ಫ್ಯಾಕ್ಟ್‌ಚೆಕ್: ಶಾರೂಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಹಿಷ್ಕರಿಸಿ ಎಂದು ಯೋಗಿ ಆದಿತ್ಯನಾಥ್ ಹೇಳಿಲ್ಲ

2023ರಲ್ಲಿ ಬಿಡುಗಡೆ ಆಗಲಿರುವ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವನ್ನು ಬಹಿಷ್ಕರಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನರಿಗೆ ಕರೆ ನೀಡಿದ್ದಾರೆ  ಎಂಬ ಹೇಳಿಕೆಯೊಂದಿಗೆ ಯೋಗಿ ಆದಿತ್ಯನಾಥ್ ಅವರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

 

ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಅವರ ಕುರಿತು ಯೋಗಿ ಆದಿತ್ಯನಾಥ್ ಮಾತನಾಡಿರುವ ವೀಡಿಯೋದಲ್ಲಿ  ಹೀಗೆ ಹೇಳಿದ್ದು “ಕೆಲವು ಎಡಪಂಥೀಯ ಕಲಾವಿದರು ಮತ್ತು ಲೇಖಕರು ದೇಶವಿರೋಧಿ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ಶಾರುಖ್ ಖಾನ್ ಕೂಡ  ಅವರಲ್ಲಿ ಸೇರಿಕೊಂಡು ಈ ರೀತಿ ಮಾತನಾಡುತ್ತಿರುವುದು ದುರಾದೃಷ್ಟಕರ,  ಅವರು ಈ ಹಿಂದೆಯೂ ಅವರು ಹೀಗೆಯೇ ಮಾತನಾಡಿದ್ದರು ಆದರೆ ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ. ಬಹುಸಂಖ್ಯಾತ ಸಮುದಾಯಗಳು ತಮ್ಮ ಚಿತ್ರಗಳನ್ನು ಬಹಿಷ್ಕರಿಸಿದರೆ, ಅವರು ಸಾಮಾನ್ಯ ಮುಸ್ಲಿಮರಂತೆ ಬೀದಿಗೆ ಬರಬೇಕಾಗುತ್ತದೆ ಎಂಬುದನ್ನು ಶಾರುಖ್ ಖಾನ್ ನೆನಪಿಟ್ಟುಕೊಳ್ಳಬೇಕು ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ನಂತರ ಅವರು ಭಾರತದ ಪ್ರತಿಷ್ಠೆಯನ್ನು ಹಾಳುಮಾಡಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆದಿದೆ ಎಂದು ಆಪಾದಿಸಿದಾರೆ ಮತ್ತು ಖಾನ್ ಅವರ ಮಾತುಗಳನ್ನು ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ಗೆ ಹೋಲಿಸಿ ಮಾತನಾಡಿದ್ದಾರೆ.

“ಶಾರುಖ್ ಖಾನ್ ಅವರ ‘ಪಠಾಣ್’ ಚಿತ್ರವನ್ನು ಬಹಿಷ್ಕರಿಸಲು ಎಲ್ಲರಿಗೂ ಯೋಗಿ ಆದಿತ್ಯನಾಥ್ ಅವರ ಸಂದೇಶ” ಎಂಬ ಶೀರ್ಷಿಕೆಯೊಂದಿಗೆ ಹಲವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಶಾರೂಖ್ ಅಭಿನಯದ 2023ರಲ್ಲಿ ಬಿಡುಗಡೆ ಆಗಲಿರುವ ಚಿತ್ರವನ್ನು ಬಹಿಷ್ಕರಿಸುಂತೆ ಕೆರ ನೀಡಿದ್ದಾರಾ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೊಗಳ ಸ್ಕ್ರೀನ್‌ಶಾಟ್ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಲಾಗಿದ್ದು ಯೋಗಿ ಆದಿತ್ಯನಾಥ್ ಅವರ ವೈರಲ್ ವಿಡಿಯೋ ಹಳೆಯದು ಮತ್ತು ಮುಖ್ಯಮಂತ್ರಿ ಆಗುವ ಮೊದಲು ಮಾತನಾಡಿದ್ದ ವಿಡಿಯೊ ಎಂದು ತಿಳಿದು ಬಂದಿದೆ.

ನಾವು “ಶಾರುಖ್”, “ಯೋಗಿ ಆದಿತ್ಯನಾಥ್”, ಮತ್ತು “ಹಫೀಜ್ ಸಯೀದ್” ನಂತಹ ಕೀವರ್ಡ್‌ಗಳೊಂದಿಗೆ ಸುದ್ದಿ ವರದಿಗಳನ್ನು ಹುಡುಕಿದಾಗ, ನಮಗೆ ನವೆಂಬರ್ 5, 2015 ರಿಂದ The Indian Express ವರದಿಯೊಂದು ಲಭ್ಯವಾಗಿದೆ.. ಆ ಸಮಯದಲ್ಲಿ ಆದಿತ್ಯನಾಥ್ ಗೋರಖ್‌ಪುರದ ಸಂಸದರಾಗಿದ್ದರು. ಈ ವೇಳೆ ಅವರು ಶಾರೂಖ್ ಖಾನ್‌ ಕುರಿತು ಮಾತನಾಡಿದ್ದಾರೆ ಎಂದು ಹೇಳಲಾಗಿದೆ. “ಎಸ್‌ಆರ್‌ಕೆ ಹಫೀಜ್ ಸಯೀದ್‌ನಂತೆ ಮಾತನಾಡುತ್ತಾರೆ, ಬೇಕಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದಿದ್ದಾರೆ.

ವರದಿಯ ಪ್ರಕಾರ, ದೇಶದಲ್ಲಿ “ಬೆಳೆಯುತ್ತಿರುವ ಅಸಹಿಷ್ಣುತೆ” ಎಂದು ಖಾನ್ ಹೇಳಿದ ಎರಡು ದಿನಗಳ ನಂತರ, ಆಗಿನ ಭಾರತೀಯ ಜನತಾ ಪಕ್ಷದ ಸಂಸದರಾದ ಯೋಗಿ ಆದಿತ್ಯನಾಥ್ ಈ ಹೇಳಿಕೆಯನ್ನು ನೀಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಶಾರೂಖ್ ಖಾನ್ ಅವರನ್ನು ಸಯೀದ್‌ಗೆ ಹೋಲಿಸಿ ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು  ಹೇಳಿದ್ದರು. 2015 ರಲ್ಲಿ ಅವರ 50 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಖಾನ್ ಅವರು “ಬೆಳೆಯುತ್ತಿರುವ ಅಸಹಿಷ್ಣುತೆ” ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ಉಲ್ಲೇಖಿಸಿರುವ ದಿ ಹಿಂದೂ ವರದಿಯನ್ನು ಇಲ್ಲಿ ನೋಡಬಹುದು.

ಆದಿತ್ಯನಾಥ್ ಅವರ 2015 ರ ಕಾಮೆಂಟ್‌ಗಳ ವೀಡಿಯೊಗಳ ಸಹಾಯದಿಂದ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ನವೆಂಬರ್ 4, 2015 ರಿಂದ ANI ಯ YouTube ಚಾನಲ್‌ನಲ್ಲಿ ಅಪ್‌ಲೋಡ್‌ ಆಗಿರುವ ವಿಡಿಯೋ ಲಭ್ಯವಾಗಿದೆ. ಲಭ್ಯವಾಗಿರುವ ವಿಡಿಯೊವನ್ನು ವೈರಲ್ ವೀಡಿಯೊದೊಂದಿಗೆ ಹೋಲಿಕೆ ಮಾಡಿದಾಗ ಎರಡು ಒಂದೇ ಬಗೆಯ ವಿಡಿಯೋಗಳು ಎಂದು ತಿಳಿದುಬಂದಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವಿಡಿಯೊದಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪು ಎಂದು ಕಂಡುಹಿಡಿದಿದೆ. ವೀಡಿಯೊ ಸುಮಾರು ಏಳು ವರ್ಷಗಳಷ್ಟು ಹಳೆಯದಾಗಿದೆ ಮತ್ತು ಶಾರೂಖ್ ಖಾನ್ ಅವರ ಮುಂಬರುವ ಪಠಾಣ್ ಚಿತ್ರಕ್ಕೂ ಯೋಗಿ ಆದಿತ್ಯನಾಥ್ ಅವರ ವಿಡಿಯೋಗೂ ಯಾವುದೇ ಸಂಬಂಧವಿಲ್ಲ.

ನವೆಂಬರ್ 3, 2015 ರ ಬಿಬಿಸಿ ವರದಿಯು ಖಾನ್ ಅವರ ಹೇಳಿಕೆಗಳ ವಿವರಗಳನ್ನು ಹೊಂದಿದೆ ಮತ್ತು “ಅಸಹಿಷ್ಣುತೆ ಇದೆ, ತೀವ್ರ ಅಸಹಿಷ್ಣುತೆ ಇದೆ, ಅಸಹಿಷ್ಣುತೆ ಬೆಳೆಯುತ್ತಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ ಎನ್ನುವ ವಿಷಯವನ್ನು ಉಲ್ಲೇಖಿಸಲಾಗಿದೆ.

ಅಂದಹಾಗೆ, ಶಾರುಖ್ ಖಾನ್ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ ವೈರಲ್ ವಿಡಿಯೋಗೂ ‘ಪಠಾಣ್’ಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಆದಿತ್ಯನಾಥ್ ಯುಪಿ ಸಿಎಂ ಆಗುವ ಮುಂಚೆ, ಭಾರತದಲ್ಲಿ ಅಸಹಿಷ್ಣುತೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾರೂಖ್  ಖಾನ್ ಅವರ  ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ್ದ ವಿಡಿಯೊವನ್ನು ಪಠಾಣ್ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸಲಾಗಿದೆ.

ಕೃಪೆ: ಇಂಡಿಯಾ ಟುಡೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸಾಧುಗಳ ಹತ್ಯೆಯ ಹಳೆಯ ವಿಡಿಯೊವನ್ನು ಮುಸ್ಲಿಂಮರ ತಲೆಗೆ ಕಟ್ಟಲು ಪ್ರಯತ್ನಿಸಿದ ಬಲಪಂಥೀಯರು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.