ಫ್ಯಾಕ್ಟ್‌ಚೆಕ್: ಜಾಗೃತಿ ಉದ್ದೇಶಕ್ಕೆ ಮಾಡಿದ ವಿಡಿಯೊವನ್ನು ಮುಸ್ಲಿಂ ವ್ಯಾಪಾರಿಯ ಮೋಸ ಎಂಬ ಸುಳ್ಳು ಹೇಳಿಕೆಯೊಂದಿಗೆ ವೈರಲ್!
ತಳ್ಳು ಗಾಡಿಯೊಂದರಲ್ಲಿ ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾರಿಯೊಬ್ಬರು ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎನ್ನುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಣ್ಣು ವ್ಯಾಪಾರಿಯೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೆ ಎಂದು ಹೇಳಲಾಗಿದ್ದು, ಹಣ್ಣಿನ ತೂಕದಲ್ಲಿ ಮೋಸ ಮಾಡುತ್ತಿದ್ದಾನೆ. ‘ಮುಸ್ಲಿಂ ಜಿಹಾದಿಗಳಿಂದ ಏನನ್ನಾದರೂ ಖರೀದಿಸುವ ಮೊದಲು ಈ ವೀಡಿಯೊವನ್ನು ನೋಡಿ. ಏನನ್ನಾದರೂ ಖರೀದಿಸುವ ಮೊದಲು ಹೆಸರನ್ನು ಕೇಳಿ, ಜಾಗೃತರಾಗಿ ಇತರರಿಗೂ ಅರಿವು ಮೂಡಿಸಿ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಹಣ್ಣಿನ ವ್ಯಾಪಾರಿಯ ಕುರಿತು ಮಾಡಲಾಗಿರುವ ಆಪಾಧನೆಯ ವಿಡಿಯೊದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ವೈರಲ್ ವಿಡಿಯೋದ ಹೇಳಿಕೆಯನ್ನು ಪರಿಶೀಲಿಸಲು ಗೂಗಲ್ ಮತ್ತು ಫೇಸ್‌ಬುಕ್ ನಲ್ಲಿ ಕೀ ವರ್ಡ್ ಬಳಿಸಿಕೊಂಡು ಸರ್ಚ್ ಮಾಡಿದಾಗ ವೈರಲ್ ವಿಡಿಯೊದ ರೀತಿಯಲ್ಲಿ ಕೆಲವು ವಿಡಿಯೋಗಳು ಲಭ್ಯವಾಗಿವೆ. ‘ರಾಜು ಭಾರ್ತಿ‘ ಎಂಬುವವರ ಫೇಸ್‌ಬುಕ್ ಪೇಜ್‌ನಲ್ಲಿ ಕಂಡುಬಂದ ವಿಡಿಯೊಗಳು ವೈರಲ್ ವಿಡಿಯೊದೊಂದಿಗೆ ಹೋಲಿಕೆಯಾಗುತ್ತಿವೆ. ವಿಡಿಯೋವನ್ನು ಇಲ್ಲಿ ನೋಡಬಹುದು.
ಅಸಲಿಗೆ ವೈರಲ್ ಆಗುತ್ತಿರುವ ವಿಡಿಯೊ ಸ್ಕ್ರಿಪ್ಟೆಡ್, ಇದು ನಿಜವಾದ ವಿಡಿಯೋ ಅಲ್ಲ ‘ಶೈಕ್ಷಣಿಕ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಸ್ಕ್ರಿಪ್ಟೆಡ್ ವೀಡಿಯೋಗಳನ್ನು ಮಾಡಲಾಗುತ್ತದೆ ಎಂದು ವಿಡಿಯೋದ ಕೊನೆಯಲ್ಲಿ ರಾಜು ಭಾರ್ತಿ ಅವರ ತಂಡ ಹೇಳಿಕೊಂಡಿದೆ. ಆದರೂ ಕೂಡ ವಿಡಿಯೊವನ್ನು ತಪ್ಪು ಹೇಳಿಕೆಯೊಂದಿಗೆ, ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳುವ ಮೂಲಕ ದುರ್ಬಳಕೆಗೆ ಮಾಡಿಕೊಳ್ಳುತ್ತಿದ್ದಾರೆ.
‘ರಾಜು ಭಾರ್ತಿ’ ಯೊಬ್ಬ ಯೂಟ್ಯೂಬರ್ ಆಗಿದ್ದು ಅವರ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ರಾಜು ಭಾರ್ತಿ ಅವರು ಪ್ರಾಂಕ್ ವಿಡಿಯೋಗಳನ್ನು ಮತ್ತು ಮನರಂಜನೆಗೆ ಸಂಬಂಧಿಸಿದ ವಿಡಿಯೊಗಳನ್ನು ಅಪ್‌ಲೋಡ್ ಮಾಡಿರುತ್ತಾರೆ. ಇವರ ಯೂಟ್ಯೂಬ್ ಚಾನಲ್ 2.8 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಫೇಸ್‌ಬುಕ್ ಪುಟ ಮತ್ತು ಯೂಟ್ಯೂಬ್ ಚಾನೆಲ್ ಎರಡರಲ್ಲೂ ಈ ವಿಡಿಯೊ ಅಪ್‌ಲೋಡ್ ಆಗಿದೆ.
ರಾಜು ಭಾರತಿ ಅವರ ಫೇಸ್‌ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಲಾಗಿದ್ದುಅವರ ಟೈಮ್‌ಲೈನ್‌ನಲ್ಲಿ ಅವರ ತಂಡ ಚಿತ್ರಿಕರಿಸಿದ ಹಲವು ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಕಂಡುಬಂದಿವೆ. ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮತ್ತು ಫೇಸ್‌ಬುಕ್ ಪೇಜ್‌ಗೆ ಲಿಂಕ್ ಮಾಡಲಾದ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಲಾಗಿದ್ದು, ಭಾರ್ತಿಗೆ ಲಿಂಕ್ ಮಾಡಲಾದ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಅವರನ್ನು ನಟ ಮತ್ತು ಕಂಟೆಂಟ್ ಕ್ರಿಯೇಟರ್ ಎಂದು ಸ್ಪಷ್ಟಪಡಿಸುತ್ತವೆ.
ಅದೇ ವೀಡಿಯೊವನ್ನು ಯಾವುದೇ ಕೋಮು ಪ್ರತಿಪಾದನೆ ಇಲ್ಲದೆ ಮಾರ್ಚ್ 26, 2022 ರಂದು ರಾಜು ಭಾರತಿ ಅವರ ಫೇಸ್‌ಬುಕ್ ಪುಟದಲ್ಲಿ ‘ಯುನೈಟೆಡ್ ಸ್ಟೇಟ್’ ಎಂದು ಬರೆದು ಅಪ್‌ಲೋಡ್ ಮಾಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಶೈಕ್ಷಣಿಕ ಮತ್ತು ಜಾಗೃತಿ ಮೂಡಿಸುವ ಉದ್ದೇಶಕ್ಕೆ ಮಾಡಲಾದ ವಿಡಿಯೋವನ್ನು ತಪ್ಪು ಹೇಳಿಕೆಗಳೊಂದಿಗೆ ಮುಸ್ಲಿಂ ದ್ವೇಷ ಹರಡಲು ಬಳಕೆ ಮಾಡಲಾಗಿದ್ದು ಇಂತಹ ವಿಡಿಯೋಗಳನ್ನು ಹರಿಯಬಿಡಲಾಗಿದ್ದು ಸಾಮಾಜಿಕ ಅಶಾಂತಿಯನ್ನುಂಟು ಮಾಡುವ ಮತ್ತು ಕೋಮು ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶವಾಗಿರುತ್ತದೆ ಹಾಗಾಗಿ ಇಂತಹ ವಿಡಿಯೋಗಳನ್ನು ನಂಬಿ ಮೋಸ ಹೋಗಬೇಡಿ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಶಾರೂಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಹಿಷ್ಕರಿಸಿ ಎಂದು ಯೋಗಿ ಆದಿತ್ಯನಾಥ್ ಹೇಳಿಲ್ಲ