ಮೇಕೆದಾಟು ಯೋಜನೆಗೆ ಶೀಘ್ರವೇ ಕೇಂದ್ರದ ಅನುಮೋದನೆ: ಸಿಎಂ ವಿಶ್ವಾಸ!

ಮೇಕೆದಾಟು ಯೋಜನೆಗೆ ಶೀಘ್ರವೇ ಕೇಂದ್ರ ಸರ್ಕಾರ ಅನುಮೋದನೆ ನೀಡುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಎಂ, ಮೇಕೆದಾಟು ಯೋಜನೆಯ ಡಿಪಿಆರ್ ಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಅನುಮೋದನೆ ದೊರೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮೇಕೆದಾಟು ಯೋಜನೆಯ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಕಳೆದ ಬಾರಿ ದೆಹಲಿಗೆ ತೆರಳಿದಾಗ ಈ ಯೋಜನೆಗೆ ಒಪ್ಪಿಗೆ ನೀಡುವುದಾಗಿ ಭರವಸೆ ದೊರೆತಿದೆ. ಇದಕ್ಕೆ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಇದು ಪೂರ್ಣಗೊಂಡ ಕೂಡಲೇ ಕೇಂದ್ರದ ಒಪ್ಪಿಗೆ ದೊರೆಯುವ ವಿಶ್ವಾಸವಿದೆ.

ಮತ್ತೊಮ್ಮೆ ಈ ಉದ್ದೇಶಕ್ಕಾಗಿಯೇ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ವಿವರಿಸಲಾಗುವುದು. ಸುಪ್ರೀಂ ಕೋರ್ಟಿನ ಆದೇಶಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು.

ಇದರೊಂದಿಗೆ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ದೆಹಲಿಯಲ್ಲಿ ವಕೀಲರ ತಂಡದೊಂದಿಗೆ ಸಭೆ ನಡೆಸಿ, ಕಾವೇರಿ ತೀರದಲ್ಲಿ ಹೆಚ್ಚುವರಿ ನೀರಿನ ಹಕ್ಕನ್ನು ಕಾನೂನು ಪ್ರಕಾರ ಪಡೆದುಕೊಳ್ಳುವ ಕುರಿತು ಸಹ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕೋವಿಡ್ 19 ಮುನ್ನೆಚ್ಚರಿಕೆ:
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈ ಎಲ್ಲ ಜಿಲ್ಲೆಗಳಿಗೆ ತಾವು ಭೇಟಿ ನೀಡಲಿದ್ದು, ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿ ಈ ಎರಡು ರಾಜ್ಯಗಳಿಂದ ಪ್ರಾರಂಭವಾದ ಎರಡನೇ ಅಲೆ ಇಡೀ ರಾಜ್ಯವನ್ನು ವ್ಯಾಪಿಸಿತ್ತು. ಈ ಬಾರಿ ಅದನ್ನು ತಡೆಗಟ್ಟಲು ಪೂರ್ವಭಾವಿಯಾಗಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights