ಅಮಿತ್‌ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪುದುಚೇರಿ ಮಾಜಿ ಸಿಎಂ ಎಚ್ಚರಿಕೆ!

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ಪ್ರಧಾನಿ ಮೋದಿ ಅವರು ನೀಡಿದ್ದ 15,000 ಕೋಟಿ ರೂ ಅನುದಾನವನ್ನು ಪುದುಚೇರಿ ಮಾಜಿ ಸಿಎಂ ವಿ ನಾರಾಯಣಸಾಮಿ ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಅಮಿತ್‌ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನಾರಾಯಣಸಾಮಿ ಅವರು ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಪುದುಚೇರಿಗೆ ಭೇಟಿ ನೀಡಿದ್ದ ಅಮಿತ್‌ ಶಾ, ಪುದುಚೇರಿಯಲ್ಲಿನ ಕಾಂಗ್ರೆಸ್‌ ಆಡಳಿತದ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ವೇಳೆ, ಪುದುಚೇರಿಗೆ 15 ಸಾವಿರ ಕೋಟಿ ರೂ.ಗಳನ್ನು ಪ್ರಧಾನಿ ಮೋದಿ ಕಳುಹಿಸಿದ್ದರು. ಆ ಹಣದ ಒಂದು ಭಾಗವನ್ನು ನಾರಾಯಣಸಾಮಿ ಅವರು ಗಾಂಧಿ ಕುಟುಂಬಕ್ಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಅಮಿತ್‌ ಶಾ ಆರೋಪದ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ, ಇದು ನನ್ನ ವಿರುದ್ಧದ ಗಂಭೀರ ಆರೋಪ. ಅವರು ಆ ಆರೋಪವನ್ನು ಸಾಬೀತುಪಡಿಸದಿದ್ದರೆ, ನನ್ನ ಮತ್ತು ಗಾಂಧಿ ಕುಟುಂಬದ ಚಿತ್ರಣವನ್ನು ಹಾಳುಮಾಡಲು ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡುತ್ತೇನೆ”ಎಂದು ಹೇಳಿದ್ದಾರೆ..

ಷಾ ಆರೋಪಗಳನ್ನು ಸಾಬೀತುಪಡಿಸಲು ನಾನು ಅವರಿಗೆ ಸವಾಲು ಹಾಕುತ್ತೇನೆ. ಆರೋಪವನ್ನು ಸಾಬೀತುಪಡಿಸದಿದ್ದರೆ, ಪುದುಚೇರಿ ಜನರ ಬಳಿ ಅವರು ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಮಿತ್‌ ಶಾ ವಿರುದ್ಧ ಟಿಎಂಸಿ ಸಂಸದರ ಮಾನನಷ್ಟ ಮೊಕದಮೆ; ಗೃಹ ಸಚಿವರಿಗೆ ಸಮನ್ಸ್‌ ನೀಡಿದ ಕೋರ್ಟ್‌!

“ಬಿಜೆಪಿ ನಾಯಕರು ಚೆನ್ನೈನಿಂದ ಹಣದ ಚೀಲಗಳನ್ನು ತೆಗೆದುಕೊಂಡು ಬಂದು ಪುದುಚೇರಿಯಲ್ಲಿ ಕ್ಯಾಂಪ್ ಮಾಡಿ ನಮ್ಮ ಶಾಸಕರನ್ನು ಖರೀದಿಸಿದ್ದಾರೆ. ಪುದುಚೇರಿ ಸರ್ಕಾರ ಉರುಳಲು ಅಮಿತ್ ಶಾ ಕಾರಣ”ಎಂದು ಅವರು ಆರೋಪಿಸಿದರು.

“ದ್ರಾವಿಡ ಮುನ್ನೇಟರಾ ಕಜಗಂ ಶಾಸಕ ವೆಂಕಟೇಶನ್ ಅವರನ್ನೂ ಬೆದರಿಸಿ ಬಿಜೆಪಿಗೆ ಸೇರ್ಪಡೆಗೊಳಿಸಲಾಯಿತು” ಎಂದು ಅವರು ಹೇಳಿದರು.

ಇತ್ತೀಚೆಗೆ ಪುದುಚೇರಿಯ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದರಿಂದಾಗಿ ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರ ಸರ್ಕಾರ ಬಹುಮತವನ್ನು ಕಳೆದುಕೊಂಡಿತ್ತು. ಬಹುಮತ ಸಾಬೀತು ಮಾಡಲು ಸಾಧ್ಯವಾಗದ ಕಾರಣ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲಾಗಿದೆ.

ಪುದುಚೇರಿಯ 30 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದೆ ಮತ್ತು ಮೇ 2 ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ಇಬ್ಬರು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ 18 ಮಂದಿ BJPಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights