ಫ್ಯಾಕ್ಟ್‌ಚೆಕ್: ಸಾಧುಗಳ ಹತ್ಯೆಯ ಹಳೆಯ ವಿಡಿಯೊವನ್ನು ಮುಸ್ಲಿಂಮರ ತಲೆಗೆ ಕಟ್ಟಲು ಪ್ರಯತ್ನಿಸಿದ ಬಲಪಂಥೀಯರು!

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ” ಮುಸ್ಲಿಂ ಸಮುದಾಯದ ಗುಂಪೊಂದು ಕಾವಿ ಧರಿಸಿರುವ ಹಿರಿಯ ಹಿಂದೂ ಸಾಧುಗಳನ್ನು ಥಳಿಸಿ, ಹತ್ಯೆ ಮಾಡುತ್ತಿದ್ದಾರೆ” ಎಂದು ಪ್ರತಿಪಾದಿಸಲಾಗಿದೆ. ಹಾಗಿದ್ದರೆ ಮುಸ್ಲಿಂ ಕೋಮಿನ ಯುವಕರ ಗುಂಪು ನಿಜವಾಗಿಯೂ ಹಿಂದೂ ಸಾಧುಗಳನ್ನು ಹೊಡೆದು ಹತ್ಯೆ ಮಾಡಿದ್ದಾರೆ ಎಂಬುದು ನಿಜವೆ? ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ? ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ವೈರಲ್ ಮಾಡಲಾಗಿರುವ ವಿಡಿಯೊವನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಸ್ಕ್ರೀನ್‌ಶಾಟ್ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ,  ಕೆಲವು ಸುದ್ದಿ ಮತ್ತು ವೀಡಿಯೊಗಳು ಲಭ್ಯವಾಗಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ” ದಿ ಟೈಮ್ಸ್ ಆಫ್ ಇಂಡಿಯಾ” ಕೂಡ ಘಟನೆಗೆ ಸಂಬಂಧಿಸಿದ ಸುದ್ದಿಯನ್ನು ಮಾಡಿದ್ದು ಅದನ್ನು ಇಲ್ಲಿ ನೋಡಬಹುದು.

17 ಏಪ್ರಿಲ್ 2020 ರಲ್ಲಿ ನಡೆದ ಘಟನೆ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಘಟನೆಯು  17 ಏಪ್ರಿಲ್ 2020 ರಲ್ಲಿ ಮುಂಬೈನ ಪಾಲ್ಘರ್‌ ಜಿಲ್ಲೆಯ ಗಡ್‌ಚಿಂಚಾಲೆ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.  ಮುಂಬೈನ ಕಂಡೀವಲಿಯಲ್ಲಿ ಆಶ್ರಮ ಹೊಂದಿರುವ ಸಾಧುಗಳಾದ ಚಿಕ್ನೆ ಮಹಾರಾಜ ಕಲ್ಪವೃಕ್ಷಗಿರಿ (70), ಸುಶೀಲ್‌ಗಿರಿ ಮಹಾರಾಜ (35) ಅವರು ಸೂರತ್‌ನಲ್ಲಿ ಅಂತ್ಯಕ್ರಿಯೆಗೆ ತೆರಳಬೇಕಿತ್ತು. ಇದಕ್ಕಾಗಿ ಅವರು ನೀಲೇಶ್‌ ಯೇಲ್ಗಡೆ (30) ಎಂಬಾತನ ಕಾರನ್ನು ಏ.16ರಂದು ಬಾಡಿಗೆ ಪಡೆದಿದ್ದರು. ಹೆದ್ದಾರಿಯಲ್ಲಿ ಹೋದರೆ ಲಾಕ್‌ಡೌನ್‌ ಕಾರಣ ಪೊಲೀಸರು ತಡೆಯುತ್ತಾರೆ ಎಂದು ಹಳ್ಳಿಗಾಡಿನ ರಸ್ತೆಗಳಲ್ಲಿ ಹಾದುಹೋಗುತ್ತಿದ್ದರು.

ಮುಂಬೈನಿಂದ 140 ಕಿ.ಮೀ. ದೂರದ ಗಡ್‌ಚಿಂಚಲೆ ಎಂಬ ಹಳ್ಳಿಗಾಡಿನಲ್ಲಿ ಪೊಲೀಸ್‌ ಸೆಂಟ್ರಿಯೊಬ್ಬರು ಇವರ ಕಾರನ್ನು ತಡೆದು ಪ್ರಶ್ನಿಸುತ್ತಿದ್ದಾಗ ಏಕಾಏಕಿ ನೂರಾರು ಮಂದಿ ಬಂದು ದಾಂಧಲೆ ನಡೆಸಿ ಥಳಿಸಿದ್ದರು. ಆ ಭಾಗದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ, ಅಂಗಾಂಗ ಕಳ್ಳತನ ಜಾಲವಿದೆ ಎಂಬ ಸುಳ್ಳು ಸುದ್ದಿ ಕೆಲ ದಿನಗಳಿಂದ ವ್ಯಾಪಕವಾಗಿ ಹಬ್ಬಿತ್ತು. ಅಂತಹ ಕಳ್ಳರಿಗಾಗಿ ಹಳ್ಳಿಗರು ತಂಡ ಮಾಡಿಕೊಂಡು ಪಹರೆ ಕಾಯುತ್ತಿದ್ದರು. ಆ ಸಂದರ್ಭದಲ್ಲೇ ಈ ಮೂವರು ಸಾಧುಗಳು ಸಿಲುಕಿಕೊಂಡಿದ್ದರು. ಅವರನ್ನೆ ಮಕ್ಕಳ ಕಳ್ಳರೆಂದು ಭಾವಿಸಿ ಜನ ಹಲ್ಲೆ ನಡೆಸಿದರು. ಜನ ಹೆಚ್ಚು ಜಮಾವಣೆಗೊಂಡಿದ್ದರಿಂದ ಪೊಲೀಸರೂ ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಗ್ರಾಮಸ್ಥರು ದೊಣ್ಣೆ, ಮಚ್ಚು, ಕಬ್ಬಿಣದ ರಾಡ್‌ ಸೇರಿದಂತೆ ಮಾರಕಾಸ್ತ್ರಗಳಿಂದ ಬಡಿದು ಹತ್ಯೆ ಮಾಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಘಟನೆಗೆ ಕೋಮು ಬಣ್ಣ ಹಚ್ಚಿದ ಪಿಟಿಐ

ಘಟನೆಯ ನಡೆದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರು ಕೊಂದಿದ್ದಾರೆ ಎಂದು ಕೋಮು ಬಣ್ಣ ಹಚ್ಚಲಾಗಿತ್ತು. ಯಾವ ಹಿಂದುಗಳನ್ನು ಬಂಧಿಸಿಲ್ಲ ಎಂದು ಪಿಟಿಐ ಸಹ ಸುಳ್ಳು ವರದಿ ಮಾಡಿತ್ತು. ಬಿಜೆಪಿ ಸೇರಿದಂತೆ ಕೆಲವು ಮಾಧ್ಯಮಗಳು ಕೂಡಾ ಘಟನೆಗೆ ಕೋಮು ಆಯಾಮ ನೀಡಲು ಪ್ರಯತ್ನಿಸಿತ್ತು. ಆದರೆ ಸಿಐಡಿ ತನಿಖೆಯು ಇದು ಕೋಮು ಆಧಾರಿತ ಹತ್ಯೆ ಅಲ್ಲ ಎಂದು ಸ್ಪಷ್ಟಪಡಿಸಿತ್ತು.

ಘಟನೆ ನಡೆದ ಕೂಡಲೇ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರು. 2020ರ ಲಾಕ್ ಡೌನ್ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ಬಿಜೆಪಿಯು “ಕೋಮು ರಾಜಕೀಯ” ಮಾಡುತ್ತಿದೆ ಎಂದು ಮಹಾ ವಿಕಾಸ್ ಅಘಾಡಿ ಸರ್ಕಾರ ಆರೋಪಿಸಿತ್ತು.

ಘಟನೆಗೆ ಕೋಮು ಆಯಾಮ ಇಲ್ಲ ಎಂದ ಉದ್ದವ್ ಠಾಕ್ರೆ:

ಪಾಲ್ಘರ್‌ ಗುಂಪು ಥಳಿತ ಹತ್ಯೆ ಘಟನೆಯಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಹಾಗೂ ಘಟನೆಯೂ ಯಾವುದೇ ಕೋಮು ದೃಷ್ಟಿಯಿಂದ ಆಗಿದ್ದಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟನೆ ನೀಡಿದ್ದಾರೆ..

ಪಾಲ್ಘರ್‌ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಗುಂಪು ಮೂವರನ್ನು ಹತ್ಯೆಗೈದಿದ್ದಕ್ಕೆ ಕೋಮು ಬಣ್ಣ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದರು ಎಂದು ನಾನು ಗೌರಿ.ಕಾಂ ವರದಿಯನ್ನು ಪ್ರಕಟಿಸಿತ್ತು ಅದನ್ನು ಇಲ್ಲಿ ನೋಡಬಹುದು.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ಒಂದು ವರ್ಷ ಆಗಿದ್ದರ ಹಿನ್ನಲೆಯಲ್ಲಿ ನಾನು ಗೌರಿ.ಕಾಂ ಘಟನೆ ಕುರಿತು ಮತ್ತೊಂದು ಸುದ್ದಿಯನ್ನು ವರದಿ ಮಾಡಿತ್ತು.

ಪಾಲ್ಘಾರ್ ಪೊಲೀಸ್ ಅಧಿಕಾರಿಗಳ ಸ್ಪಷ್ಟನೆ.

ಘಟನೆಗೆ ಸಂಬಂಧಿಸಿದಂತೆ ಕೆಲವು ಕಿಡಿಗೇಡಿಗಳು ಅನ್ಯ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಸಂದರ್ಭದಲ್ಲಿ ಪಾಲ್ಘರ್ ಪೊಲೀಸ್ ಅಧಿಕಾರಿಗಳು ತಮ್ಮ ಅಫಿಶಿಯಲ್ ಟ್ವಿಟರ್ ಅಕೌಂಟ್‌ ಮೂಲಕ ಸ್ಪಷ್ಟನೆ ನೀಡಿದ್ದು ಪ್ರಕರಣದಲ್ಲಿ ಭಾಗಯಾಗಿರುವ 110 ಆರೋಪಿಗಳಲ್ಲಿ ಎಲ್ಲರೂ ಸ್ಥಳೀಯ ಬುಟಕಟ್ಟು ಸಮುದಾಯರು ಎಂದು ಸ್ಪಷ್ಟನೆ ನೀಡಿದ್ದರು. ಅಂದರೆ ಅದರಲ್ಲಿ ಮುಸ್ಲಿಂ ಆರೋಪಿಗಳು ಇರಲಿಲ್ಲ. ಫ್ಯಾಕ್ಟ್‌ಲಿ  ಕೂಡ ಫ್ಯಾಕ್ಟ್‌ಚೆಕ್ ವರದಿಯನ್ನು ಮಾಡಿತ್ತು. ಅದನ್ನು ಇಲ್ಲಿ ನೋದಬಹುದು.

ಘಟನೆಗೆ ಸಂಬಂಧಿಸಿದಂತೆ ABP ನ್ಯೂಸ್ ಗ್ರೌಂಡ್‌ ರಿಪೋರ್ಟ್ ಮಾಡಿದೆ ಅದನ್ನು ಇಲ್ಲಿ ನೋಡಬಹುದು

ಒಟ್ಟಾರೆಯಾಗಿ ಹೇಳುವುದಾದರೆ 2020 ರಲ್ಲಿ ಮುಂಬೈನ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಸಾಧುಗಳ ಹತ್ಯೆಯನ್ನು ಬುಡಕಟ್ಟು ಸಮುದಾಯದ ಜನರು ಮಾಡಿದ್ದಾರೆ. ಆದರೆ ಘಟನೆಯನ್ನು ಮುಸಲ್ಮಾನರು ನಡೆಸಿದ ಕೃತ್ಯ ಎಂದು ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇತ್ತೀಚಿನ ಕೆಲ ದಿನಗಳಿಂದ ಒಂದು ಕೋಮಿನ ಜನರನ್ನು ಉದ್ದೇಶಪೂರಕವಾಗಿ ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ಅಸಹೀಷ್ಣತೆಗೆ, ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ಉಂಟುಮಾಡುವಂತ  ಪೋಸ್ಟ್‌ರ್‌ ಮತ್ತು ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳಲಾಗುತ್ತಿದೆ. ಇವುಗಳನ್ನು ನಂಬುವ ಮುಂಚೆ ಎಚ್ಚರವಿರಲಿ.


ಇದನ್ನು ಓದಿರಿ :  ಫ್ಯಾಕ್ಟ್‌ಚೆಕ್: ಹಳೆಯ ವಿಡಿಯೊದೊಂದಿಗೆ ಮುಸ್ಲಿಂ ದ್ವೇಷ ಹರಡುತ್ತಿರುವ ಬಲಪಂಥೀಯ ಪ್ರತಿಪಾದಕರು!!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights